ಕೀರ್ತನೆಗಳು 105 : 1 (OCVKN)
ಯೆಹೋವ ದೇವರಿಗೆ ಉಪಕಾರಸ್ತುತಿ ಮಾಡಿರಿ, ಅವರ ಹೆಸರನ್ನು ಸಾರಿ ಹೇಳಿರಿ; ಜನರಲ್ಲಿ ದೇವರ ಕ್ರಿಯೆಗಳನ್ನು ತಿಳಿಯಪಡಿಸಿರಿ.
ಕೀರ್ತನೆಗಳು 105 : 2 (OCVKN)
ದೇವರಿಗೆ ಹಾಡಿರಿ, ದೇವರಿಗೆ ಕೀರ್ತನೆ ಹಾಡಿರಿ; ದೇವರ ಅದ್ಭುತ ಕ್ರಿಯೆಗಳ ವಿಷಯವಾಗಿ ಮಾತನಾಡಿರಿ.
ಕೀರ್ತನೆಗಳು 105 : 3 (OCVKN)
ದೇವರ ಪರಿಶುದ್ಧ ನಾಮವನ್ನು ಹೊಗಳಿರಿ; ಯೆಹೋವ ದೇವರನ್ನು ಹುಡುಕುವವರ ಹೃದಯವು ಸಂತೋಷಿಸಲಿ.
ಕೀರ್ತನೆಗಳು 105 : 4 (OCVKN)
ಯೆಹೋವ ದೇವರನ್ನೂ, ಅವರ ಬಲವನ್ನೂ ಆಶ್ರಯಿಸಿರಿ, ಅವರ ಮುಖವನ್ನು ಯಾವಾಗಲೂ ಹುಡುಕಿರಿ.
ಕೀರ್ತನೆಗಳು 105 : 5 (OCVKN)
ದೇವರು ಮಾಡಿದ ಆಶ್ಚರ್ಯಕಾರ್ಯಗಳನ್ನೂ, ಅವರ ಅದ್ಭುತಗಳನ್ನೂ, ಅವರ ಬಾಯಿಂದ ಹೊರಟ ನ್ಯಾಯ ನಿರ್ಣಯಗಳನ್ನೂ ಜ್ಞಾಪಕಮಾಡಿಕೊಳ್ಳಿರಿ.
ಕೀರ್ತನೆಗಳು 105 : 6 (OCVKN)
ದೇವರ ಸೇವಕನಾದ ಅಬ್ರಹಾಮನ ಸಂತತಿಯೇ, ಅವರು ಆಯ್ದುಕೊಂಡ ಯಾಕೋಬನ ಮಕ್ಕಳೇ,
ಕೀರ್ತನೆಗಳು 105 : 7 (OCVKN)
ಅವರೇ ನಮ್ಮ ದೇವರಾದ ಯೆಹೋವ ಆಗಿದ್ದಾರೆ. ಅವರ ನ್ಯಾಯಗಳು ಸಮಸ್ತ ಭೂಮಿಯಲ್ಲಿ ಇವೆ.
ಕೀರ್ತನೆಗಳು 105 : 8 (OCVKN)
ದೇವರು ತಮ್ಮ ಒಡಂಬಡಿಕೆಯನ್ನೂ, ಸಾವಿರ ತಲಾಂತರಗಳಿಗೆ ಆಜ್ಞಾಪಿಸಿದ ತಮ್ಮ ಮಾತನ್ನೂ,
ಕೀರ್ತನೆಗಳು 105 : 9 (OCVKN)
ಅಬ್ರಹಾಮನ ಸಂಗಡ ಮಾಡಿದ ಒಡಂಬಡಿಕೆಯನ್ನೂ, ಇಸಾಕನಿಗೆ ಇಟ್ಟ ಆಣೆಯನ್ನೂ ಯುಗಯುಗಕ್ಕೂ ಜ್ಞಾಪಕ ಮಾಡಿಕೊಂಡಿದ್ದಾರೆ.
ಕೀರ್ತನೆಗಳು 105 : 10 (OCVKN)
ದೇವರು ಅದನ್ನು ಯಾಕೋಬನಿಗೆ ತೀರ್ಪನ್ನಾಗಿ ದೃಢಪಡಿಸಿದರು; ಅವರು ಇಸ್ರಾಯೇಲರಿಗೆ ನಿತ್ಯ ಒಡಂಬಡಿಕೆಯಾಗಿ ಸ್ಥಾಪಿಸಿ ಹೇಳಿದ್ದೇನೆಂದರೆ:
ಕೀರ್ತನೆಗಳು 105 : 11 (OCVKN)
“ನಾನು ನಿಮಗೆ ಕಾನಾನ್ ದೇಶವನ್ನು ನಿಮ್ಮ ಬಾಧ್ಯತೆಯ ಪಾಲಾಗಿ ಕೊಡುವೆನು.”
ಕೀರ್ತನೆಗಳು 105 : 12 (OCVKN)
ಆಗ ಅವರು ಅಲ್ಪಸಂಖ್ಯಾತರೂ, ಬಹು ಸ್ವಲ್ಪ ಮಂದಿಯಾಗಿಯೂ, ಪರದೇಶಸ್ಥರಾಗಿಯೂ ನಾಡಿನಲ್ಲಿ ಇದ್ದರು.
ಕೀರ್ತನೆಗಳು 105 : 13 (OCVKN)
ಅವರು ಜನಾಂಗದಿಂದ ಜನಾಂಗಕ್ಕೂ ಒಂದು ರಾಜ್ಯದಿಂದ ಬೇರೊಂದು ರಾಜ್ಯಕ್ಕೂ ಹೋಗುತ್ತಿದ್ದರು.
ಕೀರ್ತನೆಗಳು 105 : 14 (OCVKN)
ಜನರು ಅವರಿಗೆ ಕೇಡು ಮಾಡದಂತೆ ದೇವರು ತಡೆದರು. ಹೌದು, ಅವರಿಗೋಸ್ಕರ ದೇವರು ಅರಸರನ್ನು ಗದರಿಸಿ ಹೀಗೆ ಹೇಳಿದರು:
ಕೀರ್ತನೆಗಳು 105 : 15 (OCVKN)
“ನನ್ನ ಅಭಿಷಿಕ್ತರನ್ನು ಮುಟ್ಟಬೇಡಿರಿ, ನನ್ನ ಪ್ರವಾದಿಗಳಿಗೆ ಕೇಡು ಮಾಡಬೇಡಿರಿ.”
ಕೀರ್ತನೆಗಳು 105 : 16 (OCVKN)
ದೇವರು ಕ್ಷಾಮವನ್ನು ದೇಶದಲ್ಲಿ ಅನುಮತಿಸಿದರು. ಆಹಾರದ ಒದಗುವಿಕೆಯನ್ನು ಸ್ವಲ್ಪಕಾಲ ನಿಲ್ಲಿಸಿದ್ದರು.
ಕೀರ್ತನೆಗಳು 105 : 17 (OCVKN)
ಆಗ ದೇವರು ಅವರ ಮುಂದೆ ಒಬ್ಬ ಮನುಷ್ಯನನ್ನು ಕಳುಹಿಸಿದರು. ಅವನೇ ದಾಸನಾಗಿ ಮಾರಲಾದ ಯೋಸೇಫನು.
ಕೀರ್ತನೆಗಳು 105 : 18 (OCVKN)
ಸಂಕೋಲೆಗಳಿಂದ ಅವನ ಕಾಲನ್ನು ನೋಯಿಸಿದರು; ಅವನನ್ನು ಕಬ್ಬಿಣದ ಬೇಡಿಗಳಲ್ಲಿ ಇರಿಸಿದರು.
ಕೀರ್ತನೆಗಳು 105 : 19 (OCVKN)
ಯೆಹೋವ ದೇವರ ಮುಂತಿಳಿಸಿದ ವಾಕ್ಯವು ನೆರವೇರುವವರೆಗೆ ಅವನು ದೇವರ ಮಾತಿನಿಂದ ಪರಿಶೋಧಿತನಾದನು.
ಕೀರ್ತನೆಗಳು 105 : 20 (OCVKN)
ಅರಸನು ಅವನನ್ನು ಕರೆದು ಸೆರೆಯಿಂದ ಬಿಡಿಸಿದನು. ಹೌದು, ಜನಗಳ ಅಧಿಪತಿಯಿಂದ ಅವನು ಬಿಡುಗಡೆಯಾದನು.
ಕೀರ್ತನೆಗಳು 105 : 21 (OCVKN)
ಅರಸನು ಅವನನ್ನು ತನ್ನ ಮನೆಗೆ ಯಜಮಾನನಾಗಿಯೂ, ತನ್ನ ಎಲ್ಲಾ ಆಸ್ತಿಯ ಮೇಲೆ ಅಧಿಪತಿಯಾಗಿಯೂ,
ಕೀರ್ತನೆಗಳು 105 : 22 (OCVKN)
ತನ್ನ ಪ್ರಧಾನರಿಗೆ ತನ್ನ ಇಷ್ಟ ಪ್ರಕಾರ ಶಿಕ್ಷಣ ಕೊಡುವುದಕ್ಕೂ, ತನ್ನ ಜ್ಞಾನವನ್ನು ಮಂತ್ರಿಗಳಿಗೆ ಬೋಧಿಸುವುದಕ್ಕೂ ಯೋಸೇಫನನ್ನು ನೇಮಿಸಿದನು.
ಕೀರ್ತನೆಗಳು 105 : 23 (OCVKN)
ಅನಂತರ ಇಸ್ರಾಯೇಲನು ಈಜಿಪ್ಟಿಗೆ ಬಂದನು; ಯಾಕೋಬನು ಹಾಮನ ದೇಶದಲ್ಲಿ ಪರದೇಶಸ್ಥನಾಗಿದ್ದನು.
ಕೀರ್ತನೆಗಳು 105 : 24 (OCVKN)
ದೇವರು ತಮ್ಮ ಜನರನ್ನು ಬಹಳ ಅಭಿವೃದ್ಧಿಗೊಳಿಸಿ, ಅವರನ್ನು ವೈರಿಗಳಿಗಿಂತ ಬಲಿಷ್ಟರನ್ನಾಗಿ ಮಾಡಿದರು.
ಕೀರ್ತನೆಗಳು 105 : 25 (OCVKN)
ತಮ್ಮ ಜನರನ್ನು ದ್ವೇಷಿಸುವಂತೆಯೂ, ತಮ್ಮ ಸೇವಕರನ್ನು ಕುಯುಕ್ತಿಯಿಂದ ನಡೆಸುವಂತೆಯೂ ದೇವರು ಅವರ ಹೃದಯವನ್ನು ಮಾರ್ಪಡಿಸಿದನು.
ಕೀರ್ತನೆಗಳು 105 : 26 (OCVKN)
ದೇವರು ತಮ್ಮ ಸೇವಕ ಮೋಶೆಯನ್ನೂ, ಆಯ್ದುಕೊಂಡ ಆರೋನನನ್ನೂ ಕಳುಹಿಸಿದರು.
ಕೀರ್ತನೆಗಳು 105 : 27 (OCVKN)
ಇವರು ದೇವರ ಸೂಚಕಕಾರ್ಯಗಳನ್ನೂ, ಹಾಮನ ದೇಶದಲ್ಲಿ ಅದ್ಭುತಗಳನ್ನೂ ಅವರೊಳಗೆ ತೋರಿಸಿದರು.
ಕೀರ್ತನೆಗಳು 105 : 28 (OCVKN)
ದೇವರು ಕತ್ತಲೆಯನ್ನು ಕಳುಹಿಸಿ, ದೇಶವನ್ನೆಲ್ಲಾ ಕತ್ತಲು ಮಾಡಿದರು. ದೇವರ ಮಾತಿಗೆ ಈಜಿಪ್ಟನವರು ವಿರೋಧವಾಗಿ ತಿರುಗಿ ಬಿದ್ದರಲ್ಲವೇ?
ಕೀರ್ತನೆಗಳು 105 : 29 (OCVKN)
ದೇವರು ಅವರ ನೀರನ್ನು ರಕ್ತವಾಗಿ ಮಾರ್ಪಡಿಸಿದರು. ಅವರ ಮೀನುಗಳನ್ನು ನಾಶಮಾಡಿದರು.
ಕೀರ್ತನೆಗಳು 105 : 30 (OCVKN)
ಅವರ ದೇಶವು ಕಪ್ಪೆಗಳಿಂದ ತುಂಬಿಕೊಂಡಿತು; ಅವರ ಅರಸುಗಳ ಕೊಠಡಿಗಳಲ್ಲಿ ಸಹ ಅವು ನುಗ್ಗಿದವು.
ಕೀರ್ತನೆಗಳು 105 : 31 (OCVKN)
ದೇವರು ಆಜ್ಞಾಪಿಸಲು ನೊಣದ ಗುಂಪುಗಳೂ, ಅವರ ಮೇರೆಗಳಲ್ಲೆಲ್ಲಾ ಹೇನುಗಳೂ ಬಂದವು.
ಕೀರ್ತನೆಗಳು 105 : 32 (OCVKN)
ದೇವರು ಕಲ್ಮಳೆಯನ್ನೂ, ಅಗ್ನಿ ಜ್ವಾಲೆಗಳನ್ನೂ ಅವರ ದೇಶದಲ್ಲಿ ಬರಮಾಡಿದರು.
ಕೀರ್ತನೆಗಳು 105 : 33 (OCVKN)
ಅವರ ದ್ರಾಕ್ಷಿಯ ಬಳ್ಳಿ, ಅಂಜೂರದ ಗಿಡಗಳು ಹಾಗೂ ಅವರ ಮೇರೆಗಳ ಮರಗಳು ಮುರಿದು ಬಿದ್ದವು.
ಕೀರ್ತನೆಗಳು 105 : 34 (OCVKN)
ದೇವರು ಆಜ್ಞಾಪಿಸಲು ಮಿಡತೆಗಳೂ, ಲೆಕ್ಕವಿಲ್ಲದ ಕಂಬಳಿ ಹುಳುಗಳೂ ಬಂದವು.
ಕೀರ್ತನೆಗಳು 105 : 35 (OCVKN)
ಅವು ಈಜಿಪ್ಟ್ ದೇಶದಲ್ಲಿ ಎಲ್ಲಾ ಸಸ್ಯಗಳನ್ನು ತಿಂದುಬಿಟ್ಟವು; ಅವರ ಭೂಮಿಯ ಫಲಗಳನ್ನು ಸಹ ತಿಂದುಬಿಟ್ಟವು.
ಕೀರ್ತನೆಗಳು 105 : 36 (OCVKN)
ಅವರ ದೇಶದಲ್ಲಿಯ ಎಲ್ಲಾ ಚೊಚ್ಚಲ ಮಕ್ಕಳೂ ಅವರ ಎಲ್ಲಾ ಪ್ರಮುಖರೂ ದೇವರ ಬಾಧೆಗೆ ಒಳಗಾದರು.
ಕೀರ್ತನೆಗಳು 105 : 37 (OCVKN)
ದೇವರು ಬೆಳ್ಳಿ ಬಂಗಾರಗಳ ಸಂಗಡ ಇಸ್ರಾಯೇಲರನ್ನು ಹೊರಗೆ ಬರಮಾಡಿದರು. ಅವರ ಗೋತ್ರಗಳಲ್ಲಿ ಬಲಹೀನನಾದ ಒಬ್ಬನೂ ಇರಲಿಲ್ಲ.
ಕೀರ್ತನೆಗಳು 105 : 38 (OCVKN)
ಅವರೆಲ್ಲರೂ ಹೊರಗೆ ಹೋಗುವಾಗ ಈಜಿಪ್ಟ್ ದೇಶವು ಸಂತೋಷಿಸಿತು; ಏಕೆಂದರೆ ಈಜಿಪ್ಟಿನವರಿಗೆ ಅವರನ್ನು ಕುರಿತು ಹೆದರಿಕೆ ಇತ್ತು.
ಕೀರ್ತನೆಗಳು 105 : 39 (OCVKN)
ದೇವರು ಇಸ್ರಾಯೇಲರ ನೆರಳಿಗೋಸ್ಕರ ಮೇಘವನ್ನೂ, ರಾತ್ರಿಯಲ್ಲಿ ಬೆಳಕಿಗೋಸ್ಕರ ಬೆಂಕಿಯನ್ನೂ ಏರ್ಪಡಿಸಿದರು.
ಕೀರ್ತನೆಗಳು 105 : 40 (OCVKN)
ಅವರು ಕೇಳಿದಾಗ ದೇವರು ಲಾವಕ್ಕಿಗಳನ್ನು ಬರಮಾಡಿ, ಪರಲೋಕದ ಆಹಾರದಿಂದ ಅವರನ್ನು ತೃಪ್ತಿಪಡಿಸಿದರು.
ಕೀರ್ತನೆಗಳು 105 : 41 (OCVKN)
ದೇವರು ಬಂಡೆಯನ್ನು ತೆರೆಯಲು ನೀರು ಹೊರಟಿತು; ಅದು ಮರುಭೂಮಿಯಲ್ಲಿ ನದಿಯಾಗಿ ಹರಿಯಿತು.
ಕೀರ್ತನೆಗಳು 105 : 42 (OCVKN)
ಹೀಗೆ ದೇವರು ತಮ್ಮ ಪರಿಶುದ್ಧ ವಾಗ್ದಾನವನ್ನೂ, ತಮ್ಮ ಸೇವಕನಾದ ಅಬ್ರಹಾಮನನ್ನೂ ಜ್ಞಾಪಕಮಾಡಿಕೊಂಡರು.
ಕೀರ್ತನೆಗಳು 105 : 43 (OCVKN)
ದೇವರು ತಮ್ಮ ಜನರನ್ನು ಆನಂದದಿಂದಲೂ, ತಾವು ಆಯ್ದುಕೊಂಡವರನ್ನು ಉತ್ಸಾಹದಿಂದಲೂ ಹೊರತಂದರು.
ಕೀರ್ತನೆಗಳು 105 : 44 (OCVKN)
ದೇವರು ಜನಾಂಗಗಳ ದೇಶಗಳನ್ನು ಅವರಿಗೆ ಕೊಟ್ಟರು. ಇಸ್ರಾಯೇಲರು ಇತರರ ಕಷ್ಟಾರ್ಜಿತವನ್ನು ತಮಗಾಗಿ ಸ್ವಾಧೀನಮಾಡಿಕೊಂಡರು.
ಕೀರ್ತನೆಗಳು 105 : 45 (OCVKN)
ದೇವರ ಸೂತ್ರಗಳನ್ನು ಕೈಗೊಂಡು, ಅವರ ನಿಯಮಗಳನ್ನು ಇಸ್ರಾಯೇಲರು ಕಾಯಬೇಕೆಂಬ ಉದ್ದೇಶದಿಂದಲೇ ಹೀಗೆಲ್ಲಾ ಆಯಿತು. ಯೆಹೋವ ದೇವರನ್ನು ಸ್ತುತಿಸಿರಿ.
❮
❯