ಙ್ಞಾನೋಕ್ತಿಗಳು 6 : 1 (OCVKN)
ಬುದ್ಧಿಹೀನತೆಯ ವಿರುದ್ಧ ಎಚ್ಚರಿಕೆಗಳು ಮಗನೇ, ನಿನ್ನ ನೆರೆಯವನಿಗೆ ನೀನು ಹೊಣೆಯಾಗಿದ್ದರೆ, ಪರನಿಗಾಗಿ ನಿನ್ನ ಕೈಯನ್ನು ಒಡ್ಡಿದ್ದರೆ,
ಙ್ಞಾನೋಕ್ತಿಗಳು 6 : 2 (OCVKN)
ನೀನು ನುಡಿದ ನಿನ್ನ ಬಾಯಿ ಮಾತುಗಳಿಂದಲೇ ಸಿಕ್ಕಿಕೊಂಡಿರುವೆ. ನಿನ್ನ ಬಾಯಿ ಮಾತುಗಳೇ ನಿನ್ನನ್ನು ಸೆರೆಹಿಡಿದಿದೆ.
ಙ್ಞಾನೋಕ್ತಿಗಳು 6 : 3 (OCVKN)
ಮಗನೇ, ನೀನು ನಿನ್ನ ನೆರೆಯವನ ಕೈಗೆ ಸಿಕ್ಕಿಕೊಂಡದರಿಂದ, ನಿನ್ನನ್ನು ನೀನು ತಪ್ಪಿಸಿಕೊಳ್ಳಲು ಇದನ್ನು ಮಾಡು: ಹೋಗಿ ನಿನ್ನನ್ನು ನೀನು ತಗ್ಗಿಸಿಕೋ, ನಿನ್ನ ನೆರೆಯವನಿಗೆ ವಿಶ್ರಾಂತಿಯನ್ನು ಕೊಡಬೇಡ.
ಙ್ಞಾನೋಕ್ತಿಗಳು 6 : 4 (OCVKN)
ನಿನ್ನ ಕಣ್ಣುಗಳಿಗೆ ನಿದ್ರೆಯನ್ನೂ ನಿನ್ನ ರೆಪ್ಪೆಗಳಿಗೆ ತೂಕಡಿಕೆಯನ್ನೂ ಕೊಡಬೇಡ.
ಙ್ಞಾನೋಕ್ತಿಗಳು 6 : 5 (OCVKN)
ಬೇಟೆಗಾರನ ಕೈಯಿಂದ ಜಿಂಕೆಯೂ, ಬಲೆ ಬೀಸುವವನ ಕೈಯಿಂದ ಪಕ್ಷಿಯೂ ತಪ್ಪಿಸಿಕೊಳ್ಳುವಂತೆ ನೀನು ತಪ್ಪಿಸಿಕೋ.
ಙ್ಞಾನೋಕ್ತಿಗಳು 6 : 6 (OCVKN)
ಸೋಮಾರಿಯೇ, ನೀನು ಇರುವೆಯ ಹತ್ತಿರ ಹೋಗಿ, ಅದರ ನಡವಳಿಕೆಯನ್ನು ನೋಡಿ ಜ್ಞಾನವಂತನಾಗು.
ಙ್ಞಾನೋಕ್ತಿಗಳು 6 : 7 (OCVKN)
ನಾಯಕನಾಗಲೀ, ಮೇಲ್ವಿಚಾರಕನಾಗಲೀ, ಅಧಿಕಾರಿಯಾಗಲೀ ಇರುವೆಗೆ ಇಲ್ಲದೆ ಹೋದರೂ,
ಙ್ಞಾನೋಕ್ತಿಗಳು 6 : 8 (OCVKN)
ಬೇಸಿಗೆಯಲ್ಲಿ ಅದು ತನ್ನ ಆಹಾರವನ್ನು ಸಂಗ್ರಹಿಸುತ್ತದೆ. ಸುಗ್ಗಿಯಲ್ಲಿ ತನ್ನ ಆಹಾರವನ್ನು ಕೂಡಿಸಿಕೊಳ್ಳುತ್ತದೆ.
ಙ್ಞಾನೋಕ್ತಿಗಳು 6 : 9 (OCVKN)
ಸೋಮಾರಿಯೇ, ಎಷ್ಟು ಹೊತ್ತು ನೀನು ನಿದ್ರೆ ಮಾಡುವುದು? ನಿನ್ನ ನಿದ್ರೆಯಿಂದ ಯಾವಾಗ ಎಚ್ಚರಗೊಳ್ಳುವೆ?
ಙ್ಞಾನೋಕ್ತಿಗಳು 6 : 10 (OCVKN)
ಇನ್ನು ಸ್ವಲ್ಪ ನಿದ್ರೆ, ಇನ್ನು ಸ್ವಲ್ಪ ತೂಕಡಿಕೆ, ಇನ್ನೂ ಸ್ವಲ್ಪ ವಿಶ್ರಾಂತಿಗಾಗಿ ಕೈ ಮುದುರಿಕೊಳ್ಳುವೆ ಎನ್ನುವೆಯಾ?
ಙ್ಞಾನೋಕ್ತಿಗಳು 6 : 11 (OCVKN)
ಹೀಗೆ ನಿನಗೆ ಬಡತನವು ಕಳ್ಳನಂತೆಯೂ ಕೊರತೆಯು ಶಸ್ತ್ರಧಾರಿಯಂತೆಯೂ ನಿನ್ನ ಮೇಲೆ ಬರುವುವು.
ಙ್ಞಾನೋಕ್ತಿಗಳು 6 : 12 (OCVKN)
ತೊಂದರೆಕೊಡುವವನೂ ಕೆಡುಕನೂ ಆಗಿರುವವನ ಬಾಯಿಂದ ಕುಟಿಲ ಮಾತೇ ಬರುವುದು.
ಙ್ಞಾನೋಕ್ತಿಗಳು 6 : 13 (OCVKN)
ಅವನು ಕಣ್ಣು ಮಿಟುಕಿಸುತ್ತಾನೆ, ಕಾಲು ಕೆರೆಯುತ್ತಾನೆ, ಬೆರಳು ಸನ್ನೆಮಾಡುತ್ತಾನೆ,
ಙ್ಞಾನೋಕ್ತಿಗಳು 6 : 14 (OCVKN)
ಅವನು ತನ್ನ ಹೃದಯದಲ್ಲಿ ಮೋಸಕರ ಯೋಜನೆಯನ್ನೇ ಮಾಡುತ್ತಾನೆ; ಯಾವಾಗಲೂ ಅವನು ಜಗಳವನ್ನು ಕಲ್ಪಿಸುತ್ತಾನೆ.
ಙ್ಞಾನೋಕ್ತಿಗಳು 6 : 15 (OCVKN)
ಆದ್ದರಿಂದ ಅವನಿಗೆ ವಿಪತ್ತು ಬೇಗ ಬರುವುದು; ಯಾವ ಪರಿಹಾರವಿಲ್ಲದೆ ಅವನು ತಟ್ಟನೆ ನಾಶವಾಗುವನು.
ಙ್ಞಾನೋಕ್ತಿಗಳು 6 : 16 (OCVKN)
ಈ ಆರು ವಿಷಯಗಳನ್ನು ಯೆಹೋವ ದೇವರು ಹಗೆ ಮಾಡುತ್ತಾರೆ; ಹೌದು, ಏಳು ದೇವರಿಗೆ ಅಸಹ್ಯವಾಗಿವೆ, ಅವು ಯಾವವೆಂದರೆ:
ಙ್ಞಾನೋಕ್ತಿಗಳು 6 : 17 (OCVKN)
ಹೆಮ್ಮೆಯ ದೃಷ್ಟಿ, ಸುಳ್ಳಾಡುವ ನಾಲಿಗೆ, ನಿರಪರಾಧಿಯ ರಕ್ತವನ್ನು ಸುರಿಸುವ ಕೈಗಳು,
ಙ್ಞಾನೋಕ್ತಿಗಳು 6 : 18 (OCVKN)
ದುರಾಲೋಚನೆಗಳನ್ನು ಕಲ್ಪಿಸುವ ಹೃದಯ, ಕೇಡಿಗೆ ನುಗ್ಗಲು ತ್ವರೆಪಡುವ ಕಾಲುಗಳು,
ಙ್ಞಾನೋಕ್ತಿಗಳು 6 : 19 (OCVKN)
ಅಸತ್ಯವನ್ನಾಡುವ ಸುಳ್ಳುಸಾಕ್ಷಿ ಮತ್ತು ಸಹೋದರರಲ್ಲಿ ಜಗಳ ಹುಟ್ಟಿಸುವ ವ್ಯಕ್ತಿ.
ಙ್ಞಾನೋಕ್ತಿಗಳು 6 : 20 (OCVKN)
ವ್ಯಭಿಚಾರಕ್ಕೆ ವಿರುದ್ಧವಾಗಿ ಎಚ್ಚರಿಕೆ ಮಗನೇ, ನಿನ್ನ ತಂದೆಯ ಆಜ್ಞೆಯನ್ನು ಕೈಗೊಳ್ಳು, ನಿನ್ನ ತಾಯಿಯ ಬೋಧನೆಯನ್ನು ತ್ಯಜಿಸಬೇಡ.
ಙ್ಞಾನೋಕ್ತಿಗಳು 6 : 21 (OCVKN)
ಅವುಗಳನ್ನು ಯಾವಾಗಲೂ ನಿನ್ನ ಹೃದಯದಲ್ಲಿ ಬಂಧಿಸಿಕೋ. ಅವುಗಳನ್ನು ನಿನ್ನ ಕೊರಳಿಗೆ ಧರಿಸಿಕೋ.
ಙ್ಞಾನೋಕ್ತಿಗಳು 6 : 22 (OCVKN)
ನೀನು ನಡೆಯುವಾಗ ಅವು ನಿನಗೆ ಮಾರ್ಗದರ್ಶಿಯಾಗಿರುತ್ತವೆ. ನೀನು ಮಲಗುವಾಗ ಅವು ನಿನ್ನನ್ನು ಕಾಯುತ್ತವೆ. ನೀನು ಎಚ್ಚರಗೊಂಡಾಗ ಅವು ನಿನ್ನೊಂದಿಗೆ ಮಾತಾಡುತ್ತವೆ.
ಙ್ಞಾನೋಕ್ತಿಗಳು 6 : 23 (OCVKN)
ಆಜ್ಞೆಯೇ ದೀಪವಾಗಿದೆ, ಬೋಧನೆಯೇ ಬೆಳಕಾಗಿದೆ; ಶಿಕ್ಷಣದ ತಿದ್ದುವಿಕೆಗಳು ಜೀವ ಮಾರ್ಗವಾಗಿವೆ.
ಙ್ಞಾನೋಕ್ತಿಗಳು 6 : 24 (OCVKN)
ಅವು ಕೆಟ್ಟ ಹೆಂಗಸಿನಿಂದಲೂ, ಪರಸ್ತ್ರೀಯ ವಂಚಕ ಮಾತಿನಿಂದಲೂ ನಿನ್ನನ್ನು ತಪ್ಪಿಸಿ ಕಾಪಾಡಬಲ್ಲವು.
ಙ್ಞಾನೋಕ್ತಿಗಳು 6 : 25 (OCVKN)
ನಿನ್ನ ಹೃದಯ ಅವಳ ಸೌಂದರ್ಯವನ್ನು ಮೋಹಿಸದಿರಲಿ. ಅವಳ ಕಣ್ಣುರೆಪ್ಪೆಗಳಿಂದ ಅವಳು ನಿನ್ನನ್ನು ವಶಮಾಡಿಕೊಳ್ಳದೆ ಇರಲಿ.
ಙ್ಞಾನೋಕ್ತಿಗಳು 6 : 26 (OCVKN)
ಏಕೆಂದರೆ ವೇಶ್ಯೆಯನ್ನು ಊಟದಿಂದ ಕೊಂಡುಕೊಳ್ಳಬಹುದು, ಆದರೆ ವ್ಯಭಿಚಾರಿಣಿ ಅಮೂಲ್ಯ ಜೀವವನ್ನೇ ಬೇಟೆಯಾಡುವಳು.
ಙ್ಞಾನೋಕ್ತಿಗಳು 6 : 27 (OCVKN)
ಒಬ್ಬನು ತನ್ನ ಮಡಿಲಲ್ಲಿ ಬೆಂಕಿಯನ್ನು ಇಟ್ಟುಕೊಂಡರೆ, ಅವನ ವಸ್ತ್ರಗಳು ಸುಡುವುದಿಲ್ಲವೋ?
ಙ್ಞಾನೋಕ್ತಿಗಳು 6 : 28 (OCVKN)
ಒಬ್ಬನು ಧಗಧಗಿಸುವ ಕೆಂಡದ ಮೇಲೆ ನಡೆದರೆ, ಅವನ ಪಾದಗಳು ಸುಡುವುದಿಲ್ಲವೋ?
ಙ್ಞಾನೋಕ್ತಿಗಳು 6 : 29 (OCVKN)
ಪರನ ಹೆಂಡತಿಯನ್ನು ಕೂಡುವವನ ಗತಿಯು ಹೀಗೆಯೇ ಇರುವದು. ಅವಳನ್ನು ಮುಟ್ಟುವ ಯಾವನೂ ದಂಡನೆಯಿಂದ ತಪ್ಪಿಸಿಕೊಳ್ಳನು.
ಙ್ಞಾನೋಕ್ತಿಗಳು 6 : 30 (OCVKN)
ಹಸಿದಾಗ ಕಳ್ಳನು ತನ್ನ ಹಸಿವೆಯನ್ನು ತೃಪ್ತಿಪಡಿಸಲು ಕಳವು ಮಾಡಿದರೆ, ಜನರು ಅವನನ್ನು ಹೀಯಾಳಿಸುವುದಿಲ್ಲ.
ಙ್ಞಾನೋಕ್ತಿಗಳು 6 : 31 (OCVKN)
ಅವನು ಸಿಕ್ಕಿಕೊಂಡರೆ ಏಳರಷ್ಟು ಹಿಂದಕ್ಕೆ ಕೊಡಬೇಕಾಗುವುದು. ತನ್ನ ಮನೆಯ ಆಸ್ತಿಯನ್ನೆಲ್ಲಾ ಸಹ ಅವನು ಕೊಡಬೇಕಾಗುವುದು.
ಙ್ಞಾನೋಕ್ತಿಗಳು 6 : 32 (OCVKN)
ವ್ಯಭಿಚಾರಿಯು ಬುದ್ಧಿಹೀನನಾಗಿದ್ದಾನೆ. ಹಾಗೆ ಮಾಡುವವನು ತನ್ನನ್ನೇ ನಾಶಮಾಡಿಕೊಳ್ಳುವನು.
ಙ್ಞಾನೋಕ್ತಿಗಳು 6 : 33 (OCVKN)
ಅವನಿಗೆ ಗಾಯವೂ ಅವಮಾನವೂ ಆಗುತ್ತವೆ. ಅವನ ನಿಂದೆಯು ಎಂದಿಗೂ ಅಳಿಸಲಾಗದು.
ಙ್ಞಾನೋಕ್ತಿಗಳು 6 : 34 (OCVKN)
ಏಕೆಂದರೆ ಮತ್ಸರವು ಪತಿಯ ಕ್ರೋಧವನ್ನು ಉದ್ರೇಕಿಸುವುದು. ಆದ್ದರಿಂದ ಮುಯ್ಯಿ ತೀರಿಸುವಾಗ ಅವನು ಕರುಣೆ ತೋರನು.
ಙ್ಞಾನೋಕ್ತಿಗಳು 6 : 35 (OCVKN)
ಅವನು ಯಾವ ಪರಿಹಾರವನ್ನು ಒಪ್ಪುವುದಿಲ್ಲ; ಎಷ್ಟು ದೊಡ್ಡ ಲಂಚ ಕೊಟ್ಟರೂ ಅವನು ಅದನ್ನು ತಿರಸ್ಕರಿಸುವನು.
❮
❯