ಓಬದ್ಯ 1 : 1 (OCVKN)
ಓಬದ್ಯನ ದರ್ಶನ ಓಬದ್ಯನ ದರ್ಶನವು. ಸಾರ್ವಭೌಮ ಯೆಹೋವ ದೇವರು ಎದೋಮನ್ನು ಕುರಿತು ಹೀಗೆ ಹೇಳುತ್ತಾರೆ: ಯೆಹೋವ ದೇವರಿಂದ ಸುದ್ದಿಯನ್ನು ಕೇಳಿದ್ದೇವೆ. ಅವರು ದೂತನ ಮೂಲಕ ಜನಾಂಗಗಳಿಗೆ ಹೀಗೆ ಹೇಳಿ ಕಳುಹಿಸಿದ್ದಾರೆ: “ಏಳಿರಿ, ಅದಕ್ಕೆ ವಿರೋಧವಾಗಿ ಯುದ್ಧಕ್ಕೆ ಹೋಗೋಣ!”
ಓಬದ್ಯ 1 : 2 (OCVKN)
“ಇಗೋ, ನಿನ್ನನ್ನು ಜನಾಂಗಗಳಲ್ಲಿ ಅತ್ಯಲ್ಪನನ್ನಾಗಿ ಮಾಡಿದ್ದೇನೆ. ನೀನು ಬಹು ತಾತ್ಸಾರಕ್ಕೆ ಗುರಿಯಾಗುವೆ.
ಓಬದ್ಯ 1 : 3 (OCVKN)
ಬಂಡೆಯ ಬಿರುಕುಗಳಲ್ಲಿ ವಾಸಮಾಡುವವನೇ, ಉನ್ನತದಲ್ಲಿ ನಿವಾಸಮಾಡಿಕೊಂಡವನೇ, ‘ಯಾರು ನನ್ನನ್ನು ನೆಲಕ್ಕೆ ಇಳಿಸಬಲ್ಲವರು?’ ಎಂದು ತನ್ನ ಹೃದಯದಲ್ಲಿ ಅನ್ನುವವನೇ, ನಿನ್ನ ಹೃದಯದ ಗರ್ವವು ನಿನ್ನನ್ನು ಮೋಸಗೊಳಿಸಿದೆ.
ಓಬದ್ಯ 1 : 4 (OCVKN)
ನೀನು ಹದ್ದಿನಂತೆ ಏರಿಕೊಂಡು ನಿನ್ನ ಗೂಡನ್ನು ನಕ್ಷತ್ರಗಳಲ್ಲಿ ಇಟ್ಟರೂ ಅಲ್ಲಿಂದ ನಿನ್ನನ್ನು ಇಳಿಸುವೆನು,” ಎಂದು ಯೆಹೋವ ದೇವರು ಹೇಳುತ್ತಾರೆ.
ಓಬದ್ಯ 1 : 5 (OCVKN)
“ನಿನ್ನಲ್ಲಿ ಕಳ್ಳರಾಗಲಿ, ರಾತ್ರಿಯಲ್ಲಿ ಪಂಜುಗಳ್ಳರಾಗಲಿ ಬಂದರೆ ಅವರು ತಮಗೆ ಬೇಕಾದಷ್ಟನ್ನು ಮಾತ್ರ ದೋಚಿಕೊಂಡು ಹೋಗುತ್ತಿದ್ದರಲ್ಲವೆ? ದ್ರಾಕ್ಷಿ ಕೀಳುವವರು ನಿಮ್ಮ ಬಳಿಗೆ ಬಂದರೆ ಸ್ವಲ್ಪ ದ್ರಾಕ್ಷಿಯನ್ನು ಬಿಡುವುದಿಲ್ಲವೇ?
ಓಬದ್ಯ 1 : 6 (OCVKN)
ಆದರೆ ಏಸಾವಿನ ಆಸ್ತಿಯು ಸಂಪೂರ್ಣ ನಾಶವಾಗಿ ಅದರ ನಿಗೂಢ ನಿಕ್ಷೇಪಗಳು ಸೂರೆಯಾಗಿವೆ.
ಓಬದ್ಯ 1 : 7 (OCVKN)
ನಿನ್ನ ಸಂಗಡ ಒಡಂಬಟ್ಟ ಮನುಷ್ಯರೆಲ್ಲರು ನಿನ್ನನ್ನು ಮೇರೆಯವರೆಗೂ ತಂದಿದ್ದಾರೆ. ನಿನ್ನ ಸಂಗಡ ಸಮಾಧಾನವಾಗಿದ್ದ ಮನುಷ್ಯರು ನಿನ್ನನ್ನು ಮೋಸಮಾಡಿ ನಿನ್ನ ಮೇಲೆ ಜಯ ಹೊಂದಿದ್ದಾರೆ. ನಿನ್ನ ರೊಟ್ಟಿಯನ್ನು ತಿನ್ನುವವರು ನಿನ್ನ ಕೆಳಗೆ ಬೋನು ಇಟ್ಟಿದ್ದಾರೆ. ಆದರೆ ನೀನು ಅದನ್ನು ತಿಳಿದುಕೊಳ್ಳಲಾರೆ.
ಓಬದ್ಯ 1 : 8 (OCVKN)
“ಯೆಹೋವ ದೇವರು ಹೀಗೆ ಹೇಳುತ್ತಾರೆ, ‘ಆ ದಿವಸದಲ್ಲಿ,’ ಎದೋಮಿನೊಳಗಿಂದ ಜ್ಞಾನಿಗಳನ್ನೂ ಏಸಾವನ ಬೆಟ್ಟದೊಳಗಿಂದ ವಿವೇಕವನ್ನೂ ನಾಶಮಾಡದಿರುವೆನೇ?
ಓಬದ್ಯ 1 : 9 (OCVKN)
ಸರ್ವರು ಸಂಹಾರದಿಂದ ಏಸಾವನ ಬೆಟ್ಟದೊಳಗಿಂದ ನಾಶವಾಗುವ ಹಾಗೆ ತೇಮಾನೇ, ನಿನ್ನ ಪರಾಕ್ರಮಶಾಲಿಗಳು ಗಾಬರಿಪಡುವರು.
ಓಬದ್ಯ 1 : 10 (OCVKN)
ನಿನ್ನ ತಮ್ಮನಾದ ಯಾಕೋಬನಿಗೆ ವಿರೋಧವಾದ ನಿನ್ನ ಹಿಂಸಾಕೃತ್ಯಗಳ ನಿಮಿತ್ತ ನಾಚಿಕೆಯು ನಿನ್ನನ್ನು ಮುಚ್ಚುವುದು. ನೀನು ಎಂದೆಂದಿಗೂ ನಾಶವಾಗಿ ಹೋಗುವೆ.
ಓಬದ್ಯ 1 : 11 (OCVKN)
ನೀನು ಪ್ರತ್ಯೇಕವಾಗಿ ಎದುರು ನಿಂತ ದಿವಸದಲ್ಲಿ ಪರರು ಅವನ ಸೊತ್ತನ್ನು ತೆಗೆದುಕೊಂಡು ಹೋದ ದಿವಸದಲ್ಲಿ ಪರಕೀಯರು ಅವನ ಬಾಗಿಲುಗಳಲ್ಲಿ ಪ್ರವೇಶಿಸಿ, ಯೆರೂಸಲೇಮಿನ ಸೊತ್ತಿಗಾಗಿ ಚೀಟು ಹಾಕಿದಾಗ ನೀನೂ ಅವರಲ್ಲಿ ಒಬ್ಬನ ಹಾಗಿದ್ದೆ.
ಓಬದ್ಯ 1 : 12 (OCVKN)
ನಿನ್ನ ಸಹೋದರನ ವಿಪತ್ತಿನ ದಿನದಲ್ಲಿ ನೀನು ಅವನನ್ನು ಕೀಳು ದೃಷ್ಟಿಯಿಂದ ನೋಡಬಾರದಾಗಿತ್ತು. ಯೆಹೂದದ ಜನರು ನಾಶವಾದಾಗ ನೀನು ಸಂತೋಷಪಡಬಾರದಿತ್ತು. ಅವರ ಕಷ್ಟದ ದಿವಸದಲ್ಲಿ ಅಹಂಕಾರವಾಗಿ ಮಾತನಾಡಬಾರದಾಗಿತ್ತು;
ಓಬದ್ಯ 1 : 13 (OCVKN)
ನನ್ನ ಜನರ ಆಪತ್ತಿನ ದಿವಸದಲ್ಲಿ ಅವರ ದ್ವಾರಗಳ ಮೂಲಕ ಪ್ರವೇಶಿಸಬಾರದಿತ್ತು. ಹೌದು, ನೀನು ಅವರ ಆಪತ್ತಿನ ದಿವಸದಲ್ಲಿ ಅವರನ್ನು ಕೀಳು ದೃಷ್ಟಿಯಿಂದ ನೋಡಬಾರದಾಗಿತ್ತು. ಅವರ ಆಪತ್ತಿನ ದಿವಸದಲ್ಲಿ ಅವರ ಆಸ್ತಿಯ ಮೇಲೆ ಕೈ ಹಾಕಬಾರದಾಗಿತ್ತು.
ಓಬದ್ಯ 1 : 14 (OCVKN)
ಅವರಲ್ಲಿ ಓಡಿಹೋದವರನ್ನು ಕಡಿದುಬಿಡುವುದಕ್ಕೆ ನೀನು ಕೂಡುವ ದಾರಿಯಲ್ಲಿ ನಿಲ್ಲಬಾರದಾಗಿತ್ತು. ಕಷ್ಟದ ದಿವಸದಲ್ಲಿ ಅವರಲ್ಲಿ ಉಳಿದುಕೊಂಡವರನ್ನು ಹಿಡಿದುಕೊಡಬಾರದಾಗಿತ್ತು.
ಓಬದ್ಯ 1 : 15 (OCVKN)
“ಯೆಹೋವ ದೇವರ ದಿವಸವು ಎಲ್ಲಾ ಜನಾಂಗಗಳ ಮೇಲೆ ಸಮೀಪವಾಗಿದೆ. ನೀನು ಮಾಡಿದ ಹಾಗೆಯೇ ನಿನಗೂ ಮಾಡಲಾಗುವುದು. ನಿನ್ನ ಕಾರ್ಯಗಳು ನಿನ್ನ ತಲೆಯ ಮೇಲೆ ತಿರುಗುವುವು.
ಓಬದ್ಯ 1 : 16 (OCVKN)
ನೀವು ನನ್ನ ಪರಿಶುದ್ಧ ಪರ್ವತದ ಮೇಲೆ ಕುಡಿದ ಹಾಗೆಯೇ, ಜನಾಂಗಗಳೆಲ್ಲಾ ನಿತ್ಯವಾಗಿ ಕುಡಿಯುವುವು. ಹೌದು, ಕುಡಿದು ಎಂದೂ ಇಲ್ಲದವರ ಹಾಗೆ ಆಗುವುದು.
ಓಬದ್ಯ 1 : 17 (OCVKN)
ಆದರೆ ಚೀಯೋನ್ ಪರ್ವತದಲ್ಲಿ ಬಿಡುಗಡೆ ಇರುವುದು. ಅದು ಪರಿಶುದ್ಧವಾಗಿರುವುದು. ಯಾಕೋಬನ ಮನೆತನದವರು ತಮ್ಮ ಸೊತ್ತನ್ನು ಮರಳಿ ಅನುಭವಿಸುವರು.
ಓಬದ್ಯ 1 : 18 (OCVKN)
ಯಾಕೋಬನ ಮನೆತನದವರು ಬೆಂಕಿಯಾಗಿಯೂ ಯೋಸೇಫನ ಮನೆತನದವರು ಜ್ವಾಲೆಯಾಗಿಯೂ ಇರುವರು; ಏಸಾವನ ಮನೆತನದವರು ಕೂಳೆಯಂತೆ ಧಗಧಗನೆ ದಹಿಸಿ ನಾಶವಾಗುವರು. ಏಸಾವನ ಮನೆತನದವರಲ್ಲಿ ಯಾರೂ ಉಳಿಯರು.” ಯೆಹೋವ ದೇವರೇ ಇದನ್ನು ನುಡಿದಿದ್ದಾರೆ.
ಓಬದ್ಯ 1 : 19 (OCVKN)
ದಕ್ಷಿಣದವರು ಏಸಾವನ ಬೆಟ್ಟವನ್ನೂ ಬಯಲಿನವರು ಫಿಲಿಷ್ಟಿಯರ ದೇಶವನ್ನೂ ಸ್ವತಂತ್ರಿಸಿಕೊಳ್ಳುವರು. ಎಫ್ರಾಯೀಮಿನ ಹೊಲಗಳನ್ನು ಸಮಾರ್ಯದ ಹೊಲಗಳನ್ನು ಸಹ ಸ್ವಾಧೀನಮಾಡಿಕೊಳ್ಳುವರು ಬೆನ್ಯಾಮೀನನು ಗಿಲ್ಯಾದನ್ನು ವಶಪಡಿಸಿಕೊಳ್ಳುವನು.
ಓಬದ್ಯ 1 : 20 (OCVKN)
ಚಾರೆಪತಿನವರೆಗೂ ಇರುವ ಪ್ರದೇಶವನ್ನು ಕಾನಾನ್ಯರಲ್ಲಿರುವ ಇಸ್ರಾಯೇಲ್ ಸೆರೆವಾಸಿಗಳು ವಶಪಡಿಸಿಕೊಳ್ಳುವರು. ಸೆಫಾರದಿನಲ್ಲಿರುವ ಯೆರೂಸಲೇಮಿನ ಸೆರೆಯವರು ದಕ್ಷಿಣದ ಪಟ್ಟಣಗಳನ್ನು ಸ್ವಾಧೀನಮಾಡಿಕೊಳ್ಳುವರು.
ಓಬದ್ಯ 1 : 21 (OCVKN)
ರಕ್ಷಕನು ಏಸಾವಿನ ಪರ್ವತವನ್ನು ಆಳಲು ಚೀಯೋನ್ ಪರ್ವತವನ್ನು ಏರುವನು. ಆಗ ರಾಜ್ಯವು ಯೆಹೋವ ದೇವರದಾಗಿರುವುದು.
❮
❯
1
2
3
4
5
6
7
8
9
10
11
12
13
14
15
16
17
18
19
20
21