ನಹೂಮ 3 : 1 (OCVKN)
ನಿನೆವೆಗೆ ಕಷ್ಟ ರಕ್ತಮಯ ಪಟ್ಟಣಕ್ಕೆ ಕಷ್ಟ, ಅದೆಲ್ಲಾ ಸುಳ್ಳಿನಿಂದಲೂ, ಕಳ್ಳತನದಿಂದಲೂ ತುಂಬಿದೆ, ಕೊಳ್ಳೆಯನ್ನೂ ಬಿಡುವುದಿಲ್ಲ.
ನಹೂಮ 3 : 2 (OCVKN)
ಚಾವಟಿಗೆ, ಚಬುಕಿನ ಶಬ್ದವೂ, ಚಕ್ರಗಳ ಧಡಧಡನೆಯ ಶಬ್ದವೂ, ಕುದುರೆಗಳ ಕುಣಿದಾಟವೂ, ರಥಗಳ ಹಾರಾಟವೂ ಇದೆ.
ನಹೂಮ 3 : 3 (OCVKN)
ಸವಾರರು ಹತ್ತುತ್ತಾರೆ, ಈಟಿಗಳು ಥಳಥಳಿಸುತ್ತವೆ, ಖಡ್ಗಗಳು ಮಿಂಚುತ್ತವೆ, ಹತರಾದವರು ಬಹಳ; ಹೆಣಗಳ ರಾಶಿ; ಅಸಂಖ್ಯಾತ ಮೃತ ದೇಹಗಳು, ಶವಗಳ ಮೇಲೆ ತತ್ತರಿಸುತ್ತಿರುವ ಜನರು,
ನಹೂಮ 3 : 4 (OCVKN)
ಇದೆಲ್ಲವೂ ಆ ಒಬ್ಬ ವೇಶ್ಯೆಯ ಕಾಮತೃಷೆಯಿಂದಾಗಿ, ವೇಶ್ಯೆಯು ಲೆಕ್ಕವಿಲ್ಲದ ವೇಶ್ಯಾವಾಟಿಕೆಯ ಬಹಳ. ಅವಳು ತನ್ನ ಸೂಳೆತನಗಳಿಂದ ಜನಾಂಗಗಳನ್ನೂ, ತನ್ನ ಮಾಟಗಳಿಂದ ಗೋತ್ರಗಳನ್ನೂ ಗುಲಾಮರನ್ನಾಗಿ ಮಾಡಿಕೊಂಡಳಲ್ಲವೇ?
ನಹೂಮ 3 : 5 (OCVKN)
ಸೇನಾಧೀಶ್ವರ ಯೆಹೋವ ದೇವರು ಹೇಳುವುದೇನೆಂದರೆ, “ಇಗೋ, ನಾನು ನಿನಗೆ ವಿರೋಧವಾಗಿದ್ದೇನೆ. ನಿನ್ನ ಸೆರಗುಗಳನ್ನು ನಿನ್ನ ಮುಖದ ಮೇಲಿಂದ ಎತ್ತಿ, ಜನಾಂಗಗಳಿಗೆ ನಿನ್ನ ನಾಚಿಕೆಯನ್ನೂ, ರಾಜ್ಯಗಳಿಗೆ ನಿನ್ನ ನಿಂದೆಯ ಬೆತ್ತಲೆತನವನ್ನೂ ತೋರಿಸುತ್ತೇನೆ.
ನಹೂಮ 3 : 6 (OCVKN)
ಅಸಹ್ಯವಾದವುಗಳನ್ನು ನಿನ್ನ ಮೇಲೆ ಹಾಕಿ, ನಿನ್ನನ್ನು ನೀಚಳನ್ನಾಗಿ ಮಾಡಿ, ನಿನ್ನನ್ನು ಪರಿಹಾಸ್ಯಕ್ಕೀಡುಮಾಡುವೆನು.
ನಹೂಮ 3 : 7 (OCVKN)
ನಿನ್ನನ್ನು ನೋಡುವವರೆಲ್ಲರೂ ನಿನ್ನಿಂದ ಓಡಿಹೋಗಿ ಹೀಗೆ ಹೇಳುವರು, ‘ನಿನೆವೆ ಹಾಳಾಯಿತು, ಅದಕ್ಕೆ ಯಾರು ಚಿಂತೆಪಡುವರು?’ ನಿನ್ನನ್ನು ಆದರಿಸುವವರನ್ನು ನಾನು ಎಲ್ಲಿಂದ ಹುಡುಕಲಿ.”
ನಹೂಮ 3 : 8 (OCVKN)
ನೈಲ್ ನದಿಯ ಬಳಿ ನೆಲೆಯಾಗಿದ್ದ ತೆಬೆಸ್ಸಿಗಿಂತ ನೀನು ಒಳ್ಳೆಯವಳೋ? ಅವಳ ಸುತ್ತಲೂ ನೀರಿತ್ತು. ನದಿ ಅವಳ ರಕ್ಷಣೆ, ನೀರು ಅವಳ ಗೋಡೆ.
ನಹೂಮ 3 : 9 (OCVKN)
ಕೂಷ್ ಮತ್ತು ಈಜಿಪ್ಟ್ ಅವಳ ಅಪಾರ ಬಲವಾಗಿದ್ದವು. ಪೂಟರೂ, ಲಿಬಿಯದವರೂ ಅವಳ ಸಹಾಯಕರಾಗಿದ್ದರು.
ನಹೂಮ 3 : 10 (OCVKN)
ಆದರೆ ಅವಳು ಸೆರೆಯಾಗಿ ದೇಶಾಂತರಕ್ಕೆ ಹೋದಳು. ಅವಳ ಕೂಸುಗಳು ಸಹ ಎಲ್ಲಾ ಬೀದಿಗಳ ಮುಖ್ಯ ಸ್ಥಳಗಳಲ್ಲಿ ಅಪ್ಪಳಿಸಲಾಯಿತು. ಅವಳ ಪ್ರಧಾನರಿಗೋಸ್ಕರ ಚೀಟುಹಾಕಿದರು. ಅವಳ ಮಹನೀಯರೆಲ್ಲರನ್ನು ಸಂಕೋಲೆಗಳಿಂದ ಕಟ್ಟಿದರು.
ನಹೂಮ 3 : 11 (OCVKN)
ನೀನೂ ಸಹ ಅಮಲೇರಿ ಅಡಗಿಕೊಳ್ಳುವೆ; ನೀನೂ ಸಹ ಶತ್ರುವಿನ ನಿಮಿತ್ತ ಅಡಗಿಕೊಳ್ಳಲು ಆಶ್ರಯ ಸ್ಥಾನವನ್ನು ಹುಡುಕುವೆ.
ನಹೂಮ 3 : 12 (OCVKN)
ನಿನ್ನ ಕೋಟೆಗಳೆಲ್ಲಾ ಮೊದಲನೆಯ ಮಾಗಿದ ಹಣ್ಣುಳ್ಳ ಅಂಜೂರದ ಗಿಡಗಳ ಹಾಗಿರುವುವು. ಅಲ್ಲಾಡಿಸಿದರೆ ಹಣ್ಣು ತಿನ್ನುವವನ ಬಾಯಿಗೆ ಬೀಳುವುದು.
ನಹೂಮ 3 : 13 (OCVKN)
ಇಗೋ, ನಿನ್ನ ಸೈನ್ಯಗಳನ್ನು ನೋಡು. ಅವರೆಲ್ಲರೂ ಮಹಿಳೆಯರೇ. ನಿನ್ನ ದೇಶದ ಬಾಗಿಲುಗಳು ನಿನ್ನ ಶತ್ರುಗಳಿಗೆ ವಿಶಾಲವಾಗಿ ತೆರೆದಿವೆ. ಬೆಂಕಿ ನಿನ್ನ ಅಗುಳಿಗಳನ್ನು ತಿಂದುಬಿಟ್ಟಿದೆ.
ನಹೂಮ 3 : 14 (OCVKN)
ಮುತ್ತಿಗೆಗೋಸ್ಕರ ನೀರನ್ನು ಸೇದು; ನಿನ್ನ ಬಲವಾದ ಕೋಟೆಗಳನ್ನು ಭದ್ರಮಾಡು; ಕೆಸರಿನಲ್ಲಿ ಸೇರು; ಮಣ್ಣನ್ನು ತುಳಿ; ಇಟ್ಟಿಗೆ ಅಚ್ಚನ್ನು ಹಿಡಿ.
ನಹೂಮ 3 : 15 (OCVKN)
ಅಲ್ಲೇ ಬೆಂಕಿ ನಿನ್ನನ್ನು ತಿನ್ನುವುದು; ಖಡ್ಗವು ನಿನ್ನನ್ನು ಕಡಿದುಬಿಡುವುದು; ಹುಲ್ಲು ಮೇಯುವ ಹುಳ ನಿನ್ನನ್ನು ತಿಂದುಬಿಡುವುದು; ಬಹುಮಂದಿಯಾಗು, ಮಿಡತೆಗಳಂತೆ ಬಹುಮಂದಿಯಾಗು, ಗುಂಪು ಮಿಡತೆಗಳಂತೆ
ನಹೂಮ 3 : 16 (OCVKN)
ನಿನ್ನ ವರ್ತಕರನ್ನು ಆಕಾಶದ ನಕ್ಷತ್ರಗಳಿಗಿಂತ ಹೆಚ್ಚಾಗಿ ಸಂಖ್ಯೆಯಲ್ಲಿ ಬೆಳೆಸಿದ್ದೀ. ಆದರೆ ಅವರು ಮಿಡತೆಗಳಂತೆ ದೇಶವನ್ನು ಸುಲಿದುಕೊಂಡು ಹಾರಿಹೋಗುವರು.
ನಹೂಮ 3 : 17 (OCVKN)
ನಿನ್ನ ಕಾವಲುಗಾರರು ಮಿಡತೆಗಳ ಹಾಗೆಯೂ, ನಿನ್ನ ಅಧಿಪತಿಗಳು ತಂಪಾದ ದಿವಸದಲ್ಲಿ ಬೇಲಿಗಳೊಳಗೆ ಇಳಿದುಕೊಳ್ಳುವ ದೊಡ್ಡ ಮಿಡತೆಗಳ ಹಾಗೆಯೂ ಇದ್ದಾರೆ. ಸೂರ್ಯೋದಯವಾಗುವಾಗ ಹಾರಿ ಹೋಗುತ್ತವೆ. ಆಗ ಅವು ಎಲ್ಲಿದ್ದಾವೆಂದು ಅವುಗಳ ಸ್ಥಳವು ತಿಳಿಯುವುದಿಲ್ಲ.
ನಹೂಮ 3 : 18 (OCVKN)
ಅಸ್ಸೀರಿಯದ ಅರಸನೇ, ನಿನ್ನ ಕುರುಬರು ತೂಕಡಿಸುತ್ತಾರೆ. ನಿನ್ನ ಪ್ರಧಾನರು ವಿಶ್ರಾಂತಿಗೈಯುತ್ತಿದ್ದಾರೆ. ಕೂಡಿಸುವವರು ಯಾರೂ ಇಲ್ಲದಂತೆ ನಿನ್ನ ಜನರೆಲ್ಲರೂ ಬೆಟ್ಟಗಳಲ್ಲಿ ಚದರಿಹೋಗಿದ್ದಾರೆ.
ನಹೂಮ 3 : 19 (OCVKN)
ನಿನ್ನ ಗಾಯಕ್ಕೆ ಮದ್ದಿಲ್ಲ, ನಿನ್ನ ಗಾಯ ಪ್ರಾಣನಾಶಕ. ನಿನ್ನ ಸುದ್ದಿಯನ್ನು ಕೇಳುವವರೆಲ್ಲರೂ ನಿನ್ನ ಪತನಕ್ಕಾಗಿ ಕೈ ತಟ್ಟುವರು. ಏಕೆಂದರೆ ನಿನ್ನ ಕೆಡುಕಿಗೆ ನಿತ್ಯವೂ ಗುರಿಯಾಗದವರು ಯಾರಿದ್ದಾರೆ?

1 2 3 4 5 6 7 8 9 10 11 12 13 14 15 16 17 18 19