ಮಿಕ 6 : 1 (OCVKN)
ಇಸ್ರಾಯೇಲರ ವಿರುದ್ಧ ಯೆಹೋವ ದೇವರ ವ್ಯಾಜ್ಯ ಯೆಹೋವ ದೇವರು ಹೇಳುವುದನ್ನು ಈಗ ಕೇಳಿರಿ, ಎದ್ದೇಳು, ಬೆಟ್ಟಗಳ ಮುಂದೆ ವ್ಯಾಜ್ಯವಾಡು; ನೀನು ಹೇಳುವುದನ್ನು ಗುಡ್ಡಗಳು ಕೇಳಲಿ.
ಮಿಕ 6 : 2 (OCVKN)
ಬೆಟ್ಟಗಳೇ, ಯೆಹೋವ ದೇವರ ಆಪಾದನೆಯನ್ನು ಕೇಳಿರಿ. ಭೂಮಿಯ ಶಾಶ್ವತವಾದ ಅಸ್ತಿವಾರಗಳೇ ಕಿವಿಗೊಡಿರಿ. ಏಕೆಂದರೆ ಯೆಹೋವ ದೇವರಿಗೆ ತಮ್ಮ ಜನರ ವಿರುದ್ಧ ವ್ಯಾಜ್ಯವಿದೆ, ಅವರು ಇಸ್ರಾಯೇಲಿನ ವಿರುದ್ಧ ಆರೋಪಿಸುತ್ತಾರೆ.
ಮಿಕ 6 : 3 (OCVKN)
ನನ್ನ ಜನರೇ, ನಾನು ನಿಮಗೆ ಏನು ಮಾಡಿದ್ದೇನೆ? ನಾನು ನಿಮ್ಮ ಮೇಲೆ ಭಾರ ಹಾಕಿದ್ದೇನೋ? ನನಗೆ ಉತ್ತರಕೊಡಿರಿ.
ಮಿಕ 6 : 4 (OCVKN)
ನಾನು ಈಜಿಪ್ಟ್ ದೇಶದೊಳಗಿಂದ ನಿನ್ನನ್ನು ಮೇಲೆ ಬರಮಾಡಿ, ದಾಸತ್ವದ ದೇಶದೊಳಗಿಂದ ನಿನ್ನನ್ನು ವಿಮೋಚಿಸಿ, ಮೋಶೆ, ಆರೋನ್ ಮತ್ತು ಮಿರ್ಯಾಮಳನ್ನು ನಿನಗೆ ನಾಯಕರನ್ನಾಗಿ ಕಳುಹಿಸಿದೆನು.
ಮಿಕ 6 : 5 (OCVKN)
ನನ್ನ ಜನರೇ, ಮೋವಾಬಿನ ಅರಸನಾದ ಬಾಲಾಕನು ಯೋಚಿಸಿದ್ದನ್ನೂ ಬೆಯೋರನ ಮಗ ಬಿಳಾಮನು ಅವನಿಗೆ ಉತ್ತರವಾಗಿ ಹೇಳಿದ್ದನ್ನೂ ಶಿಟ್ಟೀಮು ಮೊದಲುಗೊಂಡು ಗಿಲ್ಗಾಲಿನ ವರೆಗೆ ಆದ ನಿಮ್ಮ ಪ್ರಯಾಣವನ್ನೂ ಈಗ ಜ್ಞಾಪಕಮಾಡಿಕೊಳ್ಳಿರಿ. ಆಗ ಯೆಹೋವ ದೇವರ ನೀತಿಯ ಕೃತ್ಯಗಳನ್ನು ತಿಳಿದುಕೊಳ್ಳುವಿರಿ.
ಮಿಕ 6 : 6 (OCVKN)
ನಾನು ಯಾವುದರೊಂದಿಗೆ ಯೆಹೋವ ದೇವರ ಮುಂದೆ ಬಂದು, ಯಾವುದರೊಂದಿಗೆ ಉನ್ನತವಾದ ದೇವರ ಮುಂದೆ ಅಡ್ಡಬೀಳಲಿ? ದಹನಬಲಿಗಳ ಮತ್ತು ಒಂದು ವರ್ಷದ ಕರುಗಳ ಸಂಗಡ ಆತನ ಮುಂದೆ ಹೋಗಲೇ?
ಮಿಕ 6 : 7 (OCVKN)
ಯೆಹೋವ ದೇವರು ಸಾವಿರ ಟಗರುಗಳಿಗಾದರೂ ಎಣ್ಣೆಯ ಹತ್ತು ಸಾವಿರ ನದಿಗಳಿಗಾದರೂ ಮೆಚ್ಚುವರೋ? ನನ್ನ ದ್ರೋಹಕ್ಕಾಗಿ ನನ್ನ ಚೊಚ್ಚಲ ಮಗನನ್ನೂ ನನ್ನ ಆತ್ಮದ ಪಾಪಕ್ಕಾಗಿ ನನ್ನ ಗರ್ಭದ ಫಲವನ್ನೂ ಕೊಡಲೋ?
ಮಿಕ 6 : 8 (OCVKN)
ಮನುಷ್ಯನೇ, ಒಳ್ಳೆಯದೇನೆಂದು ನಿನಗೆ ದೇವರು ತೋರಿಸಿದ್ದಾರೆ. ಹೌದು, ನ್ಯಾಯವನ್ನು ಕೈಗೊಳ್ಳುವದೂ ಕರುಣೆಯನ್ನು ಪ್ರೀತಿಸುವುದೂ ನಿನ್ನ ದೇವರ ಮುಂದೆ ನಮ್ರನಾಗಿ ನಡೆದುಕೊಳ್ಳುವದೂ ಇದನ್ನೇ ಹೊರತು ಯೆಹೋವ ದೇವರು ನಿನ್ನಿಂದ ಇನ್ನೇನನ್ನು ಅಪೇಕ್ಷಿಸುತ್ತಾರೆ?
ಮಿಕ 6 : 9 (OCVKN)
ಇಸ್ರಾಯೇಲರ ವಂಚನೆ ಮತ್ತು ಶಿಕ್ಷೆ ಕೇಳು! ಯೆಹೋವ ದೇವರು ಪಟ್ಟಣವನ್ನು ಕರೆಯುತ್ತಿದ್ದಾರೆ. ನಿಮ್ಮ ನಾಮಕ್ಕೆ ಭಯಪಡುವುದು ಜ್ಞಾನ. ಕೋಲು ಮತ್ತು ಅದನ್ನು ನೇಮಿಸಿದ ವ್ಯಕ್ತಿಯನ್ನು ಎಚ್ಚರಿಕೆಯಿಂದ ಆಲಿಸಿರಿ.
ಮಿಕ 6 : 10 (OCVKN)
ದುಷ್ಟಮನೆತನವೇ ನೀನು ಕೆಟ್ಟದ್ದಾಗಿ ಸಂಪಾದಿಸಿದ್ದನ್ನು ಶಾಪಗ್ರಸ್ತರಾದ ಕಡಿಮೆ ಅಳತೆಯನ್ನು ನಾನು ಮರೆಯಬೇಕೋ?
ಮಿಕ 6 : 11 (OCVKN)
ನಾನು ದುಷ್ಟತ್ವದ ತಕ್ಕಡಿಗಳುಳ್ಳವರನ್ನು ಮೋಸವಾದ ಕಲ್ಲುಗಳ ಚೀಲವುಳ್ಳವರನ್ನು ನಿರ್ಮಲರೆಂದೆಣಿಸುವೆನೋ?
ಮಿಕ 6 : 12 (OCVKN)
ಅದರ ಐಶ್ವರ್ಯವಂತರು ಬಲಾತ್ಕಾರದಿಂದ ತುಂಬಿದ್ದಾರೆ. ಅದರ ನಿವಾಸಿಗಳು ಸುಳ್ಳುಗಳನ್ನು ಹೇಳುವವರಾಗಿದ್ದಾರೆ. ಅವರ ನಾಲಿಗೆ ಅವರ ಬಾಯಿಯಲ್ಲಿ ಕಪಟವುಳ್ಳದ್ದೇ.
ಮಿಕ 6 : 13 (OCVKN)
ಆದ್ದರಿಂದ ನಾನು ಸಹ ನಿನ್ನನ್ನು ಹೊಡೆದು ನಿನ್ನ ಪಾಪಗಳ ನಿಮಿತ್ತ ನಿನ್ನನ್ನು ಹಾಳುಮಾಡುವೆನು.
ಮಿಕ 6 : 14 (OCVKN)
ನೀನು ಉಂಡರೂ ತೃಪ್ತಿಯಾಗದೆ ಇರುವೆ; ನಿನ್ನೊಳಗೆ ಹಸಿವೆಯು ಇರುವುದು; ನೀವು ಸಂಗ್ರಹಿಸುತ್ತೀರಿ ಆದರೆ ಏನನ್ನೂ ಉಳಿಸುವುದಿಲ್ಲ, ಏಕೆಂದರೆ ನೀವು ಉಳಿಸುವದನ್ನು ನಾನು ಕತ್ತಿಗೆ ಕೊಡುತ್ತೇನೆ.
ಮಿಕ 6 : 15 (OCVKN)
ನೀನು ಬೀಜ ಬಿತ್ತಿ ಕೊಯ್ಯದೆ ಇರುವೆ; ಹಿಪ್ಪೆಗಳನ್ನು ತುಳಿದು ಎಣ್ಣೆ ಹಚ್ಚಿಕೊಳ್ಳದೆ ಇರುವೆ; ದ್ರಾಕ್ಷಾರಸಮಾಡಿ ಕುಡಿಯದೆ ಇರುವೆ.
ಮಿಕ 6 : 16 (OCVKN)
ಏಕೆಂದರೆ ಒಮ್ರಿಯ ನಿಯಮಗಳನ್ನೂ ಕೈಕೊಳ್ಳುತ್ತೀರಿ. ಅಹಾಬ್ ಮನೆತನದ ದುರಾಚಾರಗಳನ್ನೂ ಅವರ ಸಂಪ್ರದಾಯಗಳನ್ನೂ ಅನುಸರಿಸುತ್ತಾ ಬಂದಿದ್ದೀರಿ. ಆದ್ದರಿಂದ ನೀವು ನಾಶವಾಗುವಂತೆ ಮಾಡುವೆನು. ನಿಮ್ಮ ಜನರನ್ನು ಅಪಹಾಸ್ಯಕ್ಕೆ ಗುರಿಮಾಡುವೆನು. ಆದ್ದರಿಂದ ನೀವು ನನ್ನ ಜನರ ನಿಂದೆಯನ್ನು ಹೊರುವಿರಿ.
❮
❯
1
2
3
4
5
6
7
8
9
10
11
12
13
14
15
16