ಮಿಕ 4 : 1 (OCVKN)
ಯೆಹೋವ ದೇವರ ಬೆಟ್ಟ ಅಂತ್ಯಕಾಲದಲ್ಲಿ, ಯೆಹೋವ ದೇವರ ಮಂದಿರದ ಪರ್ವತವು ಎಲ್ಲಾ ಗುಡ್ಡಬೆಟ್ಟಗಳಿಗಿಂತ ಉನ್ನತೋನ್ನತವಾಗಿ ಬೆಳೆದು ನೆಲೆಗೊಳ್ಳುವುದು, ಆಗ ಜನಾಂಗಗಳು ಅದರ ಬಳಿಗೆ ಪ್ರವಾಹದಂತೆ ಬರುವವು.
ಮಿಕ 4 : 2 (OCVKN)
ಅನೇಕ ಜನಾಂಗಗಳು ಬಂದು ಹೀಗೆಂದು ಹೇಳುವರು, “ಬನ್ನಿರಿ, ಯೆಹೋವ ದೇವರ ಪರ್ವತಕ್ಕೂ ಯಾಕೋಬನ ದೇವರ ಆಲಯಕ್ಕೂ ಏರಿಹೋಗೋಣ. ಅವರು ತಮ್ಮ ಮಾರ್ಗಗಳನ್ನು ನಮಗೆ ಬೋಧಿಸುವರು. ನಾವು ಅವರ ದಾರಿಗಳಲ್ಲಿ ನಡೆಯುವೆವು. ಚೀಯೋನಿನಿಂದ ದೇವರ ನಿಯಮವೂ ಯೆರೂಸಲೇಮಿನಿಂದ ದೇವರ ವಾಕ್ಯವೂ ಹೊರಡುವುವು.”
ಮಿಕ 4 : 3 (OCVKN)
ಆಗ ಆತನು ಅನೇಕ ಜನಗಳ ಮಧ್ಯದಲ್ಲಿ ನ್ಯಾಯತೀರಿಸಿ ದೂರದಲ್ಲಿರುವ ಬಲವಾದ ಜನಾಂಗಗಳಿಗೆ ತೀರ್ಪುಕೊಡುವನು. ಅವರು ತಮ್ಮ ಖಡ್ಗಗಳನ್ನು ನೇಗಿಲಿನ ಗುಳಗಳನ್ನಾಗಿಯೂ ಬರ್ಜಿಗಳನ್ನು ಕುಡುಗೋಲುಗಳನ್ನಾಗಿಯೂ ಮಾಡುವರು. ಜನಾಂಗಕ್ಕೆ ವಿರೋಧವಾಗಿ ಜನಾಂಗವು ಖಡ್ಗವನ್ನು ಪ್ರಯೋಗಿಸುವುದಿಲ್ಲ. ಇನ್ನು ಮೇಲೆ ಯುದ್ಧಾಭ್ಯಾಸದ ಅಗತ್ಯ ಇರುವುದೇ ಇಲ್ಲ.
ಮಿಕ 4 : 4 (OCVKN)
ಆದರೆ ಒಬ್ಬಬ್ಬನು ತನ್ನ ತನ್ನ ದ್ರಾಕ್ಷಿಬಳ್ಳಿಯ ಕೆಳಗೂ ತನ್ನ ತನ್ನ ಅಂಜೂರದ ಗಿಡದ ಕೆಳಗೂ ಕುಳಿತುಕೊಳ್ಳುವನು. ಭಯಪಡಿಸುವವನು ಯಾರೂ ಇರುವುದಿಲ್ಲ. ಏಕೆಂದರೆ ಸೇನಾಧೀಶ್ವರ ಯೆಹೋವ ದೇವರು ಇದನ್ನು ನುಡಿದಿದ್ದಾರೆ.
ಮಿಕ 4 : 5 (OCVKN)
ಎಲ್ಲಾ ಜನಾಂಗಗಳಲ್ಲಿ ಪ್ರತಿಯೊಬ್ಬನು ತನ್ನ ತನ್ನ ದೇವರ ಹೆಸರಿನಲ್ಲಿ ನಡೆಯುವನು. ಆದರೆ ನಾವು ನಮ್ಮ ದೇವರಾದ ಯೆಹೋವ ದೇವರ ಹೆಸರಿನಲ್ಲಿ ಎಂದೆಂದಿಗೂ ನಡೆಯುವೆವು.
ಮಿಕ 4 : 6 (OCVKN)
ದೇವರ ಯೋಜನೆ ಯೆಹೋವ ದೇವರು ಹೀಗೆ ಘೋಷಿಸುತ್ತಾರೆ, “ಆ ದಿವಸದಲ್ಲಿ” ನಾನು ಕುಂಟಾದವರನ್ನು ಒಟ್ಟುಗೂಡಿಸುವೆನು. ನಾನು ತಳ್ಳಿಬಿಟ್ಟದ್ದನ್ನೂ ಕಷ್ಟಪಡಿಸಿದವರನ್ನೂ ಒಂದಾಗಿ ಸೇರಿಸುವೆನು.
ಮಿಕ 4 : 7 (OCVKN)
“ಕುಂಟಾದದ್ದನ್ನು ಉಳಿದದ್ದನ್ನಾಗಿಯೂ ತಳ್ಳಿಬಿಟ್ಟಿದ್ದನ್ನು ಬಲವಾದ ಜನಾಂಗವಾಗಿಯೂ ಮಾಡುವೆನು. ಯೆಹೋವ ದೇವರು ಇಂದಿನಿಂದ ಸದಾಕಾಲವೂ ಚೀಯೋನ್ ಪರ್ವತದಲ್ಲಿ ಅವರ ಮೇಲೆ ಆಳುವರು.
ಮಿಕ 4 : 8 (OCVKN)
ಕುರಿಮಂದೆಯ ಬುರುಜೇ, ಚೀಯೋನ್ ಪುತ್ರಿಯ ದುರ್ಗವೇ, ಮೊದಲಿದ್ದ ರಾಜ್ಯಾಧಿಕಾರವೂ ನಿಮಗೆ ಲಭಿಸುವುದು. ಯೆರೂಸಲೇಮಿನ ಪುತ್ರಿಗೆ ರಾಜ್ಯತ್ವವೂ ಬರುವುದು.”
ಮಿಕ 4 : 9 (OCVKN)
ಈಗ ಏಕೆ ಗಟ್ಟಿಯಾಗಿ ಕೂಗುತ್ತೀ? ನಿನ್ನಲ್ಲಿ ಅರಸನಿಲ್ಲವೋ? ನಿನ್ನ ಅಧಿಕಾರಿಯು ನಾಶವಾದನೋ? ಹೆರುವವಳಂತೆ ನಿನಗೆ ವೇದನೆ ಬಂದಿರುವುದೋ?
ಮಿಕ 4 : 10 (OCVKN)
ಚೀಯೋನ್ ಪುತ್ರಿಯೇ ಹೆರುವವಳಂತೆ ವೇದನೆ ತಾಳಿಕೋ, ಏಕೆಂದರೆ ಈಗ ಪಟ್ಟಣದೊಳಗಿಂದ ಹೊರಟು ಹೊಲದಲ್ಲಿ ವಾಸಮಾಡಿ ಬಾಬಿಲೋನಿಗೆ ಹೋಗುವೆ, ಅಲ್ಲಿ ನಿನಗೆ ಬಿಡುಗಡೆಯಾಗುವುದು. ಅಲ್ಲಿ ಯೆಹೋವ ದೇವರು ನಿನ್ನನ್ನು ನಿನ್ನ ಶತ್ರುಗಳ ಕೈಯೊಳಗಿಂದ ವಿಮೋಚಿಸುವರು.
ಮಿಕ 4 : 11 (OCVKN)
ಆದರೆ ಈಗ ಅನೇಕ ಜನಾಂಗಗಳು ನಿನಗೆ ವಿರೋಧವಾಗಿ ಕೂಡಿಬಂದಿವೆ. ಅವರು, “ಯೆರೂಸಲೇಮನ್ನು ಕೆಡಿಸೋಣ. ಚೀಯೋನಿನ ನಾಶನವನ್ನು ಕಣ್ಣಾರೆ ನೋಡೋಣ,” ಎಂದು ಹೇಳುತ್ತಾರೆ.
ಮಿಕ 4 : 12 (OCVKN)
ಆದರೆ ಯೆಹೋವ ದೇವರ ಯೋಚನೆಗಳು ಅವರಿಗೆ ತಿಳಿದಿಲ್ಲ. ಆತನ ಆಲೋಚನೆಯನ್ನು ಅವರು ಗ್ರಹಿಸಲಿಲ್ಲ. ಏಕೆಂದರೆ ಕಣದಲ್ಲಿ ಸಿವುಡುಗಳ ಹಾಗೆ ಅವರನ್ನು ಕೂಡಿಸುವರು.
ಮಿಕ 4 : 13 (OCVKN)
ಚೀಯೋನ್ ಪುತ್ರಿಯೇ, ಎದ್ದು ತುಳಿ. ಏಕೆಂದರೆ ನಿನ್ನ ಕೊಂಬನ್ನು ಕಬ್ಬಿಣವಾಗಿಯೂ ನಿನ್ನ ಗೊರಸುಗಳನ್ನು ಕಂಚಿನದಾಗಿಯೂ ಮಾಡುವೆನು. ನೀನು ಅನೇಕ ಜನಾಂಗಗಳನ್ನು ಚೂರುಚೂರಾಗಿ ಮಾಡುವೆ. ಅವರ ಕೊಳ್ಳೆಹೊಡೆದು ಸಂಪಾದಿಸಿದ್ದ ಸ್ವತ್ತನ್ನು ಯೆಹೋವ ದೇವರಿಗೂ ಅವರ ಸಂಪತ್ತನ್ನು ಲೋಕದ ಕರ್ತ ದೇವರಿಗೂ ಪ್ರತಿಷ್ಠೆಮಾಡುವೆನು.

1 2 3 4 5 6 7 8 9 10 11 12 13