ಪ್ರಲಾಪಗಳು 4 : 1 (OCVKN)
ಬಂಗಾರವು ಹೇಗೆ ಮಸುಕಾಯಿತು! ಬಹಳ ಶುದ್ಧವಾದ ಬಂಗಾರವು ಹೇಗೆ ಬದಲಾಯಿತು! ಪರಿಶುದ್ಧಸ್ಥಳದ ಕಲ್ಲುಗಳೂ ಬೀದಿಯ ಬದಿಯಲ್ಲಿ ಚೆಲ್ಲಾಪಿಲ್ಲಿಯಾಗಿವೆ.
ಪ್ರಲಾಪಗಳು 4 : 2 (OCVKN)
ಅಪರಂಜಿಗೆ ಸಮಾನರಾದ ಚೀಯೋನಿನ ಅಮೂಲ್ಯ ಪುತ್ರರು, ಈಗ ಕುಂಬಾರನ ಕೈಕೆಲಸದ ಮಣ್ಣಿನ ಮಡಕೆಯಂತೆ ತಿರಸ್ಕೃತರಾಗಿದ್ದಾರಲ್ಲಾ!
ಪ್ರಲಾಪಗಳು 4 : 3 (OCVKN)
ನರಿಗಳೂ ತಮ್ಮ ಕೆಚ್ಚಲನ್ನು ಹೊರ ಎಳೆದು ತಮ್ಮ ಮರಿಗಳಿಗೆ ಹಾಲು ಕುಡಿಸುತ್ತವೆ. ಆದರೆ ನನ್ನ ಜನರು ಅರಣ್ಯದಲ್ಲಿರುವ ಉಷ್ಟ್ರಪಕ್ಷಿಗಳ ಹಾಗೆ ಕ್ರೂರವಾಗಿದ್ದಾರೆ.
ಪ್ರಲಾಪಗಳು 4 : 4 (OCVKN)
ಹಸುಳೆಗಳ ನಾಲಿಗೆಯು ದಾಹದಿಂದ ಅಂಗಳಕ್ಕೆ ಹತ್ತುತ್ತದೆ. ಎಳೆಯ ಕೂಸುಗಳು ಅನ್ನ ಕೇಳುತ್ತವೆ. ಆದರೆ ಅವರಿಗೆ ಯಾರೂ ಅದನ್ನು ಕೊಡುವುದಿಲ್ಲ.
ಪ್ರಲಾಪಗಳು 4 : 5 (OCVKN)
ರುಚಿಯಾದವುಗಳನ್ನು ಒಮ್ಮೆ ತಿಂದವರು ಬೀದಿಗಳಲ್ಲಿ ಹಾಳಾಗಿದ್ದಾರೆ. ಚಿಕ್ಕಂದಿನಿಂದಲೂ ಶ್ರೇಷ್ಠ ವಸ್ತ್ರವನ್ನು ತೊಡುತ್ತಿದ್ದವರು, ತಿಪ್ಪೆಗಳಲ್ಲಿ ಬಿದ್ದುಕೊಂಡಿದ್ದಾರೆ.
ಪ್ರಲಾಪಗಳು 4 : 6 (OCVKN)
ನನ್ನ ಜನರ ಅಕ್ರಮದ ದಂಡನೆಯು ಸೊದೋಮಿನ ಪಾಪದ ದಂಡನೆಗಿಂತ ದೊಡ್ಡದು. ಅದು ಕ್ಷಣಮಾತ್ರದಲ್ಲಿ ಕೆಡವಿ ಹಾಕಲಾಯಿತು ಮತ್ತು ಅವಳಿಗೆ ಸಹಾಯಮಾಡಲು ಯಾವ ಕೈಗಳೂ ಇರಲಿಲ್ಲ.
ಪ್ರಲಾಪಗಳು 4 : 7 (OCVKN)
ಅವಳ ರಾಜಕುಮಾರರು ಹಿಮಕ್ಕಿಂತಲೂ ಪ್ರಕಾಶಮಾನವಾಗಿದ್ದರು. ಹಾಲಿಗಿಂತಲೂ ಬೆಳ್ಳಗಿದ್ದರು. ಅವರು ಮೈಕಟ್ಟಿನಲ್ಲಿ ಹವಳಕ್ಕಿಂತಲೂ ಕೆಂಪಾಗಿದ್ದರು. ಅವರ ಹೊಳಪು ಇಂದ್ರನೀಲ ಮಣಿಯ ಹಾಗಿತ್ತು.
ಪ್ರಲಾಪಗಳು 4 : 8 (OCVKN)
ಆದರೆ ಈಗ ಅವರ ರೂಪವು ಕಲ್ಲಿದ್ದಲಿನಂತೆ ಕಪ್ಪಾಗಿದೆ. ಬೀದಿಗಳಲ್ಲಿ ಅವರು ಯಾರೆಂಬುದು ತಿಳಿಯಲಿಲ್ಲ. ಅವರ ಚರ್ಮವು ಅವರ ಎಲುಬುಗಳಿಗೆ ಹತ್ತಿಕೊಂಡಿದೆ. ಅದು ಒಣಗಿ ಕಡ್ಡಿಯ ಹಾಗೆ ಆಗಿದೆ.
ಪ್ರಲಾಪಗಳು 4 : 9 (OCVKN)
ಖಡ್ಗದಿಂದ ಹತರಾದವರು ಹಸಿವೆಯಿಂದ ಹತರಾದವರಿಗಿಂತಲೂ ಲೇಸು. ಏಕೆಂದರೆ, ಇವರು ಭೂಮಿಯ ಫಲಗಳಿಲ್ಲದೆ ಕ್ಷಾಮದ ಪೆಟ್ಟನ್ನು ತಿಂದು, ಕ್ಷಯಿಸಿ ಹೋದರು.
ಪ್ರಲಾಪಗಳು 4 : 10 (OCVKN)
ಕನಿಕರ ತುಂಬಿದ ಸ್ತ್ರೀಯರ ಕೈಗಳು ತಮ್ಮ ಸ್ವಂತ ಮಕ್ಕಳನ್ನೇ ಬೇಯಿಸಿದವು. ಇವರು ನನ್ನ ಜನರ ನಾಶದಲ್ಲಿ ಅವರಿಗೆ ಆಹಾರವಾದರು.
ಪ್ರಲಾಪಗಳು 4 : 11 (OCVKN)
ಯೆಹೋವ ದೇವರು ತಮ್ಮ ರೋಷವನ್ನು ತೀರಿಸಿದ್ದಾರೆ. ಅವರು ತಮ್ಮ ಉಗ್ರವಾದ ಕೋಪವನ್ನು ಸುರಿದಿದ್ದಾರೆ. ಚೀಯೋನಿನಲ್ಲಿ ಹೊತ್ತಿಸಿದ ಬೆಂಕಿಯು ಅದರ ಅಸ್ತಿವಾರಗಳನ್ನು ತಿಂದುಬಿಟ್ಟಿತು.
ಪ್ರಲಾಪಗಳು 4 : 12 (OCVKN)
ಭೂರಾಜರೂ, ವಿರೋಧಿಯೂ, ಶತ್ರುವೂ ಯೆರೂಸಲೇಮಿನ ಬಾಗಿಲುಗಳಲ್ಲಿ ಪ್ರವೇಶಿಸಿದ್ದನ್ನು ಪ್ರಪಂಚದ ಎಲ್ಲಾ ನಿವಾಸಿಗಳೂ ನಂಬುತ್ತಿರಲಿಲ್ಲ.
ಪ್ರಲಾಪಗಳು 4 : 13 (OCVKN)
ಅವಳ ಪ್ರವಾದಿಗಳ ಪಾಪಗಳಿಗೋಸ್ಕರವೂ, ಅವಳ ಯಾಜಕರ ಅಕ್ರಮಗಳಿಗೋಸ್ಕರವೂ ಹೀಗಾಯಿತು. ಏಕೆಂದರೆ ಇವರು ನೀತಿವಂತರ ರಕ್ತವನ್ನು ಅವರ ಮಧ್ಯದಲ್ಲಿ ಚೆಲ್ಲಿದ್ದರು.
ಪ್ರಲಾಪಗಳು 4 : 14 (OCVKN)
ಅವರು ಬೀದಿಗಳಲ್ಲಿ ಕುರುಡರಂತೆ ಅಲೆದಾಡಿದರು. ಅವರು ರಕ್ತದಿಂದ ತಮ್ಮನ್ನು ತಾವೇ ಕಲುಷಿತಗೊಳಿಸಿಕೊಂಡರು. ಆದ್ದರಿಂದ ಮನುಷ್ಯರು ಅವರ ವಸ್ತ್ರಗಳನ್ನು ಮುಟ್ಟಲಾರದೇ ಹೋದರು.
ಪ್ರಲಾಪಗಳು 4 : 15 (OCVKN)
ಅವರು ಜನರಿಗೆ, ನೀವು ದೂರ ಹೋಗಿರಿ, ನೀವು ಅಶುದ್ಧವಾಗಿದ್ದೀರಿ; ದೂರ ಹೋಗಿರಿ, ದೂರ ಹೋಗಿರಿ, ಮುಟ್ಟಬೇಡಿರಿ, ಎಂದು ಕೂಗಿಕೊಂಡರು. ಅವರು ಓಡಿಹೋಗಿ ಅಲೆದಾಡುತ್ತಿರುವಾಗ, ಅವರು ಇನ್ನು ಮೇಲೆ ಅಲ್ಲಿ ವಾಸಮಾಡುವುದಿಲ್ಲ, ಎಂದು ಬೇರೆ ಜನಾಂಗಗಳೊಳಗೆ ಹೇಳಿದರು.
ಪ್ರಲಾಪಗಳು 4 : 16 (OCVKN)
ಯೆಹೋವ ದೇವರ ಕೋಪವು ಅವರನ್ನು ಚದುರಿಸಿತು. ಅವರು ಇನ್ನು ಅವರನ್ನು ಲಕ್ಷಿಸುವುದಿಲ್ಲ. ಅವರು ಯಾಜಕರನ್ನು ಗೌರವಿಸಲಿಲ್ಲ. ಅವರು ಹಿರಿಯರಿಗೆ ದಯೆ ತೋರಿಸಲಿಲ್ಲ.
ಪ್ರಲಾಪಗಳು 4 : 17 (OCVKN)
ನಮಗಾದರೋ ನಮ್ಮ ಕಣ್ಣುಗಳು ನಮ್ಮ ವ್ಯರ್ಥವಾದ ಸಹಾಯಕ್ಕಾಗಿ ನೋಡಿ ಸೋತು ಹೋದವು. ನಮ್ಮ ಕಣ್ಣುಗಳು ನಮ್ಮನ್ನು ರಕ್ಷಿಸಲಾರದಂಥ ಜನಾಂಗಕ್ಕಾಗಿ ಕಾವಲಾಗಿದ್ದವು.
ಪ್ರಲಾಪಗಳು 4 : 18 (OCVKN)
ನಾವು ನಮ್ಮ ಬೀದಿಗಳಲ್ಲಿ ಹೋಗದ ಹಾಗೆ, ಶತ್ರುಗಳು ನಮ್ಮ ಹೆಜ್ಜೆಗಳನ್ನೇ ಬೇಟೆಯಾಡುತ್ತಾರೆ. ನಮ್ಮ ಅಂತ್ಯವು ಸಮೀಪಿಸಿತು, ನಮ್ಮ ದಿನಗಳು ತೀರಿದವು. ಏಕೆಂದರೆ ನಮ್ಮ ಅಂತ್ಯವು ಬಂದಿತು.
ಪ್ರಲಾಪಗಳು 4 : 19 (OCVKN)
ನಮ್ಮನ್ನು ಹಿಂಸಿಸುವವರು ಆಕಾಶದಲ್ಲಿ ಹಾರುವ ಹದ್ದುಗಳಿಗಿಂತ ತೀವ್ರವಾಗಿದ್ದಾರೆ. ಅವರು ಪರ್ವತಗಳ ಮೇಲೆ ನಮ್ಮನ್ನು ಹಿಂದಟ್ಟಿ, ಅರಣ್ಯದಲ್ಲಿ ಹೊಂಚು ಹಾಕಿದರು.
ಪ್ರಲಾಪಗಳು 4 : 20 (OCVKN)
ಯಾರ ವಿಷಯವಾಗಿ ನಾವು ಅವನ ನೆರಳಿನ ಕೆಳಗೆ ಬೇರೆ ಜನಾಂಗಗಳೊಳಗೆ ಬದುಕುವೆವು ಎಂದು ಹೇಳಿಕೊಂಡೆವೋ, ನಮ್ಮ ಮೂಗಿನ ಉಸಿರಾದ ಆ ಯೆಹೋವ ದೇವರ ಅಭಿಷಿಕ್ತನು ಅವರ ಬಲೆಗಳಲ್ಲಿ ಸಿಕ್ಕಿಕೊಂಡನು.
ಪ್ರಲಾಪಗಳು 4 : 21 (OCVKN)
ಎದೋಮಿನ ಪುತ್ರಿಯೇ, ಊಚ್ ದೇಶದಲ್ಲಿ ವಾಸವಾಗಿರುವವಳೇ, ಆನಂದಿಸು ಮತ್ತು ಸಂತೋಷಪಡು; ಆದರೆ ನಿನ್ನ ಬಳಿಗೆ ಪಾತ್ರೆಯು ಸಹ ದಾಟಿ ಬರುವುದು. ನೀನು ಕುಡಿದು, ಬೆತ್ತಲೆಯಾಗಿರುವೆ.
ಪ್ರಲಾಪಗಳು 4 : 22 (OCVKN)
ಚೀಯೋನ್ ಪುತ್ರಿಯೇ, ನಿನ್ನ ಅಕ್ರಮದ ಶಿಕ್ಷೆಯು ತೀರಿ ಹೋಯಿತು. ಅವರು ಇನ್ನು ಮೇಲೆ ನಿನ್ನ ಗಡಿಪಾರನ್ನು ಹೆಚ್ಚಿಸುವುದಿಲ್ಲ. ಎದೋಮಿನ ಪುತ್ರಿಯೇ, ಅವರು ನಿನ್ನ ಅಕ್ರಮವನ್ನು ವಿಚಾರಿಸುವನು. ಆತನು ನಿನ್ನ ಪಾಪಗಳನ್ನು ಬಹಿರಂಗಪಡಿಸುವರು.

1 2 3 4 5 6 7 8 9 10 11 12 13 14 15 16 17 18 19 20 21 22