ಯೆಹೋಶುವ 20 : 1 (OCVKN)
ಆಶ್ರಯ ಪಟ್ಟಣಗಳು ಯೆಹೋವ ದೇವರು ಯೆಹೋಶುವನಿಗೆ,
ಯೆಹೋಶುವ 20 : 2 (OCVKN)
“ನಾನು ಮೋಶೆಯ ಮುಖಾಂತರ ನಿನಗೆ ಹೇಳಿದ ಆಶ್ರಯದ ಪಟ್ಟಣಗಳನ್ನು ಗೊತ್ತುಮಾಡಿಕೊಳ್ಳುವಂತೆ ನೀನು ಇಸ್ರಾಯೇಲರಿಗೆ ಹೇಳು.
ಯೆಹೋಶುವ 20 : 3 (OCVKN)
ಯಾವನಾದರು ಅರಿಯದೆ ಅಕಸ್ಮಾತ್ತಾಗಿ ಕೈತಪ್ಪಿ ಕೊಂದುಹಾಕಿದರೆ, ಅಂಥವನು ಅಲ್ಲಿಗೆ ಓಡಿಹೋಗಲಿ. ಅವನಿಗೆ ರಕ್ತದ ಸೇಡು ತೀರಿಸುವವನಿಂದ ತಪ್ಪಿಸಿಕೊಳ್ಳುವ ಆಶ್ರಯವಾಗಿರಲಿ.
ಯೆಹೋಶುವ 20 : 4 (OCVKN)
ಆ ಪಟ್ಟಣಗಳಲ್ಲಿ ಒಂದಕ್ಕೆ ಓಡಿ ಬಂದವನು, ಪಟ್ಟಣದ ಬಾಗಿಲ ದ್ವಾರದಲ್ಲಿ ನಿಂತುಕೊಂಡು, ಆ ಪಟ್ಟಣದ ಹಿರಿಯರ ಮುಂದೆ ತನ್ನ ವ್ಯಾಜ್ಯವನ್ನು ತಿಳಿಸಬೇಕು. ಅವರು ಅವನನ್ನು ಪಟ್ಟಣದೊಳಗೆ ಸೇರಿಸಿಕೊಳ್ಳಲಿ. ಅವರು ತಮ್ಮ ಬಳಿಯಲ್ಲಿ ವಾಸವಾಗಿರಲು ಅವನಿಗೆ ಸ್ಥಳವನ್ನು ಕೊಡಲಿ.
ಯೆಹೋಶುವ 20 : 5 (OCVKN)
ರಕ್ತದ ಸೇಡು ತೀರಿಸಿಕೊಳ್ಳುವವನು ಅವನನ್ನು ಹಿಂದಟ್ಟಿ ಬಂದರೆ, ಕೊಲೆ ಮಾಡಿದವನನ್ನು ಅವನ ಕೈಗೆ ಒಪ್ಪಿಸಿಕೊಡಬಾರದು. ಏಕೆಂದರೆ ಅವನು ತನ್ನ ನೆರೆಯವನನ್ನು ಅಕಸ್ಮಾತ್ತಾಗಿ ಕೊಂದನು ಮತ್ತು ಪೂರ್ವದಲ್ಲಿ ಅವನ ಬಗ್ಗೆ ದ್ವೇಷ ಇರಲಿಲ್ಲ.
ಯೆಹೋಶುವ 20 : 6 (OCVKN)
ಇದಲ್ಲದೆ ಅವನು ನ್ಯಾಯ ವಿಚಾರಣೆಗೋಸ್ಕರ ಸಭೆಯ ಮುಂದೆ ಬಂದು ನಿಲ್ಲುವವರೆಗೂ ಆ ದಿವಸಗಳಲ್ಲಿ ಇರುವ ಮಹಾಯಾಜಕನು ಮರಣ ಹೊಂದುವವರೆಗೂ ಆ ಪಟ್ಟಣದಲ್ಲೇ ವಾಸವಾಗಿರಬೇಕು. ತರುವಾಯ ಕೊಂದವನು ತಾನು ಬಿಟ್ಟು ಓಡಿ ಹೋದ ತನ್ನ ಪಟ್ಟಣಕ್ಕೂ, ತನ್ನ ಮನೆಗೂ ತಿರುಗಿಬರಬಹುದು,” ಎಂದು ಹೇಳಿದರು.
ಯೆಹೋಶುವ 20 : 7 (OCVKN)
ಅದರಂತೆ ನಫ್ತಾಲಿಯ ಬೆಟ್ಟದ ಗಲಿಲಾಯದಲ್ಲಿ ಇರುವ ಕೆದೆಷನ್ನೂ, ಎಫ್ರಾಯೀಮನ ಬೆಟ್ಟಗಳಲ್ಲಿರುವ ಶೆಕೆಮನ್ನೂ, ಯೆಹೂದದ ಬೆಟ್ಟಗಳಲ್ಲಿರುವ ಹೆಬ್ರೋನ್ ಎಂಬ ಕಿರ್ಯತ್ ಅರ್ಬವನ್ನೂ ನೇಮಿಸಿದರು.
ಯೆಹೋಶುವ 20 : 8 (OCVKN)
ಯೆರಿಕೋವಿನ ಪೂರ್ವದಲ್ಲಿರುವ ಯೊರ್ದನ್ ನದಿ ಆಚೆ ರೂಬೇನನ ಗೋತ್ರಕ್ಕಿರುವ ಸಮ ಭೂಮಿಯ ಅರಣ್ಯದಲ್ಲಿರುವ ಬೆಚೆರನ್ನು ಗಾದನ ಗೋತ್ರಕ್ಕೆ ಗಿಲ್ಯಾದಿನ ರಾಮೋತನ್ನೂ, ಮನಸ್ಸೆಯ ಗೋತ್ರಕ್ಕೆ ಬಾಷಾನಿನಲ್ಲಿರುವ ಗೋಲಾನನ್ನೂ ಕೊಟ್ಟರು.
ಯೆಹೋಶುವ 20 : 9 (OCVKN)
ಕೈತಪ್ಪಿ ಅರಿಯದೆ ಅಕಸ್ಮಾತ್ತಾಗಿ ಕೊಂದವನು ಯಾವನಾದರೂ ನ್ಯಾಯಸಭೆಯ ಮುಂದೆ ಬಂದು ನಿಲ್ಲುವ ತನಕ, ಸೇಡು ತೀರಿಸಿಕೊಳ್ಳುವವನ ಕೈಯಿಂದ ಸಾಯದ ಹಾಗೆ ಅಲ್ಲಿ ಓಡಿಹೋಗುವುದಕ್ಕೆ ಇಸ್ರಾಯೇಲರೆಲ್ಲರಿಗೂ, ಅವರ ಮಧ್ಯದಲ್ಲಿ ವಾಸವಾಗಿರುವ ಪರಕೀಯರಿಗೂ ನೇಮಿಸಲಾದ ಪಟ್ಟಣಗಳು ಇವೇ.

1 2 3 4 5 6 7 8 9