ಯೋವೇಲ 2 : 1 (OCVKN)
ಮಿಡತೆಗಳ ಒಂದು ಸೈನ್ಯ ನೀವು ಚೀಯೋನಿನಲ್ಲಿ ಕೊಂಬು ಊದಿರಿ. ನನ್ನ ಪರಿಶುದ್ಧ ಪರ್ವತದಲ್ಲಿ ಆರ್ಭಟಿಸಿರಿ. ದೇಶದ ನಿವಾಸಿಗಳೆಲ್ಲರು ನಡುಗಲಿ. ಏಕೆಂದರೆ ಯೆಹೋವ ದೇವರ ದಿವಸವು ಬರುತ್ತದೆ. ಅದು ಸಮೀಪವಾಗಿದೆ.
ಯೋವೇಲ 2 : 2 (OCVKN)
ಅದು ಕತ್ತಲೆಯೂ ಮಬ್ಬೂ ಉಳ್ಳ ದಿವಸವೂ, ಮೇಘವೂ ಕಾರ್ಗತ್ತಲು ಉಳ್ಳ ದಿವಸವೂ ಆಗಿದೆ. ಬೆಟ್ಟಗಳ ಮೇಲೆ ಹರಡುವ ಉದಯದ ಹಾಗೆ ದೊಡ್ಡ ಬಲವಾದ ಸ್ಯೆನ್ಯವು ಬರುತ್ತದೆ. ಅದು ಪ್ರಾಚೀನ ಕಾಲದಲ್ಲಿ ಮತ್ತು ಮುಂದಿನ ಯುಗಗಳಲ್ಲಿ ಎಂದಿಗೂ ಇರುವುದಿಲ್ಲ.
ಯೋವೇಲ 2 : 3 (OCVKN)
ಅವುಗಳ ಮುಂದೆ ಬೆಂಕಿ ದಹಿಸುತ್ತದೆ. ಅವುಗಳ ಹಿಂದೆ ಜ್ವಾಲೆ ಧಗಧಗಿಸುತ್ತದೆ. ಅವುಗಳ ಮುಂದೆ ದೇಶವು ಏದೆನ್ ತೋಟದ ಹಾಗಿದೆ. ಅವುಗಳ ಹಿಂದೆ ಕಾಡು ಹಾಳಾಗಿದೆ. ಯಾವುದೂ ಅವುಗಳಿಂದ ತಪ್ಪಿಸಿಕೊಳ್ಳುವುದಿಲ್ಲ.
ಯೋವೇಲ 2 : 4 (OCVKN)
ಅವುಗಳ ಆಕಾರವು ಕುದುರೆಗಳ ಆಕಾರದ ಹಾಗಿದೆ. ಸವಾರರ ಹಾಗೆಯೇ ಓಡುತ್ತವೆ.
ಯೋವೇಲ 2 : 5 (OCVKN)
ರಥಗಳ ಶಬ್ದದಂತೆ ಅವು ಪರ್ವತಗಳ ತುದಿಗಳಲ್ಲಿ ಹಾರುತ್ತವೆ. ಸಿಡಿಯುವ ಬೆಂಕಿಯು ದಹಿಸುವ ಕೋಲಿನಂತೆ, ಯುದ್ಧಕ್ಕೆ ಸಿದ್ಧವಾದ ಬಲವುಳ್ಳ ಸೈನ್ಯದ ಹಾಗೆಯೂ ಇವೆ.
ಯೋವೇಲ 2 : 6 (OCVKN)
ಅವುಗಳ ಮುಂದೆ ಜನಾಂಗಗಳು ಬಹಳವಾಗಿ ನೊಂದುಕೊಳ್ಳುತ್ತವೆ. ಎಲ್ಲಾ ಮುಖಗಳು ಕಳೆಗುಂದುತ್ತವೆ.
ಯೋವೇಲ 2 : 7 (OCVKN)
ಶೂರರ ಹಾಗೆ ಓಡುತ್ತವೆ. ಯುದ್ಧಶಾಲಿಗಳ ಹಾಗೆ ಗೋಡೆ ಏರುತ್ತವೆ. ಅವೆಲ್ಲಾ ಸಾಲಾಗಿ ಮುನ್ನಡೆಯುತ್ತವೆ. ತಮ್ಮ ಹಾದಿಗಳನ್ನು ಬದಲು ಮಾಡುವುದಿಲ್ಲ.
ಯೋವೇಲ 2 : 8 (OCVKN)
ಒಂದು ಇನ್ನೊಂದನ್ನು ನೂಕುವುದಿಲ್ಲ. ಅವುಗಳಲ್ಲಿ ಪ್ರತಿಯೊಂದು ತನ್ನ ತನ್ನ ದಾರಿಯಲ್ಲಿ ಮುನ್ನಡೆಯುತ್ತವೆ. ತಮ್ಮ ಸ್ಥಾನಗಳನ್ನು ಬಿಟ್ಟುಕೊಡದೆ ಯುದ್ಧ ಮಾಡುತ್ತವೆ.
ಯೋವೇಲ 2 : 9 (OCVKN)
ಪಟ್ಟಣದಲ್ಲಿ ಅತ್ತಿತ್ತ ತಿರುಗಾಡುತ್ತವೆ. ಗೋಡೆಯ ಮೇಲೆ ಓಡುತ್ತವೆ. ಅವು ಮನೆಗಳನ್ನು ಹತ್ತಿ, ಕಳ್ಳನ ಹಾಗೆ ಕಿಟಿಕಿಗಳಿಂದ ಪ್ರವೇಶಿಸುತ್ತವೆ.
ಯೋವೇಲ 2 : 10 (OCVKN)
ಅವುಗಳ ಮುಂದೆ ಭೂಮಿಯು ನಡುಗುತ್ತದೆ. ಆಕಾಶಗಳು ಅದರುತ್ತವೆ. ಸೂರ್ಯ ಚಂದ್ರರು ಕಪ್ಪಾಗುತ್ತವೆ. ನಕ್ಷತ್ರಗಳು ಇನ್ನು ಮುಂದೆ ಹೊಳೆಯುವುದಿಲ್ಲ.
ಯೋವೇಲ 2 : 11 (OCVKN)
ಯೆಹೋವ ದೇವರು ತಮ್ಮ ಸೈನ್ಯಕ್ಕೆ ಗುಡುಗಿನಂತೆ ಆಜ್ಞಾಪಿಸುತ್ತಾರೆ. ಅವರ ಸೈನ್ಯ ಬಹು ದೊಡ್ಡದಾಗಿದೆ. ಅವರ ಆಜ್ಞೆಯನ್ನು ಪಾಲಿಸುವವನು ಪರಾಕ್ರಮಿಯು. ಯೆಹೋವ ದೇವರ ದಿವಸವು ದೊಡ್ಡದು, ಮಹಾ ಭಯಂಕರವಾದದ್ದು. ಅದನ್ನು ಸಹಿಸಿಕೊಳ್ಳುವವರು ಯಾರು?
ಯೋವೇಲ 2 : 12 (OCVKN)
ನಿಮ್ಮ ಹೃದಯಗಳನ್ನು ಹರಿದುಕೊಳ್ಳಿರಿ ಯೆಹೋವ ದೇವರು ಹೀಗೆ ಘೋಷಿಸುತ್ತಾರೆ, “ಈಗಲಾದರೂ ಉಪವಾಸದಿಂದಲೂ ಅಳುವಿಕೆಯಿಂದಲೂ ಗೋಳಾಟದಿಂದಲೂ ನಿಮ್ಮ ಪೂರ್ಣಹೃದಯದಿಂದ ನನ್ನ ಕಡೆಗೆ ತಿರುಗಿಕೊಳ್ಳಿರಿ.”
ಯೋವೇಲ 2 : 13 (OCVKN)
ನಿಮ್ಮ ಬಟ್ಟೆಗಳನ್ನಲ್ಲ, ನಿಮ್ಮ ಹೃದಯಗಳನ್ನು ಹರಿದುಕೊಂಡು, ನಿಮ್ಮ ದೇವರಾದ ಯೆಹೋವ ದೇವರ ಕಡೆಗೆ ತಿರುಗಿಕೊಳ್ಳಿರಿ. ಅವರು ದಯೆಯೂ ಕರುಣೆಯೂ, ದೀರ್ಘಶಾಂತಿಯೂ ಮಹಾ ಪ್ರೀತಿಯೂ ಉಳ್ಳವರಾಗಿ ಮಾಡಬೇಕೆಂದಿರುವ ಕೇಡಿಗೆ ಮನಮರುಗುತ್ತಾರೆ.
ಯೋವೇಲ 2 : 14 (OCVKN)
ದೇವರು ಒಂದು ವೇಳೆ ತಮ್ಮ ಮನಸ್ಸನ್ನು ಬದಲಾಯಿಸಬಹುದು. ನಿಮ್ಮ ಕಡೆಗೆ ತಿರುಗಿಕೊಂಡು ನಿಮ್ಮನ್ನು ಆಶೀರ್ವದಿಸಬಹುದು. ನಿಮ್ಮ ಯೆಹೋವ ದೇವರಿಗೆ ಅರ್ಪಿಸಲು ಬೇಕಾದ ಧಾನ್ಯ ಸಮರ್ಪಣೆ ಹಾಗು ಪಾನಾರ್ಪಣೆಯನ್ನು ನಿಮಗೆ ಧಾರಾಳವಾಗಿ ಉಳಿಸಬಹುದು, ಯಾರಿಗೆ ಗೊತ್ತು?
ಯೋವೇಲ 2 : 15 (OCVKN)
ಚೀಯೋನಿನಲ್ಲಿ ಕೊಂಬು ಊದಿರಿ; ಪವಿತ್ರ ಉಪವಾಸವನ್ನು ಸಾರಿರಿ; ಪವಿತ್ರ ಸಭೆಯನ್ನು ಕರೆಯಿರಿ.
ಯೋವೇಲ 2 : 16 (OCVKN)
ಜನರನ್ನು ಕೂಡಿಸಿರಿ; ಸಭೆಯನ್ನು ಪವಿತ್ರಗೊಳಿಸಿರಿ; ಹಿರಿಯರನ್ನು ಒಟ್ಟುಗೂಡಿಸಿರಿ, ಮಕ್ಕಳನ್ನೂ ಹಸುಗೂಸುಗಳನ್ನೂ ಕೂಡಿಸಿರಿ; ಮದುಮಗನು ತನ್ನ ಕೊಠಡಿಯೊಳಗಿಂದಲೂ ಮದುಮಗಳು ತನ್ನ ಕೊಠಡಿಯೊಳಗಿಂದಲೂ ಹೊರಡಲಿ.
ಯೋವೇಲ 2 : 17 (OCVKN)
ಯೆಹೋವ ದೇವರ ಸಮ್ಮುಖ ಸೇವಕರಾದ ಯಾಜಕರು, ಅಂಗಳಕ್ಕೂ, ಬಲಿಪೀಠಕ್ಕೂ ನಡುವೆ ಅತ್ತು ಹೀಗೆ ಹೇಳಲಿ, “ಯೆಹೋವ ದೇವರೇ, ನಿನ್ನ ಜನರನ್ನು ಕನಿಕರಿಸು, ಜನಾಂಗಗಳು ನಿಂದಿಸುವುದಕ್ಕೆ ನಿನ್ನ ಬಾಧ್ಯತೆಯನ್ನು ದೂಷಣೆಗೆ ಗುರಿಮಾಡಬೇಡಿರಿ. ‘ಅವರ ದೇವರು ಎಲ್ಲಿ?’ ಎಂದು ಅವರು ಏಕೆ ನಿಂದಿಸಬೇಕು?”
ಯೋವೇಲ 2 : 18 (OCVKN)
ಯೆಹೋವ ದೇವರ ಉತ್ತರ ಆಗ ಯೆಹೋವ ದೇವರು ತಮ್ಮ ದೇಶಕ್ಕೋಸ್ಕರ ಅಭಿಮಾನಗೊಂಡು, ತಮ್ಮ ಜನರನ್ನು ಕನಿಕರಿಸುವರು.
ಯೋವೇಲ 2 : 19 (OCVKN)
ಯೆಹೋವ ದೇವರು ತನ್ನ ಜನರಿಗೆ ಉತ್ತರಕೊಟ್ಟು, ನಾನು ನಿಮಗೆ ಧಾನ್ಯವನ್ನೂ, ದ್ರಾಕ್ಷಾರಸವನ್ನೂ, ಎಣ್ಣೆಯನ್ನೂ ನಿಮಗೆ ಸಾಕಾಗುವಷ್ಟು ಕಳುಹಿಸಿ, ನಿಮ್ಮನ್ನು ಇನ್ನು ಮೇಲೆ ಜನಾಂಗಗಳಲ್ಲಿ ನಿಂದಿತರಾಗಿ ಇಡುವುದಿಲ್ಲ.
ಯೋವೇಲ 2 : 20 (OCVKN)
“ಉತ್ತರ ದಿಕ್ಕಿನ ಸೈನ್ಯವನ್ನು ನಿಮ್ಮಿಂದ ದೂರಮಾಡಿ, ಅದನ್ನು ಹಾಳುಬಿದ್ದ ಬಂಜರು ಭೂಮಿಗೂ, ಅದರ ಮುಂಭಾಗವನ್ನು ಪೂರ್ವದ ಉಪ್ಪು ಸಮುದ್ರಕ್ಕೂ ಅದರ ಹಿಂಭಾಗವನ್ನು ಪಶ್ಚಿಮದ ಮೆಡಿಟರೇನಿಯನ್ ಸಮುದ್ರಕ್ಕೂ ಓಡಿಸಿಬಿಡುವೆನು. ಅದರ ದುರ್ವಾಸನೆಯು ಏರುವುದು. ಅದು ಗಬ್ಬು ನಾರುವುದು.” ಏಕೆಂದರೆ, ಆತನು ಮಹಾಕಾರ್ಯಗಳನ್ನು ಮಾಡಿದ್ದಾರೆ.
ಯೋವೇಲ 2 : 21 (OCVKN)
ಯಹೂದ ದೇಶವೇ, ಭಯಪಡಬೇಡ; ಉಲ್ಲಾಸಿಸಿ, ಸಂತೋಷವಾಗಿರು. ಏಕೆಂದರೆ, ಯೆಹೋವ ದೇವರು ಮಹತ್ತಾದವುಗಳನ್ನು ಮಾಡಿದ್ದಾರೆ.
ಯೋವೇಲ 2 : 22 (OCVKN)
ಕಾಡುಮೃಗಗಳೇ, ಭಯಪಡಬೇಡಿರಿ. ಏಕೆಂದರೆ, ಅಡವಿಯ ಮೇವಿನ ಸ್ಥಳಗಳು ಮೊಳೆಯುತ್ತವೆ. ಮರಗಳು ತಮ್ಮ ಫಲವನ್ನು ಫಲಿಸುತ್ತವೆ. ಅಂಜೂರದ ಗಿಡವೂ ದ್ರಾಕ್ಷಿ ಬಳ್ಳಿಯೂ ತಮ್ಮ ಫಲವನ್ನು ಕೊಡುತ್ತವೆ.
ಯೋವೇಲ 2 : 23 (OCVKN)
ಚೀಯೋನಿನ ಜನರೇ, ನಿಮ್ಮ ದೇವರಾದ ಯೆಹೋವ ದೇವರಲ್ಲಿ ಉಲ್ಲಾಸಿಸಿರಿ, ಸಂತೋಷವಾಗಿರಿ. ಏಕೆಂದರೆ ನಿಮಗೆ ಮುಂಗಾರು ಮಳೆಯನ್ನು ಸಾಕಷ್ಟು ಕೊಡುವರು. ಮುಂಗಾರು, ಹಿಂಗಾರು ಮಳೆಗಳನ್ನು ಮೊದಲಿನ ಹಾಗೆ ನಿಮಗೆ ಸುರಿಸುವರು.
ಯೋವೇಲ 2 : 24 (OCVKN)
ಕಣಗಳು ಧಾನ್ಯದಿಂದ ತುಂಬುವುವು. ತೊಟ್ಟಿಗಳು ದ್ರಾಕ್ಷಾರಸದಿಂದಲೂ ಎಣ್ಣೆಯಿಂದಲೂ ತುಂಬಿ ತುಳುಕುವುವು.
ಯೋವೇಲ 2 : 25 (OCVKN)
“ನಾನು ನಿಮ್ಮಲ್ಲಿ ಕಳುಹಿಸಿದಂಥ ನನ್ನ ದೊಡ್ಡ ಸೈನ್ಯವಾದ ಮಿಡತೆಗಳು, ಗುಂಪು ಮಿಡತೆಗಳು, ಕಂಬಳಿ ಮಿಡತೆಗಳು, ಚೂರಿ ಮಿಡತೆಗಳು ತಿಂದು ಬಿಟ್ಟ ವರ್ಷಗಳನ್ನು ನಿಮಗೆ ಪುನಃಸ್ಥಾಪಿಸಿ ಕೊಡುವೆನು.
ಯೋವೇಲ 2 : 26 (OCVKN)
ಸಮೃದ್ಧಿಯಾಗಿ ಉಂಡು, ತೃಪ್ತಿಪಟ್ಟು, ನಿಮ್ಮನ್ನು ಅದ್ಭುತವಾಗಿ ನಡೆಸಿದ ನಿಮ್ಮ ದೇವರಾದ ಯೆಹೋವ ದೇವರ ಹೆಸರನ್ನು ಸ್ತುತಿಸುವಿರಿ. ನನ್ನ ಜನರು ಎಂದೆಂದಿಗೂ ನಾಚಿಕೆಪಡರು.
ಯೋವೇಲ 2 : 27 (OCVKN)
ನಾನೇ ಇಸ್ರಾಯೇಲಿನ ಮಧ್ಯೆ ನೆಲೆಯಾಗಿ ಇರುವವನು. ನಾನೇ ನಿಮ್ಮ ಯೆಹೋವ ದೇವರು, ನಾನಲ್ಲದೆ ಬೇರೆ ದೇವರು ನಿಮಗಿಲ್ಲ. ನನ್ನ ಜನರು ಎಂದಿಗೂ ನಾಚಿಕೆಪಡರು.
ಯೋವೇಲ 2 : 28 (OCVKN)
ಯೆಹೋವ ದೇವರ ದಿನ “ಆಮೇಲೆ ನಾನು, ನನ್ನ ಆತ್ಮನನ್ನು ಎಲ್ಲಾ ಮನುಷ್ಯರ ಮೇಲೆ ಸುರಿಸುವೆನು, ನಿಮ್ಮ ಗಂಡು ಹೆಣ್ಣುಮಕ್ಕಳು ಪ್ರವಾದಿಸುವರು. ನಿಮ್ಮ ಹಿರಿಯರಿಗೆ ಕನಸುಗಳು ಬೀಳುವುವು. ನಿಮ್ಮ ಯುವಜನರಿಗೆ ದರ್ಶನಗಳಾಗುವವು.
ಯೋವೇಲ 2 : 29 (OCVKN)
ಆ ದಿನಗಳಲ್ಲಿ, ನನ್ನ ದಾಸ ದಾಸಿಯರ ಮೇಲೆ, ನನ್ನ ಆತ್ಮವನ್ನು ಸುರಿಸುವೆನು.
ಯೋವೇಲ 2 : 30 (OCVKN)
ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿ ಅದ್ಭುತಗಳನ್ನು, ರಕ್ತ, ಬೆಂಕಿ, ಹಬೆಯನ್ನು ತೋರಿಸುವೆನು.
ಯೋವೇಲ 2 : 31 (OCVKN)
ಯೆಹೋವ ದೇವರ ಭಯಂಕರವಾದ ಮಹಾದಿನವು ಬರುವುದಕ್ಕಿಂತ ಮೊದಲು, ಸೂರ್ಯನು ಕತ್ತಲಾಗುವನು, ಚಂದ್ರನು ರಕ್ತವಾಗುವನು.
ಯೋವೇಲ 2 : 32 (OCVKN)
ಯೆಹೋವ ದೇವರ ಹೆಸರನ್ನು ಕರೆಯುವವರೆಲ್ಲರಿಗೆ ರಕ್ಷಣೆ ಆಗುವುದು. ಏಕೆಂದರೆ ಚೀಯೋನ್ ಪರ್ವತದಲ್ಲಿಯೂ ಯೆರೂಸಲೇಮಿನಲ್ಲಿಯೂ ಅನೇಕರಿಗೆ ಮುಕ್ತಿ ದೊರಕುವುದು. ಯೆಹೋವ ದೇವರು ಹೇಳಿದ ಪ್ರಕಾರ ಯೆಹೋವ ದೇವರ ಕರೆಹೊಂದಿ ಉಳಿದವರಲ್ಲಿಯೂ ಬಿಡುಗಡೆ ಇರುವುದು.
❮
❯
1
2
3
4
5
6
7
8
9
10
11
12
13
14
15
16
17
18
19
20
21
22
23
24
25
26
27
28
29
30
31
32