ಯೆರೆಮಿಯ 43 : 1 (OCVKN)
ಯೆರೆಮೀಯನು ಜನರೆಲ್ಲರಿಗೆ ಅವರ ದೇವರಾದ ಯೆಹೋವ ದೇವರು ಯಾವ ವಿಷಯವಾಗಿ ಅವನನ್ನು ಅವರ ಬಳಿಗೆ ಕಳುಹಿಸಿದ್ದರೋ, ಆ ಮಾತುಗಳನ್ನೆಲ್ಲಾ ಹೇಳಿ ಮುಗಿಸಿದಾಗ,
ಯೆರೆಮಿಯ 43 : 2 (OCVKN)
ಹೋಷಾಯನ ಮಗನಾದ ಅಜರ್ಯನೂ, ಕಾರೇಹನ ಮಗನಾದ ಯೋಹಾನಾನನೂ, ಗರ್ವಿಷ್ಠ ಮನುಷ್ಯರೆಲ್ಲರೂ ಮಾತನಾಡಿ ಯೆರೆಮೀಯನಿಗೆ, “ನೀನು ಸುಳ್ಳು ಹೇಳುತ್ತೀ, ಅಲ್ಲಿ ಪ್ರವಾಸಿಯಾಗಿರುವುದಕ್ಕೆ ಈಜಿಪ್ಟಿಗೆ ಹೋಗಬಾರದೆಂದು ಹೇಳುವುದಕ್ಕೆ ನಮ್ಮ ದೇವರಾದ ಯೆಹೋವ ದೇವರು ನಿನ್ನನ್ನು ಕಳುಹಿಸಲಿಲ್ಲ.
ಯೆರೆಮಿಯ 43 : 3 (OCVKN)
ಆದರೆ ಅವರು ನಮ್ಮನ್ನು ಕೊಂದುಹಾಕುವ ಹಾಗೆಯೂ, ನಮ್ಮನ್ನು ಬಾಬಿಲೋನಿಗೆ ಸೆರೆ ಒಯ್ಯುವ ಹಾಗೆಯೂ, ನಮ್ಮನ್ನು ಬಾಬಿಲೋನಿಯರ ಕೈಯಲ್ಲಿ ಒಪ್ಪಿಸಬೇಕೆಂದು ನೇರೀಯನ ಮಗನಾದ ಬಾರೂಕನು ನಿನ್ನನ್ನು ನಮಗೆ ವಿರೋಧವಾಗಿ ಪ್ರೇರೇಪಿಸಿದ್ದಾನೆ,” ಎಂದರು.
ಯೆರೆಮಿಯ 43 : 4 (OCVKN)
ಈ ಪ್ರಕಾರ ಕಾರೇಹನ ಮಗ ಯೋಹಾನಾನನೂ, ಸೈನ್ಯಾಧಿಪತಿಗಳೆಲ್ಲರೂ, ಜನರೆಲ್ಲರೂ ಯೆಹೂದ ದೇಶದಲ್ಲಿ ವಾಸಮಾಡುವ ಹಾಗೆ, ಯೆಹೋವ ದೇವರ ಮಾತಿಗೆ ಕಿವಿಗೊಡಲಿಲ್ಲ.
ಯೆರೆಮಿಯ 43 : 5 (OCVKN)
ಆದರೆ ಕಾರೇಹನ ಮಗ ಯೋಹಾನಾನನೂ, ಸೈನ್ಯಾಧಿಪತಿಗಳೆಲ್ಲರೂ ತಾವು ಅಟ್ಟಿಬಿಟ್ಟಿದ್ದ ಎಲ್ಲಾ ಜನಾಂಗಗಳಿಂದ ಯೆಹೂದ ದೇಶದಲ್ಲಿ ವಾಸಮಾಡುವುದಕ್ಕೆ ತಿರುಗಿ ಬಂದ ಯೆಹೂದದಲ್ಲಿ ಉಳಿದವರನ್ನು,
ಯೆರೆಮಿಯ 43 : 6 (OCVKN)
ಅಂದರೆ ಗಂಡಸರನ್ನೂ, ಹೆಂಗಸರನ್ನೂ, ಮಕ್ಕಳನ್ನೂ, ಅರಸನ ಪುತ್ರಿಯರನ್ನೂ, ಕಾವಲಿನವರ ಅಧಿಪತಿಯಾದ ನೆಬೂಜರದಾನನು ಶಾಫಾನನ ಮೊಮ್ಮಗ ಅಹೀಕಾಮನ ಮಗ ಗೆದಲ್ಯನ ಸಂಗಡ ಬಿಟ್ಟವರೆಲ್ಲರನ್ನೂ, ಪ್ರವಾದಿಯಾದ ಯೆರೆಮೀಯನನ್ನೂ, ನೇರೀಯನ ಮಗ ಬಾರೂಕನನ್ನೂ ತೆಗೆದುಕೊಂಡು ಈಜಿಪ್ಟ್ ದೇಶಕ್ಕೆ ಹೋದರು.
ಯೆರೆಮಿಯ 43 : 7 (OCVKN)
ಏಕೆಂದರೆ ಅವರು ಯೆಹೋವ ದೇವರ ಮಾತಿಗೆ ಕಿವಿಗೊಡಲಿಲ್ಲ. ಹೀಗೆ ಅವರು ಈಜಿಪ್ಟಿಗೆ ಹೋಗಿ ತಹಪನೇಸಿಗೆ ಬಂದರು.
ಯೆರೆಮಿಯ 43 : 8 (OCVKN)
ಆಗ ತಹಪನೇಸಿನಲ್ಲಿ ಯೆಹೋವ ದೇವರ ವಾಕ್ಯವು ಯೆರೆಮೀಯನಿಗೆ ಬಂದಿತು.
ಯೆರೆಮಿಯ 43 : 9 (OCVKN)
“ನಿನ್ನ ಕೈಯಲ್ಲಿ ದೊಡ್ಡ ಕಲ್ಲುಗಳನ್ನು ತೆಗೆದು ತಹಪನೇಸಿನಲ್ಲಿರುವ ಫರೋಹನ ಮನೆಯ ಪ್ರವೇಶದಲ್ಲಿರುವ ಇಟ್ಟಿಗೆ ಭಟ್ಟಿಯ ಮಣ್ಣಿನಲ್ಲಿ ಯೆಹೂದ್ಯರ ಮುಂದೆ ಬಚ್ಚಿಟ್ಟು, ಅವರಿಗೆ ಹೇಳತಕ್ಕದ್ದೇನೆಂದರೆ:
ಯೆರೆಮಿಯ 43 : 10 (OCVKN)
‘ಇಸ್ರಾಯೇಲಿನ ದೇವರಾದ ಸೇನಾಧೀಶ್ವರ ಯೆಹೋವ ದೇವರು ಹೀಗೆ ಹೇಳುತ್ತಾರೆ: ಇಗೋ, ನಾನು ಕಳುಹಿಸಿ ನನ್ನ ಸೇವಕನಾದ ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನನ್ನು ಕರೆಯಿಸಿ, ನಾನು ಬಚ್ಚಿಟ್ಟಿರುವ ಈ ಕಲ್ಲುಗಳ ಮೇಲೆ ಅವನ ಸಿಂಹಾಸನವನ್ನು ಇಡುವೆನು. ಅವನು ತನ್ನ ಮೇಲ್ಕಟ್ಟನ್ನು ಅವುಗಳ ಮೇಲೆ ಹಾಸುವನು.
ಯೆರೆಮಿಯ 43 : 11 (OCVKN)
ಅವನು ಬಂದು ಈಜಿಪ್ಟ್ ದೇಶವನ್ನು ಹೊಡೆದು, ಮರಣಕ್ಕೆ ಇರುವವರನ್ನು ಮರಣಕ್ಕೂ, ಸೆರೆಗೆ ಇರುವವರನ್ನು ಸೆರೆಗೂ, ಖಡ್ಗಕ್ಕೆ ಇರುವವರನ್ನು ಖಡ್ಗಕ್ಕೂ ಒಪ್ಪಿಸುವನು.
ಯೆರೆಮಿಯ 43 : 12 (OCVKN)
ನಾನು ಈಜಿಪ್ಟ್ ದೇವರುಗಳ ಆಲಯಗಳಲ್ಲಿ ಬೆಂಕಿ ಹಚ್ಚುವೆನು. ಅವನು ಅವರನ್ನು ಸುಟ್ಟುಬಿಟ್ಟು, ಸೆರೆಯಾಗಿ ಒಯ್ಯುವನು. ಕುರುಬನು ತನ್ನ ಉಡುಪನ್ನು ಹೇನುಗಳಿಂದ ಶುದ್ಧೀಕರಿಸುವಂತೆ ಅವನು ಈಜಿಪ್ಟ್ ದೇಶವನ್ನು ಶುದ್ಧವಾಗಿಸಿಕೊಂಡು ಅಲ್ಲಿಂದ ಸಮಾಧಾನವಾಗಿ ಹೊರಟು ಹೋಗುತ್ತಾನೆ.
ಯೆರೆಮಿಯ 43 : 13 (OCVKN)
ಇದಲ್ಲದೆ ಈಜಿಪ್ಟಿನ ದೇಶದಲ್ಲಿರುವ ಸೂರ್ಯ ದೇವಾಲಯವನ್ನು ಒಡೆದುಹಾಕಿ, ಈಜಿಪ್ಟ್ ದೇವರುಗಳ ಆಲಯಗಳನ್ನು ಬೆಂಕಿಯಿಂದ ಸುಡುವನು.’ ”

1 2 3 4 5 6 7 8 9 10 11 12 13