ಯೆರೆಮಿಯ 34 : 1 (OCVKN)
ಚಿದ್ಕೀಯನಿಗೆ ಎಚ್ಚರಿಕೆ ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನೂ ಅವನ ಸೈನ್ಯವೆಲ್ಲವೂ ಅವನ ಆಡಳಿತದ ಭೂಮಿಯ ಎಲ್ಲಾ ರಾಜ್ಯಗಳೂ ಎಲ್ಲಾ ಜನಾಂಗಗಳೂ ಯೆರೂಸಲೇಮಿಗೂ ಅದರ ಎಲ್ಲಾ ಪಟ್ಟಣಗಳಿಗೂ ವಿರೋಧವಾಗಿ ಯುದ್ಧಮಾಡುವಾಗ ಯೆಹೋವ ದೇವರಿಂದ ಯೆರೆಮೀಯನಿಗೆ ಬಂದ ವಾಕ್ಯವೇನೆಂದರೆ:
ಯೆರೆಮಿಯ 34 : 2 (OCVKN)
“ಇಸ್ರಾಯೇಲಿನ ದೇವರಾದ ಯೆಹೋವ ದೇವರು ಹೀಗೆ ಹೇಳುತ್ತಾರೆ: ನೀನು ಹೋಗಿ ಯೆಹೂದದ ಅರಸನಾದ ಚಿದ್ಕೀಯನ ಸಂಗಡ ಮಾತನಾಡಿ ಅವನಿಗೆ ಹೇಳತಕ್ಕದ್ದೇನೆಂದರೆ: ‘ಯೆಹೋವ ದೇವರು ಹೀಗೆ ಹೇಳುತ್ತಾರೆ. ಇಗೋ, ನಾನು ಈ ಪಟ್ಟಣವನ್ನು ಬಾಬಿಲೋನಿನ ಅರಸನ ಕೈಗೆ ಒಪ್ಪಿಸುವೆನು. ಅವನು ಅದನ್ನು ಬೆಂಕಿಯಿಂದ ಸುಡುವನು.
ಯೆರೆಮಿಯ 34 : 3 (OCVKN)
ನೀನು ಅವನ ಕೈಯೊಳಗಿಂದ ತಪ್ಪಿಸಿಕೊಳ್ಳುವುದಿಲ್ಲ. ಆದರೆ ನಿಶ್ಚಯವಾಗಿ ಹಿಡಿಯಲಾಗಿ, ಅವನ ಕೈವಶವಾಗುವೆ. ನೀವು ಬಾಬಿಲೋನಿನ ಅರಸನನ್ನು ಪ್ರತ್ಯಕ್ಷವಾಗಿ ಕಾಣುವಿರಿ. ಅವನು ನಿಮ್ಮೊಂದಿಗೆ ಮುಖಾಮುಖಿಯಾಗಿ ಮಾತನಾಡುವನು. ನೀನು ಬಾಬಿಲೋನಿಗೆ ಹೋಗುವಿ.
ಯೆರೆಮಿಯ 34 : 4 (OCVKN)
“ ‘ಆದರೂ ಯೆಹೂದದ ಅರಸನಾದ ಚಿದ್ಕೀಯನೇ, ಯೆಹೋವ ದೇವರ ವಾಗ್ದಾನವನ್ನು ಕೇಳು. ನಿನ್ನನ್ನು ಕುರಿತು ಯೆಹೋವ ದೇವರು ಹೀಗೆ ಹೇಳುತ್ತಾರೆ: ನೀನು ಖಡ್ಗದಿಂದ ಸಾಯುವುದಿಲ್ಲ.
ಯೆರೆಮಿಯ 34 : 5 (OCVKN)
ನೀನು ಶಾಂತಿಯುತವಾಗಿ ಸಾಯುವೆ. ನಿನಗಿಂತ ಮೊದಲು ಆಳಿದ ನಿನ್ನ ಪಿತೃಗಳಾದ ಅರಸರನ್ನು ಗೌರವಿಸಲು ಬೆಂಕಿಯನ್ನು ಹೊತ್ತಿಸಿದ ಪ್ರಕಾರ ನಿನಗೂ ಹಾಕುವರು. “ಅಯ್ಯೋ, ಒಡೆಯನೇ,” ಎಂದು ಹೇಳಿ ನಿನಗೋಸ್ಕರ ಗೋಳಾಡುವರು. ನಾನೇ ಈ ವಾಗ್ದಾನವನ್ನು ಮಾಡಿದ್ದೇನೆಂದು ಯೆಹೋವ ದೇವರು ಹೇಳುತ್ತಾರೆ.’ ”
ಯೆರೆಮಿಯ 34 : 6 (OCVKN)
ಆಗ ಪ್ರವಾದಿಯಾದ ಯೆರೆಮೀಯನು ಈ ವಾಕ್ಯಗಳನ್ನೆಲ್ಲಾ ಯೆರೂಸಲೇಮಿನಲ್ಲಿ ಯೆಹೂದದ ಅರಸನಾದ ಚಿದ್ಕೀಯನಿಗೆ ಹೇಳಿದನು.
ಯೆರೆಮಿಯ 34 : 7 (OCVKN)
ಬಾಬಿಲೋನಿನ ಅರಸನ ಸೈನ್ಯವು ಯೆರೂಸಲೇಮಿಗೂ ಯೆಹೂದದಲ್ಲಿ ಮಿಕ್ಕ ಸಮಸ್ತ ಪಟ್ಟಣಗಳಿಗೂ ಎಂದರೆ, ಲಾಕೀಷಿಗೂ ಅಜೇಕಕ್ಕೂ ವಿರೋಧವಾಗಿ ಯುದ್ಧ ಮಾಡಿದಾಗಲೇ ಹೇಳಿದನು. ಏಕೆಂದರೆ ಯೆಹೂದದ ಪಟ್ಟಣಗಳಲ್ಲಿ ಈ ಕೋಟೆಯುಳ್ಳ ಪಟ್ಟಣಗಳು ಮಾತ್ರ ನಿಂತಿದ್ದವು.
ಯೆರೆಮಿಯ 34 : 8 (OCVKN)
ಗುಲಾಮರಿಗೆ ಸ್ವತಂತ್ರ ಗುಲಾಮರಿಗೆ ಸ್ವಾತಂತ್ರ್ಯವನ್ನು ಘೋಷಿಸಲು ಅರಸನಾದ ಚಿದ್ಕೀಯನು ಯೆರೂಸಲೇಮಿನ ಎಲ್ಲಾ ಜನರೊಂದಿಗೆ ಒಡಂಬಡಿಕೆಯನ್ನು ಮಾಡಿದ ನಂತರ ಯೆಹೋವ ದೇವರಿಂದ ಯೆರೆಮೀಯನಿಗೆ ಈ ಮಾತು ಬಂದಿತು.
ಯೆರೆಮಿಯ 34 : 9 (OCVKN)
ಪ್ರತಿಯೊಬ್ಬರೂ ತಮ್ಮ ಗಂಡು ಮತ್ತು ಹೆಣ್ಣು ಹಿಬ್ರಿಯ ಗುಲಾಮರನ್ನು ಇಬ್ಬರನ್ನೂ ಮುಕ್ತಗೊಳಿಸಬೇಕು. ಯೆಹೂದ್ಯರಾದ ಸಹೋದರ ಸಹೋದರಿಯರನ್ನು ಯಾರೂ ಬಂಧನದಲ್ಲಿ ಇಟ್ಟುಕೊಳ್ಳಲಿಲ್ಲ.
ಯೆರೆಮಿಯ 34 : 10 (OCVKN)
ಆಗ ಒಡಂಬಡಿಕೆಯಲ್ಲಿ ಸೇರಿದ ಪ್ರಧಾನರೆಲ್ಲರೂ ಜನರೆಲ್ಲರೂ ತಮ್ಮ ದಾಸದಾಸಿಯರನ್ನು ಬಿಡುಗಡೆ ಮಾಡುವುದಾಗಿ ಒಪ್ಪಿಕೊಂಡರು. ಇನ್ನು ಮುಂದೆ ಅವರನ್ನು ದಾಸತ್ವದಲ್ಲಿ ಇಟ್ಟುಕೊಳ್ಳುವುದಿಲ್ಲ ಎಂದು ಅವರು ಒಪ್ಪಿದರು ಮತ್ತು ಅವರನ್ನು ಬಿಡುಗಡೆ ಮಾಡಿದರು.
ಯೆರೆಮಿಯ 34 : 11 (OCVKN)
ಆದರೆ ನಂತರ ಅವರು ತಮ್ಮ ಮನಸ್ಸನ್ನು ಬದಲಾಯಿಸಿದರು ಮತ್ತು ಅವರು ಬಿಡುಗಡೆ ಮಾಡಿದ ಗುಲಾಮರನ್ನು ಮರಳಿ ತೆಗೆದುಕೊಂಡು ಅವರನ್ನು ಮತ್ತೆ ಗುಲಾಮರನ್ನಾಗಿ ಮಾಡಿದರು.
ಯೆರೆಮಿಯ 34 : 12 (OCVKN)
ಆದ್ದರಿಂದ ಯೆಹೋವ ದೇವರ ವಾಕ್ಯವು ಯೆರೆಮೀಯನಿಗೆ ಯೆಹೋವ ದೇವರಿಂದ ಉಂಟಾಗಿ:
ಯೆರೆಮಿಯ 34 : 13 (OCVKN)
“ಇಸ್ರಾಯೇಲಿನ ದೇವರಾದ ಯೆಹೋವ ದೇವರು ಹೀಗೆ ಹೇಳುತ್ತಾರೆ: ನಾನು ನಿಮ್ಮ ಪಿತೃಗಳನ್ನು ಈಜಿಪ್ಟ್ ದೇಶದೊಳಗಿಂದ ದಾಸರ ದೇಶದೊಳಗಿಂದ ಹೊರಗೆ ತಂದ ದಿವಸದಲ್ಲಿ ಅವರ ಸಂಗಡ ಒಡಂಬಡಿಕೆ ಮಾಡಿ,
ಯೆರೆಮಿಯ 34 : 14 (OCVKN)
‘ಏಳು ವರ್ಷಗಳ ಕಡೆಯಲ್ಲಿ ಒಬ್ಬೊಬ್ಬನು ತನಗೆ ಜೀತದಾಳಾಗಿದ್ದ ತನ್ನ ಸಹೋದರನಾದ ಹಿಬ್ರಿಯನನ್ನು ಕಳುಹಿಸಬೇಕೆಂದೂ, ಅವನು ನಿನಗೆ ಆರು ವರ್ಷ ಸೇವೆಮಾಡಿದ ಮೇಲೆ ನಿನ್ನ ಕಡೆಯಿಂದ ಅವನನ್ನು ಬಿಡುಗಡೆಯಾಗಿ ಕಳುಹಿಸಬೇಕು,’* ಧರ್ಮೋ 15:12 ಎಂದು ಹೇಳಿದೆನು. ಆದರೆ ನಿಮ್ಮ ಪಿತೃಗಳು ನನ್ನ ಮಾತನ್ನು ಕೇಳಲಿಲ್ಲ. ಅವರು ಕಿವಿಗೊಡಲಿಲ್ಲ.
ಯೆರೆಮಿಯ 34 : 15 (OCVKN)
ನೀವೋ ಕೂಡಲೆ ಮನಮರುಗಿ ನಿಮ್ಮ ನಿಮ್ಮ ನೆರೆಹೊರೆಯವರಿಗೆ ಬಿಡುಗಡೆಯನ್ನು ಪ್ರಕಟಿಸಿ, ನನ್ನ ದೃಷ್ಟಿಯಲ್ಲಿ ಸರಿಯಾದದ್ದನ್ನು ಮಾಡಿದಿರಿ. ನನ್ನ ಹೆಸರಿನಿಂದ ಖ್ಯಾತಗೊಂಡಿರುವ ದೇವಾಲಯದಲ್ಲಿ, ನನ್ನ ಸಮ್ಮುಖದಲ್ಲಿ ಒಪ್ಪಂದ ಮಾಡಿಕೊಂಡಿರಿ.
ಯೆರೆಮಿಯ 34 : 16 (OCVKN)
ಆದರೆ ಆಮೇಲೆ ನಿಮ್ಮ ಮನಸ್ಸನ್ನು ಮಾರ್ಪಡಿಸಿಕೊಂಡಿರಿ. ಸ್ವತಂತ್ರರನ್ನಾಗಿ ಬಿಟ್ಟಿದ್ದವರನ್ನು ಪುನಃ ದಾಸದಾಸಿಯರನ್ನಾಗಿ ಸೇರಿಸಿಕೊಂಡು, ಶೋಷಣೆಗೆ ಗುರಿಮಾಡಿ, ನನ್ನ ನಾಮಕ್ಕೆ ಅಪಕೀರ್ತಿ ತಂದಿದ್ದೀರಿ.
ಯೆರೆಮಿಯ 34 : 17 (OCVKN)
“ಆದ್ದರಿಂದ ಯೆಹೋವ ದೇವರು ಹೀಗೆ ಹೇಳುತ್ತಾರೆ: ಪ್ರತಿಯೊಬ್ಬನು ತನ್ನ ಸಹೋದರನಿಗೂ, ಪ್ರತಿ ಮನುಷ್ಯನು ತನ್ನ ನೆರೆಯವನಿಗೂ ಬಿಡುಗಡೆಯನ್ನು ಸಾರುವುದರಲ್ಲಿ ನೀವು ನನಗೆ ಕಿವಿಗೊಡಲಿಲ್ಲ. ಇಗೋ, ನಾನು ಖಡ್ಗ, ಬರ, ವ್ಯಾಧಿ ಇವುಗಳಿಗಾಗಿಯೇ ನಿಮಗೆ ಬಿಡುಗಡೆಯನ್ನು ಸಾರುತ್ತೇನೆ ಎಂದು ಯೆಹೋವ ದೇವರು ಹೇಳುತ್ತಾರೆ ಮತ್ತು ಭೂಮಿಯ ಎಲ್ಲಾ ರಾಜ್ಯಗಳಿಗೆ ನಿಮ್ಮನ್ನೂ ತಿರಸ್ಕಾರ ಹೊಂದುವಂತೆ ಮಾಡುವೆನು.
ಯೆರೆಮಿಯ 34 : 18 (OCVKN)
ನನ್ನ ಒಡಂಬಡಿಕೆಯನ್ನು ಮೀರಿದ ಮನುಷ್ಯರನ್ನೂ, ಕರುವನ್ನೂ ಎರಡು ಭಾಗಮಾಡಿ, ಅದರ ತುಂಡುಗಳ ನಡುವೆ ದಾಟಿ ಹೋಗಿ, ನನ್ನ ಮುಂದೆ ಮಾಡಿದ ಒಡಂಬಡಿಕೆಯ ವಾಕ್ಯಗಳನ್ನು ಸ್ಥಾಪಿಸದೆ ಇರುವವರನ್ನೂ,
ಯೆರೆಮಿಯ 34 : 19 (OCVKN)
ಯೆಹೂದದ ಪ್ರಧಾನರನ್ನೂ, ಯೆರೂಸಲೇಮಿನ ಪ್ರಧಾನರನ್ನೂ, ಕಂಚುಕಿಯರನ್ನೂ, ಯಾಜಕರನ್ನೂ, ಕರುವಿನ ತುಂಡುಗಳ ನಡುವೆ ದಾಟಿಹೋದ ದೇಶದ ಜನರೆಲ್ಲರನ್ನೂ,
ಯೆರೆಮಿಯ 34 : 20 (OCVKN)
ಅವರ ಶತ್ರುಗಳ ಕೈಯಲ್ಲಿಯೂ, ಅವರ ಪ್ರಾಣವನ್ನು ಹುಡುಕುವವರ ಕೈಯಲ್ಲಿಯೂ ಒಪ್ಪಿಸುವೆನು. ಅವರ ಹೆಣಗಳು ಆಕಾಶದ ಪಕ್ಷಿಗಳಿಗೂ, ಕಾಡುಮೃಗಗಳಿಗೂ ಆಹಾರವಾಗುವುವು.
ಯೆರೆಮಿಯ 34 : 21 (OCVKN)
“ಯೆಹೂದದ ಅರಸನಾದ ಚಿದ್ಕೀಯನನ್ನೂ, ಅವನ ಪ್ರಧಾನರನ್ನೂ ಅವರ ಶತ್ರುಗಳ ಕೈಯಲ್ಲಿಯೂ, ಅವರ ಪ್ರಾಣವನ್ನು ಹುಡುಕುವವರ ಕೈಯಲ್ಲಿಯೂ, ನಿಮ್ಮನ್ನು ಬಿಟ್ಟುಹೋಗಿರುವ ಬಾಬಿಲೋನಿನ ಅರಸನ ಸೈನ್ಯದ ಕೈಯಲ್ಲಿಯೂ ಒಪ್ಪಿಸುವೆನು.
ಯೆರೆಮಿಯ 34 : 22 (OCVKN)
ಯೆಹೋವ ದೇವರು ಹೇಳುತ್ತಾರೆ, ಇಗೋ, ನಾನು ಆಜ್ಞಾಪಿಸಿ ಅವರನ್ನು ಈ ಪಟ್ಟಣದ ಬಳಿಗೆ ತಿರುಗಿ ಬರಮಾಡುವೆನು; ಅವರು ಅದಕ್ಕೆ ವಿರೋಧವಾಗಿ ಯುದ್ಧಮಾಡಿ, ಅದನ್ನು ಹಿಡಿದು ಬೆಂಕಿಯಿಂದ ಸುಡುವರು ಮತ್ತು ಯೆಹೂದದ ಪಟ್ಟಣಗಳನ್ನು ನಿವಾಸಿಗಳಿಲ್ಲದೆ ಹಾಳಾಗಿ ಮಾಡುವೆನು.”
❮
❯
1
2
3
4
5
6
7
8
9
10
11
12
13
14
15
16
17
18
19
20
21
22