ಯೆರೆಮಿಯ 3 : 1 (OCVKN)
“ಒಬ್ಬನು ತನ್ನ ಹೆಂಡತಿಯನ್ನು ವಿಚ್ಛೇದನಮಾಡಿದರೆ, ಅವಳು ಅವನನ್ನು ಬಿಟ್ಟು ಹೋಗಿ ಬೇರೆಯವನ ಜೊತೆ ಇದ್ದರೆ, ಅವನು ಅವಳನ್ನು ಮತ್ತೆ ಸೇರಿಸಿಕೊಳ್ಳುವನೋ? ಸೇರಿಸಿಕೊಂಡರೆ, ಆ ದೇಶವು ಸಂಪೂರ್ಣವಾಗಿ ಅಪವಿತ್ರವಾಗುವುದಿಲ್ಲವೋ? ಆದರೆ ನೀನು ನಿನ್ನ ಅನೇಕ ಪ್ರೇಮಿಗಳ ಸಂಗಡ ವೇಶ್ಯೆಯಂತೆ ಇದ್ದೀ. ನೀನು ಈಗ ನನ್ನ ಬಳಿಗೆ ಹಿಂತಿರುಗುವೆಯಾ?” ಎಂದು ಯೆಹೋವ ದೇವರು ಹೇಳುತ್ತಾರೆ.
ಯೆರೆಮಿಯ 3 : 2 (OCVKN)
“ನಿನ್ನ ಕಣ್ಣುಗಳನ್ನು ಉನ್ನತ ಸ್ಥಳಗಳ ಮೇಲೆ ಎತ್ತು. ಯಾವುದರಲ್ಲಿ ನಿನ್ನನ್ನು ನೀನು ಕೆಡಿಸಿಕೊಳ್ಳಲಿಲ್ಲ? ಮರುಭೂಮಿಯಲ್ಲಿ ಅರಬೀಯನ ಹಾಗೆ ದಾರಿಗಳಲ್ಲಿ ಅವರಿಗೋಸ್ಕರ ಕೂತುಕೊಂಡಿದ್ದೀ. ಹೀಗೆ ನಿನ್ನ ವೇಶ್ಯೆತನಗಳಿಂದಲೂ, ನಿನ್ನ ಕೆಟ್ಟತನಗಳಿಂದಲೂ ದೇಶವನ್ನು ಅಪವಿತ್ರ ಮಾಡಿದ್ದೀಯೆ.
ಯೆರೆಮಿಯ 3 : 3 (OCVKN)
ಆದ್ದರಿಂದ ಮಳೆಗಳು ನಿಂತುಹೋದವು, ಹಿಂಗಾರೇ ಆಗಲಿಲ್ಲ. ವೇಶ್ಯೆಯ ನೋಟ ನಿನಗಿತ್ತು. ನಾಚುವುದನ್ನು ನಿರಾಕರಿಸಿದೆ.
ಯೆರೆಮಿಯ 3 : 4 (OCVKN)
ಈಗಲೂ ನನಗೆ, ‘ನನ್ನ ತಂದೆಯೇ, ನನ್ನ ಯೌವನದ ಸ್ನೇಹಿತನು ನೀನೇ,’ ಎಂದು ನೀನು ಕರೆಯುತ್ತಿರುವೆ.
ಯೆರೆಮಿಯ 3 : 5 (OCVKN)
ಆತನು ನಿತ್ಯ ಕೋಪಮಾಡುವವನೋ? ಕೊನೆಯ ತನಕ ಕೋಪವನ್ನು ಇಟ್ಟುಕೊಳ್ಳುವನೋ? ಇಗೋ, ನೀನು ಹೀಗೆ ಮಾತನಾಡಿದರೇನು? ಆದರೆ ನಿನ್ನಿಂದ ಸಾಧ್ಯವಾಗುವಷ್ಟು ದುಷ್ಕೃತ್ಯಗಳನ್ನು ಮಾಡಿದ್ದಿ.”
ಯೆರೆಮಿಯ 3 : 6 (OCVKN)
ಅವಿಶ್ವಾಸವುಳ್ಳ ಇಸ್ರಾಯೇಲರು ಯೆಹೋವ ದೇವರು ಅರಸನಾದ ಯೋಷೀಯನ ದಿವಸಗಳಲ್ಲಿ ನನಗೆ ಹೇಳಿದ್ದೇನೆಂದರೆ: “ಭ್ರಷ್ಟಳಾದ ಇಸ್ರಾಯೇಲು ಮಾಡಿದ್ದನ್ನು ನೀನು ನೋಡಿದೆಯೋ? ಅವಳು ಒಂದೊಂದು ಎತ್ತರವಾದ ಬೆಟ್ಟದ ಮೇಲೆಯೂ, ಒಂದೊಂದು ಹಸುರಾದ ಮರದ ಕೆಳಗೆಯೂ ಹೋಗಿ, ಅಲ್ಲಿ ವೇಶ್ಯೆತನ ಮಾಡಿದ್ದಾಳೆ.
ಯೆರೆಮಿಯ 3 : 7 (OCVKN)
ಅವಳು ಇವುಗಳನ್ನೆಲ್ಲಾ ಮಾಡಿದ ಮೇಲೆ ನಾನು ನನ್ನ ಬಳಿಗೆ ತಿರುಗಿಕೋ ಎಂದೆನು. ಆದರೆ ಅವಳು ತಿರುಗಿಕೊಳ್ಳಲಿಲ್ಲ. ಅವಳ ವಂಚನೆಯುಳ್ಳ ಸಹೋದರಿಯಾದ ಯೆಹೂದಳು ಅದನ್ನು ನೋಡಿದಳು.
ಯೆರೆಮಿಯ 3 : 8 (OCVKN)
ಆಗ ನಾನು ಕಂಡದ್ದೇನೆಂದರೆ, ಭ್ರಷ್ಟಳಾದ ಇಸ್ರಾಯೇಲು ವ್ಯಭಿಚಾರ ಮಾಡಿದ ಎಲ್ಲಾ ಕಾರಣಗಳ ನಿಮಿತ್ತ ನಾನು ಅವಳನ್ನು ಬಿಟ್ಟುಬಿಟ್ಟು, ತ್ಯಾಗ ಪತ್ರವನ್ನು ಕೊಟ್ಟಿದ್ದಾಗ್ಯೂ ಅವಳ ವಂಚನೆಯುಳ್ಳ ಸಹೋದರಿಯಾದ ಯೆಹೂದಳು ಭಯಪಡದೆ, ತಾನು ಕೂಡ ಹೋಗಿ ವೇಶ್ಯೆತನ ಮಾಡಿದಳು.
ಯೆರೆಮಿಯ 3 : 9 (OCVKN)
ಆದದ್ದೇನೆಂದರೆ, ಅವಳ ಸೂಳೆತನದ ಸುದ್ದಿಯಿಂದ ಅವಳು ದೇಶವನ್ನು ಅಪವಿತ್ರ ಮಾಡಿ, ಕಲ್ಲುಗಳ ಮತ್ತು ಮರಗಳ ಸಂಗಡ ವ್ಯಭಿಚಾರ ಮಾಡಿದಳು.
ಯೆರೆಮಿಯ 3 : 10 (OCVKN)
ಇದೆಲ್ಲಾ ಆದಾಗ್ಯೂ ಅವಳ ವಂಚನೆಯುಳ್ಳ ಸಹೋದರಿಯಾದ ಯೆಹೂದಳು ಪೂರ್ಣಹೃದಯದಿಂದಲ್ಲ, ಕಪಟದಿಂದಲೇ ನನ್ನ ಬಳಿಗೆ ತಿರುಗಿಕೊಂಡಿದ್ದಾಳೆ,” ಎಂದು ಯೆಹೋವ ದೇವರು ನುಡಿಯುತ್ತಾರೆ.
ಯೆರೆಮಿಯ 3 : 11 (OCVKN)
ಯೆಹೋವ ದೇವರು ನನಗೆ ಹೇಳಿದ್ದೇನೆಂದರೆ: “ಭ್ರಷ್ಟಳಾದ ಇಸ್ರಾಯೇಲ್, ದ್ರೋಹಿಯಾದ ಯೆಹೂದಕ್ಕಿಂತಲೂ ಶಿಷ್ಟಳಾಗಿ ಕಂಡುಬಂದಿದ್ದಾಳೆ.
ಯೆರೆಮಿಯ 3 : 12 (OCVKN)
ನೀನು ಹೋಗಿ ಉತ್ತರ ದಿಕ್ಕಿಗೆ ಈ ಮಾತುಗಳನ್ನು ಸಾರು. “ ‘ಭ್ರಷ್ಟಳಾದ ಇಸ್ರಾಯೇಲೇ, ತಿರುಗಿಕೋ,’ ಎಂದು ಯೆಹೋವ ದೇವರು ಕರೆಯುತ್ತಾರೆ. ‘ನಾನು ನನ್ನ ಕೋಪವನ್ನು ನಿಮ್ಮ ಮೇಲೆ ಬೀಳ ಮಾಡುವುದಿಲ್ಲ. ಏಕೆಂದರೆ ನಾನು ಕರುಣಾಸಾಗರನು,’ ಎಂದು ಯೆಹೋವ ದೇವರು ಹೇಳುತ್ತಾರೆ. ‘ನಾನು ಎಂದೆಂದಿಗೂ ಕೋಪವಿಟ್ಟುಕೊಳ್ಳುವುದಿಲ್ಲ.
ಯೆರೆಮಿಯ 3 : 13 (OCVKN)
ನಿನ್ನ ದೇವರಾದ ಯೆಹೋವ ದೇವರಿಗೆ ವಿರೋಧವಾಗಿ ದ್ರೋಹ ಮಾಡಿ, ಒಂದೊಂದು ಹಸುರು ಮರದ ಕೆಳಗೆ ನಿನ್ನ ಮಾರ್ಗಗಳನ್ನು ಅನ್ಯ ದೇವರುಗಳಿಗೆ ಚದರಿಸಿ, ನನ್ನ ಶಬ್ದಕ್ಕೆ ಕಿವಿಗೊಡಲಿಲ್ಲವೆಂಬ ನಿನ್ನ ಅಕ್ರಮವನ್ನು ಮಾತ್ರ ಅರಿಕೆ ಮಾಡು,’ ” ಎಂದು ಯೆಹೋವ ದೇವರು ಹೇಳುತ್ತಾರೆ.
ಯೆರೆಮಿಯ 3 : 14 (OCVKN)
“ಓ ಭ್ರಷ್ಟರಾದ ಜನರೇ, ತಿರುಗಿಕೊಳ್ಳಿರಿ,” ಎಂದು ಯೆಹೋವ ದೇವರು ನುಡಿಯುತ್ತಾರೆ. “ಏಕೆಂದರೆ, ನಾನು ನಿಮಗೆ ಪತಿ. ಪಟ್ಟಣದೊಳಗಿಂದ ಒಬ್ಬನನ್ನು, ಗೋತ್ರದೊಳಗಿಂದ ಇಬ್ಬರನ್ನು ತೆಗೆದುಕೊಂಡು, ಚೀಯೋನಿಗೆ ಕರೆದುಕೊಂಡು ಬರುವೆನು.
ಯೆರೆಮಿಯ 3 : 15 (OCVKN)
ನನ್ನ ಹೃದಯಕ್ಕೆ ಸರಿಯಾದ ಪಾಲಕರನ್ನು ನಿಮಗೆ ಕೊಡುವೆನು. ಅವರು ತಿಳುವಳಿಕೆಯಿಂದಲೂ, ಬುದ್ಧಿಯಿಂದಲೂ ನಿಮ್ಮನ್ನು ಪೋಷಿಸುವರು.
ಯೆರೆಮಿಯ 3 : 16 (OCVKN)
ನೀವು ದೇಶದಲ್ಲಿ ಅಭಿವೃದ್ಧಿಯಾಗಿ ಫಲವುಳ್ಳವರಾದ ಮೇಲೆ ಆ ದಿವಸಗಳಲ್ಲಿ, ‘ಯೆಹೋವ ದೇವರ ಒಡಂಬಡಿಕೆಯ ಮಂಜೂಷವು,’ ಎಂದು ಇನ್ನು ಮೇಲೆ ಅವರು ಹೇಳದಿರುವರು. ಅದು ಮನಸ್ಸಿಗೆ ಬರುವುದಿಲ್ಲ, ಯಾರು ಅದನ್ನು ಸ್ಮರಿಸುವುದಿಲ್ಲ, ಅದರ ಬಗ್ಗೆ ವಿಚಾರಿಸುವುದೂ ಇಲ್ಲ; ಇನ್ನು ಮೇಲೆ ಸರಿಯಾಗುವುದಿಲ್ಲ ಎಂದು ಯೆಹೋವ ದೇವರು ನುಡಿಯುತ್ತಾರೆ.
ಯೆರೆಮಿಯ 3 : 17 (OCVKN)
ಆ ಕಾಲ ಬಂದಾಗ ಯೆರೂಸಲೇಮನ್ನೇ, ‘ಯೆಹೋವ ದೇವರ ಸಿಂಹಾಸನ,’ ಎಂದು ಕರೆಯುವರು. ನನ್ನ ನಾಮ ಮಹತ್ವದ ಸ್ಥಾನವಾದ ಯೆರೂಸಲೇಮಿಗೆ ಸಕಲ ರಾಷ್ಟ್ರಗಳವರು ನೆರೆದು ಬರುವರು. ಆಮೇಲೆ ತಮ್ಮ ದುಷ್ಟ ಹೃದಯದ ನಿಮಿತ್ತ ಹಟಮಾರಿಗಳಂತೆ ನಡೆಯಲಾರರು.
ಯೆರೆಮಿಯ 3 : 18 (OCVKN)
ಆ ಕಾಲದಲ್ಲಿ ಯೆಹೂದದ ವಂಶವು ಇಸ್ರಾಯೇಲ್ ವಂಶದೊಡನೆ ಜೊತೆಯಾಗಿ ಬಾಳುವುದು. ಈ ಎರಡು ವಂಶಗಳೂ ಉತ್ತರ ಪ್ರಾಂತಗಳನ್ನು ಬಿಟ್ಟು, ನಾನು ನಿಮ್ಮ ಪೂರ್ವಜರಿಗೆ ಬಾಧ್ಯವಾಗಿ ಕೊಟ್ಟ ನಾಡಿಗೆ ಬರುವುವು.”
ಯೆರೆಮಿಯ 3 : 19 (OCVKN)
ಯೆಹೋವ ದೇವರು ಹೇಳುವುದೇನೆಂದರೆ: “ಎಲೈ ಇಸ್ರಾಯೇಲ್, ನಾನು ಎಷ್ಟೋ ಸಂತೋಷದಿಂದ ನಿನ್ನನ್ನು ನನ್ನ ಪುತ್ರನೆಂದು ಭಾವಿಸಿ, ನಿನಗೆ ಮನೋಹರವಾದ ನಾಡನ್ನು ಎಂದರೆ, ಸಮಸ್ತ ರಾಷ್ಟ್ರಗಳಲ್ಲಿ ರಮಣೀಯವಾದ ಸೊತ್ತನ್ನು ಕೊಡಬೇಕು ಎಂದುಕೊಂಡಿದ್ದೆ. ನೀನು ನನ್ನನ್ನು, ‘ತಂದೆ,’ ಎಂದು ಸನ್ಮಾನಿಸಿ, ನನ್ನನ್ನು ತಪ್ಪದೆ ಹಿಂಬಾಲಿಸಿ ಬರುವೆ ಎಂದಿದ್ದೆ.
ಯೆರೆಮಿಯ 3 : 20 (OCVKN)
ನಿಶ್ಚಯವಾಗಿ ಹೆಂಡತಿ ತನ್ನ ಗಂಡನನ್ನು ವಂಚಿಸಿಬಿಡುವ ಕಾರಣ, ಓ ಇಸ್ರಾಯೇಲಿನ ಮನೆತನದವರೇ, ನನಗೆ ವಂಚನೆ ಮಾಡಿದ್ದೀರಿ,” ಎಂದು ಯೆಹೋವ ದೇವರು ಹೇಳುತ್ತಾರೆ.
ಯೆರೆಮಿಯ 3 : 21 (OCVKN)
ಉನ್ನತ ಸ್ಥಳಗಳ ಮೇಲೆ ಸ್ವರವು ಕೇಳಿತು. ಅವು ಇಸ್ರಾಯೇಲಿನ ಮಕ್ಕಳ ಅಳುವಿಕೆಯ ಬೇಡಿಕೆಗಳೇ. ಏಕೆಂದರೆ ಅವರು ತಮ್ಮ ಮಾರ್ಗವನ್ನು ಡೊಂಕು ಮಾಡಿ, ತಮ್ಮ ದೇವರಾದ ಯೆಹೋವ ದೇವರನ್ನು ಮರೆತುಬಿಟ್ಟಿದ್ದರು.
ಯೆರೆಮಿಯ 3 : 22 (OCVKN)
“ಭ್ರಷ್ಟರಾದ ಮಕ್ಕಳೇ, ನೀವು ತಿರುಗಿಕೊಳ್ಳಿರಿ; ನಿಮ್ಮ ಭ್ರಷ್ಟತನವನ್ನು ನಾನು ಸ್ವಸ್ಥ ಮಾಡುವೆನು.” “ಇಗೋ, ನಿಮ್ಮ ಬಳಿಗೆ ಬರುತ್ತೇವೆ, ಏಕೆಂದರೆ ನೀವು ಯೆಹೋವ ದೇವರು, ನಮ್ಮ ದೇವರಾಗಿದ್ದೀರಿ.
ಯೆರೆಮಿಯ 3 : 23 (OCVKN)
ನಿಶ್ಚಯವಾಗಿ ಗುಡ್ಡಗಳಿಂದಲೂ, ಬೆಟ್ಟಗಳ ಸಮೂಹದಿಂದಲೂ ನಮಗೆ ಮೋಸವಾಗಿದೆ. ನಿಶ್ಚಯವಾಗಿ ಇಸ್ರಾಯೇಲಿನ ರಕ್ಷಣೆಯು ನಮ್ಮ ದೇವರಾದ ಯೆಹೋವ ದೇವರಲ್ಲಿಯೇ ಇದೆ.
ಯೆರೆಮಿಯ 3 : 24 (OCVKN)
ನಾಚಿಕೆಯಾದದ್ದು, ನಮ್ಮ ಚಿಕ್ಕತನದಿಂದ ನಮ್ಮ ತಂದೆಗಳ ಕಷ್ಟವನ್ನೂ, ಅವರ ಕುರಿಗಳನ್ನೂ, ಅವರ ದನಗಳನ್ನೂ, ಅವರ ಪುತ್ರರನ್ನೂ, ಅವರ ಪುತ್ರಿಯರನ್ನೂ ತಿಂದುಬಿಟ್ಟಿದೆ.
ಯೆರೆಮಿಯ 3 : 25 (OCVKN)
ನಮ್ಮ ನಾಚಿಕೆಯಲ್ಲಿ ಮಲಗಿಕೊಳ್ಳುತ್ತೇವೆ. ನಮ್ಮ ಗಲಭೆ ನಮ್ಮನ್ನು ಮುಚ್ಚಿಕೊಳ್ಳುತ್ತದೆ. ಏಕೆಂದರೆ ನಾವೂ, ನಮ್ಮ ಪೂರ್ವಜರೂ ನಮ್ಮ ಚಿಕ್ಕತನದಿಂದ ಇಂದಿನವರೆಗೂ ನಮ್ಮ ದೇವರಾದ ಯೆಹೋವ ದೇವರಿಗೆ ವಿರೋಧವಾಗಿ ಪಾಪಮಾಡಿದ್ದೇವೆ. ನಮ್ಮ ಯೆಹೋವ ದೇವರ ಸ್ವರಕ್ಕೆ ಕಿವಿಗೊಡಲಿಲ್ಲ.”

1 2 3 4 5 6 7 8 9 10 11 12 13 14 15 16 17 18 19 20 21 22 23 24 25