ಯೆರೆಮಿಯ 17 : 1 (OCVKN)
“ಯೆಹೂದದ ಪಾಪವು ಕಬ್ಬಿಣದ ಲೇಖನಿಯಿಂದಲೂ, ವಜ್ರದ ಮೊನೆಯಿಂದಲೂ ಬರೆಯಲಾಗಿದೆ. ಅದು ಅವರ ಹೃದಯದ ಹಲಗೆಯ ಮೇಲೆಯೂ ಅವರ ಬಲಿಪೀಠಗಳ ಕೊಂಬುಗಳ ಮೇಲೆಯೂ ಕೆತ್ತಲಾಗಿದೆ.
ಯೆರೆಮಿಯ 17 : 2 (OCVKN)
ಅವರ ಮಕ್ಕಳು ಅವರ ಬಲಿಪೀಠಗಳನ್ನೂ ಹಸಿರಾದ ಗಿಡಗಳಲ್ಲಿಯೂ ಎತ್ತರವಾದ ಗುಡ್ಡಗಳ ಮೇಲೆಯೂ ಇರುವ ಅವರ ಅಶೇರ ಸ್ತಂಭಗಳನ್ನೂ ಜ್ಞಾಪಕ ಮಾಡಿಕೊಳ್ಳುತ್ತಾರಲ್ಲಾ.
ಯೆರೆಮಿಯ 17 : 3 (OCVKN)
ನಾಡಿನಲ್ಲಿರುವ ನನ್ನ ಪರ್ವತವೇ, ನಿನ್ನ ಎಲ್ಲಾ ಪ್ರಾಂತಗಳಲ್ಲಿ ಪಾಪಕ್ಕಾಗಿರುವ ನಿನ್ನ ಉನ್ನತ ಪೂಜಾಸ್ಥಳಗಳನ್ನೂ ನಾನು ಕೊಳ್ಳೆಗೆ ಒಪ್ಪಿಸುವೆನು.
ಯೆರೆಮಿಯ 17 : 4 (OCVKN)
ಆಗ ನಿನ್ನ ದೋಷದಿಂದಲೇ ನೀನು ನಾನು ನಿನಗೆ ಕೊಟ್ಟ ಸೊತ್ತನ್ನು ಬಿಟ್ಟು ಬಿಡುವೆ. ನಿನಗೆ ತಿಳಿಯದ ದೇಶದಲ್ಲಿ ನಿನ್ನನ್ನು ನಿನ್ನ ಶತ್ರುಗಳಿಗೆ ದಾಸರನ್ನಾಗಿ ಮಾಡುವೆನು. ಏಕೆಂದರೆ ನೀವು ನನ್ನ ರೋಷಾಗ್ನಿಯನ್ನು ಹತ್ತಿಸಿದ್ದೀರಿ. ಅದು ನಿತ್ಯವೂ ಪ್ರಜ್ವಲಿಸುತ್ತಿರುವುದು.”
ಯೆರೆಮಿಯ 17 : 5 (OCVKN)
ಯೆಹೋವ ದೇವರು ಹೀಗೆ ಹೇಳುತ್ತಾರೆ: “ಮಾನವನ ಸಾಮರ್ಥ್ಯಗಳನ್ನು ತನ್ನ ಆಧಾರವಾಗಿ ಮಾಡಿಕೊಂಡ ವ್ಯಕ್ತಿ ಶಾಪಗ್ರಸ್ತ, ಅವನು ಮನುಷ್ಯನ ಶಕ್ತಿಯ ಮೇಲೆ ಭರವಸೆ ಇಡುವನು. ಯೆಹೋವ ದೇವರ ಕಡೆಯಿಂದ ಯಾವನ ಹೃದಯವು ತೊಲಗುವುದೋ, ಅವನು ಶಾಪಗ್ರಸ್ತನು.
ಯೆರೆಮಿಯ 17 : 6 (OCVKN)
ಅವನು ಅಡವಿಯಲ್ಲಿರುವ ಜಾಲಿ ಗಿಡದ ಹಾಗಿರುವನು. ಒಳ್ಳೆಯದು ಬರುವಾಗ ನೋಡದೆ ಇರುವನು. ನಿವಾಸಿಗಳಿಲ್ಲದ ಚೌಳು ನೆಲವಾಗಿರುವ ಮರುಭೂಮಿಯ ನೀರಿಲ್ಲದ ಸ್ಥಳಗಳಲ್ಲಿ ವಾಸವಾಗಿರುವನು.
ಯೆರೆಮಿಯ 17 : 7 (OCVKN)
“ಯಾವನು ಯೆಹೋವ ದೇವರಲ್ಲಿ ನಂಬಿಕೆ ಇಟ್ಟಿರುವನೋ, ಯಾವನಿಗೆ ಯೆಹೋವ ದೇವರು ಭರವಸೆಯಾಗಿದ್ದಾನೋ, ಆ ಮನುಷ್ಯನು ಧನ್ಯನು.
ಯೆರೆಮಿಯ 17 : 8 (OCVKN)
ಏಕೆಂದರೆ ಅವನು ನೀರಿನ ಬಳಿಯಲ್ಲಿ ನೆಡಲಾದ, ಹೊಳೆಯ ಬಳಿಯಲ್ಲಿ ತನ್ನ ಬೇರುಗಳನ್ನು ಹರಡಿರುವ ಮರದ ಹಾಗಿರುವನು. ಬಿಸಿಲಿನ ಧಗೆಗೆ ಭಯಪಡದೆ, ಹಸುರೆಲೆಯನ್ನು ಚಿಗುರಿಸುತ್ತಾ. ಬರಗಾಲದ ವರ್ಷದಲ್ಲಿಯೂ ನಿಶ್ಚಿಂತೆಯಾಗಿ ಸದಾ ಫಲಕೊಡುತ್ತಾ ಇರುವ ಮರಕ್ಕೆ ಸಮಾನನಾಗಿರುವನು.”
ಯೆರೆಮಿಯ 17 : 9 (OCVKN)
ಹೃದಯವು ಎಲ್ಲಾದಕ್ಕಿಂತ ವಂಚನೆಯುಳ್ಳದ್ದಾಗಿಯೂ ಗುಣಪಡಿಸಲು ಅಸಾಧ್ಯವಾದದ್ದೂ ಆಗಿದೆ. ಅದನ್ನು ತಿಳಿಯುವವನ್ಯಾರು?
ಯೆರೆಮಿಯ 17 : 10 (OCVKN)
“ಯೆಹೋವ ದೇವರಾದ ನಾನೇ ಹೃದಯವನ್ನು ಪರೀಕ್ಷಿಸುತ್ತೇನೆ. ಅಂತರಿಂದ್ರಿಯಗಳನ್ನು ಶೋಧಿಸುತ್ತೇನೆ. ಒಬ್ಬೊಬ್ಬನಿಗೆ ಅವನವನ ಮಾರ್ಗಗಳ ಪ್ರಕಾರವೂ, ಅವನ ಕ್ರಿಯೆಗಳ ಫಲದ ಪ್ರಕಾರವೂ ಪ್ರತಿಫಲ ಕೊಡುತ್ತೇನೆ.”
ಯೆರೆಮಿಯ 17 : 11 (OCVKN)
ಕೌಜುಗವು ತನ್ನದಲ್ಲದ ಮರಿಗಳನ್ನು ಕೂಡಿಸಿಕೊಳ್ಳುವ ಹಾಗೆ, ಅನ್ಯಾಯವಾಗಿ ಐಶ್ವರ್ಯವನ್ನು ಸಂಪಾದಿಸುವವನು ಹಾಗೆಯೇ ಇದ್ದಾನೆ. ಅವನು ತನ್ನ ಮಧ್ಯಪ್ರಾಯದಲ್ಲಿ ಅದನ್ನು ಬಿಡುವನು. ತನ್ನ ಅಂತ್ಯದಲ್ಲಿ ಅವನು ಮೂರ್ಖನೆಂದು ಸಾಬೀತಾಗುತ್ತದೆ.
ಯೆರೆಮಿಯ 17 : 12 (OCVKN)
ಆದಿಯಿಂದ ಮಹಿಮೆಯುಳ್ಳ ಉನ್ನತ ಸಿಂಹಾಸನವು ನಮ್ಮ ಪರಿಶುದ್ಧ ಸ್ಥಳವಾಗಿದೆ.
ಯೆರೆಮಿಯ 17 : 13 (OCVKN)
ಇಸ್ರಾಯೇಲಿನ ನಿರೀಕ್ಷೆಯಾದ ಓ ಯೆಹೋವ ದೇವರೇ, ನಿಮ್ಮನ್ನು ತೊರೆದುಬಿಟ್ಟವರೆಲ್ಲರೂ ನಾಚಿಕೆಗೆ ಒಳಗಾಗುವರು, ಜೀವವುಳ್ಳ ನೀರಿನ ಬುಗ್ಗೆಯಾದ ಯೆಹೋವ ದೇವರಿಂದ ತೊಲಗಿ ಹೋದವರನ್ನು ಧೂಳಿನಲ್ಲಿ ಬರೆಯಲಾಗುತ್ತದೆ.
ಯೆರೆಮಿಯ 17 : 14 (OCVKN)
ಯೆಹೋವ ದೇವರೇ, ನನ್ನನ್ನು ಸ್ವಸ್ಥಮಾಡಿ, ಆಗ ಸ್ವಸ್ಥವಾಗುವೆನು. ನನ್ನನ್ನು ರಕ್ಷಿಸು, ಆಗ ರಕ್ಷಿತನಾಗುವೆನು. ಏಕೆಂದರೆ, ನೀವೇ ನನಗೆ ಸ್ತುತ್ಯರು.
ಯೆರೆಮಿಯ 17 : 15 (OCVKN)
ಇಗೋ, ಅವರು ನನಗೆ, “ಯೆಹೋವ ದೇವರ ವಾಕ್ಯವು ಎಲ್ಲಿ? ಅದು ಈಗ ನೆರವೇರಲಿ,” ಅನ್ನುತ್ತಾರೆ.
ಯೆರೆಮಿಯ 17 : 16 (OCVKN)
ನಾನಾದರೋ ಸಭಾಪಾಲನೆಯಲ್ಲಿ ನಿಮ್ಮನ್ನು ಹಿಂಬಾಲಿಸುವುದನ್ನು ಬಿಡುವುದಕ್ಕೆ ಆತುರಪಡಲಿಲ್ಲ; ವಿಪತ್ತಿನ ಅನಿವಾರ್ಯ ದಿನವನ್ನು ಅಪೇಕ್ಷಿಸಲಿಲ್ಲ; ನೀವೇ ಬಲ್ಲೆ; ನಿಮ್ಮ ಸಮಕ್ಷಮದಲ್ಲೇ ನನ್ನ ಬಾಯ ಮಾತು ಹೊರಟಿತು.
ಯೆರೆಮಿಯ 17 : 17 (OCVKN)
ನೀವು ನನ್ನನ್ನು ಭಯಪಡಿಸಬೇಡಿ. ಕೇಡಿನ ದಿನದಲ್ಲಿ ನೀವೇ ನನ್ನ ಆಶ್ರಯವಾಗಿದ್ದೀರಿ.
ಯೆರೆಮಿಯ 17 : 18 (OCVKN)
ನನ್ನನ್ನು ಹಿಂಸಿಸುವವರು ನಾಚಿಕೆಗೆ ಗುರಿಯಾಗಲಿ; ಆದರೆ ನನಗೆ ನಾಚಿಕೆಯಾಗದಿರಲಿ. ಅವರು ದಿಗಿಲು ಪಡಲಿ; ಆದರೆ ನಾನು ದಿಗಿಲು ಪಡದಿರಲಿ. ಆದರೆ ನಾನು ದಿಗಿಲು ಪಡದಂತೆ ಮಾಡುವ ಕೆಟ್ಟದಿನವನ್ನು ಅವರ ಮೇಲೆ ಬರಮಾಡಿ. ಎರಡರಷ್ಟಾದ ನಾಶದಿಂದ ಅವರನ್ನು ನಾಶಪಡಿಸಿ.
ಯೆರೆಮಿಯ 17 : 19 (OCVKN)
ಸಬ್ಬತ್ ದಿನವನ್ನು ಪರಿಶುದ್ಧವಾಗಿಡಬೇಕು ಯೆಹೋವ ದೇವರು ನನಗೆ, “ಹೋಗಿ, ಯೆಹೂದದ ಅರಸರು ಪ್ರವೇಶಿಸುವ, ಹೊರಡುವ ಜನರ ಬಾಗಿಲಲ್ಲಿಯೂ, ಯೆರೂಸಲೇಮಿನ ಎಲ್ಲಾ ಬಾಗಿಲುಗಳಲ್ಲಿಯೂ ನಿಂತುಕೊಂಡು,
ಯೆರೆಮಿಯ 17 : 20 (OCVKN)
ಅವರಿಗೆ ಹೀಗೆ ಹೇಳು: ‘ಯೆಹೂದದ ಅರಸರೇ, ಸಮಸ್ತ ಯೆಹೂದವೇ, ಈ ಬಾಗಿಲುಗಳಲ್ಲಿ ಪ್ರವೇಶಿಸುವ ಯೆರೂಸಲೇಮಿನ ಎಲ್ಲಾ ನಿವಾಸಿಗಳೇ, ಯೆಹೋವ ದೇವರ ವಾಕ್ಯವನ್ನು ಕೇಳಿರಿ.
ಯೆರೆಮಿಯ 17 : 21 (OCVKN)
ಯೆಹೋವ ದೇವರು ಹೀಗೆ ಹೇಳುತ್ತಾರೆ: ನಿಮಗೆ ನೀವೇ ಎಚ್ಚರಿಕೆಯಾಗಿರಿ. ಸಬ್ಬತ್ ದಿನದಲ್ಲಿ ಹೊರೆಯನ್ನು ಹೊತ್ತುಕೊಂಡು ಇಲ್ಲವೆ ಯೆರೂಸಲೇಮಿನ ಬಾಗಿಲುಗಳೊಳಗೆ ತೆಗೆದುಕೊಂಡು ಬರಬೇಡಿರಿ.
ಯೆರೆಮಿಯ 17 : 22 (OCVKN)
ಸಬ್ಬತ್ ದಿನದಲ್ಲಿ ಹೊರೆಯನ್ನು ನಿಮ್ಮ ಮನೆಗಳಿಂದ ತೆಗೆದುಕೊಂಡು ಹೋಗಬೇಡಿರಿ. ಯಾವ ಕೆಲಸವನ್ನೂ ಮಾಡಬೇಡಿರಿ. ನಾನು ನಿಮ್ಮ ಪಿತೃಗಳಿಗೆ ಆಜ್ಞಾಪಿಸಿದ ಪ್ರಕಾರವೇ, ಸಬ್ಬತ್ ದಿನವನ್ನು ಪರಿಶುದ್ಧವಾಗಿಡಬೇಕು.
ಯೆರೆಮಿಯ 17 : 23 (OCVKN)
ಆದರೆ ಅವರು ವಿಧೇಯರಾಗಲಿಲ್ಲ, ಕಿವಿಗೊಟ್ಟು ಕೇಳಲಿಲ್ಲ. ಆದರೆ ವಿಧೇಯರಾಗದ ಹಾಗೆಯೂ, ಉಪದೇಶ ಹೊಂದದ ಹಾಗೆಯೂ ಹಟಮಾರಿಯಾಗಿದ್ದರು.
ಯೆರೆಮಿಯ 17 : 24 (OCVKN)
ಯೆಹೋವ ದೇವರಾದ ನನ್ನ ನುಡಿ ಇದೇ: ನೀವು ನನ್ನನ್ನು ಜಾಗ್ರತೆಯಿಂದ ಕೇಳಿ, ಸಬ್ಬತ್ ದಿನದಲ್ಲಿ, ಈ ಪಟ್ಟಣದ ಬಾಗಿಲುಗಳಲ್ಲಿ ಹೊರೆಯನ್ನು ತೆಗೆದುಕೊಂಡು ಬಾರದೆ, ಸಬ್ಬತ್ ದಿನದಲ್ಲಿ ಯಾವುದೊಂದು ಕೆಲಸಮಾಡದೆ ಪರಿಶುದ್ಧಮಾಡಿದರೆ,
ಯೆರೆಮಿಯ 17 : 25 (OCVKN)
ದಾವೀದನ ಸಿಂಹಾಸನದ ಮೇಲೆ ಕೂರುವ ಅರಸರು ಮತ್ತು ಪ್ರಧಾನರು ರಥಗಳಲ್ಲಿಯೂ, ಕುದುರೆಗಳ ಮೇಲೆಯೂ ಸವಾರಿ ಮಾಡಿಕೊಂಡು, ಯೆಹೂದದ ಮನುಷ್ಯರಾಗಿಯೂ, ಯೆರೂಸಲೇಮಿನ ನಿವಾಸಿಗಳಾಗಿಯೂ ಇದ್ದು, ಅವರೂ, ಅವರ ಪ್ರಧಾನರೂ ಈ ಪಟ್ಟಣದ ಬಾಗಿಲುಗಳಲ್ಲಿ ಪ್ರವೇಶಿಸುವರು. ಈ ಪಟ್ಟಣದಲ್ಲಿ ಎಂದೆಂದಿಗೂ ವಾಸಮಾಡಿದರು.
ಯೆರೆಮಿಯ 17 : 26 (OCVKN)
ಇದಲ್ಲದೆ ಯೆಹೂದದ ಪಟ್ಟಣಗಳಿಂದಲೂ, ಯೆರೂಸಲೇಮಿನ ಸುತ್ತಲಿನ ಸ್ಥಳಗಳಿಂದಲೂ, ಬೆನ್ಯಾಮೀನನ ದೇಶದಿಂದಲೂ, ಬಯಲಿನಿಂದಲೂ, ಬೆಟ್ಟಗಳಿಂದಲೂ, ದಕ್ಷಿಣದಿಂದಲೂ ದಹನಬಲಿಗಳನ್ನೂ, ಬಲಿಗಳನ್ನೂ, ಧಾನ್ಯ ಸಮರ್ಪಣೆಗಳನ್ನೂ, ಧೂಪವನ್ನೂ ತರುವರು. ಸ್ತೋತ್ರದ ಅರ್ಪಣೆಗಳನ್ನು ಯೆಹೋವ ದೇವರ ಆಲಯಕ್ಕೆ ತರುವರು.
ಯೆರೆಮಿಯ 17 : 27 (OCVKN)
ಆದರೆ ನೀವು ಸಬ್ಬತ್* ಸಬ್ಬತ್ ಅಂದರೆ ವಿಶ್ರಾಂತಿ ದಿನ ದಿನವನ್ನು ಪರಿಶುದ್ಧಮಾಡದೆ, ಸಬ್ಬತ್ ದಿನದಲ್ಲಿ ಹೊರೆಯನ್ನು ಹೊತ್ತುಕೊಂಡು, ಯೆರೂಸಲೇಮಿನ ಬಾಗಿಲುಗಳಲ್ಲಿ ಪ್ರವೇಶಿಸಿದರೆ ಯೆರೂಸಲೇಮಿನ ದ್ವಾರಗಳಲ್ಲಿ ಬೆಂಕಿಯನ್ನು ಹಚ್ಚುವೆನು. ಅದು ಆರಿಹೋಗದೆ, ಯೆರೂಸಲೇಮಿನ ಕೋಟೆಗಳನ್ನು ದಹಿಸಿಬಿಡುವುದು.’ ”

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27