ಯೆಶಾಯ 55 : 1 (OCVKN)
ಬಾಯಾರಿದವರಿಗೆ ಆಹ್ವಾನ ಬಾಯಾರಿದ ಸಕಲ ಜನರೇ, ನೀರಿನ ಬಳಿಗೆ ಬನ್ನಿರಿ, ಹಣವಿಲ್ಲದವನೂ ಬರಲಿ. ಬನ್ನಿರಿ, ಕೊಂಡುಕೊಳ್ಳಿರಿ, ಉಣ್ಣಿರಿ. ಬನ್ನಿರಿ, ಹಣವಿಲ್ಲದೆ ಮತ್ತು ಕ್ರಯವಿಲ್ಲದೆ ದ್ರಾಕ್ಷಾರಸವನ್ನೂ ಹಾಲನ್ನೂ ಕೊಂಡುಕೊಳ್ಳಿರಿ.
ಯೆಶಾಯ 55 : 2 (OCVKN)
ಆಹಾರವಲ್ಲದಕ್ಕೆ ಹಣವನ್ನು ವ್ಯರ್ಥ ಮಾಡುವುದು ಏಕೆ? ತೃಪ್ತಿಪಡಿಸದವುಗಳಿಗೆ ನಿಮ್ಮ ದುಡಿತವನ್ನು ವೆಚ್ಚಮಾಡುವುದು ಏಕೆ? ಶ್ರದ್ಧೆಯಿಂದ ನನ್ನ ಕಡೆಗೆ ಕಿವಿಗೊಡಿರಿ ಮತ್ತು ಒಳ್ಳೆಯದನ್ನು ನೀವು ಉಣ್ಣಿರಿ. ನೀವು ಮೃಷ್ಟಾನ್ನದಲ್ಲಿ ಆನಂದಿಸಿ!
ಯೆಶಾಯ 55 : 3 (OCVKN)
ಕಿವಿಯನ್ನು ಇತ್ತ ತಿರುಗಿಸಿರಿ, ನನ್ನ ಬಳಿಗೆ ಬನ್ನಿರಿ, ಆಲಿಸಿದರೆ ಬದುಕಿ ಬಾಳುವಿರಿ. ದಾವೀದನಿಗೆ ಖಂಡಿತವಾಗಿ ವಾಗ್ದಾನ ಮಾಡಿದ ಕೃಪಾವರಗಳನ್ನು ನಿಮಗೆ ಕೊಡುತ್ತೇನೆಂಬ ಶಾಶ್ವತವಾದ ಒಡಂಬಡಿಕೆಯನ್ನು ನಿಮ್ಮೊಂದಿಗೆ ಮಾಡಿಕೊಳ್ಳುವೆನು.
ಯೆಶಾಯ 55 : 4 (OCVKN)
ನಾನು ಅವನನ್ನು ಜನರಿಗೆ ಸಾಕ್ಷಿಯನ್ನಾಗಿಯೂ, ಜನರಿಗೆ ನಾಯಕನನ್ನಾಗಿಯೂ, ಅಧಿಪತಿಯನ್ನಾಗಿಯೂ ಕೊಟ್ಟೆನು.
ಯೆಶಾಯ 55 : 5 (OCVKN)
ನಿನ್ನ ದೇವರಾದ ಯೆಹೋವ ದೇವರ ನಿಮಿತ್ತವೂ, ಇಸ್ರಾಯೇಲಿನ ಪರಿಶುದ್ಧನ ನಿಮಿತ್ತವೂ ನೀನು ತಿಳಿಯದ ಜನಾಂಗಗಳನ್ನು ಕರೆಯುವೆ, ಏಕೆಂದರೆ ಆತನು ನಿನಗೆ ಕೊಟ್ಟ ವೈಭವದಿಂದ ನಿನ್ನನ್ನು ತಿಳಿಯದ ಜನಾಂಗಗಳು ನಿನ್ನ ಬಳಿಗೆ ಓಡಿ ಬರುವುವು.
ಯೆಶಾಯ 55 : 6 (OCVKN)
ಯೆಹೋವ ದೇವರು ಸಿಕ್ಕುವ ಕಾಲದಲ್ಲಿ ಆತನನ್ನು ಹುಡುಕಿರಿ, ಆತನು ಸಮೀಪದಲ್ಲಿರುವಾಗ, ಆತನಿಗೆ ಬಿನ್ನಹ ಮಾಡಿರಿ.
ಯೆಶಾಯ 55 : 7 (OCVKN)
ದುಷ್ಟನು ತನ್ನ ದುರ್ಮಾರ್ಗವನ್ನೂ, ಅನೀತಿವಂತನು ತನ್ನ ಆಲೋಚನೆಗಳನ್ನೂ ತೊರೆದುಬಿಟ್ಟು, ಯೆಹೋವ ದೇವರ ಕಡೆಗೆ ಹಿಂದಿರುಗಲಿ. ಅವರು ಅವರ ಮೇಲೆ ಕರುಣೆ ಇಡುವರು. ನಮ್ಮ ದೇವರ ಬಳಿಗೂ ಹಿಂದಿರುಗಲಿ. ಏಕೆಂದರೆ ಅವರು ಹೇರಳವಾಗಿ ಕ್ಷಮಿಸುವರು.
ಯೆಶಾಯ 55 : 8 (OCVKN)
ನನ್ನ ಆಲೋಚನೆಗಳು ನಿಮ್ಮ ಆಲೋಚನೆಗಳಲ್ಲ. ನಿಮ್ಮ ಮಾರ್ಗಗಳು ನನ್ನ ಮಾರ್ಗಗಳಲ್ಲ, ಎಂದು ಯೆಹೋವ ದೇವರು ಹೇಳುತ್ತಾರೆ.
ಯೆಶಾಯ 55 : 9 (OCVKN)
ಆಕಾಶವು ಭೂಮಿಯ ಮೇಲೆ ಎಷ್ಟು ಉನ್ನತವೋ, ನನ್ನ ಮಾರ್ಗಗಳು ನಿಮ್ಮ ಮಾರ್ಗಗಳಿಗಿಂತಲೂ, ನನ್ನ ಆಲೋಚನೆಗಳು ನಿಮ್ಮ ಆಲೋಚನೆಗಳಿಗಿಂತಲೂ ಅಷ್ಟು ಉನ್ನತವಾಗಿವೆ.
ಯೆಶಾಯ 55 : 10 (OCVKN)
ಮಳೆಯೂ, ಹಿಮವೂ ಆಕಾಶದಿಂದ ಬಿದ್ದು, ಭೂಮಿಯನ್ನು ತೋಯಿಸಿ, ಹಸಿರುಗೊಳಿಸಿ, ಫಲಿಸುವಂತೆ ಮಾಡಿ, ಬಿತ್ತುವವನಿಗೆ ಬೀಜವನ್ನು, ಉಣ್ಣುವವನಿಗೆ ಆಹಾರವನ್ನು ಒದಗಿಸದ ಹೊರತು ಹೇಗೆ ಆಕಾಶಕ್ಕೆ ಸುಮ್ಮನೆ ಹಿಂದಿರುಗುವುದಿಲ್ಲವೋ, ಹಾಗೆಯೇ
ಯೆಶಾಯ 55 : 11 (OCVKN)
ನನ್ನ ಬಾಯಿಂದ ಹೊರಟ ಮಾತು ನನ್ನ ಇಷ್ಟಾರ್ಥವನ್ನು ನೆರವೇರಿಸಿ, ನಾನು ಉದ್ದೇಶಿಸಿದ್ದನ್ನು ಕೈಗೂಡಿಸದ ಹೊರತು ನನ್ನ ಕಡೆಗೆ ವ್ಯರ್ಥವಾಗಿ ಹಿಂದಿರುಗುವುದಿಲ್ಲ.
ಯೆಶಾಯ 55 : 12 (OCVKN)
ಏಕೆಂದರೆ ನೀವು ಆನಂದದೊಡನೆ ಹೋಗುವಿರಿ, ಸಮಾಧಾನದಿಂದ ಬರುವಿರಿ. ಪರ್ವತಗಳು ಮತ್ತು ಗುಡ್ಡಗಳು ನಿಮ್ಮ ಮುಂದೆ ಹರ್ಷಧ್ವನಿಗೈಯುವವು. ಹೊಲದ ಮರಗಳೆಲ್ಲಾ ಚಪ್ಪಾಳೆ ಹೊಡೆಯುವುವು.
ಯೆಶಾಯ 55 : 13 (OCVKN)
ಮುಳ್ಳಿಗೆ ಬದಲಾಗಿ ತುರಾಯಿ ಮರವು ಮತ್ತು ದತ್ತೂರಿಗೆ ಬದಲಾಗಿ ಸುವಾಸನೆ ಬೀರುವ ಮರವು ಹುಟ್ಟುವುವು. ಇದು ಯೆಹೋವ ದೇವರ ಹೆಸರಿಗಾಗಿ ಮತ್ತು ಶಾಶ್ವತವಾದ ಗುರುತಾಗಿ ಎಂದಿಗೂ ಅಳಿಯದಿರುವುದು.

1 2 3 4 5 6 7 8 9 10 11 12 13