ಯೆಶಾಯ 54 : 1 (OCVKN)
ಚೀಯೋನಿನ ಮುಂದಿನ ವೈಭವ “ಬಂಜೆಯೇ ಹೆರದವಳೇ, ನೀನು ಹರ್ಷಧ್ವನಿಗೈ! ಪ್ರಸವವೇದನೆ ಪಡದವಳೇ, ಸ್ವರವೆತ್ತಿ ಹರ್ಷದಿಂದ ಕೂಗು! ಏಕೆಂದರೆ ಗಂಡನುಳ್ಳವಳಿಗಿಂತ ಗಂಡ ಬಿಟ್ಟವಳಿಗೆ ಮಕ್ಕಳು ಹೆಚ್ಚು,” ಎಂದು ಯೆಹೋವ ದೇವರು ಹೇಳುತ್ತಾರೆ.
ಯೆಶಾಯ 54 : 2 (OCVKN)
“ನಿನ್ನ ಗುಡಾರದ ಸ್ಥಳವನ್ನು ವಿಸ್ತರಿಸು ಮತ್ತು ನಿವಾಸದ ಪರದೆಗಳು ಹರಡಲಿ. ಹಿಂದೆಗೆಯಬೇಡ; ನಿನ್ನ ಗುಡಾರದ ಹಗ್ಗಗಳನ್ನು ಉದ್ದಮಾಡಿ, ಅದರ ಗೂಟಗಳನ್ನು ಬಲಪಡಿಸು.
ಯೆಶಾಯ 54 : 3 (OCVKN)
ನೀನು ಬಲಗಡೆಗೂ, ಎಡಗಡೆಗೂ ಹಬ್ಬಿಕೊಳ್ಳುವೆ. ನಿನ್ನ ಸಂತಾನವು ಜನಾಂಗಗಳನ್ನು ವಶಪಡಿಸಿಕೊಂಡು, ಹಾಳಾದ ಪಟ್ಟಣಗಳನ್ನು ನಿವಾಸವಾಗ ಮಾಡುವುದು.
ಯೆಶಾಯ 54 : 4 (OCVKN)
“ಹೆದರಬೇಡ, ಏಕೆಂದರೆ ನಿನಗೆ ನಾಚಿಕೆಯಾಗುವುದಿಲ್ಲ. ಗಾಬರಿಪಡಬೇಡ, ನಿನ್ನ ಯೌವನದ ಲಜ್ಜೆಯನ್ನು ಮರೆತುಬಿಡುವೆ. ನಿನ್ನ ವೈಧವ್ಯದಲ್ಲಿ ನಿನಗಾದ ನಿಂದೆಯನ್ನು ಎಂದಿಗೂ ನಿನ್ನ ಜ್ಞಾಪಕಕ್ಕೆ ತರುವುದಿಲ್ಲ.
ಯೆಶಾಯ 54 : 5 (OCVKN)
ನಿನ್ನನ್ನು ಉಂಟುಮಾಡಿದವನೇ ನಿನ್ನ ಪತಿ. ಸೇನಾಧೀಶ್ವರ ಯೆಹೋವ ದೇವರು ಎಂಬುದು ಆತನ ಹೆಸರು. ನಿನ್ನ ವಿಮೋಚಕನು ಇಸ್ರಾಯೇಲಿನ ಪರಿಶುದ್ಧನೇ. ಸಮಸ್ತ ಭೂಮಿಯ ದೇವರು ಎಂದು ಆತನನ್ನು ಕರೆಯಲಾಗುತ್ತದೆ.
ಯೆಶಾಯ 54 : 6 (OCVKN)
ನೀನು ತ್ಯಜಿಸಿದ ಮನನೊಂದಿರುವ ಯೌವನದ ಪತ್ನಿಯ ಹಾಗೆ ತಿರಸ್ಕಾರಹೊಂದಿರುವೆ. ಯೆಹೋವ ದೇವರು ನಿನ್ನನ್ನು ಕರೆದಿದ್ದಾನೆ, ಎಂದು ನಿನ್ನ ದೇವರು ಹೇಳುತ್ತಾರೆ.
ಯೆಶಾಯ 54 : 7 (OCVKN)
ಕ್ಷಣಮಾತ್ರಕ್ಕೆ ನಿನ್ನನ್ನು ನಾನು ಬಿಟ್ಟಿದ್ದೇನೆ. ಆದರೆ ಮಹಾ ಕೃಪೆಗಳೊಂದಿಗೆ ನಿನ್ನನ್ನು ನಾನು ಕೂಡಿಸುವೆನು.
ಯೆಶಾಯ 54 : 8 (OCVKN)
ನನಗೆ ಬೇಸರವಾದಾಗ ನನ್ನ ಮುಖವನ್ನು ನಿನಗೆ ಕ್ಷಣಮಾತ್ರವೇ ಮರೆಮಾಡಿಕೊಂಡೆನು. ಆದರೆ ಶಾಶ್ವತವಾದ ದಯೆಯಿಂದ ನಿನ್ನ ಮೇಲೆ ಕರುಣೆಯನ್ನು ಇಟ್ಟಿದ್ದೇನೆ, ಎಂದು ನಿನ್ನ ವಿಮೋಚಕನಾದ ಯೆಹೋವ ದೇವರು ಹೇಳುತ್ತಾರೆ.
ಯೆಶಾಯ 54 : 9 (OCVKN)
“ಇದು ನನಗೆ ನೋಹನ ಕಾಲದ ಪ್ರಳಯದಂತಿದೆ. ನೋಹನ ಕಾಲದ ಪ್ರಳಯವು ಪುನಃ ಭೂಮಿಯನ್ನು ಆವರಿಸುವುದಿಲ್ಲ ಎಂದು ನಾನು ಪ್ರಮಾಣ ಮಾಡಿದ ಹಾಗೆಯೇ, ಇನ್ನು ನಿನ್ನ ಮೇಲೆ ಕೋಪಗೊಳ್ಳುವುದಿಲ್ಲ, ನಿನ್ನನ್ನು ಗದರಿಸುವುದಿಲ್ಲ, ಎಂದು ಪ್ರಮಾಣ ಮಾಡಿದ್ದೇನೆ.
ಯೆಶಾಯ 54 : 10 (OCVKN)
ಪರ್ವತಗಳು ಸ್ಥಳವನ್ನು ಬಿಟ್ಟು ಹೋದರೂ, ಬೆಟ್ಟಗಳು ಕದಲಿ ಹೋದರೂ, ನನ್ನ ಕುಂದದ ಪ್ರೀತಿಯು ನಿನ್ನನ್ನು ಬಿಟ್ಟು ಹೋಗದು, ನನ್ನ ಸಮಾಧಾನದ ಒಡಂಬಡಿಕೆಯು ನಿನ್ನನ್ನು ಬಿಟ್ಟು ಕದಲದು,” ಎಂದು ನಿನ್ನನ್ನು ಕರುಣಿಸುವ ಯೆಹೋವ ದೇವರು ಹೇಳುತ್ತಾರೆ.
ಯೆಶಾಯ 54 : 11 (OCVKN)
ಸಂಕಟಕ್ಕೊಳಗಾದವಳೇ! ಬಿರುಗಾಳಿಯಿಂದ ಬಡಿಯಲಾಗಿ ಆದರಣೆ ಹೊಂದದವಳೇ, ನಾನು ನಿನ್ನ ಕಲ್ಲುಗಳನ್ನು ಸುಂದರವಾದ ಬಣ್ಣಗಳೊಂದಿಗೆ ಇಟ್ಟು, ನಿನ್ನ ಅಸ್ತಿವಾರವನ್ನು ನೀಲಮಣಿಗಳಿಂದ ಹಾಕಿ ಗಾರೆಯಿಂದ ಕಟ್ಟುವೆನು.
ಯೆಶಾಯ 54 : 12 (OCVKN)
ನಿನ್ನ ಕಿಟಕಿಗಳನ್ನು ಮಾಣಿಕ್ಯಗಳಿಂದ, ನಿನ್ನ ಬಾಗಿಲುಗಳನ್ನು ಪದ್ಮರಾಗಗಳಿಂದ ಮತ್ತು ನಿನ್ನ ಮೇರೆಗಳನ್ನು ಮನೋಹರವಾದ ರತ್ನಗಳಿಂದ ನಾನು ಮಾಡುವೆನು.
ಯೆಶಾಯ 54 : 13 (OCVKN)
ನಿನ್ನ ಮಕ್ಕಳೆಲ್ಲಾ ಯೆಹೋವ ದೇವರಿಂದಲೇ ಬೋಧನೆ ಪಡೆಯುವರು. ನಿನ್ನ ಮಕ್ಕಳ ಸಮಾಧಾನವು ಅಧಿಕವಾಗಿರುವುದು.
ಯೆಶಾಯ 54 : 14 (OCVKN)
ನೀನು ನೀತಿಯಲ್ಲಿ ನೆಲೆಗೊಂಡಿರುವೆ. ಬಾಧೆಯಿಂದ ದೂರವಾಗಿರುವೆ. ನೀನು ಭೀತಿಯಿಂದ ಭಯಪಡುವುದಿಲ್ಲ, ಏಕೆಂದರೆ ಅದು ನಿನ್ನ ಸಮೀಪಕ್ಕೆ ಬಾರದು.
ಯೆಶಾಯ 54 : 15 (OCVKN)
ನೋಡು, ಯಾರಾದರೂ ನಿನ್ನ ಸಂಗಡ ವ್ಯಾಜ್ಯವಾಡಿದರೆ, ಅದು ನನ್ನ ಅಪ್ಪಣೆಯಿಂದ ಅಲ್ಲ; ಯಾರು ನಿನ್ನ ಮೇಲೆ ದಾಳಿಮಾಡುತ್ತಾರೋ, ಅವರು ನಿನಗೆ ಅಧೀನವಾಗುವರು.
ಯೆಶಾಯ 54 : 16 (OCVKN)
“ಬೆಂಕಿಯಲ್ಲಿ ಕೆಂಡವನ್ನು ಊದುತ್ತಾ, ತನ್ನ ಕೆಲಸಕ್ಕೆ ಆಯುಧಗಳನ್ನು ತರುವ ಕಮ್ಮಾರನನ್ನು ಸೃಷ್ಟಿಸಿದವನು ನಾನೇ. ನಾಶಮಾಡುವ ಕೆಡುಕನನ್ನು ಸೃಷ್ಟಿಸಿದವನೂ ನಾನೇ.
ಯೆಶಾಯ 54 : 17 (OCVKN)
ನಿನಗೆ ವಿರೋಧವಾಗಿ ನಿರ್ಮಿಸಿದ ಆಯುಧಗಳು ಸಫಲವಾಗುವುದಿಲ್ಲ. ನಿನಗೆ ವಿರೋಧವಾಗಿ ನಿಂತುಕೊಳ್ಳುವ ಪ್ರತಿಯೊಂದು ನಾಲಿಗೆಯನ್ನು ನ್ಯಾಯತೀರ್ಪಿನಲ್ಲಿ ನೀನು ಖಂಡಿಸುವೆ. ಇದೇ ಯೆಹೋವ ದೇವರ ಸೇವಕರ ಬಾಧ್ಯತೆಯು, ಇದು ನನ್ನಿಂದ ಅವರಿಗೆ ದೊರೆಯುವ ಸಮರ್ಥನೆ,” ಎಂದು ಯೆಹೋವ ದೇವರು ಹೇಳುತ್ತಾರೆ.

1 2 3 4 5 6 7 8 9 10 11 12 13 14 15 16 17