ಯೆಶಾಯ 47 : 1 (OCVKN)
ಬಾಬಿಲೋನಿನ ಪತನ ಬಾಬಿಲೋನಿನ ಪುತ್ರಿಯಾದ ಕನ್ನಿಕೆಯೇ, ಕೆಳಕ್ಕೆ ಇಳಿದುಬಂದು, ಧೂಳಿನಲ್ಲಿ ಕುಳಿತುಕೋ! ಕಸ್ದೀಯರ ಪುತ್ರಿಯೇ, ಸಿಂಹಾಸನರಹಿತಳಾಗಿ ನೆಲದ ಮೇಲೆ ಕುಳಿತುಕೋ. ಏಕೆಂದರೆ ಇನ್ನು ಮೇಲೆ ನಿನ್ನನ್ನು ಕೋಮಲೆ ಮತ್ತು ನಾಜೂಕಾದವಳು ಎಂದು ಕರೆಯುವುದಿಲ್ಲ.
ಯೆಶಾಯ 47 : 2 (OCVKN)
ಬೀಸುವ ಕಲ್ಲನ್ನು ಹಿಡಿದು, ಹಿಟ್ಟನ್ನು ಬೀಸು. ಮುಸುಕನ್ನು ತೆಗೆದುಹಾಕಿ, ನಿನ್ನ ಕಾಲನ್ನು ಬರಿದುಮಾಡಿ, ತೊಡೆಯನ್ನು ಮುಚ್ಚದೆ, ನದಿಗಳನ್ನು ಹಾದುಹೋಗು.
ಯೆಶಾಯ 47 : 3 (OCVKN)
ನಿನ್ನ ಬೆತ್ತಲೆತನವು ಮರೆಮಾಡದೇ ಇದ್ದುದರಿಂದ ನೀನು ನಾಚಿಕೆಗೆ ಈಡಾಗುವೆ. ನಾನು ಯಾರನ್ನೂ ಕರುಣಿಸದೆ ಮುಯ್ಯಿತೀರಿಸುವೆನು.
ಯೆಶಾಯ 47 : 4 (OCVKN)
ನಮ್ಮ ವಿಮೋಚಕರಿಗೆ ಸೇನಾಧೀಶ್ವರರಾದ ಯೆಹೋವ ದೇವರು ಎಂಬುದೇ ಅವರ ಹೆಸರು. ಅವರೇ ಇಸ್ರಾಯೇಲಿನ ಪರಿಶುದ್ಧರು.
ಯೆಶಾಯ 47 : 5 (OCVKN)
ಕಸ್ದೀಯರ ಪುತ್ರಿಯೇ, “ಮೌನವಾಗಿ ಕುಳಿತುಕೋ, ಕತ್ತಲೆಯೊಳಗೆ ಹೋಗು. ಏಕೆಂದರೆ ಇನ್ನು ಮೇಲೆ ನಿನ್ನನ್ನು ರಾಜ್ಯಗಳ ರಾಣಿ ಎಂದು ಕರೆಯುವುದಿಲ್ಲ.
ಯೆಶಾಯ 47 : 6 (OCVKN)
ನಾನು ನಿನ್ನ ಜನರ ಮೇಲೆ ರೋಷಗೊಂಡು, ನನ್ನ ಸೊತ್ತನ್ನು ಅಪವಿತ್ರ ಮಾಡಿ, ನಿನ್ನ ಕೈಯಲ್ಲಿ ಅವರನ್ನು ಒಪ್ಪಿಸಿಬಿಟ್ಟೆನು. ನೀನು ಅವರಿಗೆ ಕರುಣೆಯನ್ನು ತೋರಿಸದೆ, ವೃದ್ಧರ ಮೇಲೆಯೂ, ಬಹು ಭಾರವಾದ ನೊಗವನ್ನು ಹೊರಿಸಿದೆ.
ಯೆಶಾಯ 47 : 7 (OCVKN)
‘ನಾನು ಶಾಶ್ವತವಾದ ರಾಣಿ’ ಎಂದು ನೀನು ಅಂದುಕೊಂಡದ್ದರಿಂದ ಈ ಸಂಗತಿಗಳನ್ನು ನಿನ್ನ ಹೃದಯದಲ್ಲಿ ಇಟ್ಟುಕೊಳ್ಳಲಿಲ್ಲ. ಅವರ ಅಂತ್ಯವನ್ನೂ ನೆನಸಿಕೊಳ್ಳಲಿಲ್ಲ.
ಯೆಶಾಯ 47 : 8 (OCVKN)
“ನಾನೇ ಇರುವವಳು, ನನ್ನ ಹೊರತು ಇನ್ನು ಯಾರೂ ಇಲ್ಲ. ‘ನಾನು ವಿಧವೆಯಾಗಿ ಕೂತುಕೊಳ್ಳುವುದಿಲ್ಲ. ಪುತ್ರ ಶೋಕವನ್ನು ಅನುಭವಿಸುವುದಿಲ್ಲ,’ ಎನ್ನುವವಳೇ, ಭೋಗಾಸಕ್ತಳೇ, ನೆಮ್ಮದಿಯಾಗಿ ನೆಲೆಗೊಂಡಿರುವವಳೇ, ಈಗ ಇದನ್ನು ಕೇಳು.
ಯೆಶಾಯ 47 : 9 (OCVKN)
ಒಂದೇ ದಿನದೊಳಗೆ, ಒಂದು ಕ್ಷಣದಲ್ಲೇ, ಪುತ್ರ ಶೋಕ ಮತ್ತು ವಿಧವೆಯ ಸ್ಥಿತಿಯು ಇವೆರಡೂ ನಿನಗೆ ಬರುವುದು. ನಿನ್ನ ಮಂತ್ರಗಳು ಬಹಳವಾಗಿರುವುದರಿಂದಲೂ, ನಿನ್ನ ಮಾಟಗಳು ಹೆಚ್ಚಾಗಿರುವುದರಿಂದಲೂ, ಅವು ಸಂಪೂರ್ಣವಾಗಿ ನಿನ್ನ ಮೇಲೆ ಬರುವುವು.
ಯೆಶಾಯ 47 : 10 (OCVKN)
ಏಕೆಂದರೆ ನೀನು ನಿನ್ನ ಕೆಟ್ಟತನದಲ್ಲಿ ನಂಬಿಕೆ ಇಟ್ಟು, ‘ನನ್ನನ್ನು ಯಾರೂ ನೋಡುವುದಿಲ್ಲ’ ಎಂದು ಹೇಳಿದೆ. ನಿನ್ನ ಜ್ಞಾನ, ನಿನ್ನ ತಿಳುವಳಿಕೆ ನಿನ್ನನ್ನು ದಾರಿ ತಪ್ಪಿಸಿದ್ದರಿಂದ, ನಿನ್ನ ಹೃದಯದಲ್ಲಿ: ‘ಈಗ ಇರುವವಳು ನಾನೇ. ನನ್ನ ಹೊರತು ಇನ್ನು ಯಾರೂ ಇಲ್ಲ,’ ಎಂದುಕೊಂಡೆ.
ಯೆಶಾಯ 47 : 11 (OCVKN)
ಆದ್ದರಿಂದ ನಿನ್ನ ಮಂತ್ರಕ್ಕೂ ಮೀರಿದ ಕೇಡು ನಿನ್ನ ಮೇಲೆ ಬರುವುದು. ನೀನು ಪರಿಹರಿಸಲಾಗದ ವಿಪತ್ತು ನಿನ್ನ ಮೇಲೆ ಬೀಳುವುದು. ನಿನಗೆ ತಿಳಿಯದ ನಾಶನವು ಫಕ್ಕನೆ ನಿನ್ನ ಮೇಲೆ ಬರುವುದು.”
ಯೆಶಾಯ 47 : 12 (OCVKN)
ನಿನ್ನ ಮಾಟಗಳ ಸಂಗಡ ನಿಂತುಕೋ. ನಿನ್ನ ಬಾಲ್ಯಾರಭ್ಯ ಬೇಸತ್ತು, ಅಭ್ಯಾಸಿಸಿರುವ ನಿನ್ನ ಮಂತ್ರ ತಂತ್ರಗಳನ್ನೂ, ನಿನ್ನ ಮಾಟಗಳನ್ನೂ ಲೆಕ್ಕವಿಲ್ಲದೆ ಪ್ರಯೋಗಿಸು. ಇದರಿಂದ ಒಂದು ವೇಳೆ ನಿನಗೆ ಲಾಭವಾದೀತು. ಒಂದು ವೇಳೆ ಭಯ ಉಂಟಾದೀತು.
ಯೆಶಾಯ 47 : 13 (OCVKN)
ನೀನು ನಿನ್ನ ಬಹಳವಾದ ಆಲೋಚನೆಗಳಿಂದ ಆಯಾಸಗೊಂಡಿದ್ದೀ. ಖಗೋಳಜ್ಞರು, ಜೋಯಿಸರು, ಪಂಚಾಂಗದವರು, ಇವರೆಲ್ಲರೂ ನಿಂತುಕೊಂಡು ನಿನಗೆ ಬರುವ ವಿಪತ್ತುಗಳಿಂದ ನಿನ್ನನ್ನು ರಕ್ಷಿಸಲಿ.
ಯೆಶಾಯ 47 : 14 (OCVKN)
ಇಗೋ, ಅವರೆಲ್ಲಾ ಕೂಳೆಯಂತಿರುವರು, ಬೆಂಕಿಯು ಅವರನ್ನು ಸುಟ್ಟುಬಿಡುವುದು. ಜ್ವಾಲೆಯ ರಭಸದಿಂದ ತಮ್ಮನ್ನು ರಕ್ಷಿಸಿಕೊಳ್ಳಲಾರರು ಇಲ್ಲವೆ ಕಾಯಿಸಿಕೊಳ್ಳುವುದಕ್ಕೆ ಕೆಂಡವಿರುವುದಿಲ್ಲ. ಹತ್ತಿರ ಕೂತುಕೊಳ್ಳಲು ಬೆಂಕಿಯೂ ಇಲ್ಲ.
ಯೆಶಾಯ 47 : 15 (OCVKN)
ನೀನು ಪ್ರಯಾಸಪಟ್ಟವುಗಳೆಲ್ಲಾ ನಿನಗೆ ಹೀಗಾಗುವುವು. ನಿನ್ನ ಬಾಲ್ಯ ಪ್ರಾಯದಿಂದ ನಿನ್ನ ವರ್ತಕರು ಚದರಿ, ತಮ್ಮ ತಮ್ಮ ಪ್ರಾಂತಕ್ಕೆ ಹೋಗಿ ಬಿಡುವರು. ನಿನ್ನನ್ನು ರಕ್ಷಿಸಲು ಒಬ್ಬನೂ ಇರನು.
❮
❯
1
2
3
4
5
6
7
8
9
10
11
12
13
14
15