ಯೆಶಾಯ 44 : 1 (OCVKN)
ಆರಿಸಿಕೊಂಡ ಇಸ್ರಾಯೇಲು “ಈಗಲಾದರೋ ನನ್ನ ಸೇವಕನಾದ ಯಾಕೋಬೇ ಮತ್ತು ನಾನು ಆರಿಸಿಕೊಂಡ ಇಸ್ರಾಯೇಲೇ, ಕೇಳು:
ಯೆಶಾಯ 44 : 2 (OCVKN)
ನಿನ್ನ ನಿರ್ಮಾಣ ಮಾಡಿ, ಗರ್ಭದಿಂದಲೂ ರೂಪಿಸುತ್ತಾ ಬಂದು, ನಿನಗೆ ಸಹಾಯ ಮಾಡುವವರಾದ ಯೆಹೋವ ದೇವರು ಹೇಳುವುದೇನೆಂದರೆ: ನನ್ನ ಸೇವಕನಾದ ಯಾಕೋಬೇ, ನಾನು ಆಯ್ದುಕೊಂಡ ಯೆಶುರೂನೇ, ಭಯಪಡಬೇಡ.
ಯೆಶಾಯ 44 : 3 (OCVKN)
ಏಕೆಂದರೆ ನಾನು ಬಾಯಾರಿದ ಭೂಮಿಯ ಮೇಲೆ ನೀರನ್ನು ಸುರಿಸುವೆನು. ಒಣನೆಲದ ಮೇಲೆ ಪ್ರವಾಹಗಳನ್ನು ಬರಮಾಡುವೆನು. ನಿನ್ನ ಸಂತಾನದವರಲ್ಲಿ ನನ್ನ ಆತ್ಮವನ್ನೂ, ನಿನ್ನಿಂದ ಹುಟ್ಟುವಂಥದ್ದರ ಮೇಲೆ ನನ್ನ ಆಶೀರ್ವಾದವನ್ನೂ ಸುರಿಸುವೆನು.
ಯೆಶಾಯ 44 : 4 (OCVKN)
ನೀರಿನ ಕಾಲುವೆಗಳ ಬಳಿಯಲ್ಲಿ, ಹಸಿರು ಹುಲ್ಲಿನ ನಡುವೆ ಬೆಳೆಯುವ ನೀರವಂಜಿಗಳಂತೆ ವೃದ್ಧಿಯಾಗುವರು.
ಯೆಶಾಯ 44 : 5 (OCVKN)
ಒಬ್ಬನು, ‘ನಾನು ಯೆಹೋವನವನು,’ ಅನ್ನುವನು, ಇನ್ನೊಬ್ಬನು ನಾನು, ‘ಯಾಕೋಬನ ಹೆಸರಿನವನು,’ ಎಂದು ಹೇಳಿಕೊಳ್ಳುವನು. ಮತ್ತೊಬ್ಬನು ತನ್ನ ಕೈಯ ಮೇಲೆ, ‘ಯೆಹೋವ ದೇವರಿಗೆ ಸ್ವಂತ,’ ಎಂದು ಬರೆಯಿಸಿಕೊಂಡು, ತನ್ನಷ್ಟಕ್ಕೆ ತಾನೇ ಇಸ್ರಾಯೇಲಿನ ಅಡ್ಡಹೆಸರನ್ನು ಇಟ್ಟುಕೊಳ್ಳುವನು.
ಯೆಶಾಯ 44 : 6 (OCVKN)
ವಿಗ್ರಹಗಳಲ್ಲ ಆದರೆ ಯೆಹೋವ ದೇವರೇ “ಇಸ್ರಾಯೇಲಿನ ಅರಸನೂ ವಿಮೋಚಕನೂ, ಸೇನಾಧೀಶ್ವರ ಯೆಹೋವ ದೇವರು ಇಂತೆನ್ನುತ್ತಾರೆ: ನಾನೇ ಮೊದಲನೆಯವನು, ನಾನೇ ಕಡೆಯವನು. ನನ್ನ ಹೊರತು ಬೇರೆ ಯಾವ ದೇವರೂ ಇಲ್ಲ.
ಯೆಶಾಯ 44 : 7 (OCVKN)
ನಾನು ಪುರಾತನ ಕಾಲದವರನ್ನು ಸೃಷ್ಟಿಸಿದಂದಿನಿಂದ ನನ್ನ ಹಾಗೆ ಕರೆದು, ತಿಳಿಸಿ, ಅದನ್ನು ಸರಿಯಾಗಿ ನನಗೋಸ್ಕರ ಸಿದ್ಧಮಾಡಿದವನು ಯಾರು? ಮುಂದೆ ಬರಬೇಕಾದದ್ದನ್ನು ಅವರು ನನಗೆ ತಿಳಿಸಲಿ.
ಯೆಶಾಯ 44 : 8 (OCVKN)
ಹೆದರಬೇಡ, ಇಲ್ಲವೆ ಭಯಪಡಬೇಡ! ನಾನು ಪೂರ್ವದಿಂದಲೂ ನಿಮಗೆ ಹೇಳಲಿಲ್ಲವೋ ಮತ್ತು ಅದನ್ನು ಪ್ರಕಟಿಸಲಿಲ್ಲವೋ? ಅಂತೂ ನೀವೇ ನನ್ನ ಸಾಕ್ಷಿಗಳು. ನಾನಲ್ಲದೆ ಇನ್ನೊಬ್ಬ ದೇವರು ಇದ್ದಾನೋ? ಇಲ್ಲ, ಇನ್ನು ಯಾವ ದೇವರೂ ಇಲ್ಲ, ಯಾರೂ ನನಗೆ ಗೊತ್ತಿಲ್ಲ.”
ಯೆಶಾಯ 44 : 9 (OCVKN)
ವಿಗ್ರಹಗಳನ್ನು ಕೆತ್ತುವವರು ನಿರರ್ಥಕರು. ಅವರ ಇಷ್ಟ ಬೊಂಬೆಗಳು ಏತಕ್ಕೂ ಬಾರವು. ಅವುಗಳಲ್ಲಿ ವಿಶ್ವಾಸವಿಡುವವರು ಕುರುಡರು, ತಿಳುವಳಿಕೆ ಇಲ್ಲದವರು. ಅಂಥವರು ನಾಚಿಕೆಗೆ ಗುರಿಯಾಗುವರು.
ಯೆಶಾಯ 44 : 10 (OCVKN)
ದೇವರನ್ನು ರೂಪಿಸಿದವರೂ ಇಲ್ಲವೆ ಕೆತ್ತಿದ ವ್ಯರ್ಥವಾದ ವಿಗ್ರಹವನ್ನು ಎರಕ ಹೊಯ್ಯುವವರು ಎಂಥವರು?
ಯೆಶಾಯ 44 : 11 (OCVKN)
ಅವನೂ, ಅವನ ಸಂಗಡಿಗರೂ ನಾಚಿಕೆಗೆ ಒಳಗಾಗುವರು ಮತ್ತು ಆ ಕೆತ್ತನೆಯ ಕೆಲಸದವರು ಮನುಷ್ಯ ಮಾತ್ರದವರೇ. ಅವರೆಲ್ಲರೂ ಒಟ್ಟುಗೂಡಿ ನಿಂತುಕೊಳ್ಳಲಿ. ಅವರು ಭಯಪಟ್ಟು, ಒಟ್ಟಿಗೆ ಲಜ್ಜೆಪಡುವರು.
ಯೆಶಾಯ 44 : 12 (OCVKN)
ಕಮ್ಮಾರನು ಸಲಕರಣೆಯನ್ನು ತೆಗೆದುಕೊಂಡು ಕೆಂಡದಲ್ಲಿ ಕೆಲಸ ಮಾಡುತ್ತಾನೆ; ಅವನು ಸುತ್ತಿಗೆ ಹಿಡಿದು ತನ್ನ ತೋಳಿನ ಬಲದಿಂದ ವಿಗ್ರಹವನ್ನು ರೂಪಿಸುತ್ತಾನೆ; ಅವನು ಹಸಿದು ಬಲಹೀನನಾಗಿದ್ದರೂ, ನೀರು ಕುಡಿಯದೇ ದಣಿಯುತ್ತಾನೆ.
ಯೆಶಾಯ 44 : 13 (OCVKN)
ಬಡಗಿಯು ಮರಕ್ಕೆ ನೂಲನ್ನು ಹಿಡಿದು, ಮೊಳೆಯಿಂದ ಗೆರೆ ಎಳೆಯುತ್ತಾನೆ. ಉಳಿಬಾಚಿಗಳಿಂದ ಕೆತ್ತುತ್ತಾನೆ. ಕೈವಾರದಿಂದ ಗುರುತಿಸಿ, ಆಮೇಲೆ ಮನುಷ್ಯನ ಆಕಾರಕ್ಕೆ ತಂದು, ಮಂದಿರದಲ್ಲಿ ಇಡಲು ಮನುಷ್ಯನ ಅಂದದಂತೆ ರೂಪಿಸುತ್ತಾನೆ.
ಯೆಶಾಯ 44 : 14 (OCVKN)
ಅರಣ್ಯದ ಮಧ್ಯದಲ್ಲಿ ಇರುವ ಮರಗಳಲ್ಲಿ ದೇವದಾರುಗಳನ್ನು ಕಡಿದು, ತುರಾಯಿ, ಸೈಪ್ರಸ್ ಮತ್ತು ಏಲಾ ಮರಗಳನ್ನು ತನ್ನ ಕೆಲಸಕ್ಕೋಸ್ಕರ ತೆಗೆದುಕೊಳ್ಳುತ್ತಾನೆ. ಪೀತದಾರ ಮರವನ್ನು ಅವನು ನೆಡಲು, ಮಳೆಯು ಅದನ್ನು ಬೆಳೆಯಿಸುವುದು.
ಯೆಶಾಯ 44 : 15 (OCVKN)
ಆಗ ಅದು ಮನುಷ್ಯರು ಉರಿಸುವುದಕ್ಕಾಗುವುದು. ಏಕೆಂದರೆ ಅದರಿಂದ ಚಳಿಕಾಯಿಸಿಕೊಳ್ಳುತ್ತಾನೆ. ಅದನ್ನು ಬೆಂಕಿ ಹಚ್ಚಿ, ರೊಟ್ಟಿಯನ್ನು ಸುಡುತ್ತಾನೆ. ಅವನು ಅದರಿಂದ ಒಂದು ದೇವರನ್ನು ಮಾಡಿ, ಅದಕ್ಕೆ ನಮಸ್ಕರಿಸುತ್ತಾನೆ. ಅದರಲ್ಲಿ ಒಂದು ಕೆತ್ತಿದ ವಿಗ್ರಹವನ್ನು ಮಾಡಿ, ಅದಕ್ಕೆ ಅಡ್ಡ ಬೀಳುವನು.
ಯೆಶಾಯ 44 : 16 (OCVKN)
ಒಂದು ಭಾಗವನ್ನು ಬೆಂಕಿಯಲ್ಲಿ ಉರಿಸುವನು. ಅದರ ಇನ್ನೊಂದು ಭಾಗದಲ್ಲಿ ಮಾಂಸವನ್ನು ಉಣ್ಣುವನು. ಮಾಂಸವನ್ನು ಸುಟ್ಟು ತೃಪ್ತಿಹೊಂದುವನು. ಅವನು ಚಳಿಕಾಯಿಸಿಕೊಳ್ಳುತ್ತಾ, ಬೆಂಕಿಯನ್ನು ಕಂಡೆ, ಬೆಚ್ಚಗಾಯಿತು ಅಂದುಕೊಳ್ಳುವನು.
ಯೆಶಾಯ 44 : 17 (OCVKN)
ಅದರಲ್ಲಿ ಉಳಿದ ಭಾಗವನ್ನು ದೇವರನ್ನಾಗಿಯೂ, ಕೆತ್ತಿದ ವಿಗ್ರಹವನ್ನಾಗಿಯೂ ಮಾಡಿ, ಅದಕ್ಕೆ ಅಡ್ಡಬಿದ್ದು ನಮಸ್ಕರಿಸಿ, “ನೀನೇ ನನ್ನ ದೇವರು, ನನ್ನನ್ನು ಕಾಪಾಡು,” ಎಂದು ಬೇಡಿಕೊಳ್ಳುವನು.
ಯೆಶಾಯ 44 : 18 (OCVKN)
ಅವರು ಏನೂ ತಿಳಿಯದವರು ಇಲ್ಲವೆ ಏನೂ ಗ್ರಹಿಸಲಾರದವರು. ಏಕೆಂದರೆ ಆತನು ಅವರ ಕಣ್ಣು ಕಾಣದಂತೆಯೂ, ಹೃದಯಗಳು ಗ್ರಹಿಸದಂತೆಯೂ ಮುಚ್ಚಿಬಿಟ್ಟಿದ್ದಾನೆ.
ಯೆಶಾಯ 44 : 19 (OCVKN)
“ನಾನು ಒಂದು ಭಾಗವನ್ನು ಬೆಂಕಿಯಲ್ಲಿ ಉರಿಸಿದೆನು. ಹೌದು, ಅದರ ಕೆಂಡದಲ್ಲಿ ರೊಟ್ಟಿಮಾಡಿ, ಮಾಂಸವನ್ನು ಸುಟ್ಟು ತಿಂದೆನಲ್ಲಾ. ಮಿಕ್ಕಿದ್ದರಲ್ಲಿ ಅಸಹ್ಯವಾದದ್ದನ್ನು ಮಾಡಲೋ? ಮರದ ತುಂಡಿಗೆ ಅಡ್ಡಬೀಳಬಹುದೋ?” ಎಂದುಕೊಳ್ಳುವಷ್ಟು ಜ್ಞಾನ ವಿವೇಕಗಳು ಯಾರಿಗೂ ಇಲ್ಲ, ಯಾರೂ ಇದನ್ನು ಮನಸ್ಸಿನಲ್ಲಿ ಅರ್ಥೈಸಿಕೊಳ್ಳುವುದಿಲ್ಲ.
ಯೆಶಾಯ 44 : 20 (OCVKN)
ಅವನು ತಿನ್ನುವುದು ಬೂದಿಯೇ. ಮೋಸಕ್ಕೊಳಗಾದ ಹೃದಯವು ಅವನಿಗೆ ದಾರಿತಪ್ಪಿಸಿದ ಕಾರಣ, ನನ್ನ ಬಲಗೈ ಸುಳ್ಳನ್ನು ಹಿಡಿದಿದೆಯಲ್ಲಾ ಎಂದುಕೊಳ್ಳಲೂ ಆಗದು. ತನ್ನ ಪ್ರಾಣವನ್ನು ಕಾಪಾಡಿಕೊಳ್ಳಲೂ ಅವನಿಂದಾಗದು.
ಯೆಶಾಯ 44 : 21 (OCVKN)
“ಯಾಕೋಬೇ, ಇಸ್ರಾಯೇಲೇ! ಈ ವಿಷಯಗಳನ್ನು ಜ್ಞಾಪಕದಲ್ಲಿಟ್ಟುಕೋ, ನೀನು ನನ್ನ ಸೇವಕನಾಗಿದ್ದೀ. ನಾನು ನಿನ್ನನ್ನು ನಿರ್ಮಿಸಿದೆನು. ನೀನು ನನ್ನ ಸೇವಕನು. ಇಸ್ರಾಯೇಲೇ, ನಾನು ನಿನ್ನನ್ನು ಮರೆತುಬಿಡೆನು.
ಯೆಶಾಯ 44 : 22 (OCVKN)
ನಾನು ನಿನ್ನ ದ್ರೋಹಗಳನ್ನು ಮೋಡದಂತೆ ಅಳಿಸಿಬಿಟ್ಟಿದ್ದೇನೆ. ನಿನ್ನ ಪಾಪಗಳನ್ನು ಮುಂಜಾನೆಯ ಮಂಜಿನಂತೆ ಹಾರಿಸಿದ್ದೇನೆ. ನನ್ನ ಕಡೆಗೆ ತಿರುಗಿಕೋ. ಏಕೆಂದರೆ ನಾನು ನಿನ್ನನ್ನು ವಿಮೋಚಿಸಿದ್ದೇನೆ.”
ಯೆಶಾಯ 44 : 23 (OCVKN)
ಆಕಾಶಗಳೇ, ಹರ್ಷಧ್ವನಿಗೈಯಿರಿ. ಏಕೆಂದರೆ ಯೆಹೋವ ದೇವರು ತಾನೇ ಅದನ್ನು ಮಾಡಿದ್ದಾನೆ. ಭೂಮಿಯ ಕೆಳಭಾಗವೇ ಆರ್ಭಟಿಸು. ಪರ್ವತಗಳೇ, ವನವೇ, ಅದರಲ್ಲಿರುವ ಎಲ್ಲಾ ಮರಗಳೇ ಉತ್ಸಾಹಧ್ವನಿ ಮಾಡಿರಿ. ಏಕೆಂದರೆ ಯೆಹೋವ ದೇವರು ಯಾಕೋಬನ್ನು ವಿಮೋಚಿಸಿದ್ದಾನೆ. ಇಸ್ರಾಯೇಲಿನಲ್ಲಿ ತನ್ನನ್ನು ಮಹಿಮೆಪಡಿಸಿದ್ದಾನೆ.
ಯೆಶಾಯ 44 : 24 (OCVKN)
ಯೆರೂಸಲೇಮು ಜನರಿಂದ ತುಂಬಿಕೊಳ್ಳುವುದು “ನಿನ್ನನ್ನು ಗರ್ಭದಿಂದ ರೂಪಿಸಿದವರೂ ನಿನ್ನ ವಿಮೋಚಕರೂ ಆದ ಯೆಹೋವ ದೇವರು ಇಂತೆನ್ನುತ್ತಾರೆ: “ಎಲ್ಲವನ್ನು ಉಂಟುಮಾಡಿದ ಯೆಹೋವ ದೇವರು ನಾನೇ. ನಾನೊಬ್ಬನೇ ಆಕಾಶವನ್ನು ವಿಸ್ತರಿಸಿ, ಭೂಮಿಯನ್ನು ನಾನೇ ವಿಶಾಲವಾಗಿ ಹರಡಿದವನಾಗಿದ್ದೇನೆ.
ಯೆಶಾಯ 44 : 25 (OCVKN)
ಸುಳ್ಳುಗಾರರ ಗುರುತುಗಳನ್ನು ನಿರರ್ಥಕ ಮಾಡುವವನೂ ಮತ್ತು ಕಣಿ ಹೇಳುವವರನ್ನು ಹುಚ್ಚರನ್ನಾಗಿ ಮಾಡುವವನೂ ಜ್ಞಾನಿಗಳನ್ನು ಹಿಂದಕ್ಕೆ ತಳ್ಳಿ, ಅವರ ತಿಳುವಳಿಕೆಯನ್ನು ಬುದ್ಧಿಹೀನವಾಗ ಮಾಡುವವನೂ
ಯೆಶಾಯ 44 : 26 (OCVKN)
ತನ್ನ ಸೇವಕನ ಮಾತುಗಳನ್ನು ಸ್ಥಾಪಿಸುವವನು, ಮತ್ತು ತನ್ನ ದೂತರ ಆಲೋಚನೆಯನ್ನು ಪೂರೈಸುವವನು. “ಯೆರೂಸಲೇಮಿಗೆ, ‘ನೀನು ನಿವಾಸವಾಗುವೆ,’ ಯೆಹೂದ ಪಟ್ಟಣಗಳಿಗೆ, ‘ಅವು ಪುನಃ ಕಟ್ಟಲಾಗುವುದು,’ ಮತ್ತು ಅದರ ಹಾಳು ಸ್ಥಳಗಳಿಗೆ, ‘ನಾನು ಪುನಃಸ್ಥಾಪಿಸುವೆನು,’ ಎಂದು ಹೇಳುವವನು,
ಯೆಶಾಯ 44 : 27 (OCVKN)
ಅಗಾಧಕ್ಕೆ, ‘ಒಣಗಿಸಿಬಿಡುವೆನು,’ ‘ನಿನ್ನಲ್ಲಿ ಸೇರುವ ನದಿಗಳನ್ನು ಒಣಗಿಸುವೆನು,’ ಎಂದು ಅನ್ನುವವನೂ;
ಯೆಶಾಯ 44 : 28 (OCVKN)
ಕೋರೆಷನ ವಿಷಯವಾಗಿ ಹೀಗೆ ಹೇಳುವೆನು, ‘ನನ್ನ ಕುರುಬನು, ನನ್ನ ಇಷ್ಟವನ್ನೆಲ್ಲಾ ಪೂರೈಸುವವನು, ಯೆರೂಸಲೇಮಿಗೆ, “ನೀನು ಪುನಃ ನಿರ್ಮಾಣವಾಗುವೆ,” ದೇವಾಲಯಕ್ಕೆ, “ನಿನಗೆ ಅಸ್ತಿವಾರವು ಹಾಕಲಾಗುವುದು,” ಎಂದು ಅನ್ನುವವನೂ ನಾನೇ.’

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28