ಯೆಶಾಯ 40 : 1 (OCVKN)
ದೇವಜನರ ಸಾಂತ್ವನ ನೀವು ನನ್ನ ಜನರನ್ನು ಸಂತೈಸಿರಿ, ಸಂತೈಸಿರಿ ಎಂದು ನಿಮ್ಮ ದೇವರು ಹೇಳುತ್ತಾರೆ.
ಯೆಶಾಯ 40 : 2 (OCVKN)
ಯೆರೂಸಲೇಮಿನ ಸಂಗಡ ನೀವು ಮೃದುವಾಗಿ ಮಾತನಾಡಿರಿ. ಅದರ ಕಠಿಣ ಸೇವೆ ತೀರಿತೆಂದೂ, ಅದರ ಪಾಪಕ್ಕೆ ಪ್ರಾಯಶ್ಚಿತ್ತವಾಗಿದೆ, ಎಂದು ಘೋಷಿಸಿರಿ, ಏಕೆಂದರೆ ಅದು ಎಲ್ಲಾ ಪಾಪಗಳಿಗೂ ಯೆಹೋವ ದೇವರ ಕೈಯಿಂದ ಎರಡರಷ್ಟು ಹೊಂದಿದ್ದಾಯಿತು.
ಯೆಶಾಯ 40 : 3 (OCVKN)
“ಮರುಭೂಮಿಯಲ್ಲಿ ಯೆಹೋವ ದೇವರ ಮಾರ್ಗವನ್ನು ಸಿದ್ಧಮಾಡಿರಿ. ಅರಣ್ಯದಲ್ಲಿ ನಮ್ಮ ದೇವರಿಗೆ ರಾಜಮಾರ್ಗವನ್ನು ನೆಟ್ಟಗೆಮಾಡಿರಿ.
ಯೆಶಾಯ 40 : 4 (OCVKN)
ಪ್ರತಿಯೊಂದು ಹಳ್ಳಕೊಳ್ಳಗಳನ್ನು ಮಟ್ಟಮಾಡಬೇಕು. ಎಲ್ಲಾ ಬೆಟ್ಟಗುಡ್ಡಗಳು ನೆಲಸಮವಾಗಬೇಕು. ಒರಟಾದ ನೆಲವು ಸಮವಾಗಬೇಕು.
ಯೆಶಾಯ 40 : 5 (OCVKN)
ಆಗ ಯೆಹೋವ ದೇವರ ಮಹಿಮೆಯು ಗೋಚರವಾಗುವುದು. ಮಾನವರೆಲ್ಲರೂ ಒಟ್ಟಿಗೆ ಅದನ್ನು ಕಾಣುವರು. ಏಕೆಂದರೆ ಯೆಹೋವ ದೇವರೇ ಇದನ್ನು ನುಡಿದಿದ್ದಾರೆ.”
ಯೆಶಾಯ 40 : 6 (OCVKN)
ವಾಣಿಯು, “ಗಟ್ಟಿಯಾಗಿ ಕೂಗು,” ಎಂದಿತು. ಅದಕ್ಕೆ, “ನಾನು ಏನೆಂದು ಕೂಗಲಿ?” ಎಂದು ಕೇಳಲು, “ನರಜಾತಿಯೆಲ್ಲಾ ಹುಲ್ಲಿನ ಹಾಗಿದೆ. ಅವರ ಸೊಬಗೆಲ್ಲಾ ಹೊಲದ ಹೂವಿನಂತಿದೆ,
ಯೆಶಾಯ 40 : 7 (OCVKN)
ಯೆಹೋವ ದೇವರ ಶ್ವಾಸವು ಅದರ ಮೇಲೆ ಬೀಸುವುದರಿಂದ, ಹುಲ್ಲು ಒಣಗಿಹೋಗುವುದು. ಹೂವು ಉದುರಿ ಹೋಗುವುದು. ಮಾನವರೆಲ್ಲರೂ ಹುಲ್ಲೇ ಆಗಿದ್ದಾರೆ.
ಯೆಶಾಯ 40 : 8 (OCVKN)
ಹುಲ್ಲು ಒಣಗಿಹೋಗುವುದು, ಹೂವು ಬಾಡಿಹೋಗುವುದು. ಆದರೆ ನಮ್ಮ ದೇವರ ವಾಕ್ಯವಾದರೋ ಸದಾಕಾಲ ಇರುವುದು,” ಎಂದು ಉತ್ತರವಾಯಿತು.
ಯೆಶಾಯ 40 : 9 (OCVKN)
ಶುಭಸಮಾಚಾರವನ್ನು ತಿಳಿಸುವ ಚೀಯೋನೇ, ನೀನು ಉನ್ನತ ಪರ್ವತವನ್ನು ಏರು. ಶುಭಸಮಾಚಾರವನ್ನು ತಿಳಿಸುವ ಯೆರೂಸಲೇಮೇ, ಬಲವಾಗಿ ನಿನ್ನ ಧ್ವನಿ ಎತ್ತು, ಭಯಪಡಬೇಡ. ಯೆಹೂದದ ಪಟ್ಟಣಗಳಿಗೆ, “ಇಗೋ, ನಿನ್ನ ದೇವರು!” ಎಂದು ಹೇಳು.
ಯೆಶಾಯ 40 : 10 (OCVKN)
ಇಗೋ, ಸಾರ್ವಭೌಮ ಯೆಹೋವ ದೇವರು ಬಲದೊಂದಿಗೆ ಬರುವರು. ಅವರ ತೋಳು ತಮಗೋಸ್ಕರ ಆಳುವುದು. ಅವರ ಬಹುಮಾನವು ಅವರ ಸಂಗಡ ಅವರ ಪ್ರತಿಫಲವು ಅವರ ಮುಂದೆಯೂ ಇದೆ.
ಯೆಶಾಯ 40 : 11 (OCVKN)
ಅವರು ತಮ್ಮ ಮಂದೆಯನ್ನು ಕುರುಬನಂತೆ ಮೇಯಿಸುವರು. ಕುರಿಮರಿಗಳನ್ನು ಕೂಡಿಸಿ, ಅವುಗಳನ್ನು ತಮ್ಮ ಎದೆಗಪ್ಪಿಕೊಳ್ಳುವರು, ಎಳೆಯ ಮರಿಗಳನ್ನು ಮೆಲ್ಲಗೆ ನಡಿಸುವರು.
ಯೆಶಾಯ 40 : 12 (OCVKN)
ಸಮುದ್ರದ ನೀರನ್ನು ಬರಿದಾದ ತನ್ನ ಕೈಯಿಂದ ಅಳತೆ ಮಾಡಿದವನೂ, ಆಕಾಶಗಳ ಮೇರೆಯನ್ನು ಗೇಣಿನಿಂದ ಅಳೆದವನೂ, ಭೂಮಿಯ ಧೂಳನ್ನು ಅಳತೆಮಾಡಿ ತಿಳಿದುಕೊಂಡವನೂ, ಬೆಟ್ಟಗಳ ಮಟ್ಟವನ್ನೂ, ಗುಡ್ಡಗಳನ್ನೂ ತಕ್ಕಡಿಯಿಂದ ತೂಗಿದವನೂ ಯಾರು?
ಯೆಶಾಯ 40 : 13 (OCVKN)
ಯೆಹೋವ ದೇವರ ಮನಸ್ಸನ್ನು ಅರ್ಥ ಮಾಡಿಕೊಂಡವನು ಯಾರು? ಸಲಹೆಗಾರನಾಗಿ ಅವರಿಗೆ ಬೋಧಿಸಿದವನು ಯಾರು?
ಯೆಶಾಯ 40 : 14 (OCVKN)
ತನಗೆ ಜ್ಞಾನ ದೊರೆಯಲು ಯೆಹೋವ ದೇವರು ಯಾರ ವಿಚಾರ ತೆಗೆದುಕೊಂಡನು. ಆತನಿಗೆ ಸರಿಯಾದ ಮಾರ್ಗವನ್ನು ಕಲಿಸಿದವನು ಯಾರು? ಆತನಿಗೆ ಜ್ಞಾನವನ್ನು ಕಲಿಸಿದವನಾರು ಇಲ್ಲವೆ ತಿಳುವಳಿಕೆಯ ಮಾರ್ಗವನ್ನು ಆತನಿಗೆ ತೋರಿಸಿದವನಾರು?
ಯೆಶಾಯ 40 : 15 (OCVKN)
ಇಗೋ, ಆತನ ಎಣಿಕೆಯಲ್ಲಿ ಜನಾಂಗಗಳು ಕಪಿಲೆಯಿಂದ ಉದುರುವ ತುಂತುರಿನಂತೆಯೂ, ತಕ್ಕಡಿಯಲ್ಲಿನ ಧೂಳಿನ ಹಾಗೂ ಇರುತ್ತವೆ. ದ್ವೀಪಗಳನ್ನು ಅಣುರೇಣುವಿನಂತೆ ಆತನು ಎತ್ತುತ್ತಾನೆ.
ಯೆಶಾಯ 40 : 16 (OCVKN)
ಲೆಬನೋನು ಯಜ್ಞವೇದಿಯ ಬೆಂಕಿಗೆ ಸಾಲದು: ಅದರ ಪ್ರಾಣಿಗಳು ದಹನಬಲಿಗಳಿಗೆ ಸಾಧನವು.
ಯೆಶಾಯ 40 : 17 (OCVKN)
ಸಕಲ ಜನಾಂಗಗಳು ಆತನ ಮುಂದೆ ಏನೂ ಇಲ್ಲದಂತಿವೆ. ಅವು ಆತನ ಎಣಿಕೆಯಲ್ಲಿ ಶೂನ್ಯವಾಗಿಯೂ, ವ್ಯರ್ಥವಾಗಿಯೂ ಇವೆ.
ಯೆಶಾಯ 40 : 18 (OCVKN)
ಹೀಗಿರಲು ದೇವರನ್ನು ಯಾರಿಗೆ ಹೋಲಿಸುವಿರಿ? ಅಥವಾ ಯಾವ ರೂಪವನ್ನು ಆತನಿಗೆ ಸಮಾನ ಮಾಡುವಿರಿ?
ಯೆಶಾಯ 40 : 19 (OCVKN)
ಕಂಚುಗಾರನು ವಿಗ್ರಹವನ್ನು ಎರಕ ಹೊಯ್ಯುತ್ತಾನೆ. ಅಕ್ಕಸಾಲಿಗನು ಅದಕ್ಕೆ ಚಿನ್ನದ ಕವಚವನ್ನು ಹೊದಿಸಿ, ಬೆಳ್ಳಿಯ ಸರಪಣಿಗಳನ್ನು ಹಾಕುವನು.
ಯೆಶಾಯ 40 : 20 (OCVKN)
ಕಾಣಿಕೆಯನ್ನಾಗಿ ಪ್ರತಿಷ್ಠಿಸಿಕೊಳ್ಳಲಾರದ ಬಡವನು ಹುಳಿತುಹೋಗದ ಮರವನ್ನು ಹುಡುಕಿ, ಬಾಗಿಬೀಳದ ವಿಗ್ರಹವನ್ನು ತಯಾರಿಸುವುದಕ್ಕೆ ಶಿಲ್ಪಿಯನ್ನು ವಿಚಾರಿಸಿಕೊಳ್ಳುವನು.
ಯೆಶಾಯ 40 : 21 (OCVKN)
ನಿಮಗೆ ತಿಳಿದಿಲ್ಲವೋ? ನೀವು ಕೇಳಲಿಲ್ಲವೋ? ಆದಿಯಿಂದಲೇ ನಿಮಗೆ ತಿಳಿದಿಲ್ಲವೋ? ಭೂಮಿಯು ಸ್ಥಾಪಿತವಾದಂದಿನಿಂದ ನಿಮಗೆ ಅರ್ಥವಾಗಲಿಲ್ಲವೋ?
ಯೆಶಾಯ 40 : 22 (OCVKN)
ಆಕಾಶಮಂಡಲವನ್ನು ತೆರೆಯಂತೆ ವಿಸ್ತರಿಸಿ, ಅದರೊಳಗೆ ವಾಸಮಾಡುವ ಗುಡಾರದಂತೆ ಹರಡಿ, ಭೂನಿವಾಸಿಗಳು ಮಿಡತೆಯಂತೆ ಕಾಣಿಸುವಷ್ಟು ಭೂವೃತ್ತದ ಮೇಲೆ ಕೂತಿರುವಾತನು ಆತನೇ.
ಯೆಶಾಯ 40 : 23 (OCVKN)
ಅದು ದೇಶಾಧಿಪತಿಗಳನ್ನು ನಿರ್ನಾಮ ಮಾಡುತ್ತದೆ, ಭೂಮಿಯ ನ್ಯಾಯಾಧಿಪತಿಗಳನ್ನು ಶೂನ್ಯವಾಗುವಂತೆ ಮಾಡುತ್ತದೆ.
ಯೆಶಾಯ 40 : 24 (OCVKN)
ಇವರು ನೆಟ್ಟಕೂಡಲೇ, ಬಿತ್ತಿದಾಕ್ಷಣವೇ, ಭೂಮಿಯಲ್ಲಿ ಬೇರೂರಿದಾಗಲೇ, ಆತನ ಶ್ವಾಸವನ್ನು ಇವರ ಮೇಲೆ ಊದಿದಾಗಲೇ ಒಣಗಿ ಹೋಗುವರು. ಬಿರುಗಾಳಿಯು ಇವರನ್ನು ಹೊಟ್ಟಿನಂತೆ ಬಡಿದುಕೊಂಡು ಹೋಗುವುದು.
ಯೆಶಾಯ 40 : 25 (OCVKN)
ಹೀಗಿರಲು, “ನನ್ನನ್ನು ಯಾರಿಗೆ ಹೋಲಿಸಿ ಸರಿಸಮಾನ ಮಾಡುತ್ತೀರಿ?” ಎಂದು ಪರಿಶುದ್ಧ ದೇವರು ಕೇಳುತ್ತಾರೆ.
ಯೆಶಾಯ 40 : 26 (OCVKN)
ನಿಮ್ಮ ಕಣ್ಣುಗಳನ್ನು ಮೇಲಕ್ಕೆತ್ತಿ ನೋಡಿರಿ. ಇಗೋ, ಈ ನಕ್ಷತ್ರಗಳನ್ನು ಸೃಷ್ಟಿಸಿದಾತನು ಯಾರು? ಆತನೇ ತನ್ನ ಮಹಾಶಕ್ತಿಯಿಂದಲೂ, ಅವುಗಳ ಸೈನ್ಯವನ್ನೆಲ್ಲಾ ಲೆಕ್ಕ ಮಾಡಿ ಹೊರಗೆ ತರುವನು. ಏಕೆಂದರೆ ಆತನು ಅತಿ ಬಲಾಢ್ಯನೂ ಮಹಾಶಕ್ತನೂ ಆಗಿರುವುದರಿಂದ ಅವುಗಳೊಳಗೆ ಒಂದೂ ತಪ್ಪದು.
ಯೆಶಾಯ 40 : 27 (OCVKN)
ನನ್ನ ಮಾರ್ಗವು ಯೆಹೋವ ದೇವರಿಗೆ ಮರೆಯಾಗಿದೆ. ನನ್ನ ನ್ಯಾಯವು ನನ್ನ ದೇವರಿಂದ ದಾಟಿಹೋಯಿತಲ್ಲಾ! ಎಂದು ಯಾಕೋಬೇ ಏಕೆ ಹೇಳುತ್ತೀ? ಇಸ್ರಾಯೇಲೇ ಏಕೆ ಮಾತನಾಡುತ್ತೀ?
ಯೆಶಾಯ 40 : 28 (OCVKN)
ನಿನಗೆ ಗೊತ್ತಿಲ್ಲವೋ? ನೀನು ಕೇಳಲಿಲ್ಲವೋ? ಯೆಹೋವ ದೇವರು ನಿರಂತರವಾದ ದೇವರೂ, ಭೂಮಿಯ ಅಂತ್ಯಗಳನ್ನು ಸೃಷ್ಟಿಸಿದವನೂ ದಣಿಯುವುದಿಲ್ಲ, ಬಳಲುವುದಿಲ್ಲ, ಆತನ ತಿಳುವಳಿಕೆಯು ಪರಿಶೋಧನೆಗೆ ಅಗಮ್ಯ.
ಯೆಶಾಯ 40 : 29 (OCVKN)
ಆತನು ದಣಿದವನಿಗೆ ಶಕ್ತಿಯನ್ನೂ, ಬಲಹೀನನಿಗೆ ಬಹುಬಲವನ್ನೂ ಕೊಡುತ್ತಾನೆ.
ಯೆಶಾಯ 40 : 30 (OCVKN)
ಯೌವನಸ್ಥರೋ ದಣಿದು ಬಳಲುವರು ಮತ್ತು ತರುಣರು ಸಂಪೂರ್ಣವಾಗಿ ಬೀಳುವರು.
ಯೆಶಾಯ 40 : 31 (OCVKN)
ಆದರೆ ಯೆಹೋವ ದೇವರನ್ನು ನಿರೀಕ್ಷಿಸುವವರೋ ಹೊಸ ಬಲವನ್ನು ಹೊಂದುವರು. ಅವರು ಹದ್ದುಗಳಂತೆ ರೆಕ್ಕೆಗಳಿಂದ ಬೆಟ್ಟವನ್ನು ಏರುವರು. ಅವರು ಓಡಿ ದಣಿಯರು. ನಡೆದು ಬಳಲರು.
❮
❯
1
2
3
4
5
6
7
8
9
10
11
12
13
14
15
16
17
18
19
20
21
22
23
24
25
26
27
28
29
30
31