ಯೆಶಾಯ 24 : 1 (OCVKN)
ಯೆಹೋವ ದೇವರು ಭೂಮಿಯನ್ನು ಹಾಳುಮಾಡುವರು ಇಗೋ, ಯೆಹೋವ ದೇವರು ಭೂಮಿಯನ್ನು ಬರಿದುಮಾಡಿ, ನಿರ್ಜನ ಪ್ರದೇಶವನ್ನಾಗಿ ಮಾಡಿ, ತಲೆಕೆಳಗಾಗಿ ತಿರುಗಿಸಿ, ಅದರ ನಿವಾಸಿಗಳನ್ನು ಚದರಿಸಿಬಿಡುವವರಾಗಿದ್ದಾರೆ.
ಯೆಶಾಯ 24 : 2 (OCVKN)
ಜನಗಳಿಗೆ ಹೇಗೋ ಹಾಗೆಯೇ ಯಾಜಕರಿಗೆ; ದಾಸನಿಗೆ ಹೇಗೋ ಹಾಗೆಯೇ ಯಜಮಾನನಿಗೆ; ದಾಸಿಗೆ ಹೇಗೋ ಹಾಗೆಯೇ ಅವಳ ಯಜಮಾನಿಗೆ; ಕೊಳ್ಳುವವನಿಗೆ ಹೇಗೋ ಹಾಗೆಯೇ ಮಾರುವವನಿಗೆ; ಸಾಲಕೊಡುವವನಿಗೆ ಹೇಗೋ ಹಾಗೆಯೇ ಸಾಲ ಪಡೆಯುವವನಿಗೆ; ಬಡ್ಡಿ ತೆಗೆಯುವವನಿಗೆ ಹೇಗೋ ಹಾಗೆಯೇ ಬಡ್ಡಿ ತರುವವನಿಗೆ ಆಗುವುದು.
ಯೆಶಾಯ 24 : 3 (OCVKN)
ಭೂಮಿಯು ಬಟ್ಟಬರಿದಾಗುವುದು, ಸಂಪೂರ್ಣ ಸುಲಿಗೆಯಾಗುವುದು. ಯೆಹೋವ ದೇವರು ತಾವೇ ಈ ಮಾತನ್ನು ಹೇಳಿದ್ದಾರೆ.
ಯೆಶಾಯ 24 : 4 (OCVKN)
ಭೂಮಿಯು ಪ್ರಲಾಪಿಸುತ್ತಾ ಬಾಡಿಹೋಗುವುದು. ಲೋಕವು ಸೊರಗಿ ಬಾಡಿಹೋಗುವುದು. ಆಕಾಶವು ಭೂಮಿಯೊಂದಿಗೆ ಕುಗ್ಗಿಹೋಗುವುದು.
ಯೆಶಾಯ 24 : 5 (OCVKN)
ಭೂನಿವಾಸಿಗಳು ದೈವಾಜ್ಞೆಗಳನ್ನು ಮೀರಿ, ದೈವನಿಯಮಗಳನ್ನು ಬದಲಾಯಿಸಿ, ನಿತ್ಯವಾದ ಒಡಂಬಡಿಕೆಯನ್ನು ಭಂಗಪಡಿಸಿದ್ದರಿಂದ ಭೂಮಿಯು ಸಹ ಅದರ ನಿವಾಸಿಗಳ ಹೆಜ್ಜೆಯಿಂದ ಅಪವಿತ್ರವಾಗುವುದು.
ಯೆಶಾಯ 24 : 6 (OCVKN)
ಆದಕಾರಣ ಶಾಪವು ಲೋಕವನ್ನು ನುಂಗಿಬಿಟ್ಟಿದೆ. ಅದರಲ್ಲಿ ವಾಸವಾಗಿರುವವರು ದಂಡನೆಗೆ ಒಳಗಾಗಿದ್ದಾರೆ. ಆದ್ದರಿಂದ ಭೂನಿವಾಸಿಗಳು ಸುಟ್ಟು ಹೋಗಿ, ಕೆಲವರು ಮಾತ್ರ ಉಳಿದಿದ್ದಾರೆ.
ಯೆಶಾಯ 24 : 7 (OCVKN)
ದ್ರಾಕ್ಷಾರಸವು ಬತ್ತಿಹೋಗುವುದು, ದ್ರಾಕ್ಷಿಯು ಬಾಡುವುದು. ಹರ್ಷ ಹೃದಯರೆಲ್ಲಾ ನಿಟ್ಟುಸಿರುಬಿಡುತ್ತಾರೆ.
ಯೆಶಾಯ 24 : 8 (OCVKN)
ದಮ್ಮಡಿಗಳ ಉತ್ಸಾಹವು ಮುಗಿದಿದೆ. ಉಲ್ಲಾಸದ ಅವರ ಶಬ್ದವು ಕೊನೆಗೊಂಡಿತು. ಕಿನ್ನರಿಯ ಆನಂದ ಸ್ವರವು ತೀರಿತು.
ಯೆಶಾಯ 24 : 9 (OCVKN)
ಇನ್ನು ಗಾನದೊಡನೆ ದ್ರಾಕ್ಷಾರಸವನ್ನು ಕುಡಿಯರು, ಕುಡಿಯುವವರಿಗೆ ಮದ್ಯಪಾನವು ಕಹಿಯಾಗುವುದು.
ಯೆಶಾಯ 24 : 10 (OCVKN)
ಹಾಳುಪಟ್ಟಣವು ಬಿದ್ದುಹೋಗಿದೆ. ಯಾರು ಒಳಗೆ ಬಾರದಂತೆ ಪ್ರತಿಯೊಂದು ಮನೆಯು ಮುಚ್ಚಿದೆ.
ಯೆಶಾಯ 24 : 11 (OCVKN)
ದ್ರಾಕ್ಷಾರಸದ ಕೊರತೆಯಿಂದ ಬೀದಿಗಳಲ್ಲಿ ಅರಚುತ್ತಾರೆ. ಉಲ್ಲಾಸವೆಲ್ಲ ಅಸ್ತಮಿಸಿದೆ. ಭೂಮಿಯ ಮೇಲಿನ ಸಂತೋಷವು ತೊಲಗಿಹೋಗಿದೆ.
ಯೆಶಾಯ 24 : 12 (OCVKN)
ಪಟ್ಟಣದಲ್ಲಿ ಹಾಳೇ ಉಳಿದಿವೆ. ನಾಶನವು ಹೆಬ್ಬಾಗಿಲಿಗೆ ಬಡಿದಿದೆ.
ಯೆಶಾಯ 24 : 13 (OCVKN)
ಓಲಿವ್ ಮರವನ್ನು ಬಡಿದ ಮೇಲೆಯೂ, ದ್ರಾಕ್ಷಿ ಸುಗ್ಗಿಯು ತೀರಿದ ನಂತರವು ನಿಲ್ಲುವ ಉಳಿದ ಕಾಯಿಗಳ ಹಾಗೆ ದೇಶದಲ್ಲಿರುವುದು.
ಯೆಶಾಯ 24 : 14 (OCVKN)
ಅವರು ತಮ್ಮ ಸ್ವರವನ್ನೆತ್ತಿ ಯೆಹೋವ ದೇವರ ಮಹಿಮೆಯನ್ನು ಕುರಿತು ಹಾಡುವರು. ಪಶ್ಚಿಮ ದಿಕ್ಕಿನ ಕಡೆಯಿಂದ ಆರ್ಭಟಿಸುವರು.
ಯೆಶಾಯ 24 : 15 (OCVKN)
ಆದ್ದರಿಂದ ಪೂರ್ವದಿಕ್ಕಿನವರೇ, ಯೆಹೋವ ದೇವರನ್ನು ಮಹಿಮೆಪಡಿಸಿರಿ; ಸಮುದ್ರದ ದ್ವೀಪಗಳಲ್ಲಿ ಇಸ್ರಾಯೇಲರ ದೇವರಾದ ಯೆಹೋವ ದೇವರ ಹೆಸರನ್ನು ನೀವು ಘನಪಡಿಸಿರಿ, ಎಂದು ಕೂಗುವರು.
ಯೆಶಾಯ 24 : 16 (OCVKN)
ಭೂಮಂಡಲದ ಕಟ್ಟಕಡೆಯಿಂದ “ನೀತಿವಂತರಿಗೆ ಮಹಿಮೆಯಾಗಲಿ” ಎಂಬ ಗೀತೆಗಳು ನಮಗೆ ಕೇಳಿಬರುತ್ತಿವೆ. ಆದರೆ, “ನಾನಾದರೋ ಕ್ಷಯಿಸೇ ಕ್ಷಯಿಸುತ್ತೇನೆ. ನನಗೆ ಕಷ್ಟ! ಬಾಧಕರು ಬಾಧಿಸುವುದರಲ್ಲಿಯೇ ನಿರತರಾಗಿದ್ದಾರೆ. ಹೌದು, ಬಾಧಕರು ಬಹಳವಾಗಿ ಬಾಧಿಸುವುದರಲ್ಲಿ ನಿರತರಾಗಿದ್ದಾರೆ.”
ಯೆಶಾಯ 24 : 17 (OCVKN)
ಭೂಮಿಯ ನಿವಾಸಿಗಳೇ, ಭಯವೂ, ಕುಳಿಯೂ, ಬಲೆಯೂ ನಿಮಗೆ ಕಾದಿವೆ.
ಯೆಶಾಯ 24 : 18 (OCVKN)
ಆಗ ಭಯದ ಶಬ್ದಕ್ಕೆ ಓಡಿಹೋಗುವವನು ಗುಂಡಿಯೊಳಗೆ ಬೀಳುವನು. ಗುಂಡಿಯೊಳಗಿಂದ ಏರಿಬರುವವನು ಬಲೆಗೆ ಸಿಕ್ಕಿಬೀಳುವನು. ಆಕಾಶದ ದ್ವಾರಗಳು ತೆರೆದಿವೆ. ಭೂಮಿಯ ಅಸ್ತಿವಾರಗಳು ಕಂಪಿಸುತ್ತಿವೆ.
ಯೆಶಾಯ 24 : 19 (OCVKN)
ಭೂಮಿಯು ಬಿರುಕುಬಿಟ್ಟಿದೆ, ಬಿರಿದು ಬಿರಿದಿದೆ, ಭೂಮಿಯು ಕದಲಿಹೋಗಿದೆ.
ಯೆಶಾಯ 24 : 20 (OCVKN)
ಭೂಮಿಯು ಕುಡುಕನ ಹಾಗೆ ಓಲಾಡುತ್ತದೆ, ಗಾಳಿಗೆ ಸಿಕ್ಕಿದ ಗುಡಿಸಲಿನ ಹಾಗೆ ತೂಗಾಡುತ್ತದೆ, ಅದರ ಅಪರಾಧವು ಅದರ ಮೇಲೆ ಭಾರವಾಗಿರುತ್ತದೆ, ಅದು ಬಿದ್ದು ಹೋಗುತ್ತದೆ, ತಿರುಗಿ ಏಳುವುದೇ ಇಲ್ಲ.
ಯೆಶಾಯ 24 : 21 (OCVKN)
ಆ ದಿವಸದಲ್ಲಿ ಯೆಹೋವ ದೇವರು ಆಕಾಶದಲ್ಲಿರುವ ಆಕಾಶದವರ ಸೈನ್ಯವನ್ನೂ, ಭೂಮಿಯ ಮೇಲಿರುವ ಭೂರಾಜರನ್ನೂ ದಂಡಿಸುವರು.
ಯೆಶಾಯ 24 : 22 (OCVKN)
ನೆಲಮಾಳಿಗೆಯೊಳಗೆ ಒಟ್ಟುಗೂಡಿದ ಸೆರೆಯವರ ಹಾಗೆ ಅವರು ಒಟ್ಟುಗೂಡಿ ಸೆರೆಮನೆಯಲ್ಲಿ ಬಹಳ ದಿನಗಳಿದ್ದ ತರುವಾಯ ದಂಡನೆಗೆ ಗುರಿಯಾಗುವರು.
ಯೆಶಾಯ 24 : 23 (OCVKN)
ಆಮೇಲೆ ಸೇನಾಧೀಶ್ವರ ಯೆಹೋವ ದೇವರು ಚೀಯೋನ್ ಪರ್ವತದಲ್ಲಿಯೂ, ಯೆರೂಸಲೇಮಿನಲ್ಲಿಯೂ ಹಿರಿಯರ ಮುಂದೆ ಮಹಿಮೆಯಿಂದ ಆಳುವಾಗ, ಚಂದ್ರನಿಗೆ ಅವಮಾನವಾಗುವುದು, ಸೂರ್ಯನು ನಾಚಿಕೆ ಪಡುವನು.
❮
❯
1
2
3
4
5
6
7
8
9
10
11
12
13
14
15
16
17
18
19
20
21
22
23