ಯೆಶಾಯ 22 : 1 (OCVKN)
ಯೆರೂಸಲೇಮನ್ನು ಕುರಿತು ಪ್ರವಾದನೆ ದಿವ್ಯ ದರ್ಶನದ ತಗ್ಗಿನ ವಿಷಯವಾದ ಪ್ರವಾದನೆ: ನಿನ್ನವರೆಲ್ಲರು ಮಾಳಿಗೆಗಳ ಮೇಲೆ ಏರುವ ಹಾಗೆ, ಈಗ ನಿನಗೆ ಏನಾಯಿತು?
ಯೆಶಾಯ 22 : 2 (OCVKN)
ಕೋಲಾಹಲದಿಂದ ತುಂಬಿ ಆರ್ಭಟಿಸುವ ಪಟ್ಟಣವೇ, ಸಂಭ್ರಮದ ಪಟ್ಟಣವೇ, ನಿನ್ನಲ್ಲಿ ಹತರಾದವರು ಖಡ್ಗದಿಂದ ಹತರಾದವರಲ್ಲ; ಯುದ್ಧದಲ್ಲಿ ಸತ್ತವರೂ ಅಲ್ಲ.
ಯೆಶಾಯ 22 : 3 (OCVKN)
ನಿನ್ನ ಅಧಿಕಾರಸ್ಥರೆಲ್ಲ ಒಟ್ಟಿಗೆ ಓಡಿದರೂ ಬಿಲ್ಲುಗಾರರಿಲ್ಲದೆಯೇ ಸೆರೆಯಾಗಿದ್ದಾರೆ. ದೂರದಿಂದ ಓಡಿಬಂದರೂ ನಿನ್ನ ಜನರು ಶತ್ರುವಿನ ಕೈಗೆ ಸಿಕ್ಕಿಬಿದ್ದಿದ್ದಾರೆ.
ಯೆಶಾಯ 22 : 4 (OCVKN)
ಹೀಗಿರಲು ನಾನು ಹೀಗೆ ಹೇಳಿದೆನು, “ನನ್ನ ಕಡೆಯಿಂದ ದೃಷ್ಟಿ ತಿರುಗಿಸಿರಿ. ಬಹು ಸಂಕಟದಿಂದ ನಾನು ಅಳುವೆನು. ಏಕೆಂದರೆ ನನ್ನ ಜನವೆಂಬ ಯುವತಿಯು ಹಾಳಾದ ವಿಷಯದಲ್ಲಿ ನನ್ನನ್ನು ಸಂತೈಸುವುದಕ್ಕೆ ತವಕಗೊಳ್ಳದಿರಿ.”
ಯೆಶಾಯ 22 : 5 (OCVKN)
ಕರ್ತ ಆಗಿರುವವರೂ, ಸರ್ವಶಕ್ತರೂ ಆದ ಯೆಹೋವ ದೇವರು, ದರ್ಶನದ ತಗ್ಗಿನಲ್ಲಿ ಶ್ರಮೆಯ ತುಳಿದಾಟದ ಭಯಭ್ರಾಂತಿಯ ದಿನವನ್ನು ಇಟ್ಟಿದ್ದಾರೆ. ಅದು ಗೋಡೆಗಳು ಹೊಡೆದುರುಳಿಸುವ ದಿನವು. ಪರ್ವತಗಳಿಗೆ ಜನರು ಕೂಗಾಡುವ ದಿನವದು.
ಯೆಶಾಯ 22 : 6 (OCVKN)
ಏಲಾಮಿನವರು ಕುದುರೆಗಳ, ರಥಗಳ ಸಂಗಡ ಬತ್ತಳಿಕೆಯನ್ನು ಹೊತ್ತುಕೊಂಡು ಬಂದರು. ಕೀರಿನವರು ಗುರಾಣಿಯನ್ನು ತೆರೆದರು.
ಯೆಶಾಯ 22 : 7 (OCVKN)
ನಿಮ್ಮ ಪ್ರಿಯವಾದ ಕಣಿವೆಗಳಲ್ಲಿ ರಥಗಳು ತುಂಬಿರುವುವು. ರಾಹುತರು ಪಟ್ಟಣದ ಬಾಗಿಲಿನ ಹತ್ತಿರ ಸಿದ್ಧಮಾಡಿಕೊಳ್ಳುವರು.
ಯೆಶಾಯ 22 : 8 (OCVKN)
ಕರ್ತರು ಯೆಹೂದದ ಸಂರಕ್ಷಣೆಯ ಮುಸುಕನ್ನು ತೆಗೆದಿದ್ದಾರೆ. ಆ ದಿವಸದಲ್ಲಿ ಅಡವಿ ಅರಮನೆಯ ಯುದ್ಧ ಸಾಮಗ್ರಿಯ ಕಡೆಗೆ ದೃಷ್ಟಿ ಇಡುತ್ತೀಯೆ.
ಯೆಶಾಯ 22 : 9 (OCVKN)
ದಾವೀದನ ಪಟ್ಟಣದ ಕೋಟೆಯ ಒಡಕುಗಳನ್ನು ಬಹಳವೆಂದು ಸಹ ನೋಡುತ್ತೀರಿ. ಕೆಳಗಿನ ಕೊಳಕ್ಕೆ ನೀರನ್ನು ತುಂಬಿಸುತ್ತೀರಿ.
ಯೆಶಾಯ 22 : 10 (OCVKN)
ಯೆರೂಸಲೇಮಿನ ಮನೆಗಳನ್ನು ಲೆಕ್ಕ ಮಾಡಿ ಪೌಳಿಗೋಡೆಯನ್ನು ಭದ್ರಪಡಿಸುವುದಕ್ಕೆ ನೀವು ಮನೆಗಳನ್ನು ಒಡೆದುಹಾಕುತ್ತೀರಿ.
ಯೆಶಾಯ 22 : 11 (OCVKN)
ಎರಡು ಗೋಡೆಗಳ ನಡುವೆ ಹಳೆಯ ಕೆರೆಯ ನೀರಿಗೋಸ್ಕರ ತೊಟ್ಟಿಯನ್ನು ಮಾಡಿದ್ದೀರಿ, ಕಾಲುವೆ ಮಾಡುತ್ತೀರಿ. ಆದರೆ ಅದನ್ನು ಮಾಡಿದವನನ್ನು ನೀವು ದೃಷ್ಟಿಸುವುದಿಲ್ಲ. ಇಲ್ಲವೆ ಪುರಾತನ ಕಾಲದಲ್ಲಿ ಸಂಕಲ್ಪಿಸಿದವರನ್ನು ನೀನು ಲಕ್ಷಿಸುವುದಿಲ್ಲ.
ಯೆಶಾಯ 22 : 12 (OCVKN)
ಆ ದಿವಸದಲ್ಲಿ ಅತ್ತು, ದುಃಖಿಸಿ, ತಲೆ ಬೋಳಿಸಿಕೊಂಡು, ಗೋಣಿತಟ್ಟನ್ನು ಸುತ್ತಿಕೊಳ್ಳಬೇಕೆಂದು ಸರ್ವಶಕ್ತ ದೇವರಾದ ಯೆಹೋವ ದೇವರು ನಿಮ್ಮನ್ನು ಕರೆದರು.
ಯೆಶಾಯ 22 : 13 (OCVKN)
ಆದರೆ ಉತ್ಸಾಹವು, ಸಂತೋಷವು, ದನ ಕೊಳ್ಳುವುದು, ಕುರಿ ಕಡಿಯುವುದು, ಮಾಂಸವನ್ನು ತಿನ್ನುವುದು, ದ್ರಾಕ್ಷಾರಸ ಕುಡಿಯುವುದು, ನಾಳೆ ಸಾಯುತ್ತೇವೆಂದು ತಿಂದು ಕುಡಿಯುವುದೇ ನಿಮ್ಮ ಕಾರ್ಯ.
ಯೆಶಾಯ 22 : 14 (OCVKN)
ಆದ್ದರಿಂದ ಸರ್ವಶಕ್ತರಾದ ಯೆಹೋವ ದೇವರು ನನ್ನ ಕಿವಿಗಳಲ್ಲಿ ಪ್ರಕಟ ಮಾಡಿದ್ದು ಏನೆಂದರೆ: “ನಿಶ್ಚಯವಾಗಿ ಈ ದುಷ್ಕೃತ್ಯಗಳನ್ನು ನೀವು ಸಾಯುವ ತನಕ ಮನ್ನಿಸುವುದೇ ಇಲ್ಲ,” ಎಂದು ಸೇನಾಧೀಶ್ವರ ಯೆಹೋವ ದೇವರು ಹೇಳಿದ್ದಾರೆ.
ಯೆಶಾಯ 22 : 15 (OCVKN)
ಸೇನಾಧೀಶ್ವರ ಯೆಹೋವ ದೇವರು ಪುನಃ ಹೀಗೆ ನುಡಿದಿದ್ದಾರೆ: “ಹೋಗು, ಅರಮನೆಯ ಉಗ್ರಾಣದವನಾದ ಶೆಬ್ನ ಎಂಬ ಖಜಾಂಚಿಯ ಬಳಿಗೆ ಹೋಗಿ ಹೀಗೆ ಹೇಳು:
ಯೆಶಾಯ 22 : 16 (OCVKN)
ನಿನಗೆ ಇಲ್ಲಿ ಏನು ಕೆಲಸ? ಇಲ್ಲಿ ನಿನಗೆ ಯಾರಿದ್ದಾರೆ? ನೀನು ಉನ್ನತದಲ್ಲಿ ನಿನಗೆ ಸಮಾಧಿಯನ್ನು ತೋಡಿಸಿದೆ, ಬಂಡೆಯಲ್ಲಿ ನಿನಗೆ ನಿವಾಸವನ್ನು ಕೆತ್ತಿಸುವವನ ಹಾಗೆ, ನಿನಗೆ ಇಲ್ಲಿ ಸಮಾಧಿಯನ್ನು ತೋಡಿಸಿದಿ ಅಲ್ಲವೇ?
ಯೆಶಾಯ 22 : 17 (OCVKN)
“ಯೆಹೋವ ದೇವರು ನಿನ್ನನ್ನು ಬಲವಾದ ಬಂಧನದೊಂದಿಗೆ ಹಿಡಿದೇ ಹಿಡಿಯುವರು.
ಯೆಶಾಯ 22 : 18 (OCVKN)
ನಿನ್ನನ್ನು ಚೆಂಡಿನಂತೆ ಸುತ್ತಿ ಸುತ್ತಿ ತಿರುಗಿಸಿ, ವಿಸ್ತಾರವಾದ ದೇಶಕ್ಕೆ ಬಿಸಾಡುವರು. ಅಲ್ಲೇ ನೀನು ಸಾಯುವೆ, ನಿನ್ನ ವೈಭವದ ರಥಗಳು ನಿನ್ನ ಧಣಿಯ ಮನೆಗೆ ಅವಮಾನವನ್ನುಂಟು ಮಾಡುವುವು.
ಯೆಶಾಯ 22 : 19 (OCVKN)
ನಿನ್ನನ್ನು ನಿನ್ನ ಉದ್ಯೋಗದಿಂದ ತಳ್ಳಿಬಿಡುವೆನು. ನಿನ್ನ ಪದವಿಯಿಂದ ನಿನ್ನನ್ನು ಕೆಳಗೆ ಎಳೆದುಬಿಡುವೆನು.
ಯೆಶಾಯ 22 : 20 (OCVKN)
“ಆ ದಿನದಲ್ಲಿ ನನ್ನ ಸೇವಕನೂ, ಹಿಲ್ಕೀಯನ ಮಗನೂ ಆದ ಎಲ್ಯಾಕೀಮನನ್ನು ಕರೆದು,
ಯೆಶಾಯ 22 : 21 (OCVKN)
ನಿನ್ನ ಅಂಗಿಯನ್ನು ಅವನಿಗೆ ತೊಡಿಸಿ, ನಿನ್ನ ನಡುಕಟ್ಟಿನಿಂದ ಅವನನ್ನು ಬಲಪಡಿಸಿ, ನಿನ್ನ ಅಧಿಕಾರವನ್ನು ಅವನಿಗೆ ಒಪ್ಪಿಸುವೆನು. ಅವನು ಯೆರೂಸಲೇಮಿನ ನಿವಾಸಿಗಳಿಗೂ, ಯೆಹೂದದ ಜನರಿಗೂ ತಂದೆಯಾಗಿರುವನು.
ಯೆಶಾಯ 22 : 22 (OCVKN)
ದಾವೀದನ ಮನೆಗೆ ಬೀಗದ ಕೈಯನ್ನು ಅವನ ಹೆಗಲ ಮೇಲೆ ನಾನು ಹಾಕುವೆನು. ಅವನು ತೆರೆದರೆ ಯಾರೂ ಮುಚ್ಚರು, ಅವನು ಮುಚ್ಚಿದರೆ ಯಾರೂ ತೆರೆಯರು.
ಯೆಶಾಯ 22 : 23 (OCVKN)
ಭದ್ರವಾದ ಸ್ಥಳದಲ್ಲಿ ಮೊಳೆಯನ್ನು ಹೊಡೆದ ಹಾಗೆ ಅವನನ್ನು ಭದ್ರಪಡಿಸುವೆನು. ಅವನು ತನ್ನ ತಂದೆಯ ಮನೆಗೆ ವೈಭವವುಳ್ಳ ಸಿಂಹಾಸನವಾಗಿರುವನು.
ಯೆಶಾಯ 22 : 24 (OCVKN)
ಬಟ್ಟಲು ಮೊದಲುಗೊಂಡು ಕೊಡದ ತನಕ, ಸಕಲ ಸಾಧಾರಣ ಪಾತ್ರೆಗಳನ್ನು ಅಂದರೆ ತಂದೆಯ ಸಂತಾನ, ಸಂತತಿಯಾದ ಅವನ ಮನೆಯ ಎಲ್ಲಾ ವೈಭವವನ್ನು ಅವರು ಅವನಿಗೆ ವಹಿಸುವರು.
ಯೆಶಾಯ 22 : 25 (OCVKN)
“ಆ ದಿನದಲ್ಲಿ,” ಸೇನಾಧೀಶ್ವರ ಯೆಹೋವ ದೇವರು ಪ್ರಕಟಿಸುವುದು ಏನೆಂದರೆ, “ಭದ್ರವಾದ ಸ್ಥಳದಲ್ಲಿ ಮೊಳೆಯನ್ನು ತೆಗೆದುಹಾಕಿ, ಕುಸಿದುಬೀಳುವುದು. ಮೊಳೆಯ ಮೇಲೆ ಇದ್ದ ಭಾರವೂ ತೆಗೆದುಹಾಕಲಾಗುವುದು,” ಇದು ಯೆಹೋವ ದೇವರ ನುಡಿ.

1 2 3 4 5 6 7 8 9 10 11 12 13 14 15 16 17 18 19 20 21 22 23 24 25