ಯೆಶಾಯ 14 : 1 (OCVKN)
ಯೆಹೋವ ದೇವರು ಯಾಕೋಬ್ಯರನ್ನು ಕರುಣಿಸುವರು. ಇಸ್ರಾಯೇಲರನ್ನು ಪುನಃ ಆಯ್ದುಕೊಳ್ಳುವರು. ಅವರನ್ನು ಅವರ ಸ್ವಂತ ದೇಶದಲ್ಲಿ ಸೇರಿಸುವರು. ಪರದೇಶದವರು ಅವರೊಂದಿಗೆ ಕೂಡಿಬಂದು, ಯಾಕೋಬನ ಮನೆತನಕ್ಕೆ ಸೇರಿಕೊಳ್ಳುವರು.
ಯೆಶಾಯ 14 : 2 (OCVKN)
ದೇಶಗಳು ಇನ್ನೊಮ್ಮೆ ಅವರನ್ನು ತೆಗೆದುಕೊಂಡು ಅವನ ಸ್ಥಳಕ್ಕೆ ಅವರನ್ನು ಬರಮಾಡುವರು. ಆಗ ಇಸ್ರಾಯೇಲಿನ ಮನೆತನದವರು ಯೆಹೋವ ದೇವರ ದೇಶದಲ್ಲಿ, ಆ ಜನಾಂಗದವರನ್ನು ಗಂಡು ಹೆಣ್ಣುಗಳನ್ನಾಗಿ ದಾಸದಾಸಿಯರನ್ನಾಗಿ ಇಟ್ಟುಕೊಳ್ಳುವರು. ತಮ್ಮನ್ನು ಸೆರೆಹಿಡಿದವರನ್ನು ಸೆರೆಹಿಡಿಯುವರು. ತಮ್ಮನ್ನು ದಬ್ಬಾಳಿಕೆಗಾರರ ಮೇಲೆ ಅಧಿಕಾರ ನಡೆಸುವರು.
ಯೆಶಾಯ 14 : 3 (OCVKN)
ಯೆಹೋವ ದೇವರು ನಿಮ್ಮ ಸಂಕಟದಿಂದಲೂ, ಕಳವಳದಿಂದಲೂ ಕಠಿಣವಾದ ಬಿಟ್ಟಿಯ ಸೇವೆಯಿಂದಲೂ
ಯೆಶಾಯ 14 : 4 (OCVKN)
ನಿಮ್ಮನ್ನು ವಿಶ್ರಾಂತಿಗೊಳಿಸುವ ದಿನದಲ್ಲಿ ಬಾಬಿಲೋನಿನ ರಾಜನಿಗೆ ವಿರುದ್ಧವಾದ ಈ ಪದ್ಯವನ್ನು ನೀವು ಹೀಗೆ ಸ್ವರವೆತ್ತಿ ಹಾಡಬೇಕು: ಹೀಗೆ ದಬ್ಬಾಳಿಕೆಗಾರನು ಕೊನೆಗೊಂಡನು. ಅವನ ಕೋಪ ಹೀಗೆ ಮುಗಿಯಿತು.
ಯೆಶಾಯ 14 : 5 (OCVKN)
ಆಳುತ್ತಿದ್ದ ದುಷ್ಟರ ಕೋಲನ್ನೂ, ಅಧಿಪತಿಗಳ ದಂಡವನ್ನೂ ಯೆಹೋವ ದೇವರು ಮುರಿದುಬಿಟ್ಟರು.
ಯೆಶಾಯ 14 : 6 (OCVKN)
ಆ ಅಧಿಪತಿಗಳು ಕಡುಕೋಪದಿಂದ ಎಡೆಬಿಡದೆ ಜನರನ್ನು ದಂಡಿಸಿ, ನಿಲ್ಲದ ದಬ್ಬಾಳಿಕೆಯಿಂದ ರಾಷ್ಟ್ರಗಳನ್ನು ಅಧೀನಪಡಿಸಿಕೊಂಡಿದ್ದರು.
ಯೆಶಾಯ 14 : 7 (OCVKN)
ಭೂಲೋಕವೆಲ್ಲಾ ಶಾಂತವಾಗಿ ವಿಶ್ರಾಂತಿಗೊಂಡಿದೆ. ಅವರು ಉಲ್ಲಾಸದ ಧ್ವನಿಯಿಂದ ಹಾಡುತ್ತಾರೆ.
ಯೆಶಾಯ 14 : 8 (OCVKN)
ತುರಾಯಿ ಮರಗಳೂ, ಲೆಬನೋನಿನ ದೇವದಾರು ಮರಗಳೂ, “ಈಗ ನೀನು ಬಿದ್ದದ್ದರಿಂದ ನಮ್ಮನ್ನು ಕಡಿಯಲು ಯಾರೂ ಬರುವುದಿಲ್ಲ,” ಎಂದು ನಿನ್ನ ವಿಷಯವಾಗಿ ಉಲ್ಲಾಸಗೊಳ್ಳುತ್ತವೆ.
ಯೆಶಾಯ 14 : 9 (OCVKN)
ನಿನಗೋಸ್ಕರ ನಿನ್ನ ಬರೋಣವನ್ನು ಎದುರುಗೊಳ್ಳುವುದಕ್ಕೆ ಪಾತಾಳವು ಕೆಳಗಿನಿಂದ ತಳಮಳಪಡುತ್ತದೆ. ಸತ್ತವರನ್ನು ಎಂದರೆ, ಭೂಲೋಕದಲ್ಲಿ ಮುಖಂಡರಾಗಿದ್ದವರೆಲ್ಲರ ಆತ್ಮಗಳನ್ನು ಕಲಕಿ ಎಚ್ಚರಿಸಿ, ಜನಾಂಗಗಳ ಎಲ್ಲಾ ರಾಜರನ್ನು ಅವರ ಸಿಂಹಾಸನಗಳಿಂದ ಎಬ್ಬಿಸುತ್ತದೆ.
ಯೆಶಾಯ 14 : 10 (OCVKN)
ಅವರೆಲ್ಲರು, “ನಮ್ಮ ಹಾಗೆ ನೀನು ಸಹ ಬಲಹೀನನಾಗಿದ್ದೀ. ನೀನು ನಮ್ಮ ಸಮಾನನಾಗಿದ್ದೀ,” ಎಂದು ಮಾತನಾಡಿ ಹೇಳುವರು.
ಯೆಶಾಯ 14 : 11 (OCVKN)
ನಿನ್ನ ವೈಭವವೂ, ನಿನ್ನ ವೀಣೆಗಳ ಸ್ವರವೂ ಸಮಾಧಿಗೆ ಇಳಿದಿವೆ. ನಿನಗೆ ಹುಳುಗಳೇ ಹಾಸಿಗೆ, ನಿನ್ನ ಹೊದಿಕೆಯು ಕ್ರಿಮಿಗಳೇ.
ಯೆಶಾಯ 14 : 12 (OCVKN)
ಮುಂಜಾನೆಯ ನಕ್ಷತ್ರವೇ, ಉದಯ ಪುತ್ರನೇ, ಆಕಾಶದಿಂದ ನೀನು ಹೇಗೆ ಬಿದ್ದೆ? ಜನಾಂಗಗಳನ್ನು ಬಲಹೀನ ಮಾಡಿದ ನೀನು ಭೂಮಿಗೆ ಹೇಗೆ ಬಿದ್ದೆ?
ಯೆಶಾಯ 14 : 13 (OCVKN)
ನೀನು ನಿನ್ನ ಹೃದಯದಲ್ಲಿ ಹೀಗೆ ಎಂದುಕೊಂಡಿಯಲ್ಲಾ, “ನಾನು ಆಕಾಶಕ್ಕೆ ಏರಿ, ದೇವರ ನಕ್ಷತ್ರಗಳ ಮೇಲೆ ನನ್ನ ಸಿಂಹಾಸನವನ್ನು ಘನತೆಗೇರಿಸುವೆನು. ಉತ್ತರ ದಿಕ್ಕಿನ ಕಡೆಗಿರುವ ಜಫೋನ್ ಪರ್ವತದ ಮೇಲೆಯೂ ನಾನು ಆಸೀನನಾಗುವೆನು.
ಯೆಶಾಯ 14 : 14 (OCVKN)
ಉನ್ನತವಾದ ಮೇಘ ಮಂಡಲದ ಮೇಲೆ ಏರಿ, ಮಹೋನ್ನತರಿಗೆ ಸಮಾನನಾಗುವೆನು.”
ಯೆಶಾಯ 14 : 15 (OCVKN)
ಆದರೆ ಪಾತಾಳದ ಕುಣಿಯ ಕಡೆಗೂ, ಸಮಾಧಿಗೂ ಇಳಿಯುವೆ.
ಯೆಶಾಯ 14 : 16 (OCVKN)
ನಿನ್ನನ್ನು ಕಂಡವರು ದಿಟ್ಟಿಸಿ ನೋಡಿ, ನಿನ್ನ ಗತಿಯನ್ನು ಯೋಚಿಸುತ್ತಾ, “ಭೂಮಿಯನ್ನು ನಡುಗಿಸಿ, ರಾಜ್ಯಗಳನ್ನು ಕದಲಿಸಿ,
ಯೆಶಾಯ 14 : 17 (OCVKN)
ಲೋಕವನ್ನು ಕಾಡನ್ನಾಗಿ ಮಾಡಿ, ನಗರಗಳನ್ನು ಕೆಡವಿ, ಸೆರೆಹಿಡಿದವರನ್ನು ಮನೆಗೆ ಬಿಡದೆ ಇದ್ದವನು ಇವನೋ?” ಎಂದುಕೊಳ್ಳುವರು.
ಯೆಶಾಯ 14 : 18 (OCVKN)
ಜನಾಂಗಗಳ ಅರಸರೆಲ್ಲಾ ವೈಭವದಿಂದ ತಮ್ಮ ತಮ್ಮ ಸಮಾಧಿಗಳಲ್ಲಿ ಮಲಗುತ್ತಾರೆ.
ಯೆಶಾಯ 14 : 19 (OCVKN)
ಆದರೆ ನೀನು ತಿರಸ್ಕರಿಸಿದ ಕೊಂಬೆಯಂತೆಯೂ, ಖಡ್ಗ ತಿವಿದು ಕಲ್ಲುಗುಂಡಿಗೆ ಪಾಲಾದ ಹೆಣಗಳ ಹೊದಿಕೆಯಂತೆಯೂ, ಪರರ ತುಳಿತಕ್ಕೆ ಈಡಾಗಿ, ಸಮಾಧಿಯೊಳಗಿಂದ ಹೊರಗೆ ಬಿಸಾಡಿರುವ ಶವದ ಹಾಗಿದ್ದೀ.
ಯೆಶಾಯ 14 : 20 (OCVKN)
ನೀನು ಆ ರಾಜರಂತೆ ಸಮಾಧಿಗೆ ಸೇರದಿರುವಿ. ಏಕೆಂದರೆ ನಿನ್ನ ದೇಶವನ್ನು ನೀನು ನಾಶಮಾಡಿ, ನಿನ್ನ ಜನರನ್ನು ಕೊಂದುಹಾಕಿದಿ. ದುಷ್ಟರ ಸಂತಾನವು ನಿರಂತರವೂ ನಿರ್ನಾಮವಾಗಲಿ.
ಯೆಶಾಯ 14 : 21 (OCVKN)
ಅವರು ಏಳದೆ ಇಲ್ಲವೆ ದೇಶವನ್ನು ವಶಪಡಿಸಿಕೊಳ್ಳದೆ ಇಲ್ಲವೆ ಲೋಕವನ್ನು ಪಟ್ಟಣಗಳಿಂದ ತುಂಬಿಸದಂತೆ, ಅವರ ತಂದೆಗಳ ಅಪರಾಧದ ನಿಮಿತ್ತ, ಅವನ ಮಕ್ಕಳ ಕೊಲೆಗೆ ಸಿದ್ಧಮಾಡಿರಿ.
ಯೆಶಾಯ 14 : 22 (OCVKN)
“ಅವರಿಗೆ ವಿರುದ್ಧವಾಗಿ ಏಳುತ್ತೇನೆ,” ಎಂದು ಸೇನಾಧೀಶ್ವರ ಯೆಹೋವ ದೇವರು ಹೇಳುತ್ತಾರೆ. “ಬಾಬಿಲೋನಿನಿಂದ ಆಕೆಯ ಹೆಸರನ್ನೂ, ಉಳಿದ ಜನರನ್ನೂ, ಆಕೆಯ ಮಕ್ಕಳನ್ನೂ ಅದರ ಸಂತತಿಯವರನ್ನೂ ನಿರ್ಮೂಲ ಮಾಡುವೆನು,” ಎಂದು ಯೆಹೋವ ದೇವರು ಹೇಳುತ್ತಾರೆ.
ಯೆಶಾಯ 14 : 23 (OCVKN)
“ಅದನ್ನು ಮುಳ್ಳುಹಂದಿಗಳ ನಿವಾಸವಾಗಿಯೂ, ಕೊಳಚೆ ಪ್ರದೇಶವನ್ನಾಗಿಯೂ ಪರಿವರ್ತಿಸುವೆನು. ನಾಶನದ ಕಸಬರಿಗೆಯಿಂದ ಅದನ್ನು ಗುಡಿಸುವೆನು,” ಎಂದು ಸೇನಾಧೀಶ್ವರ ಯೆಹೋವ ದೇವರು ಹೇಳುತ್ತಾರೆ.
ಯೆಶಾಯ 14 : 24 (OCVKN)
ಸೇನಾಧೀಶ್ವರ ಯೆಹೋವ ದೇವರು ಆಣೆ ಇಟ್ಟು ಹೇಳುವುದೇನೆಂದರೆ, “ನಾನು ಯೋಚಿಸಿದ ರೀತಿಯಲ್ಲಿ ಖಂಡಿತವಾಗಿ ಆಗುವುದು. ನಾನು ಉದ್ದೇಶಿಸಿದ ರೀತಿಯಲ್ಲಿಯೇ ನೆರವೇರುವುದು.
ಯೆಶಾಯ 14 : 25 (OCVKN)
ಅಸ್ಸೀರಿಯವನ್ನು ನನ್ನ ದೇಶದಲ್ಲಿ ಮುರಿದುಬಿಡುವೆನು. ನನ್ನ ಪರ್ವತಗಳ ಮೇಲೆ ಅವರನ್ನು ತುಳಿದುಬಿಡುವೆನು. ಅವನ ನೊಗವು ನನ್ನ ಜನರ ಮೇಲಿಂದ ತೊಲಗಿ, ಅವರ ಭಾರವು ಅವರ ಭುಜಗಳ ಮೇಲಿನಿಂದ ತೊಲಗುವುದು.”
ಯೆಶಾಯ 14 : 26 (OCVKN)
ಇದೇ ಸಮಸ್ತ ಭೂಮಿಯ ವಿಷಯ ಆಲೋಚಿಸಿದ ಉದ್ದೇಶ. ಇದೇ ಜನಾಂಗಗಳ ಮೇಲೆಲ್ಲಾ ಚಾಚಿದ ನನ್ನ ಕೈ.
ಯೆಶಾಯ 14 : 27 (OCVKN)
ಏಕೆಂದರೆ ಸೇನಾಧೀಶ್ವರ ಯೆಹೋವ ದೇವರು ಉದ್ದೇಶಿಸಿದ್ದಾರೆ. ಅದನ್ನು ಯಾರು ವ್ಯರ್ಥಪಡಿಸುವರು? ಅವರು ಎತ್ತಿದ ಕೈಯನ್ನು, ಹಿಂದಕ್ಕೆ ತಳ್ಳುವವರು ಯಾರು? ಎಂಬುದೇ.
ಯೆಶಾಯ 14 : 28 (OCVKN)
ಫಿಲಿಷ್ಟಿಯರಿಗೆ ವಿರೋಧವಾದ ಪ್ರವಾದನೆ
ಯೆಶಾಯ 14 : 29 (OCVKN)
ಅರಸನಾದ ಆಹಾಜನು ಸತ್ತ ವರುಷದಲ್ಲಿ ಈ ದೈವೋಕ್ತಿ ಬಂದಿತು: ಸಮಸ್ತ ಫಿಲಿಷ್ಟಿಯರೇ, ನಿಮ್ಮನ್ನು ಹೊಡೆದ ಕೋಲು ಮುರಿದು ಹೋಯಿತೆಂದು ನೀವು ಉಲ್ಲಾಸಿಸಬೇಡಿರಿ. ಏಕೆಂದರೆ ಹಾವಿನ ಸಂತಾನದಿಂದ ವಿಷಸರ್ಪವು ಉಂಟಾಗುವುದು. ಅದರ ಫಲವು ಹಾರುವ ವಿಷಸರ್ಪವೇ.
ಯೆಶಾಯ 14 : 30 (OCVKN)
ಬಡವರಲ್ಲಿ ಬಡವರಾದವರು ಆಹಾರ ಕಂಡುಕೊಳ್ಳುವರು. ಕೊರತೆಯಲ್ಲಿರುವವರು ಸುರಕ್ಷಿತವಾಗಿ ನಿದ್ರಿಸುವರು. ಆದರೆ ನಿನ್ನ ಸಂತಾನದವರೋ ಕ್ಷಾಮದಿಂದ ಹತರಾಗುವರು. ನಿನ್ನಲ್ಲಿ ಉಳಿದವರನ್ನು ಅದು ಹತಮಾಡುವುದು.
ಯೆಶಾಯ 14 : 31 (OCVKN)
ದ್ವಾರವೇ, ಗೋಳಾಡು! ಪಟ್ಟಣವೇ, ಕೂಗು! ಫಿಲಿಷ್ಟಿಯರೇ ಕರಗಿ ಹೋಗಿರಿ. ಹೊಗೆಯು ಉತ್ತರದಿಂದ ಬರುತ್ತದೆ. ಅದರಲ್ಲಿ ಅತ್ತಿತ್ತ ನಡೆಯುವವರು ಯಾರೂ ಇಲ್ಲ.
ಯೆಶಾಯ 14 : 32 (OCVKN)
ಜನಾಂಗಗಳ ದೂತರಿಗೆ ಯಾವ ಉತ್ತರವನ್ನು ಕೊಡಬೇಕು? “ಯೆಹೋವ ದೇವರು ಚೀಯೋನನ್ನು ಸ್ಥಾಪಿಸಿದ್ದಾರೆ. ಬಾಧೆಪಟ್ಟ ಅವರ ಜನರು ಅದನ್ನು ಆಶ್ರಯಿಸಿಕೊಳ್ಳುವರು.”

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 32