ಯೆಶಾಯ 13 : 1 (OCVKN)
ಬಾಬಿಲೋನಿನ ವಿರುದ್ಧ ಪ್ರವಾದನೆ
ಯೆಶಾಯ 13 : 2 (OCVKN)
ಆಮೋಚನ ಮಗ ಯೆಶಾಯನಿಗೆ ಬಾಬಿಲೋನಿನ ವಿಷಯವಾಗಿ ಬಂದ ಪ್ರವಾದನೆ: ಶತ್ರುಗಳು ಬಂದು ಶ್ರೇಷ್ಠರ ದ್ವಾರಗಳೊಳಗೆ ಹೋಗುವಂತೆ ಎತ್ತರವಾದ ಪರ್ವತದ ಮೇಲೆ ನೀವು ಧ್ವಜವನ್ನೆತ್ತಿ ಅವರಿಗೆ ನಿಮ್ಮ ಶಬ್ದವನ್ನು ಕೇಳಿಸುವಂತೆ ಜೋರಾಗಿ ಕೂಗಿ ಕರೆಯಿರಿ.
ಯೆಶಾಯ 13 : 3 (OCVKN)
ನಾನು ನನ್ನ ಪರಿಶುದ್ಧರಿಗೆ ಆಜ್ಞಾಪಿಸಿ, ನನ್ನ ಜಯದಲ್ಲಿ ಉಲ್ಲಾಸಿಸುವವರನ್ನೂ, ನನ್ನ ಶೂರರನ್ನೂ ಸಹ ನನ್ನ ಕೋಪವನ್ನು ತೆಗೆದುಕೊಂಡು ಹೋಗಲು ಕರೆದಿದ್ದೇನೆ.
ಯೆಶಾಯ 13 : 4 (OCVKN)
ಬಹು ಸಮೂಹವು ಇದ್ದಂತೆ ಗದ್ದಲವು ಬೆಟ್ಟಗಳಲ್ಲಿ ಕೇಳಿಬರುತ್ತದೆ. ಒಟ್ಟಿಗೆ ಕೂಡಿಕೊಂಡ ರಾಜ್ಯಗಳ ಜನಾಂಗಗಳ ಆರ್ಭಟ, ಸೇನಾಧೀಶ್ವರ ಯೆಹೋವ ದೇವರು ಯುದ್ಧಕ್ಕೆ ಸೈನ್ಯವನ್ನು ಸಿದ್ಧಮಾಡುತ್ತಾರೆ.
ಯೆಶಾಯ 13 : 5 (OCVKN)
ಯೆಹೋವ ದೇವರು ಮತ್ತು ಅವರ ರೋಷಕ್ಕೆ ಆಯುಧಗಳಾದವರು ದೂರದೇಶದಿಂದ ಎಂದರೆ, ಆಕಾಶಮಂಡಲದ ಕಟ್ಟಕಡೆಯಿಂದ ದೇಶವನ್ನೆಲ್ಲಾ ಹಾಳುಮಾಡುವುದಕ್ಕಾಗಿ ಬರುತ್ತಾರೆ.
ಯೆಶಾಯ 13 : 6 (OCVKN)
ನೀವು ಗೋಳಾಡಿರಿ. ಏಕೆಂದರೆ, ಯೆಹೋವ ದೇವರ ದಿನವು ಸಮೀಪವಾಯಿತು. ಅದು ಸರ್ವಶಕ್ತರಿಂದ ನಾಶರೂಪವಾಗಿ ಬರುವುದು.
ಯೆಶಾಯ 13 : 7 (OCVKN)
ಆದಕಾರಣ ಎಲ್ಲಾ ಕೈಗಳು ಜೋಲು ಬೀಳುವುವು ಮತ್ತು ಪ್ರತಿಯೊಬ್ಬನ ಹೃದಯವು ಕರಗುವುದು.
ಯೆಶಾಯ 13 : 8 (OCVKN)
ಅವರು ಭಯಪಡುವರು. ನೋವು ಮತ್ತು ಬೇನೆಗಳು ಅವರನ್ನು ಆವರಿಸಿಕೊಳ್ಳುವುವು. ಪ್ರಸವವೇದನೆಯಲ್ಲಿರುವ ಸ್ತ್ರೀಯರಂತೆ ಸಂಕಟಪಡುವರು. ಅವರು ಒಬ್ಬರಿಗೊಬ್ಬರು ಭ್ರಮೆ ಪಡುವರು. ಅವರ ಮುಖಗಳು ಜ್ವಾಲೆಯಂತಿರುವುವು.
ಯೆಶಾಯ 13 : 9 (OCVKN)
ಇಗೋ, ಯೆಹೋವ ದೇವರ ದಿನವು ಬರುತ್ತದೆ. ಅದು ಭೂಮಿಯನ್ನು ಹಾಳು ಮಾಡುವುದಕ್ಕೂ, ಅಲ್ಲಿಂದ ಪಾಪಿಗಳನ್ನು ನಿರ್ಮೂಲ ಮಾಡುವುದಕ್ಕೂ, ಕಡುಕೋಪದಿಂದಲೂ, ತೀಕ್ಷ್ಣರೋಷದಿಂದಲೂ ಕ್ರೂರವಾಗಿರುವುದು.
ಯೆಶಾಯ 13 : 10 (OCVKN)
ಏಕೆಂದರೆ, ಆಕಾಶದ ನಕ್ಷತ್ರಗಳು ಮತ್ತು ಅದರ ರಾಶಿಗಳು ತಮ್ಮ ಬೆಳಕನ್ನು ಕೊಡುವುದಿಲ್ಲ. ಸೂರ್ಯನು ಮೂಡುತ್ತಲೇ ಕತ್ತಲಾಗುವನು. ಚಂದ್ರನು ತನ್ನ ಬೆಳಕನ್ನು ಕೊಡುವುದಿಲ್ಲ.
ಯೆಶಾಯ 13 : 11 (OCVKN)
ಅವರ ಕೆಟ್ಟ ಕಾರ್ಯಗಳಿಗೋಸ್ಕರವೂ, ದುಷ್ಟರ ಅಪರಾಧಗಳಿಗೋಸ್ಕರವೂ ನಾನು ಲೋಕವನ್ನು ಶಿಕ್ಷಿಸುವೆನು, ಗರ್ವಿಷ್ಠರ ಅಹಂಕಾರವನ್ನು ನಿಲ್ಲಿಸಿಬಿಡುವೆನು. ಭಯಂಕರವಾದವರ ಹೆಮ್ಮೆಯನ್ನು ತಗ್ಗಿಸುವೆನು.
ಯೆಶಾಯ 13 : 12 (OCVKN)
ಮನುಷ್ಯರನ್ನು ಚೊಕ್ಕ ಬಂಗಾರಕ್ಕಿಂತಲೂ, ಓಫೀರ್ ಬಂಗಾರಕ್ಕಿಂತಲೂ ಜನರು ವಿರಳವಾಗಿರುವಂತೆ ಮಾಡುವೆನು.
ಯೆಶಾಯ 13 : 13 (OCVKN)
ಆದ್ದರಿಂದ ಸೇನಾಧೀಶ್ವರ ಯೆಹೋವ ದೇವರ ಕೋಪವೂ, ಅವರ ತೀಕ್ಷ್ಣರೋಷವೂ ಪ್ರಕಟವಾಗುವ ಆ ದಿನದಂದು, ಆಕಾಶಮಂಡಲ ನಡುಗುವುದು. ಭೂಮಂಡಲ ಅದರ ಸ್ಥಳದಿಂದ ಕದಲುವುದು.
ಯೆಶಾಯ 13 : 14 (OCVKN)
ಅದು ಅಟ್ಟಿದ ಜಿಂಕೆಯಂತೆಯೂ, ಕುರುಬರಿಲ್ಲದ ಕುರಿಗಳಂತೆಯೂ ಇರುವುದು. ಅವರಲ್ಲಿ ಪ್ರತಿಯೊಬ್ಬನೂ ತನ್ನ ಜನರ ಕಡೆಗೆ ತಿರುಗಿಕೊಳ್ಳುವನು; ಪ್ರತಿಯೊಬ್ಬನು ತನ್ನ ಸ್ವದೇಶಕ್ಕೆ ಓಡಿಹೋಗುವನು.
ಯೆಶಾಯ 13 : 15 (OCVKN)
ಸಿಕ್ಕಿದ ಪ್ರತಿಯೊಬ್ಬನೂ ಇರಿತಕ್ಕೆ ಗುರಿಯಾಗುವನು. ಅಟ್ಟಿಹಿಡಿಯಲಾದ ಪ್ರತಿಯೊಬ್ಬನೂ ಖಡ್ಗಕ್ಕೆ ತುತ್ತಾಗುವನು.
ಯೆಶಾಯ 13 : 16 (OCVKN)
ಅವರ ಮಕ್ಕಳೂ ಸಹ ಅವರ ಕಣ್ಣೆದುರಿಗೆ ಹತರಾಗುವರು. ಅವರ ಮನೆಗಳು ಸೂರೆಮಾಡಲಾಗುವುದು. ಅವರ ಹೆಂಡತಿಯರು ಅತ್ಯಾಚಾರಕ್ಕೆ ಈಡಾಗುವರು.
ಯೆಶಾಯ 13 : 17 (OCVKN)
ಇಗೋ, ಬೆಳ್ಳಿಯನ್ನು ಲಕ್ಷಿಸದೆ, ಬಂಗಾರದಲ್ಲಿ ಆನಂದಿಸದೆ ಇರುವ ಮೇದ್ಯರನ್ನು ಅವರಿಗೆ ವಿರೋಧವಾಗಿ ನಾನು ಎಬ್ಬಿಸುವೆನು.
ಯೆಶಾಯ 13 : 18 (OCVKN)
ಅವರ ಬಿಲ್ಲುಗಳು ಸಹ ಯುವಕರನ್ನು ಸಂಹರಿಸುವುವು. ಇವರು ಹಸುಳೆಗಳನ್ನು ಕರುಣಿಸರು. ಇವರು ಮಕ್ಕಳನ್ನು ಕನಿಕರಿಸುವುದಿಲ್ಲ.
ಯೆಶಾಯ 13 : 19 (OCVKN)
ರಾಜ್ಯಗಳ ಘನತೆಯೂ, ಕಸ್ದೀಯರ ಶ್ರೇಷ್ಠವಾದ ಸೌಂದರ್ಯವೂ ಆದ ಬಾಬಿಲೋನನ್ನು ದೇವರು ಸೊದೋಮ್ ಗೊಮೋರಗಳನ್ನು ಕೆಡವಿಬಿಟ್ಟಂತೆ ಕೆಡವಿಬಿಡುವನು.
ಯೆಶಾಯ 13 : 20 (OCVKN)
ಅದು ಎಂದಿಗೂ ನಿವಾಸ ಸ್ಥಳವಾಗದು. ತಲತಲಾಂತರಕ್ಕೂ ಅಲ್ಲಿ ಯಾರೂ ವಾಸಿಸರು; ಯಾವ ಅರಬಿಯನೂ ಗುಡಾರಹಾಕನು. ಕುರುಬರು ಅಲ್ಲಿ ಮಂದೆಗಳನ್ನು ತಂಗಿಸರು.
ಯೆಶಾಯ 13 : 21 (OCVKN)
ಆದರೆ ಕಾಡುಮೃಗಗಳು ಅಲ್ಲಿ ಮಲಗುವುವು. ಅವರ ಮನೆಗಳು ನರಿಗಳಿಂದ ತುಂಬಿರುವುವು, ಅಲ್ಲಿ ಗೂಬೆಗಳು ವಾಸಿಸುವುವು ಮತ್ತು ಕಾಡುಮೇಕೆಗಳು ಅಲ್ಲಿ ಕುಣಿದಾಡುವುವು.
ಯೆಶಾಯ 13 : 22 (OCVKN)
ಅವರ ಕೋಣೆಗಳಲ್ಲಿ ತೋಳಗಳು ಕೂಗುವುವು, ಅವರ ಮೆಚ್ಚಿಕೆಯಾದ ಅರಮನೆಗಳಲ್ಲಿ ನರಿಗಳು ವಾಸಿಸುವುವು. ಬಾಬಿಲೋನಿಗೆ ಕಾಲವು ಸಮೀಪಿಸಿತು. ಇನ್ನು ಅದರ ದಿನಗಳು ಮುಂದುವರಿಯುವುದಿಲ್ಲ.
❮
❯
1
2
3
4
5
6
7
8
9
10
11
12
13
14
15
16
17
18
19
20
21
22