ಹೋಶೇ 14 : 1 (OCVKN)
ಆಶೀರ್ವಾದಕ್ಕಾಗಿ ಪಶ್ಚಾತ್ತಾಪ ಪಡುತ್ತಾರೆ ಇಸ್ರಾಯೇಲೇ, ನಿನ್ನ ದೇವರಾದ ಯೆಹೋವ ದೇವರ ಕಡೆಗೆ ತಿರುಗಿಕೋ. ಏಕೆಂದರೆ ನಿನ್ನ ಪಾಪಗಳೇ, ನಿನ್ನ ಬೀಳುವಿಕೆಗೆ ಕಾರಣ.
ಹೋಶೇ 14 : 2 (OCVKN)
ಮಾತುಗಳನ್ನು ನಿಮ್ಮ ಸಂಗಡ ತೆಗೆದುಕೊಂಡು, ಯೆಹೋವ ದೇವರ ಕಡೆಗೆ ತಿರುಗಿಕೊಂಡು, ಅವರಿಗೆ ಹೇಳಿರಿ: “ನಮ್ಮ ಪಾಪಗಳನ್ನೆಲ್ಲಾ ಕ್ಷಮಿಸಿ, ನಮ್ಮಲ್ಲಿ ಒಳ್ಳೆಯದನ್ನು ಸ್ವೀಕರಿಸಿರಿ. ಆಗ ನಮ್ಮ ಸ್ತೋತ್ರ ಬಲಿಯನ್ನು ನಿಮಗೆ ಅರ್ಪಿಸುವೆವು.
ಹೋಶೇ 14 : 3 (OCVKN)
ಅಸ್ಸೀರಿಯ ನಮ್ಮನ್ನು ರಕ್ಷಿಸುವುದಿಲ್ಲ. ನಾವು ಕುದುರೆಗಳ ಮೇಲೆ ಸವಾರಿ ಮಾಡುವುದಿಲ್ಲ. ನಮ್ಮ ಕೈಗಳಿಂದ ಉಂಟು ಮಾಡಿದವುಗಳಿಗೆ, ‘ನೀವು ನಮ್ಮ ದೇವರುಗಳೇ,’ ಎಂದು ನಾವು ಇನ್ನು ಮುಂದೆ ಹೇಳುವುದೇ ಇಲ್ಲ. ಏಕೆಂದರೆ ನಿಮ್ಮಲ್ಲಿ ದಿಕ್ಕಿಲ್ಲದವರಿಗೆ ಅನುಕಂಪ ದೊರೆಯುತ್ತದೆ.”
ಹೋಶೇ 14 : 4 (OCVKN)
“ನಾನು ಅವರ ಹಿಂಜಾರುವಿಕೆಯನ್ನು ಸ್ವಸ್ಥ ಮಾಡುವೆನು. ನಾನು ಅವರನ್ನು ಮನಃಪೂರ್ವಕವಾಗಿ ಪ್ರೀತಿಸುವೆನು. ಏಕೆಂದರೆ ನನ್ನ ಕೋಪವು ಅವರ ಕಡೆಯಿಂದ ತಿರುಗಿಕೊಂಡಿದೆ.
ಹೋಶೇ 14 : 5 (OCVKN)
ಇಸ್ರಾಯೇಲಿಗೆ ನಾನು ಮಂಜಿನ ಹಾಗೆ ಇರುವೆನು. ಅವನು ತಾವರೆಯ ಹಾಗೆ ಬೆಳೆಯುವನು. ತನ್ನ ಬೇರುಗಳನ್ನು ಲೆಬನೋನಿನ ಹಾಗೆ ಆಳಕ್ಕೆ ಹರಡುವನು.
ಹೋಶೇ 14 : 6 (OCVKN)
ಅವನ ಕೊಂಬೆಗಳು ಹರಡಿಕೊಂಡು, ಅವನ ಸೌಂದರ್ಯವು ಎಣ್ಣೆಮರಗಳ ಹಾಗೆಯೂ ಅವನ ಪರಿಮಳವು ಲೆಬನೋನಿನ ದೇವದಾರಿನ ಹಾಗೆಯೂ ಇರುವುದು.
ಹೋಶೇ 14 : 7 (OCVKN)
ಆತನ ನೆರಳಿನಲ್ಲಿ ಜನರು ವಾಸಿಸುವರು, ಧಾನ್ಯದ ಹಾಗೆ ಜೀವಿಸುವರು, ದ್ರಾಕ್ಷಿಬಳ್ಳಿಯ ಹಾಗೆ ಫಲಪ್ರದವಾಗುವರು. ಇಸ್ರಾಯೇಲಿನ ಕೀರ್ತಿಯು ಲೆಬನೋನಿನ ದ್ರಾಕ್ಷಾರಸದ ಹಾಗೆ ಇರುವುದು.
ಹೋಶೇ 14 : 8 (OCVKN)
ಎಫ್ರಾಯೀಮೇ, ವಿಗ್ರಹಗಳೊಂದಿಗೆ ಇನ್ನು ಏನು ಮಾಡಬೇಕಾಗಿದೆ? ನಾನು ಅವನಿಗೆ ಉತ್ತರಿಸಿದ್ದೇನೆ. ನಾನು ಅವನ ಬಗ್ಗೆ ಕಾಳಜಿ ವಹಿಸುತ್ತೇನೆ. ನಾನು ಹಸಿರಾಗಿ ಬೆಳೆದಿರುವ ತುರಾಯಿ ಮರದಂತಿದ್ದೇನೆ. ನಿನ್ನ ಫಲವು ನನ್ನಿಂದ ಬರುವುದು.”
ಹೋಶೇ 14 : 9 (OCVKN)
ಯಾರು ಬುದ್ಧಿವಂತರು? ಅವರು ಈ ಸತ್ಯಗಳನ್ನು ಅರ್ಥಮಾಡಿಕೊಳ್ಳಲಿ. ಯಾರು ವಿವೇಚನೆಯುಳ್ಳವರು? ಅವರು ಇವುಗಳನ್ನು ತಿಳಿದುಕೊಳ್ಳಲಿ. ಏಕೆಂದರೆ, ಯೆಹೋವ ದೇವರ ಮಾರ್ಗಗಳು ನ್ಯಾಯವಾಗಿವೆ. ನೀತಿವಂತರು ಅದರಲ್ಲಿ ನಡೆಯುವರು. ಆದರೆ ಅಕ್ರಮಗಾರರು ಅವುಗಳಿಂದ ಎಡವಿಬೀಳುವರು.

1 2 3 4 5 6 7 8 9