ಹೋಶೇ 13 : 1 (OCVKN)
ಇಸ್ರಾಯೇಲಿನ ಮೇಲೆ ಯೆಹೋವ ದೇವರ ರೌದ್ರ “ಪೂರ್ವದಲ್ಲಿ ಎಫ್ರಾಯೀಮು ಮಾತನಾಡುವಾಗ, ಅವನು ತನ್ನನ್ನು ಇಸ್ರಾಯೇಲಿನಲ್ಲಿ ಹೆಚ್ಚಿಸಿಕೊಂಡನು. ಆದರೆ ಬಾಳನ ಆರಾಧನೆಯಲ್ಲಿ ಅವನು ಅಪರಾಧಿಯಾಗಿ ಸತ್ತನು.
ಹೋಶೇ 13 : 2 (OCVKN)
ಈಗ ಅವರು ಹೆಚ್ಚೆಚ್ಚಾಗಿ ಪಾಪವನ್ನು ಮಾಡುತ್ತಾರೆ. ಸ್ವಂತ ಬುದ್ಧಿಯ ಪ್ರಕಾರ ತಮ್ಮ ಬೆಳ್ಳಿಯಿಂದ ಎರಕದ ವಿಗ್ರಹಗಳನ್ನೂ, ಮೂರ್ತಿಗಳನ್ನೂ ಮಾಡಿಕೊಂಡಿದ್ದಾರೆ. ಅದೆಲ್ಲವೂ ಕಮ್ಮಾರರ ಕೈಕೆಲಸವೇ. ಅವರು ನರಬಲಿಯನ್ನು ಅರ್ಪಿಸುತ್ತಾರೆ, ಬಸವನ ವಿಗ್ರಹಕ್ಕೆ ಮುದ್ದಿಡುತ್ತಾರೆ,” ಎಂದು ಜನರು ಅವರ ಬಗ್ಗೆ ಹೇಳುತ್ತಾರೆ.
ಹೋಶೇ 13 : 3 (OCVKN)
ಆದ್ದರಿಂದ ಅವರು ಪ್ರಾತಃಕಾಲದ ಮಂಜಿನ ಹಾಗೆಯೂ, ಬೇಗನೆ ಮಾಯವಾಗುವ ಇಬ್ಬನಿಯ ಹಾಗೆಯೂ, ಸುಳಿಗಾಳಿಯು ಕಣದಿಂದ ಬಡಿದುಕೊಂಡು ಹೋಗುವ ಹೊಟ್ಟಿನ ಹಾಗೆಯೂ, ಚಿಮಿಣಿಯಿಂದ ಹೊರಡುವ ಹೊಗೆಯ ಹಾಗೆಯೂ ಇರುವರು.
ಹೋಶೇ 13 : 4 (OCVKN)
ಆದರೂ ನಾನು ಈಜಿಪ್ಟಿನಿಂದ ನಿನ್ನನ್ನು ಬಿಡಿಸಿಕೊಂಡು ಬಂದಾಗಿನಿಂದ, ನಾನೇ ನಿನ್ನ ದೇವರಾಗಿರುವ ಯೆಹೋವನಾಗಿದ್ದೇನೆ. ನೀನು ನನ್ನ ಹೊರತು ಯಾವ ದೇವರನ್ನೂ ತಿಳಿದುಕೊಳ್ಳಬಾರದು. ಏಕೆಂದರೆ ನನ್ನ ಹೊರತು ನಿನಗೆ ಬೇರೆ ರಕ್ಷಕನು ಇಲ್ಲ.
ಹೋಶೇ 13 : 5 (OCVKN)
ನಾನು ನಿನ್ನನ್ನು ಮರುಭೂಮಿಯಲ್ಲಿಯೂ, ಬಹು ಬಾಯಾರಿಕೆಯ ದೇಶದಲ್ಲಿಯೂ ತಿಳಿದುಕೊಂಡಿದ್ದೇನೆ.
ಹೋಶೇ 13 : 6 (OCVKN)
ನಾನು ಅವರಿಗೆ ಆಹಾರ ಕೊಟ್ಟೆನು, ಅವರು ತೃಪ್ತರಾದರು. ಅವರು ತೃಪ್ತರಾದಾಗ, ಅಹಂಕಾರಿಗಳಾದರು, ಅನಂತರ ಅವರು ನನ್ನನ್ನು ಮರೆತುಬಿಟ್ಟರು.
ಹೋಶೇ 13 : 7 (OCVKN)
ಆದ್ದರಿಂದ ನಾನು ಅವರಿಗೆ ಸಿಂಹದ ಹಾಗೆ ಆಗುವೆನು. ಮಾರ್ಗದಲ್ಲಿ ಚಿರತೆಯ ಹಾಗೆ ಅವರಿಗಾಗಿ ಹೊಂಚುಹಾಕುವೆನು.
ಹೋಶೇ 13 : 8 (OCVKN)
ನಾನು ಮರಿಯನ್ನು ಕಳೆದುಕೊಂಡ ಕರಡಿಯಂತೆ ಅವರನ್ನು ಎದುರುಗೊಳ್ಳುವೆನು. ಅವರ ಹೃದಯದ ಪೊರೆಯನ್ನು ಹರಿದುಬಿಡುವೆನು. ನಾನು ಸಿಂಹದ ಹಾಗೆ ಅವರನ್ನು ನುಂಗುವೆನು. ಕಾಡುಮೃಗವು ಅವರನ್ನು ಸೀಳಿ ಹಾಕುವುದು.
ಹೋಶೇ 13 : 9 (OCVKN)
“ಇಸ್ರಾಯೇಲೇ, ನೀನು ನಿನ್ನ ಬೆಂಬಲವಾದ ನನಗೆ ತಿರುಗಿಬಿದ್ದದರಿಂದ ನಾಶವಾಗಿದ್ದೀ.
ಹೋಶೇ 13 : 10 (OCVKN)
ಈಗ ನಿನ್ನ ಅರಸನು ಎಲ್ಲಿ? ನಿನ್ನ ಪಟ್ಟಣಗಳೆಲ್ಲಾ ನಿನ್ನವರನ್ನು ಉದ್ಧರಿಸುವನೋ? ನನಗೆ ರಾಜ್ಯವನ್ನೂ ರಾಜ್ಯಾಧಿಕಾರಿಗಳನ್ನೂ ದಯಪಾಲಿಸು ಎಂದು ನನ್ನನ್ನು ಕೇಳಿಕೊಂಡಿಯಷ್ಟೆ. ಆ ನ್ಯಾಯಾಧಿಪತಿಗಳು ಎಲ್ಲಿ?
ಹೋಶೇ 13 : 11 (OCVKN)
ನನ್ನ ಕೋಪದಲ್ಲಿ ನಿನಗೆ ಅರಸನನ್ನು ಕೊಟ್ಟೆನು ಮತ್ತು ನನ್ನ ರೌದ್ರದಲ್ಲಿ ಅವನನ್ನು ತೆಗೆದುಹಾಕಿದೆನು.
ಹೋಶೇ 13 : 12 (OCVKN)
ಎಫ್ರಾಯೀಮಿನ ದುಷ್ಕೃತ್ಯವು ಸಂಗ್ರಹವಾಗಿದೆ. ಅವನ ಪಾಪವು ದಾಖಲೆಯಾಗಿದೆ.
ಹೋಶೇ 13 : 13 (OCVKN)
ಎಫ್ರಾಯೀಮಿಗೆ ಪ್ರಸವವೇದನೆ ಬಂದಿದೆ. ಅಷ್ಟೇ ಅಲ್ಲ. ಅದೊಂದು ಮಂಕು ಮಗುವಿನಂತಿದೆ. ಹುಟ್ಟಿ, ಹೊರಗೆ ಬರಬಹುದಾದರೂ, ಅವನು ಬಾರದೆ ಇದ್ದಾನೆ.
ಹೋಶೇ 13 : 14 (OCVKN)
“ಸಮಾಧಿಯ ಶಕ್ತಿಯಿಂದ ಅವರನ್ನು ಕ್ರಯಕೊಟ್ಟು ವಿಮೋಚಿಸುವೆನು. ಮರಣದಿಂದ ಅವರನ್ನು ಬಿಡಿಸುವೆನು. ಮರಣವೇ ನಿನ್ನ ಉಪದ್ರವ ಎಲ್ಲಿ? ಪಾತಾಳವೇ ನಿನ್ನ ವಿನಾಶವೆಲ್ಲಿ? “ಅನುಕಂಪವು ನನ್ನಿಂದ ದೂರವಾಗಿದೆ.
ಹೋಶೇ 13 : 15 (OCVKN)
ಎಫ್ರಾಯೀಮು ತನ್ನ ಸಹೋದರರಲ್ಲಿ ಫಲ ಸಮೃದ್ಧವಾಗಿದ್ದರೂ, ಕಾಡಿನಿಂದ ಯೆಹೋವ ದೇವರು ಬೀಸಮಾಡುವ ಪೂರ್ವ ಗಾಳಿಯು ಬರಲು, ಅವನ ಬುಗ್ಗೆಯು ಬತ್ತುವುದು. ಅವನ ಒರತೆಯು ಒಣಗುವುದು. ಅವನ ಬೊಕ್ಕಸಗಳ ನಿಧಿಯನ್ನು ಶತ್ರುಗಳು ಸೂರೆಮಾಡುವರು.
ಹೋಶೇ 13 : 16 (OCVKN)
ಸಮಾರ್ಯವು ತನ್ನ ದೇವರಿಗೆ ತಿರುಗಿಬಿದ್ದದರಿಂದ, ತನ್ನ ದೋಷಫಲವನ್ನು ಅನುಭವಿಸಲೇಬೇಕು. ಅದರ ಜನರು ಖಡ್ಗದಿಂದ ಹತರಾಗುವರು, ವೈರಿಗಳು ಅವಳ ಮಕ್ಕಳನ್ನು ಬಂಡೆಗೆ ಅಪ್ಪಳಿಸುವರು. ಗರ್ಭಿಣಿಯರ ಹೊಟ್ಟೆಯನ್ನು ಸೀಳುವರು.”

1 2 3 4 5 6 7 8 9 10 11 12 13 14 15 16