ಹೋಶೇ 12 : 1 (OCVKN)
ಎಫ್ರಾಯೀಮು ಗಾಳಿಯನ್ನು ತಿನ್ನುತ್ತದೆ. ಪೂರ್ವದ ಗಾಳಿಯ ಹಿಂದೆ ಹಿಂಬಾಲಿಸಿಕೊಂಡು ಹೋಗುತ್ತದೆ. ಅವನು ದಿನವೆಲ್ಲಾ ಸುಳ್ಳನ್ನೂ, ಹಿಂಸೆಯನ್ನೂ ಹೆಚ್ಚಿಸಿ, ಅಸ್ಸೀರಿಯರೊಂದಿಗೆ ಒಡಂಬಡಿಕೆ ಮಾಡಿಕೊಂಡು, ಈಜಿಪ್ಟಿಗೆ ಎಣ್ಣೆಯನ್ನು ಕಾಣಿಕೆಯಾಗಿ ಹೊತ್ತುಕೊಂಡು ಹೋಗುತ್ತಾನೆ.
ಹೋಶೇ 12 : 2 (OCVKN)
ಯೆಹೂದರೊಂದಿಗೆ ಯೆಹೋವ ದೇವರು ಆಪಾದನೆ ಮಾಡಿ, ಯಾಕೋಬನನ್ನು ತನ್ನ ಮಾರ್ಗಗಳ ಪ್ರಕಾರ ಶಿಕ್ಷಿಸಿ, ಅವನ ಕ್ರಿಯೆಗಳ ಪ್ರಕಾರ ಮುಯ್ಯಿ ತೀರಿಸಿ, ಅವನಿಗೆ ಪ್ರತಿಫಲವನ್ನು ಕೊಡುವರು.
ಹೋಶೇ 12 : 3 (OCVKN)
ಗರ್ಭದಲ್ಲಿ ಅವನು ತನ್ನ ಸಹೋದರನನ್ನು ಹಿಮ್ಮಡಿಯಿಂದ ಹಿಡಿದು, ಮನುಷ್ಯನಾಗಿಯೇ ದೇವರೊಂದಿಗೆ ಹೋರಾಡಿದನು.
ಹೋಶೇ 12 : 4 (OCVKN)
ಯಾಕೋಬನು ದೇವದೂತನ ಸಂಗಡ ಹೋರಾಡಿ ಜಯಿಸಿದನು. ಅವನು ಅತ್ತು ಆತನ ಅನುಗ್ರಹಕ್ಕಾಗಿ ವಿಜ್ಞಾಪನೆಯನ್ನು ಸಲ್ಲಿಸಿದನು. ಅವನು ಆತನನ್ನು ಬೇತೇಲಿನಲ್ಲಿ ಕಂಡುಕೊಂಡನು. ಅಲ್ಲಿ ಅವನು ಆತನೊಂದಿಗೆ ಮಾತನಾಡಿದನು.
ಹೋಶೇ 12 : 5 (OCVKN)
ಅವರೇ ಸರ್ವಶಕ್ತರಾದ ಯೆಹೋವ ದೇವರು; ಅವರ ಪ್ರಸಿದ್ಧ ಹೆಸರು ಯೆಹೋವ ದೇವರು ಎಂಬುದೇ.
ಹೋಶೇ 12 : 6 (OCVKN)
ಆದರೆ ನೀನು ನಿನ್ನ ದೇವರ ಕಡೆಗೆ ತಿರುಗಿಕೋ. ಪ್ರೀತಿಯನ್ನೂ, ನ್ಯಾಯವನ್ನೂ ಪಾಲಿಸು ಮತ್ತು ನಿನ್ನ ದೇವರಿಗಾಗಿ ಯಾವಾಗಲೂ ಕಾದುಕೊಂಡಿರು.
ಹೋಶೇ 12 : 7 (OCVKN)
ಅವನು ವ್ಯಾಪಾರಿಯಾಗಿದ್ದು, ಅವನ ಕೈಯಲ್ಲಿ ಮೋಸದ ತಕ್ಕಡಿ ಇದೆ. ಇತರರಿಂದ ಕಸಿದುಕೊಳ್ಳಬೇಕೆಂಬುದೇ ಅವನ ದುರಾಶೆ.
ಹೋಶೇ 12 : 8 (OCVKN)
ಎಫ್ರಾಯೀಮು ಹೆಚ್ಚಳ ಪಡುತ್ತಾ ಹೀಗೆಂದು ಹೇಳುತ್ತದೆ, “ನಾನು ಐಶ್ವರ್ಯವಂತನಾದೆನು, ನಾನು ಆಸ್ತಿಯನ್ನು ಕಂಡುಕೊಂಡೆನು. ನನ್ನ ಐಶ್ವರ್ಯದಿಂದಾಗಿ ಅವರು ನನ್ನಲ್ಲಿ ಯಾವ ಅಪರಾಧ ಅಥವಾ ಪಾಪವನ್ನು ಕಾಣುವುದಿಲ್ಲ.”
ಹೋಶೇ 12 : 9 (OCVKN)
ಆದರೆ ಈಜಿಪ್ಟಿನಿಂದ ನಿನ್ನನ್ನು ಬಿಡಿಸಿಕೊಂಡು ಬಂದಾಗಿನಿಂದಲೂ, ನಿನ್ನ ದೇವರಾಗಿರುವ ಯೆಹೋವ ದೇವರಾದ ನಾನು, ಜಾತ್ರೆಯ ದಿನಗಳಲ್ಲಿ ನೀವು ವನವಾಸ ಮಾಡಿದಂತೆ, ನಿಮ್ಮನ್ನು ಪುನಃ ಗುಡಾರದ ವಾಸಕ್ಕೆ ಗುರಿಪಡಿಸುವೆನು.
ಹೋಶೇ 12 : 10 (OCVKN)
ನಾನು ಪ್ರವಾದಿಗಳೊಂದಿಗೆ ಮಾತನಾಡಿದ್ದೇನೆ. ಅವರಿಗೆ ಹಲವಾರು ದರ್ಶನಗಳನ್ನು ದಯಪಾಲಿಸಿದ್ದೇನೆ. ಅವರ ಮುಖಾಂತರ ಸಾಮ್ಯಗಳನ್ನು ಜನರಿಗೆ ಹೇಳಿದ್ದೇನೆ.
ಹೋಶೇ 12 : 11 (OCVKN)
ಗಿಲ್ಯಾದಿನಲ್ಲಿ ದುಷ್ಟತನ ಇದೆಯೋ? ಅಲ್ಲಿನ ಜನರು ಅಯೋಗ್ಯರೇ? ಅವರು ಗಿಲ್ಗಾಲಿನಲ್ಲಿ ಹೋರಿಗಳನ್ನು ಅರ್ಪಿಸುತ್ತಾರೆಯೇ? ಅವರ ಬಲಿಪೀಠಗಳು ಹೊಲದ ಸಾಲುಗಳಲ್ಲಿರುವ ಕಲ್ಲು ಕುಪ್ಪೆಯ ಹಾಗಿವೆ, ಎಂದು ಹೇಳಿದನು.
ಹೋಶೇ 12 : 12 (OCVKN)
ಯಾಕೋಬನು ಸಿರಿಯಾ ದೇಶಕ್ಕೆ ಓಡಿಹೋದನು. ಇಸ್ರಾಯೇಲನು ಹೆಂಡತಿಯ ನಿಮಿತ್ತ ಸೇವೆಮಾಡಿ, ಹೆಂಡತಿಯ ನಿಮಿತ್ತ ಕುರಿಗಳನ್ನು ಕಾದನು.
ಹೋಶೇ 12 : 13 (OCVKN)
ಪ್ರವಾದಿಯಿಂದ ಯೆಹೋವ ದೇವರು ಇಸ್ರಾಯೇಲರನ್ನು ಈಜಿಪ್ಟಿನೊಳಗಿಂದ ಬರಮಾಡಿ, ಆ ಪ್ರವಾದಿಯಿಂದಲೇ ಆತನು ಅವರನ್ನು ಕಾಪಾಡಿದರು.
ಹೋಶೇ 12 : 14 (OCVKN)
ಆದರೂ ಎಫ್ರಾಯೀಮು ಬಹು ಕಠೋರವಾಗಿ ಆತನನ್ನು ರೇಗಿಸಿತು. ಆದ್ದರಿಂದ ಯೆಹೋವ ದೇವರು ಅದರ ರಕ್ತಾಪರಾಧವನ್ನು ಅದರ ಮೇಲೆ ಬರಮಾಡುವರು. ಅವನ ನಿಂದೆಯನ್ನು ಯೆಹೋವ ದೇವರು ಅವನ ಮೇಲೆ ಬರಮಾಡುವರು.
❮
❯
1
2
3
4
5
6
7
8
9
10
11
12
13
14