ಇಬ್ರಿಯರಿಗೆ 8 : 1 (OCVKN)
ಹೊಸ ಒಡಂಬಡಿಕೆಯ ಮಹಾಯಾಜಕ ನಾವು ಈಗ ಹೇಳುವ ವಿಷಯಗಳ ಮುಖ್ಯಾಂಶ ಇದು: ಪರಲೋಕದೊಳಗೆ ಮಹೋನ್ನತ ದೇವರ ಸಿಂಹಾಸನದ ಬಲಗಡೆಯಲ್ಲಿ ಕುಳಿತುಕೊಂಡಿರುವಂಥ ಮಹಾಯಾಜಕ ಒಬ್ಬರು ನಮಗಿದ್ದಾರೆ.
ಇಬ್ರಿಯರಿಗೆ 8 : 2 (OCVKN)
ಕ್ರಿಸ್ತ ಯೇಸು ಆಗಿರುವ ಇವರು ಪವಿತ್ರ ಸ್ಥಾನದಲ್ಲಿ ಅಂದರೆ, ಮನುಷ್ಯರಿಂದಲ್ಲ ದೇವರೇ ನಿರ್ಮಿಸಿದ ಪವಿತ್ರ ಸ್ಥಾನದ ನಿಜ ಗುಡಾರದಲ್ಲಿ ಸೇವೆಮಾಡುವವರಾಗಿದ್ದಾರೆ.
ಇಬ್ರಿಯರಿಗೆ 8 : 3 (OCVKN)
ಪ್ರತಿಯೊಬ್ಬ ಮಹಾಯಾಜಕನು ಕಾಣಿಕೆಗಳನ್ನೂ ಯಜ್ಞಗಳನ್ನೂ ಸಮರ್ಪಿಸುವುದಕ್ಕೆ ನೇಮಕವಾಗಿರುತ್ತಾನೆ. ಆದ್ದರಿಂದ ಸಮರ್ಪಿಸುವುದಕ್ಕೆ ಯೇಸುವಿಗೆ ಸಹ ಏನಾದರೂ ಇರುವುದು ಅವಶ್ಯವಾಗಿದೆ.
ಇಬ್ರಿಯರಿಗೆ 8 : 4 (OCVKN)
ಯೇಸು ಭೂಮಿಯ ಮೇಲೆ ಇರುವುದಾದರೆ ಯಾಜಕರೇ ಆಗುತ್ತಿರಲಿಲ್ಲ. ಏಕೆಂದರೆ ಮೋಶೆಯ ನಿಯಮದ ಪ್ರಕಾರ ಕಾಣಿಕೆಗಳನ್ನು ಸಮರ್ಪಿಸುವವರು ಇದ್ದಾರಲ್ಲಾ.
ಇಬ್ರಿಯರಿಗೆ 8 : 5 (OCVKN)
ಅವರು ಪರಲೋಕದಲ್ಲಿರುವವುಗಳ ನಿದರ್ಶನವೂ ಛಾಯೆಯೂ ಆಗಿರುವ ಆಲಯಗಳಲ್ಲಿ ಸೇವೆಯನ್ನು ನಡೆಸುವರು. ಇದರಂತೆಯೇ ಮೋಶೆಯು ಗುಡಾರವನ್ನು ಮಾಡುವುದಕ್ಕಿದ್ದಾಗ, “ನೋಡು, ನಾನು ಬೆಟ್ಟದಲ್ಲಿ ನಿನಗೆ ತೋರಿಸಿದ ಮಾದರಿಯ ಪ್ರಕಾರವೇ ಎಲ್ಲವನ್ನೂ ಮಾಡಬೇಕು,”* ವಿಮೋ 25:40 ಎಂದು ದೇವರಿಂದ ಎಚ್ಚರಿಕೆ ಕೊಡಲಾಗಿತ್ತಲ್ಲವೇ?
ಇಬ್ರಿಯರಿಗೆ 8 : 6 (OCVKN)
ಯೇಸುವಾದರೋ ಈಗ ಅದಕ್ಕಿಂತ ಶ್ರೇಷ್ಠ ಸೇವೆಯನ್ನು ಹೊಂದಿದವರಾಗಿದ್ದಾರೆ. ಅಷ್ಟೇ ಅಲ್ಲದೆ ಇವರು ಉತ್ತಮ ವಾಗ್ದಾನಗಳ ಮೇಲೆ ಸ್ಥಾಪಿತವಾದ ಒಡಂಬಡಿಕೆಗೆ ಸಹ ಮಧ್ಯಸ್ಥರಾಗಿದ್ದಾರೆ.
ಇಬ್ರಿಯರಿಗೆ 8 : 7 (OCVKN)
ಆ ಮೊದಲನೆಯ ಒಡಂಬಡಿಕೆಯು ತಪ್ಪಿಲ್ಲದ್ದಾಗಿದ್ದರೆ, ಎರಡನೆಯ ಒಡಂಬಡಿಕೆಯ ಅವಶ್ಯಕತೆಯೇ ಇರುತ್ತಿರಲಿಲ್ಲ.
ಇಬ್ರಿಯರಿಗೆ 8 : 8 (OCVKN)
ಆದರೆ ದೇವರು ಜನರಲ್ಲಿ ತಪ್ಪನ್ನು ಕಂಡುಹಿಡಿದು ಹೀಗೆಂದರು, “ಇಗೋ, ನಾನು ಇಸ್ರಾಯೇಲ್ ವಂಶದವರೊಂದಿಗೂ ಯೂದ ವಂಶದವರೊಂದಿಗೂ ಒಂದು ಹೊಸ ಒಡಂಬಡಿಕೆಯನ್ನು ಮಾಡಿಕೊಳ್ಳುವ ದಿನಗಳು ಬರುವವು.
ಇಬ್ರಿಯರಿಗೆ 8 : 9 (OCVKN)
ಈ ಒಡಂಬಡಿಕೆಯು ನಾನು ಇವರ ಪೂರ್ವಜರನ್ನು ಕೈಹಿಡಿದು, ಈಜಿಪ್ಟ್ ದೇಶದಿಂದ ಕರೆದುಕೊಂಡು ಬಂದ ದಿವಸದಂದು ಅವರ ಸಂಗಡ ಮಾಡಿಕೊಂಡ ಒಡಂಬಡಿಕೆಯಂಥದಲ್ಲ. ಏಕೆಂದರೆ ಅವರು ನನ್ನ ಒಡಂಬಡಿಕೆಯಲ್ಲಿ ಸ್ಥಿರವಾಗಿ ನಿಲ್ಲಲಿಲ್ಲ. ಆದ್ದರಿಂದ ನಾನು ಅವರನ್ನು ಲಕ್ಷಿಸಲಿಲ್ಲ, ಎಂದು ಕರ್ತದೇವರು ಹೇಳುತ್ತಾರೆ.
ಇಬ್ರಿಯರಿಗೆ 8 : 10 (OCVKN)
ಆ ದಿನಗಳ ತರುವಾಯ ನಾನು ಇಸ್ರಾಯೇಲ್ ವಂಶದವರೊಂದಿಗೆ ಮಾಡಿಕೊಳ್ಳುವ ಒಡಂಬಡಿಕೆಯು ಹೀಗಿರುವುದು: ನಾನು ನನ್ನ ನಿಯಮಗಳನ್ನು ಅವರ ಮನಸ್ಸಿನಲ್ಲಿ ಇಡುವೆನು. ನಾನು ಅವರ ಹೃದಯಗಳ ಮೇಲೆ ಅವುಗಳನ್ನು ಬರೆಯುವೆನು. ನಾನು ಅವರಿಗೆ ದೇವರಾಗಿರುವೆನು. ಅವರು ನನಗೆ ಪ್ರಜೆಯಾಗಿರುವರು.
ಇಬ್ರಿಯರಿಗೆ 8 : 11 (OCVKN)
ಇದಲ್ಲದೆ ಪ್ರತಿಯೊಬ್ಬನು ತನ್ನ ನೆರೆಯವನಿಗೂ, ತನ್ನ ಸಹೋದರನಿಗೂ, ‘ಕರ್ತದೇವರನ್ನು ಅರಿತುಕೊಳ್ಳಿರಿ,’ ಎಂದು ಬೋಧಿಸಬೇಕಾಗಿಲ್ಲ. ಏಕೆಂದರೆ ಚಿಕ್ಕವರಿಂದ ದೊಡ್ಡವರವರೆಗೂ ಎಲ್ಲರೂ ನನ್ನನ್ನು ಅರಿತುಕೊಳ್ಳುವರು.
ಇಬ್ರಿಯರಿಗೆ 8 : 12 (OCVKN)
ನಾನು ಅವರ ದುಷ್ಕೃತ್ಯಗಳನ್ನು ಕ್ಷಮಿಸುವೆನು ಮತ್ತು ಅವರ ಪಾಪಗಳನ್ನು ಇನ್ನೆಂದಿಗೂ ನನ್ನ ನೆನಪಿಗೆ ತಂದುಕೊಳ್ಳುವುದಿಲ್ಲ, ಎಂದು ಕರ್ತದೇವರು ನುಡಿಯುತ್ತಾರೆ.”† ಯೆರೆ 31:31-34
ಇಬ್ರಿಯರಿಗೆ 8 : 13 (OCVKN)
ಇಲ್ಲಿ ದೇವರು “ಹೊಸ ಒಡಂಬಡಿಕೆ” ಎಂದು ಹೇಳಿರುವಾಗ ಮೊದಲಿದ್ದದ್ದನ್ನು ಹಳೆಯದಾಗಿ ಮಾಡಿದ್ದಾರೆ. ಅದು ಹಳೆಯದಾಗುತ್ತಾ ಕ್ಷೀಣವಾಗಿ ಅಳಿದು ಹೋಗಲಿದೆ.
❮
❯
1
2
3
4
5
6
7
8
9
10
11
12
13