ಆದಿಕಾಂಡ 8 : 1 (OCVKN)
ದೇವರು ನೋಹನನ್ನೂ ಅವನ ಸಂಗಡ ನಾವೆಯಲ್ಲಿದ್ದ ಎಲ್ಲಾ ಕಾಡುಮೃಗಗಳನ್ನೂ ಪಶುಗಳನ್ನೂ ನೆನಪಿಗೆ ತಂದುಕೊಂಡು, ಭೂಲೋಕದ ಮೇಲೆ ಗಾಳಿಬೀಸುವಂತೆ ಮಾಡಲಾಗಿ, ನೀರು ತಗ್ಗಿತು.
ಆದಿಕಾಂಡ 8 : 2 (OCVKN)
ಮಾತ್ರವಲ್ಲದೆ ಸಾಗರದ ಸೆಲೆಗಳೂ, ಆಕಾಶದ ದ್ವಾರಗಳೂ ಮುಚ್ಚಿಹೋದವು. ಆಕಾಶದಿಂದ ಬೀಳುವ ಮಳೆ ನಿಂತುಹೋಯಿತು.
ಆದಿಕಾಂಡ 8 : 3 (OCVKN)
ಹೀಗೆ ನೀರು ಭೂಮಿಯ ಮೇಲಿನಿಂದ ಕ್ರಮವಾಗಿ ಇಳಿಯಿತು. ನೀರು ನೂರೈವತ್ತು ದಿನಗಳ ಅಂತ್ಯದಲ್ಲಿ ಕಡಿಮೆಯಾಯಿತು.
ಆದಿಕಾಂಡ 8 : 4 (OCVKN)
ಏಳನೆಯ ತಿಂಗಳಿನ ಹದಿನೇಳನೆಯ ದಿನದಲ್ಲಿ ನಾವೆಯು ಅರಾರಾಟ್ ಬೆಟ್ಟಗಳ ಮೇಲೆ ನಿಂತಿತು.
ಆದಿಕಾಂಡ 8 : 5 (OCVKN)
ಹತ್ತನೆಯ ತಿಂಗಳಿನವರೆಗೂ ನೀರು ಕಡಿಮೆಯಾಗುತ್ತಾ ಬಂತು, ಹತ್ತನೆಯ ತಿಂಗಳಿನ ಮೊದಲಿನ ದಿನದಲ್ಲಿ ಬೆಟ್ಟಗಳ ಶಿಖರಗಳು ಕಾಣಿಸಲಾರಂಭಿಸಿದವು.
ಆದಿಕಾಂಡ 8 : 6 (OCVKN)
ನಲವತ್ತು ದಿನಗಳಾದ ಮೇಲೆ, ನೋಹನು ತಾನು ಮಾಡಿದ ನಾವೆಯ ಕಿಟಕಿಯನ್ನು ತೆರೆದನು.
ಆದಿಕಾಂಡ 8 : 7 (OCVKN)
ಅವನು ಒಂದು ಕಾಗೆಯನ್ನು ಹೊರಕ್ಕೆ ಬಿಟ್ಟನು, ಅದು ಭೂಮಿಯ ಮೇಲಿದ್ದ ನೀರು ಒಣಗುವ ತನಕ ಹೋಗುತ್ತಾ ಬರುತ್ತಾ ಇತ್ತು.
ಆದಿಕಾಂಡ 8 : 8 (OCVKN)
ಭೂಮುಖದ ಮೇಲೆ ಜಲವು ಕಡಿಮೆಯಾಯಿತೋ ಇಲ್ಲವೋ ಎಂದು ನೋಡುವಂತೆ, ಒಂದು ಪಾರಿವಾಳವನ್ನೂ ಹೊರಕ್ಕೆ ಕಳುಹಿಸಿದನು.
ಆದಿಕಾಂಡ 8 : 9 (OCVKN)
ಆದರೆ ನೀರು ಭೂಮಿಯ ಮೇಲೆಲ್ಲಾ ಇರುವುದರಿಂದ ಪಾರಿವಾಳವು ಕಾಲಿಡುವುದಕ್ಕೂ ಸ್ಥಳವನ್ನು ಕಾಣದೆ, ಅವನ ಬಳಿಗೆ ನಾವೆಗೆ ಹಿಂದಿರುಗಿತು. ಅವನು ಕೈಚಾಚಿ ಅದನ್ನು ಹಿಡಿದು, ನಾವೆಯಲ್ಲಿ ತನ್ನ ಬಳಿಗೆ ತೆಗೆದುಕೊಂಡನು.
ಆದಿಕಾಂಡ 8 : 10 (OCVKN)
ಅವನು ಇನ್ನೂ ಏಳು ದಿವಸ ತಡೆದು, ಪಾರಿವಾಳವನ್ನು ಪುನಃ ನಾವೆಯೊಳಗಿಂದ ಹೊರಕ್ಕೆ ಬಿಟ್ಟನು.
ಆದಿಕಾಂಡ 8 : 11 (OCVKN)
ಸಂಜೆಯಲ್ಲಿ ಆ ಪಾರಿವಾಳವು ಅವನ ಬಳಿಗೆ ತಿರುಗಿ ಬರಲು, ಅದರ ಬಾಯಿಯಲ್ಲಿ ಓಲಿವ್ ಮರದ ಹೊಸ ಚಿಗುರು ಇತ್ತು. ನೋಹನು ಅದನ್ನು ನೋಡಿ ನೀರು ಭೂಮಿಯ ಮೇಲಿಂದ ಇಳಿದಿದೆಯೆಂದು ತಿಳಿದುಕೊಂಡನು.
ಆದಿಕಾಂಡ 8 : 12 (OCVKN)
ಇನ್ನೂ ಏಳು ದಿನಗಳು ತಡೆದು, ಆ ಪಾರಿವಾಳವನ್ನು ಬಿಟ್ಟಾಗ, ಅದು ತಿರುಗಿ ಅವನ ಬಳಿಗೆ ಬರಲೇ ಇಲ್ಲ.
ಆದಿಕಾಂಡ 8 : 13 (OCVKN)
ಆರುನೂರ ಒಂದನೆಯ ವರ್ಷದ, ಮೊದಲನೆಯ ತಿಂಗಳಿನ, ಮೊದಲನೆಯ ದಿನದಲ್ಲಿ ಭೂಮಿಯ ಮೇಲಿದ್ದ ನೀರು ಇಳಿದಿತ್ತು. ನೋಹನು ನಾವೆಯ ಮೇಲಿನ ಮುಚ್ಚಳವನ್ನು ತೆಗೆದು ನೋಡಲಾಗಿ, ನೆಲವು ಒಣಗಿತ್ತು.
ಆದಿಕಾಂಡ 8 : 14 (OCVKN)
ಎರಡನೆಯ ತಿಂಗಳಿನ ಇಪ್ಪತ್ತೇಳನೆಯ ದಿನದಲ್ಲಿ ಭೂಮಿಯು ಒಣಗಿತ್ತು.
ಆದಿಕಾಂಡ 8 : 15 (OCVKN)
ಆಗ ದೇವರು ನೋಹನಿಗೆ,
ಆದಿಕಾಂಡ 8 : 16 (OCVKN)
“ನೀನು, ನಿನ್ನ ಹೆಂಡತಿ, ಮಕ್ಕಳು, ಸೊಸೆಯರ ಸಹಿತವಾಗಿ ನಾವೆಯನ್ನು ಬಿಟ್ಟು ಹೊರಗೆ ಬಾ.
ಆದಿಕಾಂಡ 8 : 17 (OCVKN)
ನಿನ್ನ ಬಳಿಯಲ್ಲಿರುವ ಪಕ್ಷಿ, ಪಶು, ಕ್ರಿಮಿ, ಮುಂತಾದ ಎಲ್ಲಾ ಜೀವಿಗಳನ್ನು ಹೊರಗೆ ತೆಗೆದುಕೊಂಡು ಬಾ. ಅವುಗಳಿಗೆ ಭೂಮಿಯ ಮೇಲೆ ಬಹು ಸಂತಾನವಾಗಲಿ, ಅವು ಅಭಿವೃದ್ಧಿಯಾಗಿ ಹೆಚ್ಚಲಿ,” ಎಂದು ಹೇಳಿದರು.
ಆದಿಕಾಂಡ 8 : 18 (OCVKN)
ಹೀಗೆ ನೋಹನು, ಹೆಂಡತಿ, ಮಕ್ಕಳು, ಸೊಸೆಯರ ಸಹಿತವಾಗಿ ಹೊರಗೆ ಬಂದನು.
ಆದಿಕಾಂಡ 8 : 19 (OCVKN)
ಎಲ್ಲಾ ಮೃಗಗಳೂ ಎಲ್ಲಾ ಕ್ರಿಮಿಗಳೂ ಎಲ್ಲಾ ಪಕ್ಷಿಗಳೂ ಭೂಮಿಯಲ್ಲಿ ಹರಿದಾಡುವ ಎಲ್ಲವೂ ತಮ್ಮ ತಮ್ಮ ಜಾತಿಗನುಸಾರವಾಗಿ ನಾವೆಯೊಳಗಿಂದ ಹೊರಗೆ ಬಂದವು.
ಆದಿಕಾಂಡ 8 : 20 (OCVKN)
ನೋಹನು ಯೆಹೋವ ದೇವರಿಗೆ ಬಲಿಪೀಠವನ್ನು ಕಟ್ಟಿ, ಶುದ್ಧವಾದ ಪ್ರತಿ ಪಶುಗಳಿಂದಲೂ ಶುದ್ಧವಾದ ಪ್ರತಿ ಪಕ್ಷಿಗಳಿಂದಲೂ ಕೆಲವೊಂದನ್ನು ಆಯ್ದುಕೊಂಡು, ಬಲಿಪೀಠದ ಮೇಲೆ ದಹನಬಲಿಗಳನ್ನು ಅರ್ಪಿಸಿದನು.
ಆದಿಕಾಂಡ 8 : 21 (OCVKN)
ಅದರ ಸುವಾಸನೆಯು ಯೆಹೋವ ದೇವರಿಗೆ ಗಮಗಮಿಸಲು, ಅವರು ಹೃದಯದೊಳಗೆ, “ಮನುಷ್ಯನ ಹೃದಯದ ಆಲೋಚನೆ ಚಿಕ್ಕಂದಿನಿಂದಲೇ ಕೆಟ್ಟದ್ದು, ಆದರೂ ನಾನು ಇನ್ನು ಮೇಲೆ ಮನುಷ್ಯರ ನಿಮಿತ್ತವಾಗಿ ಭೂಮಿಯನ್ನು ಶಪಿಸುವುದಿಲ್ಲ. ನಾನು ಎಲ್ಲಾ ಜೀವಿಗಳನ್ನೂ ಸಂಹರಿಸಿದಂತೆ ಇನ್ನು ಮೇಲೆ ಸಂಹರಿಸುವುದಿಲ್ಲ.
ಆದಿಕಾಂಡ 8 : 22 (OCVKN)
“ಭೂಮಿಯು ಇರುವವರೆಗೆ ಬಿತ್ತುವ ಕಾಲವೂ ಕೊಯ್ಯುವ ಕಾಲವೂ; ತಂಪೂ ಸೆಕೆಯೂ; ಬೇಸಿಗೆಯೂ ಹಿಮಕಾಲವೂ; ಹಗಲೂ ರಾತ್ರಿಯೂ ನಿಂತುಹೋಗುವುದಿಲ್ಲ.”

1 2 3 4 5 6 7 8 9 10 11 12 13 14 15 16 17 18 19 20 21 22