ಯೆಹೆಜ್ಕೇಲನು 9 : 1 (OCVKN)
ವಿಗ್ರಹಾರಾಧಕರ ಮೇಲೆ ತೀರ್ಪು ಆಗ ಅವರು ದೊಡ್ಡ ಧ್ವನಿಯಿಂದ, “ನಗರದ ಜನರಿಗೆ ನ್ಯಾಯತೀರಿಸಲು ನೇಮಕವಾಗಿರುವವರೇ, ನಿಮ್ಮ ಆಯುಧಗಳನ್ನು ಹಿಡಿದವರಾಗಿ ಸಮೀಪಿಸಿರಿ,” ಎಂದು ಹೇಳುವುದನ್ನು ನಾನು ಕೇಳಿದೆನು.
ಯೆಹೆಜ್ಕೇಲನು 9 : 2 (OCVKN)
ಕೂಡಲೇ ಗದೆಗಳನ್ನು ಹಿಡಿದುಕೊಂಡ ಆರು ಮಂದಿ ಪುರುಷರು ಉತ್ತರಾಭಿಮುಖವಾಗಿರುವ ಮೇಲಣ ಹೆಬ್ಬಾಗಿಲಿನ ಮಾರ್ಗವಾಗಿ ಬಂದರು. ನಾರಿನ ಬಟ್ಟೆಯನ್ನು ಹೊದ್ದುಕೊಂಡು ಲೇಖಕನ ಮಸಿಕುಡಿಕೆಯನ್ನು ನಡುವಿಗೆ ಕಟ್ಟಿಕೊಂಡಿರುವ ಮತ್ತೊಬ್ಬ ಪುರುಷನು ಅವರ ಮಧ್ಯದಲ್ಲಿದ್ದನು. ಇವರೆಲ್ಲರೂ ಒಳಕ್ಕೆ ಸೇರಿ ಕಂಚಿನ ಬಲಿಪೀಠದ ಪಕ್ಕದಲ್ಲಿ ನಿಂತುಕೊಂಡರು.
ಯೆಹೆಜ್ಕೇಲನು 9 : 3 (OCVKN)
ಇಷ್ಟರಲ್ಲಿ ಇಸ್ರಾಯೇಲಿನ ದೇವರ ತೇಜಸ್ಸು ತನ್ನ ವಾಹನವಾದ ಕೆರೂಬಿಯನ್ನು ಬಿಟ್ಟು ಮೇಲಕ್ಕೇರಿ, ಆಲಯದ ಹೊಸ್ತಿಲಿನ ಮೇಲ್ಗಡೆ ನಿಂತಿತ್ತು. ಆಗ ನಾರಿನ ಬಟ್ಟೆಯನ್ನು ಹೊದ್ದುಕೊಂಡು, ಲೇಖಕನ ಮಸಿಕೊಂಬನ್ನು ನಡುವಿಗೆ ಕಟ್ಟಿಕೊಂಡಿದ್ದ ಪುರುಷನನ್ನು ಯೆಹೋವ ದೇವರು ಕೂಗಿ ಅವನಿಗೆ,
ಯೆಹೆಜ್ಕೇಲನು 9 : 4 (OCVKN)
“ಯೆರೂಸಲೇಮಿನ ಪಟ್ಟಣದ ಮಧ್ಯೆ ಹಾದು ಹೋಗಿ, ಅವರ ಮಧ್ಯೆ ನಡೆಯುವ ಎಲ್ಲಾ ಅಸಹ್ಯವಾದವುಗಳ ನಿಮಿತ್ತ ನಿಟ್ಟುಸಿರು ಬಿಡುತ್ತಾ ಅಳುತ್ತಿರುವವರೆಲ್ಲರ ಹಣೆಯ ಮೇಲೆ ಗುರುತು ಹಾಕು,” ಎಂದರು.
ಯೆಹೆಜ್ಕೇಲನು 9 : 5 (OCVKN)
ಮಿಕ್ಕವರಿಗೆ, “ನೀವು ಪಟ್ಟಣದಲ್ಲೆಲ್ಲಾ ಇವನ ಹಿಂದೆ ಸಂಚರಿಸುತ್ತಾ ಹತಿಸಿರಿ, ಯಾರನ್ನೂ ಕಟಾಕ್ಷಿಸದಿರಿ, ಉಳಿಸದಿರಿ,
ಯೆಹೆಜ್ಕೇಲನು 9 : 6 (OCVKN)
ವೃದ್ಧ, ಯುವಕ, ಯುವತಿಯರನ್ನು ಮತ್ತು ಎಳೆಗೂಸುಗಳನ್ನು ಮತ್ತು ಹೆಂಗಸರನ್ನು ಕೊಂದುಹಾಕಿರಿ. ಆದರೆ ಗುರುತು ಯಾವನ ಮೇಲೆ ಇದೆಯೋ, ಅವನನ್ನು ಮುಟ್ಟಬೇಡಿರಿ. ನನ್ನ ಪರಿಶುದ್ಧ ಸ್ಥಳದಿಂದಲೇ ಪ್ರಾರಂಭಿಸಿರಿ” ಎಂದಾಗ, ಅವರು ಆಲಯದ ಮುಂದೆ ಇದ್ದ ಹಿರಿಯರಿಂದ ಪ್ರಾರಂಭಿಸಿದರು.
ಯೆಹೆಜ್ಕೇಲನು 9 : 7 (OCVKN)
ದೇವರು ಅವರಿಗೆ, “ಆಲಯವನ್ನು ಅಶುದ್ಧ ಮಾಡಿರಿ, ಹತರಾದವರಿಂದ ಅಂಗಳಗಳನ್ನು ತುಂಬಿರಿ, ಹೊರಡಿರಿ,” ಎಂದು ಹೇಳಿದರು. ಆಗ ಅವರು ಹೊರಟು ನಗರದಲ್ಲಿದ್ದವರನ್ನು ಕೊಂದರು.
ಯೆಹೆಜ್ಕೇಲನು 9 : 8 (OCVKN)
ಅವರು ಹೊಡೆಯುತ್ತಿರುವಾಗ ಅಲ್ಲಿ ಒಂಟಿಗನಾಗಿ ಉಳಿದ ನಾನು ಅಡ್ಡಬಿದ್ದು, “ಅಯ್ಯೋ, ಸಾರ್ವಭೌಮ ಯೆಹೋವ ದೇವರೇ, ನೀವು ಯೆರೂಸಲೇಮಿನ ಮೇಲೆ ನಿಮ್ಮ ಕೋಪಾಗ್ನಿಯನ್ನು ಸುರಿದು, ಇಸ್ರಾಯೇಲರಲ್ಲಿ ಉಳಿದವರನ್ನೆಲ್ಲಾ ನಾಶಮಾಡುವಿರಾ?” ಎಂದೆನು.
ಯೆಹೆಜ್ಕೇಲನು 9 : 9 (OCVKN)
ಆಗ ಅವರು ನನಗೆ, “ಇಸ್ರಾಯೇಲಿನ ಮತ್ತು ಯೆಹೂದ ಮನೆತನದವರ ಅಕ್ರಮವು ಅತಿ ದೊಡ್ಡದಾಗಿದೆ. ದೇಶವು ರಕ್ತದಿಂದ ತುಂಬಿದೆ, ಪಟ್ಟಣವು ಅಧರ್ಮದಿಂದ ತುಂಬಿದೆ. ‘ಯೆಹೋವ ದೇವರು ದೇಶವನ್ನು ತೊರೆದುಬಿಟ್ಟಿದ್ದಾರೆ, ಯೆಹೋವ ದೇವರು ನೋಡುವುದಿಲ್ಲ,’ ಎಂದು ಅವರು ಹೇಳುತ್ತಾರೆ.
ಯೆಹೆಜ್ಕೇಲನು 9 : 10 (OCVKN)
ನಾವಂತು ಅವರನ್ನು ಕಟಾಕ್ಷಿಸೆನು, ಉಳಿಸೆನು, ಅವರ ದುರ್ನಡತೆಯನ್ನು ಅವರ ತಲೆಗೆ ಕಟ್ಟುವೆನು,” ಎಂದು ಹೇಳಿದರು.
ಯೆಹೆಜ್ಕೇಲನು 9 : 11 (OCVKN)
ನಾರುಮಡಿಯನ್ನು ಧರಿಸಿಕೊಂಡು ದೌತಿಯನ್ನು ತನ್ನ ನಡುವಿಗೆ ಕಟ್ಟಿಕೊಂಡಂಥ ಆ ಮನುಷ್ಯನು, “ವರ್ತಮಾನವನ್ನು ತಂದು ಆಜ್ಞಾಪಿಸಿದ ಹಾಗೆ ಮಾಡಿದ್ದೇನೆ,” ಎಂದನು.

1 2 3 4 5 6 7 8 9 10 11