ಯೆಹೆಜ್ಕೇಲನು 34 : 1 (OCVKN)
ಯೆಹೋವ ದೇವರು ಇಸ್ರಾಯೇಲಿನ ಕುರುಬ ಯೆಹೋವ ದೇವರ ವಾಕ್ಯವು ನನಗೆ ಬಂದಿತು:
ಯೆಹೆಜ್ಕೇಲನು 34 : 2 (OCVKN)
“ಮನುಷ್ಯಪುತ್ರನೇ, ಇಸ್ರಾಯೇಲಿನ ಕುರುಬರಿಗೆ ವಿರುದ್ಧವಾಗಿ ಪ್ರವಾದಿಸಿ ಅವರಿಗೆ ಹೇಳು: ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ತಮ್ಮನ್ನು ತಾವೇ ಮೇಯಿಸಿಕೊಳ್ಳುವ ಇಸ್ರಾಯೇಲಿನ ಕುರುಬರಿಗೆ ಕಷ್ಟ! ಕುರುಬರು ಮಂದೆಗಳನ್ನು ಮೇಯಿಸಬಾರದೋ?
ಯೆಹೆಜ್ಕೇಲನು 34 : 3 (OCVKN)
ನೀವು ಮೊಸರನ್ನು ತಿನ್ನುತ್ತೀರಿ, ಉಣ್ಣೆಯ ಬಟ್ಟೆಯನ್ನು ಹಾಕುತ್ತೀರಿ, ನೀವು ಅವುಗಳಲ್ಲಿ ಕೊಬ್ಬಿದ್ದನ್ನು ಕೊಲ್ಲುತ್ತೀರಿ, ಆದರೆ ಮಂದೆಯನ್ನು ನೀವು ಮೇಯಿಸುವುದಿಲ್ಲ.
ಯೆಹೆಜ್ಕೇಲನು 34 : 4 (OCVKN)
ನೀವು ದುರ್ಬಲರನ್ನು ಬಲಪಡಿಸಲಿಲ್ಲ ಅಥವಾ ರೋಗಿಗಳನ್ನು ಗುಣಪಡಿಸಲಿಲ್ಲ ಅಥವಾ ಮುರಿದದ್ದನ್ನು ಕಟ್ಟುವುದಿಲ್ಲ. ಕಳೆದುಹೋದದ್ದನ್ನು ಹುಡುಕುವುದಿಲ್ಲ, ಓಡಿಸಿದ್ದನ್ನು ನೀವು ಹಿಂದಕ್ಕೆ ತರುವುದಿಲ್ಲ. ಆದರೆ ಬಲಾತ್ಕಾರದಿಂದ ಮತ್ತು ಕ್ರೂರತನದಿಂದ ಅವುಗಳ ಮೇಲೆ ದೊರೆತನ ಮಾಡುತ್ತೀರಿ.
ಯೆಹೆಜ್ಕೇಲನು 34 : 5 (OCVKN)
ಅವು ಚದರಿಹೋದವು. ಏಕೆಂದರೆ ಅಲ್ಲಿ ಕುರುಬರಿಲ್ಲ; ಅವರು ಚದರಿಹೋದಾಗ ಎಲ್ಲಾ ಕಾಡುಮೃಗಗಳಿಗೆ ಆಹಾರವಾದವು.
ಯೆಹೆಜ್ಕೇಲನು 34 : 6 (OCVKN)
ನನ್ನ ಕುರಿಗಳು ಎಲ್ಲಾ ಪರ್ವತಗಳ ಮೇಲೆಯೂ ಪ್ರತಿಯೊಂದು ಎತ್ತರವಾದ ಬೆಟ್ಟಗಳ ಮೇಲೆಯೂ ಅಲೆದಾಡುತ್ತಿವೆ. ಹೌದು, ನನ್ನ ಮಂದೆಯು ಎಲ್ಲಾ ಭೂಮಿಯ ಮೇಲೆಲ್ಲಾ ಚದರಿಹೋಗಿದೆ. ಯಾವನೂ ಅವುಗಳಿಗಾಗಿ ವಿಚಾರಿಸಲಿಲ್ಲ ಅಥವಾ ಹುಡುಕಲಿಲ್ಲ.
ಯೆಹೆಜ್ಕೇಲನು 34 : 7 (OCVKN)
“ ‘ಆದ್ದರಿಂದ ಕುರುಬರೇ, ನೀವು ಯೆಹೋವ ದೇವರ ವಾಕ್ಯವನ್ನು ಕೇಳಿರಿ.
ಯೆಹೆಜ್ಕೇಲನು 34 : 8 (OCVKN)
ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ನನ್ನ ಜೀವದಾಣೆ, ನಿಶ್ಚಯವಾಗಿ ನನ್ನ ಮಂದೆಯು ಕೊಳ್ಳೆಯಾದುದರಿಂದಲೂ ನನ್ನ ಮಂದೆಯು ಕುರುಬನಿಲ್ಲದೆ ಕಾಡುಮೃಗಗಳಿಗೆಲ್ಲಾ ಆಹಾರವಾದದ್ದರಿಂದಲೂ ನನ್ನ ಕುರುಬರು ನನ್ನ ಮಂದೆಯನ್ನು ಹುಡುಕದೆ ಇದ್ದುದರಿಂದಲೂ ಕುರುಬರು ತಮ್ಮನ್ನು ಮೇಯಿಸಿಕೊಂಡರೇ ಹೊರತು ತಮ್ಮ ಕುರಿಗಳನ್ನು ಮೇಯಿಸದೆ ಇದ್ದುದರಿಂದಲೂ
ಯೆಹೆಜ್ಕೇಲನು 34 : 9 (OCVKN)
ಕುರುಬರೇ, ನೀವು ಯೆಹೋವ ದೇವರ ವಾಕ್ಯವನ್ನು ಕೇಳಿರಿ.
ಯೆಹೆಜ್ಕೇಲನು 34 : 10 (OCVKN)
ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ನಾನು ಕುರುಬರಿಗೆ ವಿರುದ್ಧವಾಗಿದ್ದೇನೆ. ನನ್ನ ಮಂದೆಯನ್ನು ಅವರ ಕೈಯಿಂದ ವಿಚಾರಿಸುವೆನು. ಅವರು ಮಂದೆ ಮೇಯಿಸುವುದನ್ನು ನಿಲ್ಲಿಸಿಬಿಡುತ್ತೇನೆ, ಇನ್ನು ಮೇಲೆ ಕುರುಬರು ತಮ್ಮ ಹೊಟ್ಟೆಯನ್ನು ತುಂಬಿಸಿಕೊಳ್ಳರು. ಏಕೆಂದರೆ ನಾನು ನನ್ನ ಮಂದೆಯನ್ನು ಅವರಿಗೆ ಆಹಾರವಾಗದ ಹಾಗೆ ಅವರ ಬಾಯಿಂದ ತಪ್ಪಿಸುತ್ತೇನೆ.
ಯೆಹೆಜ್ಕೇಲನು 34 : 11 (OCVKN)
“ ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ಇಗೋ, ನಾನೇ ನನ್ನ ಕುರಿಗಳನ್ನು ಹುಡುಕಿ ಅವುಗಳನ್ನು ಮೇಯಿಸುತ್ತೇನೆ.
ಯೆಹೆಜ್ಕೇಲನು 34 : 12 (OCVKN)
ಕುರುಬನು ಚದರಿದ್ದ ತನ್ನ ಕುರಿಗಳ ಮಧ್ಯದಲ್ಲಿ ಇರುವ ದಿನದಲ್ಲಿ ತನ್ನ ಮಂದೆಯನ್ನು ಹುಡುಕುವ ಪ್ರಕಾರ ನಾನು ನನ್ನ ಕುರಿಗಳನ್ನು ಹುಡುಕಿ, ಕಾರ್ಮುಗಿಲಿನ ಕಾರ್ಗತ್ತಲಿನ ದಿನದಲ್ಲಿ ಚೆಲ್ಲಾಪಿಲ್ಲಿಯಾದ ಅವುಗಳನ್ನು ಎಲ್ಲಾ ಸ್ಥಳಗಳಿಂದ ಬಿಡಿಸುವೆನು.
ಯೆಹೆಜ್ಕೇಲನು 34 : 13 (OCVKN)
ಜನಗಳೊಳಗಿಂದ ಅವುಗಳನ್ನು ಹೊರಗೆ ತೆಗೆದು, ದೇಶಗಳಿಂದ ಅವುಗಳನ್ನು ಕೂಡಿಸಿ, ಅವುಗಳನ್ನು ಸ್ವಂತ ದೇಶಕ್ಕೆ ತರುವೆನು. ಅವುಗಳನ್ನು ಇಸ್ರಾಯೇಲಿನ ಪರ್ವತಗಳ ಮೇಲೆ ಹಳ್ಳಗಳಲ್ಲಿ ನಿವಾಸಿಗಳುಳ್ಳ ಎಲ್ಲಾ ದೇಶಗಳಲ್ಲಿಯೂ ಮೇಯಿಸುವೆನು.
ಯೆಹೆಜ್ಕೇಲನು 34 : 14 (OCVKN)
ನಾನು ಒಳ್ಳೆಯ ಮೇವಿನಲ್ಲಿ ಅವುಗಳನ್ನು ಮೇಯಿಸುವೆನು. ಇಸ್ರಾಯೇಲಿನ ಎತ್ತರವಾದ ಪರ್ವತಗಳಲ್ಲಿ ಮಂದೆಯು ಇರುವುದು. ಅವುಗಳು ಆ ಒಳ್ಳೆಯ ಮಂದೆಯಲ್ಲಿ ಮಲಗಿ ಇಸ್ರಾಯೇಲಿನ ಪರ್ವತಗಳ ಮೇಲೆ ಪುಷ್ಟಿಯುಳ್ಳ ಮೇವನ್ನು ಮೇಯುವುವು.
ಯೆಹೆಜ್ಕೇಲನು 34 : 15 (OCVKN)
ನಾನೇ ನನ್ನ ಮಂದೆಯನ್ನು ಮೇಯಿಸಿ, ನಾನೇ ಅವುಗಳನ್ನು ಮಲಗಿಸುವೆನೆಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.
ಯೆಹೆಜ್ಕೇಲನು 34 : 16 (OCVKN)
ಕಳೆದುಹೋದದ್ದನ್ನು ನಾನೇ ಹುಡುಕುವೆನು. ದಾರಿ ತಪ್ಪಿದ್ದನ್ನು ನಾನೇ ಮತ್ತೆ ತರುವೆನು, ಮುರಿದ ಅಂಗವನ್ನು ನಾನೇ ಕಟ್ಟುವೆನು. ದುರ್ಬಲವಾದುದನ್ನು ಬಲಗೊಳಿಸುವೆನು, ಆದರೆ ಕೊಬ್ಬಿದ್ದನ್ನೂ ಬಲಿಷ್ಠವಾದದ್ದನ್ನೂ ನಾನೇ ಸಂಹರಿಸುವೆನು. ನಾನು ನ್ಯಾಯದಿಂದ ಮಂದೆಯನ್ನು ಮೇಯಿಸುವೆನು.
ಯೆಹೆಜ್ಕೇಲನು 34 : 17 (OCVKN)
“ ‘ನಿಮಗೆ ನನ್ನ ಮಂದೆಯೇ, ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ, ಕುರಿಗಳ ನಡುವೆ ಮತ್ತು ಟಗರುಗಳ ಹೋತಗಳ ನಡುವೆ ನಾನು ನ್ಯಾಯತೀರಿಸುವೆನು.
ಯೆಹೆಜ್ಕೇಲನು 34 : 18 (OCVKN)
ಒಳ್ಳೆಯ ಮೇವನ್ನು ಚೆನ್ನಾಗಿ ಮೇದು ಮಿಕ್ಕ ಮೇವನ್ನು ತುಳಿದು ಕಸಮಾಡಿದ್ದು ಅಲ್ಪಕಾರ್ಯವೋ? ತಿಳಿನೀರನ್ನು ಕುಡಿದು ಮಿಕ್ಕಿದ್ದನ್ನು ಕಾಲಿನಿಂದ ಕಲಕಿ ಹೊಲಸು ಮಾಡಿದ್ದು ಸಣ್ಣ ಕೆಲಸವೋ?
ಯೆಹೆಜ್ಕೇಲನು 34 : 19 (OCVKN)
ನನ್ನ ಮಂದೆಗಳಾದರೋ ನಿಮ್ಮ ಕಾಲಲ್ಲಿ ಕಸಮಾಡಿದ್ದನ್ನು ತಿನ್ನುವುವು. ನಿನ್ನ ಕಾಲಿನಿಂದ ಕಲಕಿ ಹೊಲಸಾದದ್ದನ್ನು ಕುಡಿಯುವುವು.
ಯೆಹೆಜ್ಕೇಲನು 34 : 20 (OCVKN)
“ ‘ಆದ್ದರಿಂದ ಸಾರ್ವಭೌಮ ಯೆಹೋವ ದೇವರು ನಿಮಗೆ ಹೀಗೆ ಹೇಳುತ್ತಾರೆ, ನಾನು, ನಾನೇ ಕೊಬ್ಬಿದ ಕುರಿಗಳಿಗೂ ಮತ್ತು ಬಡಕಲಾದ ಕುರಿಗಳಿಗೂ ನ್ಯಾಯತೀರಿಸುತ್ತೇನೆ.
ಯೆಹೆಜ್ಕೇಲನು 34 : 21 (OCVKN)
ಏಕೆಂದರೆ ನೀವು ಅವುಗಳನ್ನು ಪಕ್ಕೆ ಮತ್ತು ಹೆಗಲುಗಳಿಂದ ನೂಕುತ್ತಾ ದುರ್ಬಲವಾದವುಗಳನ್ನು ಕೊಂಬುಗಳಿಂದ ಹಾಯುತ್ತಾ ನನ್ನ ಮಂದೆಯನ್ನು ದೂರ ಚದುರಿಸಿಬಿಟ್ಟಿರಿ.
ಯೆಹೆಜ್ಕೇಲನು 34 : 22 (OCVKN)
ಆದ್ದರಿಂದ ನಾನು ನನ್ನ ಮಂದೆಯನ್ನು ಕಾಪಾಡುತ್ತೇನೆ. ಅವು ಎಂದೆಂದೂ ಕೊಳ್ಳೆಯಾಗುವುದಿಲ್ಲ. ನಾನು ಕುರಿಮೇಕೆಗಳ ಮಧ್ಯೆ ನ್ಯಾಯತೀರಿಸುವೆನು.
ಯೆಹೆಜ್ಕೇಲನು 34 : 23 (OCVKN)
ನಾನು ಅವುಗಳ ಮೇಲೆ ಒಬ್ಬ ಕುರುಬನನ್ನು ನೇಮಿಸುವೆನು; ಅವನು ಅವುಗಳನ್ನು ಮೇಯಿಸುತ್ತಾನೆ. ನನ್ನ ಸೇವಕನಾದ ದಾವೀದನೇ ಅವುಗಳನ್ನು ಮೇಯಿಸಿ ಅವುಗಳಿಗೆ ಕುರುಬನಾಗುತ್ತಾನೆ.
ಯೆಹೆಜ್ಕೇಲನು 34 : 24 (OCVKN)
ಯೆಹೋವ ದೇವರಾದ ನಾನೇ ಅವುಗಳಿಗೆ ದೇವರಾಗಿರುವೆನು; ನನ್ನ ಸೇವಕನಾದ ದಾವೀದನು ಅವುಗಳ ಮಧ್ಯೆ ಪ್ರಧಾನನಾಗಿರುವೆನೆಂದು ಯೆಹೋವ ದೇವರಾದ ನಾನೇ ಅದನ್ನು ಮಾತಾಡಿದ್ದೇನೆ.
ಯೆಹೆಜ್ಕೇಲನು 34 : 25 (OCVKN)
“ ‘ಅವರ ಸಂಗಡ ಸಮಾಧಾನದ ಒಡಂಬಡಿಕೆಯನ್ನು ಮಾಡಿಕೊಳ್ಳುವೆನು. ದುಷ್ಟಮೃಗಗಳನ್ನು ದೇಶದೊಳಗೆ ಇಲ್ಲದಂತೆ ಮಾಡುವೆನು. ಆದ್ದರಿಂದ ಅವರು ನಿರ್ಭಯವಾಗಿ ಮರುಭೂಮಿಯಲ್ಲಿ ವಾಸಿಸಿ ಅಡವಿಗಳಲ್ಲಿ ಮಲಗುವರು.
ಯೆಹೆಜ್ಕೇಲನು 34 : 26 (OCVKN)
ಅವರನ್ನೂ ನನ್ನ ಪರ್ವತಗಳ ಸುತ್ತಣ ಪ್ರದೇಶಗಳನ್ನೂ ಆಶೀರ್ವಾದವನ್ನಾಗಿ ಮಾಡುವೆನು. ಕಾಲಕ್ಕೆ ಸರಿಯಾಗಿ ಮಳೆಯನ್ನು ಸುರಿಸುವೆನು. ದಿವ್ಯಾಶೀರ್ವಾದದ ಮಳೆಯಾಗುವುದು.
ಯೆಹೆಜ್ಕೇಲನು 34 : 27 (OCVKN)
ಬಯಲಿನ ಮರವು ಅದರ ಫಲವನ್ನು ಕೊಡುವುದು. ಭೂಮಿಯು ಅದರ ಆದಾಯವನ್ನು ಕೊಡುವುದು. ಅವರು ತಮ್ಮ ದೇಶದಲ್ಲಿ ನಿರ್ಭಯವಾಗಿರುವರು. ನಾನೇ ಅದರ ನೊಗದ ಬಂಧನಗಳ್ನು ಬಿಡಿಸಿ ಅವರಿಂದ ಸೇವೆಮಾಡಿಸಿಕೊಂಡವರ ಕೈಯಿಂದ ಅವರನ್ನು ತಪ್ಪಿಸಿದಾಗ ನಾನೇ ಯೆಹೋವ ದೇವರೆಂದು ಅವರು ತಿಳಿಯುವರು.
ಯೆಹೆಜ್ಕೇಲನು 34 : 28 (OCVKN)
ಅವರು ಇನ್ನು ಮೇಲೆ ಇತರ ಜನಾಂಗಗಳಿಗೆ ಕೊಳ್ಳೆಯಾಗುವುದಿಲ್ಲ; ಕಾಡುಮೃಗಗಳು ಅವರನ್ನು ತಿನ್ನುವುದಿಲ್ಲ. ಯಾರೂ ಅವರನ್ನು ಹೆದರಿಸುವವರಿಲ್ಲದೆ ನಿರ್ಭಯವಾಗಿ ವಾಸಿಸುವರು.
ಯೆಹೆಜ್ಕೇಲನು 34 : 29 (OCVKN)
ನಾನು ಅವರಿಗಾಗಿ ಒಂದು ಪ್ರಸಿದ್ಧ ಫಲವೃಕ್ಷವನ್ನು ಬೆಳೆಯಿಸುವೆನು. ಇನ್ನು ಮೇಲೆ ಅವರು ದೇಶದಲ್ಲಿ ಬರಗಾಲದಿಂದ ನಾಶವಾಗುವುದಿಲ್ಲ. ಅವರು ಇತರ ಜನರ ತಿರಸ್ಕಾರಕ್ಕೆ ಇನ್ನು ಮೇಲೆ ಗುರಿಯಾಗುವುದೇ ಇಲ್ಲ.
ಯೆಹೆಜ್ಕೇಲನು 34 : 30 (OCVKN)
ಆಗ ಅವರು ತಮ್ಮ ಯೆಹೋವ ದೇವರೆಂಬ ನಾನೇ ಅವರ ಸಂಗಡ ಇರುವೆನೆಂದೂ ಇಸ್ರಾಯೇಲಿನ ಮನೆತನದವರಾದ ಅವರೇ ನನ್ನ ಜನರಾಗಿರುವರೆಂದೂ ತಿಳಿಯುವರು ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.
ಯೆಹೆಜ್ಕೇಲನು 34 : 31 (OCVKN)
ನೀವು ನನ್ನ ಕುರಿಗಳು, ನನ್ನ ಹುಲ್ಲುಗಾವಲಿನ ಕುರಿಗಳು, ಮತ್ತು ನಾನು ನಿಮ್ಮ ದೇವರು, ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.’ ”

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31