ವಿಮೋಚನಕಾಂಡ 9 : 1 (OCVKN)
ಪಶುಗಳ ಉಪದ್ರವ ಅನಂತರ ಯೆಹೋವ ದೇವರು ಮೋಶೆಗೆ ಹೇಳಿದ್ದೇನಂದರೆ, “ಫರೋಹನ ಬಳಿಗೆ ಹೋಗಿ ಅವನಿಗೆ, ‘ಹಿಬ್ರಿಯರ ದೇವರಾದ ಯೆಹೋವ ದೇವರು ಹೀಗೆ ಹೇಳುತ್ತಾರೆ: “ನನ್ನನ್ನು ಆರಾಧಿಸುವಂತೆ ನನ್ನ ಜನರನ್ನು ಕಳುಹಿಸು.”
ವಿಮೋಚನಕಾಂಡ 9 : 2 (OCVKN)
ಅವರನ್ನು ಕಳುಹಿಸುವುದಕ್ಕೆ ನಿರಾಕರಿಸಿ ಇನ್ನೂ ತಡೆದರೆ,
ವಿಮೋಚನಕಾಂಡ 9 : 3 (OCVKN)
ಯೆಹೋವ ದೇವರ ಕೈ ಹೊಲದಲ್ಲಿರುವ ನಿನ್ನ ಪಶುಗಳ ಮೇಲೆ ಇರುವುದು. ಕುದುರೆ, ಕತ್ತೆ, ಒಂಟೆ, ಎತ್ತು, ಕುರಿ, ಆಡು ಇವುಗಳ ಮೇಲೆ ಕಠಿಣವಾದ ಉಪದ್ರವ ಬರುವುದು.
ವಿಮೋಚನಕಾಂಡ 9 : 4 (OCVKN)
ಯೆಹೋವ ದೇವರು ಇಸ್ರಾಯೇಲರ ಪಶುಗಳನ್ನೂ ಈಜಿಪ್ಟಿನವರ ಪಶುಗಳನ್ನೂ ವಿಂಗಡಿಸುವರು. ಇಸ್ರಾಯೇಲರ ಪಶುಗಳಲ್ಲಿ ಒಂದೂ ಸಾಯುವುದಿಲ್ಲ,’ ” ಎಂದರು.
ವಿಮೋಚನಕಾಂಡ 9 : 5 (OCVKN)
ಇದಲ್ಲದೆ ಯೆಹೋವ ದೇವರು, “ನಿರ್ದಿಷ್ಟವಾದ ಒಂದು ಸಮಯವನ್ನು ನೇಮಿಸಿ, ನಾಳೆ ಯೆಹೋವ ದೇವರು ಈ ಕಾರ್ಯವನ್ನು ಈ ದೇಶದಲ್ಲಿ ಮಾಡುವರು, ಎಂದು ಹೇಳು,” ಎಂದರು.
ವಿಮೋಚನಕಾಂಡ 9 : 6 (OCVKN)
ಮಾರನೆಯ ದಿನವೇ ಯೆಹೋವ ದೇವರು ಆ ಕಾರ್ಯವನ್ನು ಮಾಡಲಾರಂಭಿಸಿದರು. ಈಜಿಪ್ಟಿನ ಪಶುಗಳೆಲ್ಲಾ ಸತ್ತು ಹೋದವು. ಆದರೆ ಇಸ್ರಾಯೇಲರ ಪಶುಗಳಲ್ಲಿ ಒಂದೂ ಸಾಯಲಿಲ್ಲ.
ವಿಮೋಚನಕಾಂಡ 9 : 7 (OCVKN)
ಫರೋಹನು ಆಳುಗಳನ್ನು ಕಳುಹಿಸಿ ನೋಡಿದಾಗ, ಇಸ್ರಾಯೇಲರ ಪಶುಗಳಲ್ಲಿ ಒಂದೂ ಸತ್ತಿರಲಿಲ್ಲ. ಆದರೆ ಫರೋಹನ ಹೃದಯವು ಕಠಿಣವಾಗಿದ್ದುದರಿಂದ ಅವನು ಜನರನ್ನು ಹೋಗಗೊಡಿಸಲಿಲ್ಲ.
ವಿಮೋಚನಕಾಂಡ 9 : 8 (OCVKN)
ಹುಣ್ಣುಗಳ ಉಪದ್ರವ ಆಗ ಯೆಹೋವ ದೇವರು ಮೋಶೆ ಆರೋನರಿಗೆ, “ಕೈತುಂಬಾ ಒಲೆಯ ಬೂದಿಯನ್ನು ತೆಗೆದುಕೊಳ್ಳಿರಿ. ಅದನ್ನು ಮೋಶೆಯು ಫರೋಹನ ಮುಂದೆ ಆಕಾಶದ ಕಡೆಗೆ ತೂರಲಿ.
ವಿಮೋಚನಕಾಂಡ 9 : 9 (OCVKN)
ಆಗ ಅದು ಈಜಿಪ್ಟ್ ದೇಶದಲ್ಲೆಲ್ಲಾ ಪುಡಿಯಾಗುವುದು. ಅದು ಈಜಿಪ್ಟ್ ದೇಶದಲ್ಲೆಲ್ಲಾ ಮನುಷ್ಯರ ಮೇಲೆಯೂ ಪಶುಗಳ ಮೇಲೆಯೂ ಹುಣ್ಣುಗಳಾಗುವ ಬೊಕ್ಕೆಗಳು ಏಳುವಂತೆ ಮಾಡುವುದು,” ಎಂದು ಹೇಳಿದರು.
ವಿಮೋಚನಕಾಂಡ 9 : 10 (OCVKN)
ಆಗ ಅವರು ಒಲೆಯ ಬೂದಿಯನ್ನು ತೆಗೆದುಕೊಂಡು ಫರೋಹನ ಮುಂದೆ ನಿಂತರು. ಮೋಶೆಯು ಅದನ್ನು ಆಕಾಶದ ಕಡೆಗೆ ತೂರಿದನು. ಆಗ ಅದು ಮನುಷ್ಯರಲ್ಲಿಯೂ ಪಶುಗಳಲ್ಲಿಯೂ ಹರಡಿ ಹುಣ್ಣುಗಳಾಗುವಂಥ ಬೊಕ್ಕೆಗಳಾದವು.
ವಿಮೋಚನಕಾಂಡ 9 : 11 (OCVKN)
ಇದಲ್ಲದೆ ಮಂತ್ರಗಾರರು ಹುಣ್ಣಿನ ನಿಮಿತ್ತ ಮೋಶೆಯ ಮುಂದೆ ನಿಂತುಕೊಳ್ಳಲಾರದೆ ಹೋದರು. ಏಕೆಂದರೆ ಹುಣ್ಣುಗಳು ಮಂತ್ರಗಾರರ ಮೇಲೆಯೂ ಈಜಿಪ್ಟಿನವರ ಮೇಲೆಯೂ ಇದ್ದವು.
ವಿಮೋಚನಕಾಂಡ 9 : 12 (OCVKN)
ಆದರೆ ಯೆಹೋವ ದೇವರು ಫರೋಹನ ಹೃದಯವನ್ನು ಕಠಿಣ ಮಾಡಿದರು. ಯೆಹೋವ ದೇವರು ಮೋಶೆಗೆ ಹೇಳಿದಂತೆಯೇ ಅವನು ಅವರ ಮಾತನ್ನು ಕೇಳಲಿಲ್ಲ.
ವಿಮೋಚನಕಾಂಡ 9 : 13 (OCVKN)
ಆಲಿಕಲ್ಲಿನ ಮಳೆಯ ಉಪದ್ರವ ಯೆಹೋವ ದೇವರು ಮೋಶೆಗೆ, “ಬೆಳಿಗ್ಗೆ ಎದ್ದು ಫರೋಹನ ಮುಂದೆ ನಿಂತುಕೊಂಡು ಅವನಿಗೆ, ‘ಹಿಬ್ರಿಯರ ದೇವರಾದ ಯೆಹೋವ ದೇವರು ಹೀಗೆ ಹೇಳುತ್ತಾರೆ: ನನ್ನನ್ನು ಅವರು ಆರಾಧಿಸುವ ಹಾಗೆ ನನ್ನ ಜನರನ್ನು ಕಳುಹಿಸು.
ವಿಮೋಚನಕಾಂಡ 9 : 14 (OCVKN)
ಭೂಲೋಕದಲ್ಲೆಲ್ಲಾ ನನ್ನ ಹಾಗೆ ಯಾರೂ ಇಲ್ಲವೆಂದು ನೀನು ತಿಳಿದುಕೊಳ್ಳುವ ಹಾಗೆ, ಈ ಸಾರಿ ನಾನು ಎಲ್ಲಾ ಉಪದ್ರವಗಳನ್ನು ನಿನ್ನ ಮೇಲೆಯೂ ನಿನ್ನ ಸೇವಕರ ಮೇಲೆಯೂ ನಿನ್ನ ಜನರ ಮೇಲೆಯೂ ಬರಮಾಡುವೆನು.
ವಿಮೋಚನಕಾಂಡ 9 : 15 (OCVKN)
ಈಗ ನನ್ನ ಕೈಚಾಚಿ ನಿನ್ನನ್ನೂ, ನಿನ್ನ ಜನರನ್ನೂ ಉಪದ್ರವದಿಂದ ಬಾಧಿಸುವೆನು. ನಿನ್ನನ್ನು ಭೂಮಿಯೊಳಗಿಂದ ನಿರ್ಮೂಲ ಮಾಡುವೆನು.
ವಿಮೋಚನಕಾಂಡ 9 : 16 (OCVKN)
ಆದರೆ ನಿಶ್ಚಯವಾಗಿ ನಾನು ನಿನ್ನಲ್ಲಿ ನನ್ನ ಶಕ್ತಿಯನ್ನು ತೋರಿಸಿ, ನನ್ನ ಹೆಸರನ್ನು ಭೂಮಿಯ ಮೇಲೆಲ್ಲಾ ಪ್ರಸಿದ್ಧಪಡಿಸಬೇಕೆಂಬ ಉದ್ದೇಶದಿಂದಲೇ ನಿನ್ನನ್ನು ಸಾಯಿಸದೆ ಉಳಿಸಿದ್ದೇನೆ.
ವಿಮೋಚನಕಾಂಡ 9 : 17 (OCVKN)
ನೀನು ಇನ್ನೂ ಅವರನ್ನು ಕಳುಹಿಸದೆ ನನ್ನ ಜನರಿಗೆ ವಿರೋಧವಾಗಿ ನಿನ್ನನ್ನು ನೀನೇ ಹೆಚ್ಚಿಸಿಕೊಳ್ಳುತ್ತೀಯೋ?
ವಿಮೋಚನಕಾಂಡ 9 : 18 (OCVKN)
ಹಾಗಾದರೆ ನಾಳೆ ಇಷ್ಟು ಹೊತ್ತಿಗೆ ಮಹಾ ಕಠಿಣವಾದ ಆಲಿಕಲ್ಲಿನ ಮಳೆಯನ್ನು ಬೀಳುವಂತೆ ಮಾಡುವೆನು. ಅಂಥದ್ದು ಈಜಿಪ್ಟಿನಲ್ಲಿ, ಅದರ ರಾಜ್ಯವು ಸ್ಥಾಪಿತವಾದಂದಿನಿಂದ ಇಲ್ಲಿಯವರೆಗೂ ಆಗಿಲ್ಲ.
ವಿಮೋಚನಕಾಂಡ 9 : 19 (OCVKN)
ಹೀಗಿರುವುದರಿಂದ ಯಾರನ್ನಾದರೂ ಕಳುಹಿಸಿ ನಿನ್ನ ಪಶುಗಳನ್ನೂ, ಹೊಲದಲ್ಲಿ ನಿನಗಿರುವವುಗಳನ್ನೂ ಭದ್ರಪಡಿಸು. ಏಕೆಂದರೆ ಮನೆಗಳಿಗೆ ಬಾರದೆ ಹೊಲದಲ್ಲಿ ಸಿಕ್ಕುವ ಮನುಷ್ಯರ ಮೇಲೆಯೂ ಪಶುಗಳ ಮೇಲೆಯೂ ಆಲಿಕಲ್ಲಿನ ಮಳೆಯು ಸುರಿದು ಕೊಲ್ಲುವುದು,’ ಎಂದು ಹೇಳು,” ಎಂದರು.
ವಿಮೋಚನಕಾಂಡ 9 : 20 (OCVKN)
ಆಗ ಫರೋಹನ ಸೇವಕರಲ್ಲಿ ಯೆಹೋವ ದೇವರ ವಾಕ್ಯಕ್ಕೆ ಭಯಪಟ್ಟವರೆಲ್ಲರೂ ತಮ್ಮ ದಾಸರನ್ನೂ ಪಶುಗಳನ್ನೂ ಮನೆಗಳಿಗೆ ಓಡಿ ಬರುವಂತೆ ಮಾಡಿದರು.
ವಿಮೋಚನಕಾಂಡ 9 : 21 (OCVKN)
ಆದರೆ ಯೆಹೋವ ದೇವರ ವಾಕ್ಯಕ್ಕೆ ಮನಸ್ಸು ಕೊಡದವರು, ತಮ್ಮ ದಾಸರನ್ನೂ ಪಶುಗಳನ್ನೂ ಹೊಲದಲ್ಲಿ ಬಿಟ್ಟರು.
ವಿಮೋಚನಕಾಂಡ 9 : 22 (OCVKN)
ಆಗ ಯೆಹೋವ ದೇವರು ಮೋಶೆಗೆ, “ಆಕಾಶದ ಕಡೆಗೆ ನಿನ್ನ ಕೈಚಾಚು. ಈಜಿಪ್ಟ್ ದೇಶದಲ್ಲೆಲ್ಲಾ ಮನುಷ್ಯರ ಮೇಲೆಯೂ ಪಶುಗಳ ಮೇಲೆಯೂ ಮತ್ತು ಈಜಿಪ್ಟ್ ದೇಶದಲ್ಲಿ ಇರುವ ಎಲ್ಲಾ ಹೊಲದ ಬೆಳೆಯ ಮೇಲೆಯೂ ಆಲಿಕಲ್ಲಿನ ಮಳೆ ಸುರಿಯುವುದು,” ಎಂದು ಪ್ರಕಟಪಡಿಸಿದರು.
ವಿಮೋಚನಕಾಂಡ 9 : 23 (OCVKN)
ಮೋಶೆಯು ಆಕಾಶದ ಕಡೆಗೆ ತನ್ನ ಕೋಲನ್ನು ಚಾಚಿದನು. ಆಗ ಯೆಹೋವ ದೇವರು ಗುಡುಗುಗಳನ್ನೂ ಆಲಿಕಲ್ಲಿನ ಮಳೆಯನ್ನೂ ಸುರಿಸಿದರು. ಸಿಡಿಲು ನೆಲಕ್ಕೆ ಬಡಿಯಿತು. ಸಿಡಿಲಿನ ಆರ್ಭಟದೊಂದಿಗೆ ಯೆಹೋವ ದೇವರು ಈಜಿಪ್ಟ್ ದೇಶದ ಮೇಲೆ ಆಲಿಕಲ್ಲಿನ ಮಳೆಯನ್ನು ಸುರಿಸಿದರು.
ವಿಮೋಚನಕಾಂಡ 9 : 24 (OCVKN)
ಸಿಡಿಲಿನ ಆರ್ಭಟದೊಂದಿಗೆ ಕಠಿಣವಾದ ಆಲಿಕಲ್ಲಿನ ಮಳೆಯೂ ಸುರಿಯಿತು. ಈಜಿಪ್ಟ್ ಒಂದು ರಾಷ್ಟ್ರವಾದಂದಿನಿಂದ ಅಂಥ ಘೋರವಾದ ಆಲಿಕಲ್ಲಿನ ಮಳೆಯೂ ಆ ದೇಶದಲ್ಲಿ ಆಗಿರಲಿಲ್ಲ.
ವಿಮೋಚನಕಾಂಡ 9 : 25 (OCVKN)
ಆ ಆಲಿಕಲ್ಲಿನ ಮಳೆಯು ಈಜಿಪ್ಟ್ ದೇಶದಲ್ಲೆಲ್ಲಾ ಮನುಷ್ಯರು ಮೊದಲುಗೊಂಡು ಪಶುಗಳವರೆಗೂ ಹೊಲದಲ್ಲಿ ಇದ್ದದ್ದನ್ನೆಲ್ಲಾ ಹಾಳುಮಾಡಿತು. ಹೊಲದ ಎಲ್ಲಾ ಸೊಪ್ಪನ್ನೂ ಹಾಳು ಮಾಡಿ, ಎಲ್ಲಾ ಮರಗಳನ್ನು ಮುರಿದುಹಾಕಿತು.
ವಿಮೋಚನಕಾಂಡ 9 : 26 (OCVKN)
ಇಸ್ರಾಯೇಲರು ಇದ್ದ ಗೋಷೆನ್ ಪ್ರಾಂತದಲ್ಲಿ ಆಲಿಕಲ್ಲಿನ ಮಳೆಯು ಇರಲಿಲ್ಲ.
ವಿಮೋಚನಕಾಂಡ 9 : 27 (OCVKN)
ಆಗ ಫರೋಹನು ಮೋಶೆ ಆರೋನರನ್ನು ಕರೆಕಳುಹಿಸಿ ಅವರಿಗೆ, “ಈ ಸಲ ನಾನು ಪಾಪಮಾಡಿದ್ದೇನೆ, ಯೆಹೋವ ದೇವರು ನೀತಿವಂತನು. ಆದರೆ ನಾನೂ, ನನ್ನ ಜನರೂ ತಪ್ಪಿತಸ್ಥರು.
ವಿಮೋಚನಕಾಂಡ 9 : 28 (OCVKN)
ಆದ್ದರಿಂದ ಈ ಬಲವಾದ ಗುಡುಗುಗಳೂ ಆಲಿಕಲ್ಲಿನ ಮಳೆಯೂ ಇನ್ನು ಸಾಕು. ಇವುಗಳು ನಿಂತುಹೋಗುವಂತೆ ಯೆಹೋವ ದೇವರನ್ನು ಬೇಡಿಕೊಳ್ಳಿರಿ, ನೀವು ಇನ್ನು ಇಲ್ಲಿ ಇರದಂತೆ ನಾನು ನಿಮ್ಮನ್ನು ಕಳುಹಿಸಿಬಿಡುವೆನು,” ಎಂದನು.
ವಿಮೋಚನಕಾಂಡ 9 : 29 (OCVKN)
ಮೋಶೆಯು ಅವನಿಗೆ, “ನಾನು ಪಟ್ಟಣವನ್ನು ಬಿಟ್ಟುಹೋದ ಕೂಡಲೇ, ಯೆಹೋವ ದೇವರ ಕಡೆಗೆ ನನ್ನ ಕೈಗಳನ್ನು ಚಾಚಿ ಪ್ರಾರ್ಥಿಸುವೆನು. ಭೂಮಿಯು ಯೆಹೋವ ದೇವರದೇ ಎಂದು ನೀನು ತಿಳಿದುಕೊಳ್ಳುವಂತೆ ಗುಡುಗುಗಳು ನಿಂತುಹೋಗುವುವು. ಆಲಿಕಲ್ಲಿನ ಮಳೆಯು ಇನ್ನು ಇರದು.
ವಿಮೋಚನಕಾಂಡ 9 : 30 (OCVKN)
ಆದರೂ ನೀನು ಮತ್ತು ನಿನ್ನ ಅಧಿಕಾರಿಗಳು ದೇವರಾದ ಯೆಹೋವ ದೇವರಿಗೆ ಭಯಪಡುವುದಿಲ್ಲವೆಂದು ನಾನು ಬಲ್ಲೆನು,” ಎಂದನು.
ವಿಮೋಚನಕಾಂಡ 9 : 31 (OCVKN)
ಜವೆಗೋಧಿಗೆ ತೆನೆಯೂ ಅಗಸೆಯ ಮೊಗ್ಗುಗಳೂ ಇದ್ದುದರಿಂದ ಅಗಸೆಯೂ ಜವೆಗೋಧಿಯೂ ಹಾಳಾದವು.
ವಿಮೋಚನಕಾಂಡ 9 : 32 (OCVKN)
ಆದರೆ ಗೋಧಿ ಮತ್ತು ಕಡಲೆ ಬೆಳೆದಿಲ್ಲವಾದ್ದರಿಂದ ಹಾಳಾಗಲಿಲ್ಲ.
ವಿಮೋಚನಕಾಂಡ 9 : 33 (OCVKN)
ತರುವಾಯ ಮೋಶೆಯು ಫರೋಹನನ್ನು ಬಿಟ್ಟು ಪಟ್ಟಣದ ಹೊರಗೆ ಬಂದಾಗ, ತನ್ನ ಕೈಗಳನ್ನು ಯೆಹೋವ ದೇವರ ಕಡೆಗೆ ಚಾಚಿದನು. ಆಗ ಗುಡುಗುಗಳೂ ಆಲಿಕಲ್ಲಿನ ಮಳೆಯೂ ನಿಂತುಹೋದವು. ಇನ್ನು ಮಳೆಯು ಭೂಮಿಯ ಮೇಲೆ ಬೀಳಲಿಲ್ಲ.
ವಿಮೋಚನಕಾಂಡ 9 : 34 (OCVKN)
ಮಳೆ, ಆಲಿಕಲ್ಲಿನ ಮಳೆ, ಗುಡುಗುಗಳು ನಿಂತುಹೋದದ್ದನ್ನು ಫರೋಹನು ನೋಡಿದಾಗ, ಅವನು ಪುನಃ ಪಾಪಮಾಡಿದನು. ತನ್ನ ಅಧಿಕಾರಿಗಳ ಸಹಿತವಾಗಿ ತನ್ನ ಹೃದಯವನ್ನು ಕಠಿಣ ಮಾಡಿಕೊಂಡನು.
ವಿಮೋಚನಕಾಂಡ 9 : 35 (OCVKN)
ಫರೋಹನ ಹೃದಯವು ಕಠಿಣವಾಯಿತು. ಯೆಹೋವ ದೇವರು ಮೋಶೆಗೆ ಹೇಳಿದಂತೆ, ಅವನು ಇಸ್ರಾಯೇಲರನ್ನು ಕಳುಹಿಸಲೇ ಇಲ್ಲ.
❮
❯