ವಿಮೋಚನಕಾಂಡ 14 : 1 (OCVKN)
ತರುವಾಯ ಯೆಹೋವ ದೇವರು ಮಾತನಾಡಿ ಮೋಶೆಗೆ,
ವಿಮೋಚನಕಾಂಡ 14 : 2 (OCVKN)
“ಇಸ್ರಾಯೇಲರು ಹಿಂತಿರುಗಿ ಹೋಗಿ ಪೀಹಹೀರೋತಿಗೆ ಎದುರಾಗಿ ಮಿಗ್ದೋಲಿಗೂ ಸಮುದ್ರಕ್ಕೂ ಮಧ್ಯದಲ್ಲಿ ಬಾಲ್ಜೆಫೋನಿಗೆ ಎದುರಾಗಿ ಇಳಿದುಕೊಳ್ಳಬೇಕೆಂದು ಅವರಿಗೆ ಹೇಳು. ಅದರ ಎದುರಾಗಿ ನೀವು ಸಮುದ್ರದ ತೀರದಲ್ಲಿ ಇಳಿದುಕೊಳ್ಳಬೇಕು.
ವಿಮೋಚನಕಾಂಡ 14 : 3 (OCVKN)
ಏಕೆಂದರೆ ಫರೋಹನು ಇಸ್ರಾಯೇಲರ ವಿಷಯದಲ್ಲಿ, ‘ಅವರು ಗಲಿಬಿಲಿಗೊಂಡು ಮರುಭೂಮಿಯನ್ನು ಸುತ್ತುವರಿದ ಪ್ರದೇಶದಲ್ಲಿ ಅತ್ತಿತ್ತ ಹೋಗುತ್ತಿರುವರು,’ ಎಂದುಕೊಳ್ಳುವನು.
ವಿಮೋಚನಕಾಂಡ 14 : 4 (OCVKN)
ಇದಲ್ಲದೆ ಫರೋಹನು ನಿಮ್ಮನ್ನು ಹಿಂದಟ್ಟುವಂತೆ ನಾನು ಅವನ ಹೃದಯವನ್ನು ಕಠಿಣ ಮಾಡುವೆನು. ಫರೋಹನಲ್ಲಿಯೂ, ಅವನ ಎಲ್ಲಾ ಸೈನ್ಯದಲ್ಲಿಯೂ ನನ್ನನ್ನು ಘನಪಡಿಸಿಕೊಳ್ಳುವೆನು. ಆಗ ನಾನೇ ಯೆಹೋವ ದೇವರೆಂದು ಈಜಿಪ್ಟಿನವರು ತಿಳಿಯುವರು,” ಎಂದು ಹೇಳಿದರು. ಅದರಂತೆಯೇ ಇಸ್ರಾಯೇಲರು ಮಾಡಿದರು.
ವಿಮೋಚನಕಾಂಡ 14 : 5 (OCVKN)
ಜನರು ಓಡಿಹೋದರೆಂಬ ವಿಷಯ ಈಜಿಪ್ಟಿನ ಅರಸನಿಗೆ ತಿಳಿಯಿತು. ಆಗ ಫರೋಹನ ಮತ್ತು ಅವನ ಸೇವಕರ ಹೃದಯವು ಅವರಿಗೆ ವಿರೋಧವಾಗಿ ತಿರುಗಿಕೊಂಡಿತು. ಅವರು, “ಇಸ್ರಾಯೇಲರು ನಮ್ಮ ಸೇವೆ ಮಾಡುವುದನ್ನು ಬಿಟ್ಟು ಹೋಗಿಬಿಡುವಂತೆ ನಾವು ಏಕೆ ಮಾಡಿದೆವು?” ಎಂದುಕೊಂಡರು.
ವಿಮೋಚನಕಾಂಡ 14 : 6 (OCVKN)
ಆಗ ಫರೋಹನು ತನ್ನ ರಥವನ್ನು ಸಿದ್ಧಮಾಡಿ, ತನ್ನ ಸೈನ್ಯವನ್ನು ತನ್ನೊಂದಿಗೆ ತೆಗೆದುಕೊಂಡನು.
ವಿಮೋಚನಕಾಂಡ 14 : 7 (OCVKN)
ಇದಲ್ಲದೆ ಅವನು ಆರಿಸಿಕೊಂಡ ಅತ್ಯುತ್ತಮ ಆರುನೂರು ರಥಗಳನ್ನೂ, ಈಜಿಪ್ಟಿನ ಎಲ್ಲಾ ರಥಗಳನ್ನೂ, ಅವುಗಳ ಮೇಲೆ ಅಧಿಪತಿಗಳನ್ನೂ ತೆಗೆದುಕೊಂಡನು.
ವಿಮೋಚನಕಾಂಡ 14 : 8 (OCVKN)
ಈಜಿಪ್ಟಿನ ಅರಸನಾದ ಫರೋಹನ ಹೃದಯವನ್ನು ಯೆಹೋವ ದೇವರು ಕಠಿಣ ಮಾಡಿದ್ದರಿಂದ ಅವನು ಇಸ್ರಾಯೇಲರನ್ನು ಹಿಂದಟ್ಟಿದನು. ಆದರೆ ಇಸ್ರಾಯೇಲರು ಧೈರ್ಯದಿಂದ ಹೊರಗೆ ಹೋದರು.
ವಿಮೋಚನಕಾಂಡ 14 : 9 (OCVKN)
ಈಜಿಪ್ಟಿನವರು ಅವರನ್ನು ಹಿಂದಟ್ಟಿದರು. ಅವರು ಸಮುದ್ರ ತೀರದಲ್ಲಿ ಇಳಿದುಕೊಂಡಿರುವಾಗ, ಫರೋಹನ ಎಲ್ಲಾ ಕುದುರೆಗಳೂ ರಥಗಳೂ ಕುದುರೆ ಸವಾರರೂ ಅವನ ಸೈನ್ಯವೂ ಪೀಹಹೀರೋತಿನ ಸಮೀಪದಲ್ಲಿ ಬಾಲ್ಜೆಫೋನಿನ ಎದುರಾಗಿ ಇಸ್ರಾಯೇಲರನ್ನು ಸಮೀಪಿಸಿದರು.
ವಿಮೋಚನಕಾಂಡ 14 : 10 (OCVKN)
ಫರೋಹನು ಸಮೀಪಕ್ಕೆ ಬರುವುದನ್ನು ಇಸ್ರಾಯೇಲರು ಕಣ್ಣೆತ್ತಿ ನೋಡಿದರು. ಈಜಿಪ್ಟಿನವರು ಅವರ ಹಿಂದೆ ಬರುತ್ತಿರುವುದನ್ನು ಕಂಡು ಇಸ್ರಾಯೇಲರು ಬಹಳ ಭಯಪಟ್ಟು ಯೆಹೋವ ದೇವರಿಗೆ ಮೊರೆಯಿಟ್ಟರು.
ವಿಮೋಚನಕಾಂಡ 14 : 11 (OCVKN)
ಅವರು ಮೋಶೆಗೆ, “ಈಜಿಪ್ಟಿನಲ್ಲಿ ಸಮಾಧಿಗಳು ಇಲ್ಲದ ಕಾರಣ ನಾವು ಮರುಭೂಮಿಯಲ್ಲಿ ಸಾಯುವ ಹಾಗೆ ನಮ್ಮನ್ನು ಕರೆದುಕೊಂಡು ಬಂದೆಯೋ? ಏಕೆ ನೀನು ಈ ಪ್ರಕಾರ ನಮಗೆ ಮಾಡಿ, ನಮ್ಮನ್ನು ಈಜಿಪ್ಟಿನಿಂದ ಕರೆದುಕೊಂಡು ಬಂದೆ?
ವಿಮೋಚನಕಾಂಡ 14 : 12 (OCVKN)
ನಾವು ಈಜಿಪ್ಟ್ ದೇಶದಲ್ಲಿದ್ದಾಗಲೇ, ‘ನೀನು ನಮ್ಮ ಗೊಡವೆಗೆ ಬರಬೇಡ, ನಾವು ಈಜಿಪ್ಟಿನವರಿಗೆ ಸೇವೆಮಾಡುತ್ತೇವೆ,’ ಎಂದು ನಿನಗೆ ಹೇಳಲಿಲ್ಲವೇ? ನಾವು ಮರುಭೂಮಿಯಲ್ಲಿ ಸಾಯುವುದಕ್ಕಿಂತ ಈಜಿಪ್ಟಿನವರಿಗೆ ಸೇವೆ ಮಾಡುವುದೇ ಒಳ್ಳೆಯದಾಗಿತ್ತಲ್ಲಾ?” ಎಂದು ಹೇಳಿದರು.
ವಿಮೋಚನಕಾಂಡ 14 : 13 (OCVKN)
ಅದಕ್ಕೆ ಮೋಶೆಯು ಜನರಿಗೆ, “ನೀವು ಭಯಪಡಬೇಡಿರಿ, ದೃಢವಾಗಿ ನಿಲ್ಲಿರಿ. ಯೆಹೋವ ದೇವರು ನಿಮಗೆ ಈ ಹೊತ್ತು ತೋರಿಸುವ ರಕ್ಷಣೆಯನ್ನು ನೋಡಿರಿ. ನೀವು ಈ ಹೊತ್ತು ನೋಡುವ ಈಜಿಪ್ಟಿನವರನ್ನು ಇನ್ನು ಮುಂದೆ ಎಂದೆಂದಿಗೂ ನೋಡುವುದಿಲ್ಲ.
ವಿಮೋಚನಕಾಂಡ 14 : 14 (OCVKN)
ಯೆಹೋವ ದೇವರು ನಿಮಗೋಸ್ಕರ ಯುದ್ಧಮಾಡುವರು, ಆದರೆ ನೀವು ವಿಶ್ರಾಂತಿಯಿಂದಿರಿ,” ಎಂದನು.
ವಿಮೋಚನಕಾಂಡ 14 : 15 (OCVKN)
ಆಗ ಯೆಹೋವ ದೇವರು ಮೋಶೆಗೆ, “ನೀನು ನನಗೆ ಮೊರೆಯಿಡುವುದೇನು? ಇಸ್ರಾಯೇಲರಿಗೆ ಮುಂದಕ್ಕೆ ಹೊರಡಬೇಕೆಂದು ಹೇಳು.
ವಿಮೋಚನಕಾಂಡ 14 : 16 (OCVKN)
ನೀನು ನಿನ್ನ ಕೋಲನ್ನು ಎತ್ತಿ, ನಿನ್ನ ಕೈಯನ್ನು ಸಮುದ್ರದ ಮೇಲೆ ಚಾಚಿ, ಅದನ್ನು ವಿಭಾಗಿಸು. ಆಗ ಇಸ್ರಾಯೇಲರು ಸಮುದ್ರದ ಮಧ್ಯದಲ್ಲಿ ಒಣಗಿದ ನೆಲದ ಮೇಲೆ ಹೋಗುವರು.
ವಿಮೋಚನಕಾಂಡ 14 : 17 (OCVKN)
ನಾನು ಈಜಿಪ್ಟಿನವರ ಹೃದಯವನ್ನು ಕಠಿಣ ಮಾಡುತ್ತೇನೆ. ಅವರು ಇವರನ್ನು ಹಿಂದಟ್ಟುವರು. ಇದಲ್ಲದೆ ಫರೋಹನ ಮೇಲೆಯೂ ಅವನ ಎಲ್ಲಾ ಸೈನ್ಯದ ಮೇಲೆಯೂ ಅವನ ರಥಗಳ ಮೇಲೆಯೂ ಕುದುರೆಯ ಸವಾರರ ಮೇಲೆಯೂ ನನ್ನನ್ನು ಘನಪಡಿಸಿಕೊಳ್ಳುವೆನು.
ವಿಮೋಚನಕಾಂಡ 14 : 18 (OCVKN)
ನಾನು ಫರೋಹನ ಮೇಲೆಯೂ ಅವನ ರಥಗಳ ಮೇಲೆಯೂ ಅವನ ಕುದುರೆ ಸವಾರರ ಮೇಲೆಯೂ ನನ್ನನ್ನು ಘನಪಡಿಸಿಕೊಂಡಾಗ, ನಾನೇ ಯೆಹೋವ ದೇವರೆಂದು ಈಜಿಪ್ಟಿನವರು ತಿಳಿದುಕೊಳ್ಳುವರು,” ಎಂದರು.
ವಿಮೋಚನಕಾಂಡ 14 : 19 (OCVKN)
ಆಗ ಇಸ್ರಾಯೇಲ್ ದಂಡಿನ ಮುಂದೆ ಹೋಗುತ್ತಿದ್ದ ದೇವದೂತನು ತನ್ನ ಸ್ಥಳವನ್ನು ಬಿಟ್ಟು ಅವರ ಹಿಂದೆ ಬಂದನು. ಅವರ ಮುಂದೆ ಇದ್ದ ಮೇಘಸ್ತಂಭವು ಅಲ್ಲಿಂದ ಬಂದು ಅವರ ಹಿಂದೆ ನಿಂತುಕೊಂಡಿತು.
ವಿಮೋಚನಕಾಂಡ 14 : 20 (OCVKN)
ಅದು ಈಜಿಪ್ಟಿನ ದಂಡಿಗೂ ಇಸ್ರಾಯೇಲರ ದಂಡಿಗೂ ನಡುವೆ ಬಂದಿತು. ಮೇಘಸ್ತಂಭವು ಈಜಿಪ್ಟಿನವರಿಗೆ ಕತ್ತಲನ್ನೂ ಇಸ್ರಾಯೇಲರಿಗೆ ಬೆಳಕನ್ನೂ ನೀಡಿತು. ಆ ರಾತ್ರಿಯೆಲ್ಲಾ ಒಬ್ಬರ ಹತ್ತಿರ ಒಬ್ಬರು ಬರಲಾಗಲಿಲ್ಲ.
ವಿಮೋಚನಕಾಂಡ 14 : 21 (OCVKN)
ಆಗ ಮೋಶೆಯು ಸಮುದ್ರದ ಮೇಲೆ ತನ್ನ ಬಲಗೈಯನ್ನು ಚಾಚಲಾಗಿ, ಯೆಹೋವ ದೇವರು ರಾತ್ರಿಯೆಲ್ಲಾ ಬಲವಾದ ಪೂರ್ವದಿಕ್ಕಿನ ಗಾಳಿಯಿಂದ ಸಮುದ್ರವನ್ನು ಹಿಂದಕ್ಕೆ ಹೋಗುವಂತೆ ಸಮುದ್ರವನ್ನು ಸರಿಸಿ, ಒಣ ನೆಲ ಕಾಣಿಸುವಂತೆ ಮಾಡಿದರು. ಆಗ ನೀರು ವಿಭಾಗವಾಯಿತು.
ವಿಮೋಚನಕಾಂಡ 14 : 22 (OCVKN)
ಹೀಗೆ ಇಸ್ರಾಯೇಲರು ಸಮುದ್ರದ ಮಧ್ಯದಲ್ಲಿ ಒಣಗಿದ ನೆಲದ ಮೇಲೆ ನಡೆದುಹೋದರು. ನೀರು ಅವರಿಗೆ ಎಡಗಡೆ ಮತ್ತು ಬಲಗಡೆಗಳಲ್ಲಿ ಗೋಡೆಯಾಗಿ ನಿಂತಿತ್ತು.
ವಿಮೋಚನಕಾಂಡ 14 : 23 (OCVKN)
ಈಜಿಪ್ಟಿನವರೂ ಫರೋಹನ ಎಲ್ಲಾ ಕುದುರೆಗಳೂ ಅವನ ರಥಗಳೂ ಕುದುರೆ ಸವಾರರೂ ಅವರನ್ನು ಹಿಂದಟ್ಟಿ, ಅವರ ಹಿಂದೆ ಸಮುದ್ರದ ಮಧ್ಯದಲ್ಲಿ ಸೇರಿದರು.
ವಿಮೋಚನಕಾಂಡ 14 : 24 (OCVKN)
ಬೆಳಗಿನ ಜಾವದಲ್ಲಿ ಯೆಹೋವ ದೇವರು ಅಗ್ನಿ ಮೇಘಗಳ ಸ್ತಂಭದೊಳಗಿಂದ ಈಜಿಪ್ಟಿನ ದಂಡಿನ ಮೇಲೆ ದೃಷ್ಟಿಯಿಟ್ಟು, ಈಜಿಪ್ಟಿನ ದಂಡನ್ನು ಗಾಬರಿಗೊಳಿಸಿದರು.
ವಿಮೋಚನಕಾಂಡ 14 : 25 (OCVKN)
ಅವರ ರಥಗಳ ಚಕ್ರಗಳನ್ನು ತೆಗೆದುಬಿಟ್ಟು ಕಷ್ಟದಿಂದ ಅವರು ಹೋಗುವಂತೆ ಮಾಡಿದರು. ಆಗ ಈಜಿಪ್ಟಿನವರು, “ಇಸ್ರಾಯೇಲರ ಎದುರಿನಿಂದ ಓಡಿಹೋಗೋಣ. ಏಕೆಂದರೆ ಯೆಹೋವ ದೇವರು ಈಜಿಪ್ಟಿನವರಿಗೆ ವಿರೋಧವಾಗಿ ಯುದ್ಧಮಾಡುತ್ತಾರೆ,” ಎಂದು ಹೇಳಿಕೊಂಡರು.
ವಿಮೋಚನಕಾಂಡ 14 : 26 (OCVKN)
ಆಗ ಯೆಹೋವ ದೇವರು ಮೋಶೆಗೆ, “ಈಜಿಪ್ಟಿನವರನ್ನೂ ಅವರ ರಥಗಳ ಕುದುರೆಯ ಸವಾರರನ್ನೂ ಸಮುದ್ರವು ಮುಳುಗಿಸುವಂತೆ ಸಮುದ್ರದ ಮೇಲೆ ಕೈಚಾಚು,” ಎಂದರು.
ವಿಮೋಚನಕಾಂಡ 14 : 27 (OCVKN)
ಆಗ ಮೋಶೆಯು ಸಮುದ್ರದ ಮೇಲೆ ಕೈಚಾಚಲಾಗಿ ಸಮುದ್ರವು ಬೆಳಗಾಗುವಾಗಲೇ ಮೊದಲಿನಂತೆ ತುಂಬಿಕೊಂಡಿತು. ಈಜಿಪ್ಟಿನವರು ಓಡಿಹೋಗುತ್ತಾ ಅದಕ್ಕೆ ಎದುರಾಗಿಯೇ ಬಂದರು. ಹೀಗೆ ಯೆಹೋವ ದೇವರು ಈಜಿಪ್ಟಿನವರನ್ನು ಸಮುದ್ರದೊಳಗೆ ಕೆಡವಿಬಿಟ್ಟರು.
ವಿಮೋಚನಕಾಂಡ 14 : 28 (OCVKN)
ನೀರು ತಿರುಗಿಬಂದು ರಥಗಳೂ ಕುದುರೆಗಳೂ ಸವಾರರೂ ಅವರ ಹಿಂದೆ ಸಮುದ್ರದಲ್ಲಿ ಬರುತ್ತಿದ್ದ ಫರೋಹನ ಎಲ್ಲಾ ಸೈನ್ಯವೂ ಹೀಗೆ ಒಬ್ಬರೂ ಉಳಿಯದಂತೆ ಮುಳುಗಿಸಿತು.
ವಿಮೋಚನಕಾಂಡ 14 : 29 (OCVKN)
ಆದರೆ ಇಸ್ರಾಯೇಲರು ಸಮುದ್ರದ ಮಧ್ಯದಲ್ಲಿದ್ದ ಒಣಗಿದ ನೆಲದ ಮೇಲೆ ನಡೆದುಹೋದರು. ನೀರು ಅವರಿಗೆ ಎಡಗಡೆ ಮತ್ತು ಬಲಗಡೆಗಳಲ್ಲಿ ಗೋಡೆಯಂತಿತ್ತು.
ವಿಮೋಚನಕಾಂಡ 14 : 30 (OCVKN)
ಆ ದಿನದಲ್ಲಿ ಯೆಹೋವ ದೇವರು ಈ ಪ್ರಕಾರ ಇಸ್ರಾಯೇಲರನ್ನು ಈಜಿಪ್ಟಿನವರ ಕೈಯಿಂದ ರಕ್ಷಿಸಿದರು. ಇಸ್ರಾಯೇಲರು ಸಮುದ್ರ ತೀರದಲ್ಲಿ ಸತ್ತ ಈಜಿಪ್ಟಿನವರನ್ನು ನೋಡಿದರು.
ವಿಮೋಚನಕಾಂಡ 14 : 31 (OCVKN)
ಈಜಿಪ್ಟಿನವರ ಮೇಲೆ ಯೆಹೋವ ದೇವರು ಮಾಡಿದ ದೊಡ್ಡ ಕಾರ್ಯವನ್ನು ನೋಡಿದಾಗ, ಇಸ್ರಾಯೇಲರು ಯೆಹೋವ ದೇವರಿಗೆ ಭಯಪಟ್ಟು, ಅವರಲ್ಲಿಯೂ ಅವರ ಸೇವಕನಾದ ಮೋಶೆಯಲ್ಲಿಯೂ ನಂಬಿಕೆಯಿಟ್ಟರು.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31