ಪ್ರಸಂಗಿ 9 : 1 (OCVKN)
ಎಲ್ಲರ ಅಂತ್ಯಸ್ಥಿತಿಯೂ ಒಂದೇ ನಾನು ಇವೆಲ್ಲವುಗಳ ಮೇಲೆ ಅಭ್ಯಾಸ ಮಾಡಿ ಈ ತೀರ್ಮಾನಕ್ಕೆ ಬಂದೆನು. ಅದೇನೆಂದರೆ, ನೀತಿವಂತರ ಮತ್ತು ಜ್ಞಾನಿಗಳ ಕೆಲಸಗಳು ದೇವರ ಕೈಯಲ್ಲಿವೆ. ಆದರೆ ಅವರಿಗೆ ಪ್ರೀತಿ ಕಾದಿದೆಯೋ ಅಥವಾ ದ್ವೇಷ ಕಾದಿದೆಯೋ ಎಂದು ಯಾರಿಗೂ ಗೊತ್ತಿಲ್ಲ.
ಪ್ರಸಂಗಿ 9 : 2 (OCVKN)
ಎಲ್ಲವೂ ಎಲ್ಲರಿಗೂ ಒಂದೇ ಬಗೆಯಾಗಿ ಸಂಭವಿಸುವುದು. ನೀತಿವಂತನಿಗೂ ದುಷ್ಟನಿಗೂ ಒಳ್ಳೆಯವನಿಗೂ ಕೆಟ್ಟವನಿಗೂ ಶುದ್ಧನಿಗೂ ಅಶುದ್ಧನಿಗೂ ಮತ್ತು ಯಜ್ಞ ಅರ್ಪಿಸುವವನಿಗೂ ಅರ್ಪಿಸದವನಿಗೂ ಒಂದೇ ಗತಿಯಾಗುವುದು. ಒಳ್ಳೆಯವನಿಗೆ ಹೇಗೋ ಹಾಗೆಯೇ ಪಾಪಿಗೂ ಇರುವುದು. ಆಣೆಯಿಡುವವನಿಗೆ ಹೇಗೋ ಹಾಗೆಯೇ, ಆಣೆಯಿಡಲು ಭಯಪಡುವವನಿಗೂ ಇರುವುದು.
ಪ್ರಸಂಗಿ 9 : 3 (OCVKN)
ಸೂರ್ಯನ ಕೆಳಗೆ ಮಾಡುವ ಎಲ್ಲಾ ಸಂಗತಿಗಳಲ್ಲಿಯೂ ಇದೂ ಒಂದು ವ್ಯಸನವು. ಎಲ್ಲರಿಗೂ ಒಂದೇ ಗತಿ ಇದೆ. ಹೌದು, ಮನುಷ್ಯರ ಹೃದಯದಲ್ಲಿ ಕೆಟ್ಟತನ ತುಂಬಿವೆ. ಅವರು ಬದುಕಿರುವ ತನಕ ಅವರ ಹೃದಯಗಳಲ್ಲಿ ಹುಚ್ಚುತನವಿದೆ. ಅನಂತರ ಅವರು ಸಾಯುತ್ತಾರೆ.
ಪ್ರಸಂಗಿ 9 : 4 (OCVKN)
ಜೀವಂತರ ಗುಂಪಿಗೆ ಸೇರಿಕೊಂಡವನಿಗೆ ನಿರೀಕ್ಷೆ ಇರುವುದು. ಸತ್ತ ಸಿಂಹಕ್ಕಿಂತ ಬದುಕಿರುವ ನಾಯಿಯೇ ಉತ್ತಮ.
ಪ್ರಸಂಗಿ 9 : 5 (OCVKN)
ಬದುಕಿರುವವರು ತಾವು ಸಾಯುತ್ತೇವೆಂದು ತಿಳಿದಿದ್ದಾರೆ, ಆದರೆ ಸತ್ತವರಿಗೆ ಏನೂ ತಿಳಿಯದು; ಅವರಿಗೆ ಇನ್ನು ಮೇಲೆ ಪ್ರತಿಫಲ ಇಲ್ಲ. ಅವರ ಹೆಸರನ್ನು ಸಹ ಜನರು ಮರೆತುಬಿಡುತ್ತಾರೆ.
ಪ್ರಸಂಗಿ 9 : 6 (OCVKN)
ಅವರ ಪ್ರೀತಿಯೂ ಅವರ ದ್ವೇಷವೂ ಅವರ ಅಸೂಯೆ ಕೂಡ, ಅವರು ಸತ್ತಾಗಲೇ ಅಳಿದುಹೋಗುತ್ತವೆ. ಸೂರ್ಯನ ಕೆಳಗೆ ನಡೆಯುವ ಯಾವ ಸಂಗತಿಗಳಲ್ಲಿಯೂ ಸತ್ತವರಿಗೆ ಇನ್ನೆಂದಿಗೂ ಪಾಲು ಇಲ್ಲ.
ಪ್ರಸಂಗಿ 9 : 7 (OCVKN)
ನೀನು ಹೋಗಿ ನಿನ್ನ ಆಹಾರವನ್ನು ಸಂತೋಷದಿಂದ ತಿಂದು ಹರ್ಷ ಹೃದಯದಿಂದ ನಿನ್ನ ದ್ರಾಕ್ಷಾರಸವನ್ನು ಕುಡಿ. ಏಕೆಂದರೆ ನಿನ್ನ ಕೆಲಸಗಳನ್ನು ದೇವರು ಈಗಾಗಲೇ ಮೆಚ್ಚಿಕೊಂಡಿದ್ದಾರೆ.
ಪ್ರಸಂಗಿ 9 : 8 (OCVKN)
ನಿನ್ನ ವಸ್ತ್ರಗಳು ಯಾವಾಗಲೂ ಬಿಳುಪಾಗಿರಲಿ, ನಿನ್ನ ತಲೆಗೆ ಯಾವಾಗಲೂ ಎಣ್ಣೆ ಹಚ್ಚಿರಲಿ.
ಪ್ರಸಂಗಿ 9 : 9 (OCVKN)
ಈ ನಿರರ್ಥಕವಾದ ಎಲ್ಲಾ ದಿನಗಳಲ್ಲಿ ಸೂರ್ಯನ ಕೆಳಗೆ ದೇವರು ನಿನಗೆ ಕೊಟ್ಟ ಜೀವನದ ಎಲ್ಲಾ ದಿನಗಳಲ್ಲಿ, ನೀನು ಪ್ರೀತಿಸುವ ನಿನ್ನ ಹೆಂಡತಿಯೊಡನೆ ಆನಂದದಿಂದ ವಾಸಿಸು. ಸೂರ್ಯನ ಕೆಳಗೆ ನೀನು ಪಡುವ ನಿನ್ನ ಜೀವನದ ಕಷ್ಟದಲ್ಲಿ ಇದೇ ನಿನ್ನ ಪಾಲಾಗಿದೆ.
ಪ್ರಸಂಗಿ 9 : 10 (OCVKN)
ನಿನ್ನ ಕೈಗೆ ಸಿಕ್ಕಿದ ಕೆಲಸವನ್ನೆಲ್ಲಾ ನಿನ್ನ ಪೂರ್ಣ ಶಕ್ತಿಯಿಂದ ಮಾಡು. ಏಕೆಂದರೆ ನೀನು ಹೋಗಲಿರುವ ಸಮಾಧಿಯಲ್ಲಿ, ಕೆಲಸವೂ ಯೋಜನೆಯೂ ತಿಳುವಳಿಕೆಯೂ ಜ್ಞಾನವೂ ಇರುವುದಿಲ್ಲ.
ಪ್ರಸಂಗಿ 9 : 11 (OCVKN)
ನಾನು ಮತ್ತೆ ಸೂರ್ಯನ ಕೆಳಗೆ ನೋಡಿದ್ದೇನೆಂದರೆ, ವೇಗಿಗಳಿಗೆ ಓಟವೂ ಪರಾಕ್ರಮಶಾಲಿಗಳಿಗೆ ಯುದ್ಧವೂ ಜ್ಞಾನಿಗಳಿಗೆ ಆಹಾರವೂ ವಿವೇಕಿಗಳಿಗೆ ಐಶ್ವರ್ಯವೂ ಪ್ರವೀಣರಿಗೆ ದಯೆಯೂ ಸಿಗುವುದು ಎಂಬ ನಿಶ್ಚಯ ಇಲ್ಲ. ಏಕೆಂದರೆ ಕಾಲವೂ ಅವಕಾಶವೂ ಅವರೆಲ್ಲರಿಗೆ ಒಳಪಟ್ಟಿರುತ್ತವೆ.
ಪ್ರಸಂಗಿ 9 : 12 (OCVKN)
ಇದಲ್ಲದೆ, ಅವರವರ ಸಮಯ ಯಾವಾಗ ಬರುತ್ತದೆ ಎಂದು ಯಾರಿಗೂ ತಿಳಿಯದು. ಕ್ರೂರ ಬಲೆಯಿಂದ ಹಿಡಿಯುವ ಮೀನಿನಂತೆಯೂ ಉರುಲಿನಲ್ಲಿ ಸಿಕ್ಕುವ ಪಕ್ಷಿಗಳಂತೆಯೂ ಕೇಡಿನ ಕಾಲವು ತಟ್ಟನೆ ಬೀಳುವಾಗ ಜನರು ಸಿಕ್ಕಿಕೊಳ್ಳುತ್ತಾರೆ.
ಪ್ರಸಂಗಿ 9 : 13 (OCVKN)
ದಡ್ಡತನಕ್ಕಿಂತ ಜ್ಞಾನ ವಾಸಿ ಸೂರ್ಯನ ಕೆಳಗೆ ನಾನು ಜ್ಞಾನವನ್ನು ಈ ವಿಧವಾಗಿ ನೋಡಿದ್ದೇನೆ. ಇದು ನನ್ನ ದೃಷ್ಟಿಗೆ ದೊಡ್ಡದಾಗಿ ಕಾಣಿಸಿತು.
ಪ್ರಸಂಗಿ 9 : 14 (OCVKN)
ಒಂದು ಕಾಲದಲ್ಲಿ ಒಂದು ಸಣ್ಣ ನಗರವಿತ್ತು, ಅದರಲ್ಲಿ ಕೆಲವೇ ಜನರಿದ್ದರು. ಆಗ ಅಲ್ಲಿ ಒಬ್ಬ ಮಹಾ ಅರಸನು ಬಂದು ಅದನ್ನು ಮುತ್ತಿಗೆ ಹಾಕಿ, ಅದಕ್ಕೆ ಎದುರಾಗಿ ದೊಡ್ಡ ಕೊತ್ತಲುಗಳನ್ನು ಕಟ್ಟಿಸಿದನು.
ಪ್ರಸಂಗಿ 9 : 15 (OCVKN)
ಆಗ ಅದರಲ್ಲಿ ಒಬ್ಬ ಜ್ಞಾನಿಯಾದ ಬಡ ಮನುಷ್ಯನು ಬಂದು, ತನ್ನ ಜ್ಞಾನದಿಂದ ಆ ಪಟ್ಟಣವನ್ನು ರಕ್ಷಿಸಿದನು. ಆದರೂ ಆ ಬಡ ಮನುಷ್ಯನನ್ನು ಯಾರೂ ಜ್ಞಾಪಕ ಮಾಡಿಕೊಳ್ಳಲಿಲ್ಲ.
ಪ್ರಸಂಗಿ 9 : 16 (OCVKN)
ಇದನ್ನು ನೋಡಿ ನಾನು, “ಬಲಕ್ಕಿಂತ ಜ್ಞಾನವು ಉತ್ತಮ; ಆದರೆ ಜನರು ಬಡವನ ಜ್ಞಾನವನ್ನು ತಿರಸ್ಕಾರ ಮಾಡುತ್ತಾರೆ, ಅವನ ಮಾತುಗಳನ್ನು ಯಾರೂ ಲಕ್ಷಿಸುವುದಿಲ್ಲ,” ಎಂದುಕೊಂಡೆನು.
ಪ್ರಸಂಗಿ 9 : 17 (OCVKN)
ಹುಚ್ಚರನ್ನು ಆಳುವವನ ಕೂಗಾಟಕ್ಕಿಂತಲೂ ಜ್ಞಾನಿಯ ಸಮಾಧಾನದ ಮಾತಿಗೆ ಮಹತ್ವ ಇದೆ.
ಪ್ರಸಂಗಿ 9 : 18 (OCVKN)
ಯುದ್ಧದ ಆಯುಧಗಳಿಗಿಂತಲೂ ಜ್ಞಾನವು ಲೇಸು. ಆದರೆ ಒಬ್ಬ ಪಾಪಿಯು ಬಹು ಶುಭವನ್ನು ಹಾಳುಮಾಡುವನು.
❮
❯
1
2
3
4
5
6
7
8
9
10
11
12
13
14
15
16
17
18