ಧರ್ಮೋಪದೇಶಕಾಂಡ 7 : 1 (OCVKN)
ಇತರ ಜನರನ್ನು ಹೊರಹಾಕಿದ್ದು ನಿಮ್ಮ ದೇವರಾದ ಯೆಹೋವ ದೇವರು ನೀವು ಸ್ವತಂತ್ರಿಸಿಕೊಳ್ಳುವುದಕ್ಕೆ ಹೋಗುವ ದೇಶದಲ್ಲಿ ನಿಮ್ಮನ್ನು ಬರಮಾಡಿದಾಗ, ಅವರು ನಿಮಗಿಂತ ದೊಡ್ಡವರೂ ಬಲಿಷ್ಠರೂ ಆದ ಏಳು ಜನಾಂಗಗಳನ್ನು ಎಂದರೆ, ಗಿರ್ಗಾಷಿಯರನ್ನೂ ಹಿತ್ತಿಯರನ್ನೂ ಅಮೋರಿಯರನ್ನೂ ಕಾನಾನ್ಯರನ್ನೂ ಪೆರಿಜೀಯರನ್ನೂ ಹಿವ್ವಿಯರನ್ನೂ ಯೆಬೂಸಿಯರನ್ನೂ ಈ ಪ್ರಕಾರ ಬಹಳ ಜನಾಂಗಗಳನ್ನು ನಿಮ್ಮ ಮುಂದೆಯೇ ಹೊರಡಿಸುವರು.
ಧರ್ಮೋಪದೇಶಕಾಂಡ 7 : 2 (OCVKN)
ನಿಮ್ಮ ದೇವರಾದ ಯೆಹೋವ ದೇವರು ಅವರನ್ನು ದಂಡಿಸಿ ಸಂಪೂರ್ಣವಾಗಿ ತೆಗೆದುಹಾಕಿಬಿಡುವರು. ಅವರ ಸಂಗಡ ಒಡಂಬಡಿಕೆ ಮಾಡಿಕೊಳ್ಳಬಾರದು. ಅವರಿಗೆ ದಯೆ ತೋರಿಸಬಾರದು.
ಧರ್ಮೋಪದೇಶಕಾಂಡ 7 : 3 (OCVKN)
ಅವರ ಸಂಗಡ ಮದುವೆ ಮಾಡಿಕೊಳ್ಳಬಾರದು. ನಿಮ್ಮ ಪುತ್ರಿಯರನ್ನು ಅವರ ಮಕ್ಕಳಿಗೆ ಕೊಡಬಾರದು. ನಿಮ್ಮ ಪುತ್ರರಿಗೆ ಅವರ ಪುತ್ರಿಯರನ್ನು ತೆಗೆದುಕೊಳ್ಳಬಾರದು.
ಧರ್ಮೋಪದೇಶಕಾಂಡ 7 : 4 (OCVKN)
ಏಕೆಂದರೆ ಅವರು ನಿಮ್ಮ ಪುತ್ರರನ್ನು ಬೇರೆ ದೇವರುಗಳನ್ನು ಸೇವಿಸುವ ಹಾಗೆ ನನ್ನಿಂದ ತೊಲಗಿಸಿಬಿಡುವರು. ಆಗ ಯೆಹೋವ ದೇವರು ನಿಮ್ಮ ಮೇಲೆ ಕೋಪಗೊಂಡು, ನಿಮ್ಮನ್ನು ಬೇಗ ದಂಡಿಸಿಬಿಡುವರು.
ಧರ್ಮೋಪದೇಶಕಾಂಡ 7 : 5 (OCVKN)
ಅವರ ಬಲಿಪೀಠಗಳನ್ನು ಒಡೆದುಹಾಕಬೇಕು. ಅವರ ಪವಿತ್ರ ಕಲ್ಲುಕಂಬಗಳನ್ನು ಒಡೆದು, ಅಶೇರವೆಂಬ ವಿಗ್ರಹಸ್ತಂಭಗಳನ್ನು ಕಡಿದುಹಾಕಬೇಕು. ಅವರ ಕೆತ್ತಿದ ವಿಗ್ರಹಗಳನ್ನು ಬೆಂಕಿಯಿಂದ ಸುಡಬೇಕು. ನೀವು ಅವರಿಗೆ ಹೀಗೆ ಮಾಡತಕ್ಕದ್ದು.
ಧರ್ಮೋಪದೇಶಕಾಂಡ 7 : 6 (OCVKN)
ಏಕೆಂದರೆ ನೀವು ನಿಮ್ಮ ದೇವರಾದ ಯೆಹೋವ ದೇವರಿಗೆ ಪರಿಶುದ್ಧ ಜನರು. ನಿಮ್ಮ ದೇವರಾದ ಯೆಹೋವ ದೇವರು ನಿಮ್ಮನ್ನು ಭೂಮಿಯ ಮೇಲಿರುವ ಎಲ್ಲಾ ಜನರೊಳಗಿಂದ ತಮಗೆ ಸ್ವಂತ ಜನರಾಗಿರಲು ತಮ್ಮ ಆಸ್ತಿಯಾಗಿ ಆರಿಸಿಕೊಂಡಿದ್ದಾರೆ.
ಧರ್ಮೋಪದೇಶಕಾಂಡ 7 : 7 (OCVKN)
ನೀವು ಎಲ್ಲಾ ಜನರಿಗಿಂತ ಹೆಚ್ಚಾಗಿರುವ ಕಾರಣ ಯೆಹೋವ ದೇವರು ನಿಮ್ಮನ್ನು ಪ್ರೀತಿಸಿ ಆರಿಸಿಕೊಳ್ಳಲಿಲ್ಲ. ನೀವು ಎಲ್ಲಾ ಜನರಿಗಿಂತ ಸಂಖ್ಯಾತರು.
ಧರ್ಮೋಪದೇಶಕಾಂಡ 7 : 8 (OCVKN)
ಯೆಹೋವ ದೇವರು ನಿಮ್ಮನ್ನು ಪ್ರೀತಿಸಿದ್ದರಿಂದಲೂ, ನಿಮ್ಮ ಪಿತೃಗಳಿಗೆ ಮಾಡಿದ ಪ್ರಮಾಣವನ್ನು ನೆರವೇರಿಸುವುದರಿಂದಲೂ, ಯೆಹೋವ ದೇವರು ನಿಮ್ಮನ್ನು ಬಲವಾದ ಕೈಯಿಂದ ಹೊರಗೆ ಬರಮಾಡಿ ನಿಮ್ಮನ್ನು ಗುಲಾಮತನದಿಂದಲೂ, ಈಜಿಪ್ಟಿನ ಅರಸನಾದ ಫರೋಹನ ಕೈಯಿಂದಲೂ ವಿಮೋಚಿಸಿದರು.
ಧರ್ಮೋಪದೇಶಕಾಂಡ 7 : 9 (OCVKN)
ಹೀಗಿರುವುದರಿಂದ ನಿಮ್ಮ ದೇವರಾದ ಯೆಹೋವ ದೇವರು ಒಬ್ಬರೇ ದೇವರು; ಅವರೇ ನಂಬಿಗಸ್ತರಾದ ದೇವರು; ತಮ್ಮನ್ನು ಪ್ರೀತಿಸಿ, ತಮ್ಮ ಆಜ್ಞೆಗಳನ್ನು ಕೈಗೊಳ್ಳುವವರಿಗೆ, ಅವರು ತಮ್ಮ ಒಡಂಬಡಿಕೆಯ ಪ್ರೀತಿಯನ್ನು ಸಾವಿರ ತಲೆಗಳವರೆಗೂ ತೋರಿಸುವರು.
ಧರ್ಮೋಪದೇಶಕಾಂಡ 7 : 10 (OCVKN)
ಆದರೆ, ತಮ್ಮನ್ನು ಹಗೆಮಾಡುವವರಿಗೆ ಮುಯ್ಯಿಗೆ ಮುಯ್ಯಿ ತೀರಿಸಿ, ಅವರನ್ನು ತೆಗೆದುಹಾಕುತ್ತಾರೆ. ದೇವರು ತಮ್ಮನ್ನು ಹಗೆಮಾಡುವವರಿಗೆ ತಡಮಾಡದೆ ಮುಯ್ಯಿಗೆ ಮುಯ್ಯಿ ತೀರಿಸುತ್ತಾರೆ ಎಂದು ತಿಳಿದುಕೊಳ್ಳಿರಿ.
ಧರ್ಮೋಪದೇಶಕಾಂಡ 7 : 11 (OCVKN)
11 ಹೀಗಿರುವುದರಿಂದ ನಾನು ಈ ಹೊತ್ತು ನಿಮಗೆ ಕೊಡುವ ಆಜ್ಞೆಗಳನ್ನೂ, ತೀರ್ಪುಗಳನ್ನೂ, ನಿಯಮಗಳನ್ನು ಕೈಗೊಳ್ಳಬೇಕು.
ಧರ್ಮೋಪದೇಶಕಾಂಡ 7 : 12 (OCVKN)
ನೀವು ಈ ನ್ಯಾಯಗಳನ್ನು ಕೇಳಿ ಕಾಪಾಡಿ ನಡೆದುಕೊಂಡರೆ, ನಿಮ್ಮ ದೇವರಾದ ಯೆಹೋವ ದೇವರು ನಿಮ್ಮ ಪಿತೃಗಳಿಗೆ ಪ್ರಮಾಣ ಮಾಡಿದ ಒಡಂಬಡಿಕೆಯನ್ನೂ, ಕರುಣೆಯನ್ನೂ ನಿಮಗೋಸ್ಕರ ನೆರವೇರಿಸುವರು.
ಧರ್ಮೋಪದೇಶಕಾಂಡ 7 : 13 (OCVKN)
ಅವರು ನಿಮ್ಮನ್ನು ಪ್ರೀತಿಸಿ, ನಿಮ್ಮನ್ನು ಆಶೀರ್ವದಿಸಿ, ನಿಮ್ಮನ್ನು ಅಭಿವೃದ್ಧಿಗೊಳಿಸಿ ಮತ್ತು ನಿಮಗೆ ಕೊಡುತ್ತೇನೆಂದು ಅವರು ನಿಮ್ಮ ಪಿತೃಗಳಿಗೆ ಪ್ರಮಾಣ ಮಾಡಿದ ಆ ದೇಶದಲ್ಲಿ ನಿಮ್ಮ ಗರ್ಭದ ಫಲವನ್ನೂ ಅಂದರೆ, ಭೂಮಿಯ ಹುಟ್ಟುವಳಿಯನ್ನೂ, ನಿಮ್ಮ ಧಾನ್ಯವನ್ನೂ, ನಿಮ್ಮ ಹೊಸ ದ್ರಾಕ್ಷಾರಸವನ್ನೂ, ನಿಮ್ಮ ಎಣ್ಣೆಯನ್ನೂ, ನಿಮ್ಮ ಪಶುಗಳನ್ನೂ, ನಿಮ್ಮ ಕುರಿಗಳ ಮಂದೆಗಳನ್ನೂ ಆಶೀರ್ವದಿಸುವರು.
ಧರ್ಮೋಪದೇಶಕಾಂಡ 7 : 14 (OCVKN)
ಎಲ್ಲಾ ಜನರಿಗಿಂತಲೂ ನೀವು ಆಶೀರ್ವಾದಕ್ಕೆ ಪಾತ್ರರಾಗಿರುವಿರಿ. ನಿಮ್ಮೊಳಗೆ ಸ್ತ್ರೀ ಪುರುಷರಲ್ಲಾಗಲಿ, ಹೆಣ್ಣು ಗಂಡು ಪಶುಗಳಲ್ಲಿಯಾಗಲಿ ಬಂಜೆತನವು ಇರುವುದಿಲ್ಲ.
ಧರ್ಮೋಪದೇಶಕಾಂಡ 7 : 15 (OCVKN)
ಯೆಹೋವ ದೇವರು ಎಲ್ಲಾ ರೋಗಗಳನ್ನು ನಿಮ್ಮಿಂದ ತೆಗೆದುಬಿಡುವರು. ನಿಮಗೆ ತಿಳಿದಿರುವ ಈಜಿಪ್ಟಿನ ಕ್ರೂರರೋಗಗಳನ್ನು ನಿಮ್ಮ ಮೇಲೆ ಬರಮಾಡದ, ನಿಮ್ಮನ್ನು ಹಗೆಮಾಡುವವರೆಲ್ಲರ ಮೇಲೆ ಅವುಗಳನ್ನು ಬರಮಾಡುವರು.
ಧರ್ಮೋಪದೇಶಕಾಂಡ 7 : 16 (OCVKN)
ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಒಪ್ಪಿಸುವ ಜನರನ್ನೆಲ್ಲಾ ನೀವು ಸಂಹರಿಸಬೇಕು. ಅವರ ಮೇಲೆ ನೀವು ಕಟಾಕ್ಷವಿಡಬಾರದು. ಅವರ ದೇವರುಗಳನ್ನು ಆರಾಧಿಸಬಾರದು. ಏಕೆಂದರೆ ಅವು ನಿಮಗೆ ಉರುಲಾಗುವವು.
ಧರ್ಮೋಪದೇಶಕಾಂಡ 7 : 17 (OCVKN)
“ಈ ಜನಾಂಗದವರು ನಮಗಿಂತ ಹೆಚ್ಚು ಮಂದಿ ಇದ್ದಾರೆ. ನಾವು ಹೇಗೆ ಅವರನ್ನು ವಶಮಾಡಿಕೊಳ್ಳಬೇಕು?” ಎಂದು ನಿಮ್ಮ ಹೃದಯದಲ್ಲಿ ಅಂದುಕೊಳ್ಳುವಿರೋ?
ಧರ್ಮೋಪದೇಶಕಾಂಡ 7 : 18 (OCVKN)
ನೀವು ಅವರಿಗೆ ಭಯಪಡಬೇಡಿರಿ. ನಿಮ್ಮ ದೇವರಾದ ಯೆಹೋವ ದೇವರು ಫರೋಹನಿಗೂ, ಎಲ್ಲಾ ಈಜಿಪ್ಟಿನವರಿಗೂ ಮಾಡಿದ್ದನ್ನು
ಧರ್ಮೋಪದೇಶಕಾಂಡ 7 : 19 (OCVKN)
ಕಣ್ಣಾರೆ ನೋಡಿದ ದೊಡ್ಡ ಉಪದ್ರವಗಳನ್ನೂ, ನಿಮ್ಮ ದೇವರಾದ ಯೆಹೋವ ದೇವರು ನಿಮ್ಮನ್ನು ಹೊರಗೆ ಬರಮಾಡಿದಾಗ ಉಂಟಾದ ಗುರುತುಗಳನ್ನೂ, ಅದ್ಭುತಗಳನ್ನೂ, ದೇವರ ಬಲವಾದ ಹಸ್ತವನ್ನೂ, ಚಾಚಿದ ತೋಳನ್ನೂ ನೀವು ಚೆನ್ನಾಗಿ ಜ್ಞಾಪಕಮಾಡಿಕೊಳ್ಳಬೇಕು. ನೀವು ಯಾವ ಜನರಿಗೆ ಭಯಪಡುತ್ತೀರೋ, ಆ ಜನರಿಗೆಲ್ಲಾ ನಿಮ್ಮ ದೇವರಾದ ಯೆಹೋವ ದೇವರು ಹಾಗೆಯೇ ಮಾಡುವರು.
ಧರ್ಮೋಪದೇಶಕಾಂಡ 7 : 20 (OCVKN)
ಇದಲ್ಲದೆ ಉಳಿದವರೂ, ನಿಮಗೆ ಮರೆಯಾಗಿ ಉಳುಕೊಂಡವರೂ ನಾಶವಾಗುವ ತನಕ ನಿಮ್ಮ ದೇವರಾದ ಯೆಹೋವ ದೇವರು ಕಣಜದ ಹುಳವನ್ನು ಅವರಲ್ಲಿ ಕಳುಹಿಸುವರು.
ಧರ್ಮೋಪದೇಶಕಾಂಡ 7 : 21 (OCVKN)
ಅವರಿಗೆ ಹೆದರಬೇಡಿರಿ. ಏಕೆಂದರೆ ನಿಮ್ಮ ದೇವರಾದ ಯೆಹೋವ ದೇವರು ಭಯಭಕ್ತಿಗೆ ಯೋಗ್ಯರಾದ ಮಹಾ ದೇವರಾಗಿ ನಿಮ್ಮ ಮಧ್ಯದಲ್ಲಿದ್ದಾರೆ.
ಧರ್ಮೋಪದೇಶಕಾಂಡ 7 : 22 (OCVKN)
ನಿಮ್ಮ ದೇವರಾದ ಯೆಹೋವ ದೇವರು ಆ ಜನಾಂಗಗಳನ್ನು ನಿಮ್ಮ ಮುಂದೆ ಸ್ವಲ್ಪ ಸ್ವಲ್ಪವಾಗಿ ಹೊರಗೆ ಹಾಕುವರು. ನೀವು ಅವರನ್ನು ತ್ವರೆಯಾಗಿ ಸಂಹರಿಸಬಾರದು. ಹಾಗೆ ಮಾಡಿದರೆ, ಕಾಡುಮೃಗಗಳು ಹೆಚ್ಚಾಗಿ ನಿಮಗೆ ತೊಂದರೆಕೊಡುವುವು.
ಧರ್ಮೋಪದೇಶಕಾಂಡ 7 : 23 (OCVKN)
ಆದರೂ ನಿಮ್ಮ ದೇವರಾದ ಯೆಹೋವ ದೇವರು ಅವರನ್ನು ನಿಮಗೆ ಒಪ್ಪಿಸಿಬಿಡುವರು. ಅವರು ಸೋತುಹೋಗಿ ಇಲ್ಲದಂತಾಗುವರು.
ಧರ್ಮೋಪದೇಶಕಾಂಡ 7 : 24 (OCVKN)
ದೇವರು ಅವರ ಅರಸರನ್ನು ನಿಮಗೆ ಒಪ್ಪಿಸುವರು. ನೀವು ಅವರ ಹೆಸರನ್ನು ಆಕಾಶದ ಕೆಳಗೆ ಇಲ್ಲದ ಹಾಗೆ ದಂಡಿಸುವಿರಿ. ನೀವು ಅವರನ್ನು ನಿರ್ಮೂಲ ಮಾಡುವ ತನಕ ಒಬ್ಬನಾದರೂ ನಿಮ್ಮ ಮುಂದೆ ನಿಲ್ಲಲಾರನು.
ಧರ್ಮೋಪದೇಶಕಾಂಡ 7 : 25 (OCVKN)
ಅವರ ದೇವರುಗಳ ವಿಗ್ರಹಗಳನ್ನು ಬೆಂಕಿಯಿಂದ ಸುಡಬೇಕು. ಅವುಗಳ ಮೇಲಿರುವ ಬೆಳ್ಳಿಬಂಗಾರವನ್ನು ಆಶಿಸಿ ನೀವು ತೆಗೆದುಕೊಳ್ಳಬಾರದು. ಅದು ನಿಮಗೆ ಉರುಲಾದೀತು. ಏಕೆಂದರೆ ಅದು ನಿಮ್ಮ ದೇವರಾದ ಯೆಹೋವ ದೇವರಿಗೆ ಅಸಹ್ಯವೇ.
ಧರ್ಮೋಪದೇಶಕಾಂಡ 7 : 26 (OCVKN)
ನೀವು ಅದರಂತೆ ಶಾಪಕ್ಕೊಳಗಾಗದ ಹಾಗೆ ಅಸಹ್ಯವಾದದ್ದನ್ನು ನಿಮ್ಮ ಮನೆಗೆ ತೆಗೆದುಕೊಂಡು ಬರಬಾರದು. ಅದನ್ನು ಕೆಟ್ಟದಾಗಿ ಪರಿಗಣಿಸಿ ಮತ್ತು ಅದನ್ನು ಸಂಪೂರ್ಣವಾಗಿ ಅಸಹ್ಯಿಸಬೇಕು, ಏಕೆಂದರೆ ಅದು ಶಾಪಗ್ರಸ್ತವಾದದ್ದು.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26