ಧರ್ಮೋಪದೇಶಕಾಂಡ 32 : 1 (OCVKN)
ಆಕಾಶವೇ, ಕಿವಿಗೊಡು. ನಾನು ಮಾತನಾಡುತ್ತೇನೆ. ಭೂಮಿಯೇ, ನನ್ನ ಬಾಯಿಯ ಮಾತುಗಳನ್ನು ಕೇಳು.
ಧರ್ಮೋಪದೇಶಕಾಂಡ 32 : 2 (OCVKN)
ನನ್ನ ಬೋಧನೆ ಮಳೆಯಂತೆ ಸುರಿಯುವುದು. ನನ್ನ ಮಾತು ಮಂಜಿನಂತೆಯೂ, ಹುಲ್ಲಿನ ಮೇಲೆ ಬೀಳುವ ವೃಷ್ಟಿಗಳ ಹಾಗೆಯೂ ಬೀಳುವುದು.
ಧರ್ಮೋಪದೇಶಕಾಂಡ 32 : 3 (OCVKN)
ಏಕೆಂದರೆ ಯೆಹೋವ ದೇವರ ಹೆಸರನ್ನು ನಾನು ಸಾರುತ್ತೇನೆ. ನಮ್ಮ ದೇವರಿಗೆ ಮಹತ್ವವನ್ನು ಕೊಡಿರಿ.
ಧರ್ಮೋಪದೇಶಕಾಂಡ 32 : 4 (OCVKN)
ದೇವರು ಸಂರಕ್ಷಿಸುವ ಬಂಡೆ. ದೇವರ ಕಾರ್ಯವು ಸಂಪೂರ್ಣವಾದದ್ದು. ಅವರ ಮಾರ್ಗಗಳೆಲ್ಲಾ ನ್ಯಾಯವಾಗಿವೆ. ಅವರು ಯಾವ ತಪ್ಪನ್ನೂ ಮಾಡದ ನಂಬಿಗಸ್ತ ದೇವರು, ನೀತಿವಂತರೂ ಯಥಾರ್ಥರೂ ಆದ ದೇವರು.
ಧರ್ಮೋಪದೇಶಕಾಂಡ 32 : 5 (OCVKN)
ಇಸ್ರಾಯೇಲರು ತಮ್ಮನ್ನು ಕೆಡಿಸಿಕೊಂಡರು. ದೇವರ ಮಕ್ಕಳಿಗೆ ತಕ್ಕಂತೆ ನಡೆಯದವರು. ಅವರು ಮೂರ್ಖರಾದ ವಕ್ರ ಸಂತತಿ.
ಧರ್ಮೋಪದೇಶಕಾಂಡ 32 : 6 (OCVKN)
ಯೆಹೋವ ದೇವರಿಗೆ ಪ್ರತಿಯಾಗಿ ಹೀಗೆ ವರ್ತಿಸುವುದು ಸರಿಯೋ? ಜ್ಞಾನವಿಲ್ಲದ ಬುದ್ಧಿಹೀನ ಜನರೇ, ದೇವರು ನಿಮ್ಮನ್ನು ಸೃಷ್ಟಿಸಿದ ತಂದೆಯಲ್ಲವೋ? ನಿಮ್ಮನ್ನು ಸೃಷ್ಟಿಸಿ ಸ್ಥಿರಪಡಿಸಿದ್ದು ದೇವರಲ್ಲವೋ?
ಧರ್ಮೋಪದೇಶಕಾಂಡ 32 : 7 (OCVKN)
ಪೂರ್ವದ ದಿವಸಗಳನ್ನು ಜ್ಞಾಪಕಮಾಡಿಕೊಳ್ಳಿರಿ. ತಲತಲಾಂತರಗಳ ವರುಷಗಳನ್ನು ಗ್ರಹಿಸಿಕೊಳ್ಳಿರಿ. ನಿಮ್ಮ ತಂದೆಯನ್ನು ಕೇಳಿದರೆ, ಅವರು ನಿಮಗೆ ತಿಳಿಸುವರು. ನಿಮ್ಮ ಹಿರಿಯರನ್ನು ಕೇಳಿದರೆ, ಅವರು ನಿಮಗೆ ಹೇಳುವರು.
ಧರ್ಮೋಪದೇಶಕಾಂಡ 32 : 8 (OCVKN)
ಮಹೋನ್ನತ ದೇವರು ಜನಾಂಗಗಳಿಗೆ ಸ್ಥಳವನ್ನು ಕೊಡುವಾಗಲೂ, ಅವರು ಮಾನವರನ್ನು ವಿಂಗಡಿಸುವಾಗಲೂ, ಇಸ್ರಾಯೇಲರ ಲೆಕ್ಕದ ಪ್ರಕಾರ ಜನರ ಮೇರೆಗಳನ್ನು ಗುರುತಿಸಿಕೊಂಡರು.
ಧರ್ಮೋಪದೇಶಕಾಂಡ 32 : 9 (OCVKN)
ಏಕೆಂದರೆ ಯೆಹೋವ ದೇವರ ಪಾಲು ಅವರ ಜನರೇ ಆಗಿರುತ್ತಾರೆ. ಯಾಕೋಬ್ಯರೇ ದೇವರ ಸೊತ್ತಿನ ಪಾಲು.
ಧರ್ಮೋಪದೇಶಕಾಂಡ 32 : 10 (OCVKN)
ದೇವರು ಬರಿದಾದ ಮರುಭೂಮಿಯಲ್ಲಿ ಇಸ್ರಾಯೇಲರನ್ನು ಕಂಡು ನಡೆಸಿದರು. ದೇವರು ಇಸ್ರಾಯೇಲರನ್ನು ರಕ್ಷಿಸಿ, ಉಪದೇಶಿಸಿ, ತಮ್ಮ ಕಣ್ಣುಗುಡ್ಡೆಯಂತೆ ಕಾಪಾಡಿದರು.
ಧರ್ಮೋಪದೇಶಕಾಂಡ 32 : 11 (OCVKN)
ಹದ್ದು ತನ್ನ ಗೂಡಿನಿಂದ ಮರಿಗಳನ್ನು ಹೊರಡಿಸಿ, ಅವುಗಳ ಮೇಲೆ ರೆಕ್ಕೆಯನ್ನಾಡಿಸಿ, ತನ್ನ ರೆಕ್ಕೆಗಳನ್ನು ಚಾಚಿ, ಅವುಗಳನ್ನು ತೆಗೆದುಕೊಂಡು ರೆಕ್ಕೆಯ ಮೇಲೆ ಎತ್ತಿಕೊಳ್ಳುವಂತೆ,
ಧರ್ಮೋಪದೇಶಕಾಂಡ 32 : 12 (OCVKN)
ಯೆಹೋವ ದೇವರು ಮಾತ್ರವೇ ಇಸ್ರಾಯೇಲರನ್ನು ನಡೆಸಿಕೊಂಡು ಬಂದರು. ಅನ್ಯದೇವರು ಯಾರೂ ಇಸ್ರಾಯೇಲರ ಸಂಗಡ ಇರಲಿಲ್ಲ.
ಧರ್ಮೋಪದೇಶಕಾಂಡ 32 : 13 (OCVKN)
ದೇವರು ಅವರನ್ನು ಭೂಮಿಯ ಎತ್ತರವಾದ ಪ್ರದೇಶಗಳ ಮೇಲೆ ಹತ್ತಿಸಿ, ಅವರಿಗೆ ವ್ಯವಸಾಯ ವೃದ್ಧಿಯನ್ನುಂಟುಮಾಡಿ, ಬಂಡೆಯಿಂದ ಜೇನೂ, ಗಿರಿಯಿಂದ ಎಣ್ಣೆಯೂ ದೊರೆಯುವಂತೆ ಮಾಡಿದರು.
ಧರ್ಮೋಪದೇಶಕಾಂಡ 32 : 14 (OCVKN)
ಹಸುಗಳ ಕೆನೆಯನ್ನೂ, ಕುರಿಗಳ ಹಾಲನ್ನೂ, ಕುರಿಮರಿಗಳ ಕೊಬ್ಬಿನ ಸಂಗಡ ಬಾಷಾನಿನ ಟಗರುಗಳನ್ನೂ ಹೋತಗಳನ್ನೂ ಉತ್ತಮವಾದ ಗೋಧಿಯನ್ನು ಕೊಟ್ಟರು. ನೀನು ರಕ್ತಗೆಂಪಾದ ದ್ರಾಕ್ಷಾರಸವನ್ನು ಕುಡಿದೆ.
ಧರ್ಮೋಪದೇಶಕಾಂಡ 32 : 15 (OCVKN)
ಯೆಶುರೂನು* ಯೆಶುರೂನ ಎಂದರೆ ಯಥಾರ್ಥವಂತ ಅಥವಾ ಇಸ್ರಾಯೇಲನ್ನು ಉಲ್ಲೇಖಿಸುವ ಪ್ರೀತಿಯ ಪದವಾಗಿದೆ ಎಂಬ ಇಸ್ರಾಯೇಲರು ಕೊಬ್ಬಿ ಹೋದರು. ಅವರು ಹೊಟ್ಟೆ ತುಂಬ ಚೆನ್ನಾಗಿ ತಿಂದು ದಪ್ಪವಾದರು. ಅವರು ತಮ್ಮನ್ನು ಸೃಷ್ಟಿಮಾಡಿದ ದೇವರನ್ನು ಬಿಟ್ಟು, ತಮ್ಮ ರಕ್ಷಣೆಯ ಬಂಡೆಯನ್ನು ಅಲಕ್ಷ್ಯ ಮಾಡಿದರು.
ಧರ್ಮೋಪದೇಶಕಾಂಡ 32 : 16 (OCVKN)
ಅನ್ಯದೇವತೆಗಳಿಂದ ದೇವರಿಗೆ ಅವರು ರೋಷ ಹುಟ್ಟಿಸಿದರು. ಅಸಹ್ಯವಾದವುಗಳಿಂದ ದೇವರಿಗೆ ಕೋಪವನ್ನು ಎಬ್ಬಿಸಿದರು.
ಧರ್ಮೋಪದೇಶಕಾಂಡ 32 : 17 (OCVKN)
ದೇವರಿಗೆ ಅಲ್ಲ, ದೆವ್ವಗಳಿಗೆ, ಅವರು ಮುಂಚಿತವಾಗಿ ಅರಿಯದ ದೇವರುಗಳಿಗೆ, ಸಮೀಪದಲ್ಲಿ ಹೊಸದಾಗಿ ತೋರಿ ಬಂದ ದೇವರುಗಳಿಗೆ, ಅಂದರೆ, ಅವರ ಪಿತೃಗಳು ಭಜಿಸದವುಗಳಿಗೆ ಬಲಿ ಅರ್ಪಿಸಿದರು.
ಧರ್ಮೋಪದೇಶಕಾಂಡ 32 : 18 (OCVKN)
ನಿಮ್ಮನ್ನು ಹುಟ್ಟಿಸಿದ ರಕ್ಷಣಾಬಂಡೆಯನ್ನು ನೆನಸದೆ, ನಿಮ್ಮನ್ನು ರೂಪಿಸಿದ ದೇವರನ್ನು ಮರೆತುಬಿಟ್ಟಿರಿ.
ಧರ್ಮೋಪದೇಶಕಾಂಡ 32 : 19 (OCVKN)
ಯೆಹೋವ ದೇವರು ಅದನ್ನು ನೋಡಿ ಬೇಸರದಿಂದ ತಮ್ಮ ಪುತ್ರಪುತ್ರಿಯರನ್ನು ದಂಡಿಸಿದರು.
ಧರ್ಮೋಪದೇಶಕಾಂಡ 32 : 20 (OCVKN)
ದೇವರು, “ನನ್ನ ಮುಖವನ್ನು ಅವರಿಗೆ ಮರೆಮಾಡುವೆನು, ಅವರ ಅಂತ್ಯವು ಏನೆಂದು ನೋಡುವೆನು. ಅವರು ಮೂರ್ಖ ಸಂತತಿಯೇ. ನಂಬಿಕೆಯಿಲ್ಲದ ಮಕ್ಕಳೇ.
ಧರ್ಮೋಪದೇಶಕಾಂಡ 32 : 21 (OCVKN)
ದೇವರಲ್ಲದವುಗಳಿಂದ ಅವರು ನನಗೆ ರೋಷ ಹುಟ್ಟಿಸಿದರು. ತಮ್ಮ ವ್ಯರ್ಥವಾದವುಗಳಿಂದ ನನಗೆ ಕೋಪವನ್ನು ಎಬ್ಬಿಸಿದರು. ನಾನು ಜನಾಂಗವಲ್ಲದವರ ಮೂಲಕ ನೀವು ಅಸೂಯೆಪಡುವಂತೆ ಮಾಡುವೆನು. ಮೂಢ ಜನಾಂಗದಿಂದ ಅವರಿಗೆ ಕೋಪವನ್ನೆಬ್ಬಿಸುವೆನು.
ಧರ್ಮೋಪದೇಶಕಾಂಡ 32 : 22 (OCVKN)
ಏಕೆಂದರೆ ನನ್ನ ರೋಷ ಬೆಂಕಿಯಂತಿದೆ, ಅದು ಕೆಳಗಿನ ಪಾತಾಳದ ಮಟ್ಟಿಗೂ ಉರಿದು ಭೂಮಿಯನ್ನೂ, ಅದರ ಫಲವನ್ನೂ ತಿಂದು ಬಿಟ್ಟು, ಬೆಟ್ಟಗಳ ಅಸ್ತಿವಾರವನ್ನು ದಹಿಸುವುದು.
ಧರ್ಮೋಪದೇಶಕಾಂಡ 32 : 23 (OCVKN)
“ನಾನು ಕೇಡುಗಳನ್ನು ಅವರ ಮೇಲೆ ಕೂಡಿಸಿಡುವೆನು. ನನ್ನ ಬಾಣಗಳನ್ನು ಅವರ ಮೇಲೆ ಎಸೆದು ತೀರಿಸುವೆನು.
ಧರ್ಮೋಪದೇಶಕಾಂಡ 32 : 24 (OCVKN)
ಅವರು ಹಸಿವೆಯಿಂದ ಬಳಲಿ ಹೋಗುವರು, ಜ್ವಾಲೆಯಿಂದಲೂ ಕಠಿಣ ವ್ಯಾಧಿಯಿಂದಲೂ ಬೀಳುವರು. ಕಾಡುಮೃಗಗಳನ್ನೂ ಧೂಳಿನಲ್ಲಿರುವ ವಿಷಸರ್ಪಗಳನ್ನೂ ಅವರಿಗೆ ವಿರೋಧವಾಗಿ ಕಳುಹಿಸುವೆನು.
ಧರ್ಮೋಪದೇಶಕಾಂಡ 32 : 25 (OCVKN)
ಮನೆಯ ಹೊರಗೆ ಖಡ್ಗವೂ ಒಳಗೆ ಭಯವೂ ಇವರಲ್ಲಿರುವುವು. ಪ್ರಾಯಸ್ಥರೂ ಕನ್ನಿಕೆಯರೂ ನರೆಕೂದಲಿನವರೂ ಹಾಲು ಕುಡಿಯುವ ಕೂಸುಗಳೂ ಖಡ್ಗಗಳಿಗೆ ಸಂಹಾರವಾಗುವರು.
ಧರ್ಮೋಪದೇಶಕಾಂಡ 32 : 26 (OCVKN)
ನಾನು ಅವರನ್ನು ಚದರಿಸಿಬಿಡುವೆನು. ಅವರ ನೆನಪೇ ಮನುಷ್ಯರಲ್ಲಿ ಇರದ ಹಾಗೆ ಮಾಡುತ್ತಿದ್ದೆನು.
ಧರ್ಮೋಪದೇಶಕಾಂಡ 32 : 27 (OCVKN)
ಆದರೆ ಅವರ ವಿರೋಧಿಗಳು ತಪ್ಪಾದ ಭಾವನೆ ಮಾಡಿಕೊಂಡು, ‘ಯೆಹೋವ ದೇವರು ಇವುಗಳನ್ನೆಲ್ಲಾ ಮಾಡಲಿಲ್ಲ, ನಾವೇ ನಮ್ಮ ಕೈಯಿಂದ ಜಯಿಸಿದೆವೆಂದುಕೊಳ್ಳುವರು,’ ಆದ್ದರಿಂದ ನಾನು ಹಿಂತಗೆದುಕೊಂಡೆನು.”
ಧರ್ಮೋಪದೇಶಕಾಂಡ 32 : 28 (OCVKN)
ಏಕೆಂದರೆ ಇಸ್ರಾಯೇಲರು ಆಲೋಚನೆ ಇಲ್ಲದ ಜನಾಂಗವೇ. ಅವರಲ್ಲಿ ವಿವೇಕವಿಲ್ಲ.
ಧರ್ಮೋಪದೇಶಕಾಂಡ 32 : 29 (OCVKN)
ಅವರಿಗೆ ಜ್ಞಾನವಿದ್ದಿದ್ದರೆ ಈ ವಿಷಯಗಳನ್ನೆಲ್ಲಾ ಗ್ರಹಿಸುತ್ತಿದ್ದರು, ತಮ್ಮ ಕಡೆಕಾಲದಲ್ಲಿ ದುರವಸ್ಥೆ ಪ್ರಾಪ್ತವಾಗುವದೆಂದು ತಿಳಿದುಕೊಳ್ಳುತ್ತಿದ್ದರು.
ಧರ್ಮೋಪದೇಶಕಾಂಡ 32 : 30 (OCVKN)
ಇಸ್ರಾಯೇಲ್ ರಕ್ಷಣಾಬಂಡೆ ಅವರನ್ನು ಮಾರಿ, ಯೆಹೋವ ದೇವರು ಅವರನ್ನು ಕೈಬಿಟ್ಟ ಹೊರತು, ಒಬ್ಬನು ಹೇಗೆ ಸಾವಿರ ಮಂದಿಯನ್ನು ಹಿಂದಟ್ಟುವನು? ಇಬ್ಬರು ಹೇಗೆ ಹತ್ತು ಸಾವಿರ ಮಂದಿಯನ್ನು ಓಡಿಸುವರು?
ಧರ್ಮೋಪದೇಶಕಾಂಡ 32 : 31 (OCVKN)
ಏಕೆಂದರೆ ನಮ್ಮ ರಕ್ಷಣಾಬಂಡೆಯ ಹಾಗೆ ಅವರ ಬಂಡೆ ಅಲ್ಲ. ಇದಕ್ಕೆ ನಮ್ಮ ಶತ್ರುಗಳೇ ಸಾಕ್ಷಿ.
ಧರ್ಮೋಪದೇಶಕಾಂಡ 32 : 32 (OCVKN)
ಏಕೆಂದರೆ ಸೊದೋಮಿನ ದ್ರಾಕ್ಷಿಗಿಡದಿಂದಲೂ, ಗೊಮೋರದ ತೋಟದೊಳಗಿಂದಲೂ ಅವರ ದ್ರಾಕ್ಷಿಗಿಡ ಉಂಟಾಯಿತು. ಅವರ ಹಣ್ಣುಗಳು, ವಿಷದ ಹಣ್ಣುಗಳು, ಆ ಹಣ್ಣುಗಳ ಗೊಂಚಲು ಕಹಿಯಾಗಿವೆ.
ಧರ್ಮೋಪದೇಶಕಾಂಡ 32 : 33 (OCVKN)
ಅವರ ದ್ರಾಕ್ಷಾರಸವು ಸರ್ಪಗಳ ವಿಷವೂ, ಹಾವುಗಳ ಕ್ರೂರ ವಿಷವೂ ಆಗಿದೆ.
ಧರ್ಮೋಪದೇಶಕಾಂಡ 32 : 34 (OCVKN)
“ನಾನು ಇದನ್ನು ನನ್ನ ಉಗ್ರಾಣಗಳಲ್ಲಿ ಸಂಗ್ರಹಿಸಿದ್ದಲ್ಲವೋ? ಇದನ್ನು ನಾನು ಮುದ್ರಿಸಿದ್ದಲ್ಲವೋ?
ಧರ್ಮೋಪದೇಶಕಾಂಡ 32 : 35 (OCVKN)
ಮುಯ್ಯಿಗೆ ಮುಯ್ಯಿ ತೀರಿಸುವುದೂ, ಪ್ರತಿಫಲ ಕೊಡುವುದೂ ನನ್ನದೇ. ತಕ್ಕ ಕಾಲದಲ್ಲಿ ಅವರ ಕಾಲು ಜಾರುವುದು. ಅವರ ವಿನಾಶದ ದಿವಸ ಸಮೀಪವಾಗಿದೆ. ಅವರಿಗೆ ಸಿದ್ಧವಾದ ದುರ್ಗತಿಯ ಕಾಲ ಬೇಗ ಬರುತ್ತವೆ.”
ಧರ್ಮೋಪದೇಶಕಾಂಡ 32 : 36 (OCVKN)
ಏಕೆಂದರೆ ಯೆಹೋವ ದೇವರು ತಮ್ಮ ಜನರಿಗೆ ನ್ಯಾಯತೀರಿಸುವರು. ದೇವರು ತಮ್ಮ ಸೇವಕರ ಬಲ ಹೋಯಿತೆಂದೂ, ಗುಲಾಮರಾಗಲಿ, ಸ್ವತಂತ್ರರಾಗಲಿ ಉಳಿಯಲಿಲ್ಲವೆಂದೂ ನೋಡಿದಾಗ, ತಮ್ಮ ಸೇವಕರಿಗೋಸ್ಕರ ಕರುಣಿಸುವರು.
ಧರ್ಮೋಪದೇಶಕಾಂಡ 32 : 37 (OCVKN)
ಆಗ ಯೆಹೋವ ದೇವರು ಹೀಗನ್ನುವರು: “ಅವರ ದೇವರುಗಳು ಎಲ್ಲಿ? ಅವರು ನಂಬಿಕೊಂಡಂಥ,
ಧರ್ಮೋಪದೇಶಕಾಂಡ 32 : 38 (OCVKN)
ಅವರ ಬಲಿಗಳ ಕೊಬ್ಬನ್ನು ತಿಂದಂಥ, ಅವರ ಪಾನದ ಅರ್ಪಣೆಗಳ ದ್ರಾಕ್ಷಾರಸ ಕುಡಿದಂಥ ದೇವರುಗಳು ಎಲ್ಲಿ? ಈಗ ಆ ದೇವರುಗಳು ಎದ್ದು ನಿಮಗೆ ಸಹಾಯ ಮಾಡಲಿ, ನಿಮಗೋಸ್ಕರ ಕಾವಲಾಗಲಿ.
ಧರ್ಮೋಪದೇಶಕಾಂಡ 32 : 39 (OCVKN)
“ನಾನು ಇರುವಾತನೇ ಆಗಿದ್ದೇನೆ! ನನ್ನ ಹಾಗೆ ಬೇರೆ ದೇವರು ಇಲ್ಲವೆಂದು ಈಗ ನೋಡಿರಿ. ನಾನೇ ಸಾಯಿಸುತ್ತೇನೆ, ಬದುಕಿಸುತ್ತೇನೆ, ಗಾಯಮಾಡುತ್ತೇನೆ, ನಾನೇ ಗುಣಪಡಿಸುತ್ತೇನೆ. ನನ್ನ ಕೈಯಿಂದ ತಪ್ಪಿಸುವವನು ಯಾರೂ ಇಲ್ಲ.
ಧರ್ಮೋಪದೇಶಕಾಂಡ 32 : 40 (OCVKN)
ಆಕಾಶದ ಕಡೆ ನನ್ನ ಕೈಯೆತ್ತಿ, ನಾನು ನಿತ್ಯವಾಗಿ ಬದುಕುವಾತನು ಎಂದು ಹೇಳುತ್ತೇನೆ.
ಧರ್ಮೋಪದೇಶಕಾಂಡ 32 : 41 (OCVKN)
ನಾನು ಮಿಂಚುವ ಖಡ್ಗವನ್ನು ಹದಮಾಡಿ, ನನ್ನ ಕೈ ನ್ಯಾಯವನ್ನು ಹಿಡಿದುಕೊಳ್ಳುವಾಗ, ನನ್ನ ಶತ್ರುಗಳಿಗೆ ಮುಯ್ಯಿಗೆ ಮುಯ್ಯಿ ತೀರಿಸಿ, ನನ್ನನ್ನು ದ್ವೇಷಿಸುವವರಿಗೆ ಮುಯ್ಯಿತೀರಿಸುವೆನು.
ಧರ್ಮೋಪದೇಶಕಾಂಡ 32 : 42 (OCVKN)
ಸತ್ತವರ ಮತ್ತು ಸೆರೆಯಾದವರ ರಕ್ತದಿಂದಲೂ, ಶತ್ರುವಿಗೆ ಮಾಡಿದ ಪ್ರತೀಕಾರದಿಂದಲೂ ನನ್ನ ಬಾಣಗಳು ಅಮಲೇರುವುದು. ನನ್ನ ಖಡ್ಗವು ಮಾಂಸವನ್ನು ಭಕ್ಷಿಸುವುದು. ಹೀಗೆ ಶತ್ರುಗಳ ನಾಯಕರ ತಲೆ ಬೀಳುವುದು.”
ಧರ್ಮೋಪದೇಶಕಾಂಡ 32 : 43 (OCVKN)
ಎಲ್ಲಾ ಜನಾಂಗಗಳೇ, ದೇವಜನರ ಸಂಗಡ ಹರ್ಷಿಸಿರಿ. ಏಕೆಂದರೆ ದೇವರು ತಮ್ಮ ದಾಸರ ರಕ್ತಕ್ಕೋಸ್ಕರ ಮುಯ್ಯಿ ತೀರಿಸುವರು. ತಮ್ಮ ಶತ್ರುಗಳಿಗೆ ಮುಯ್ಯಿಗೆ ಮುಯ್ಯಿ ತೀರಿಸಿ, ತಮ್ಮ ದೇಶಕ್ಕೋಸ್ಕರವೂ, ತಮ್ಮ ಜನರಿಗೋಸ್ಕರವೂ ದೋಷಪರಿಹಾರ ಮಾಡುವರು.
ಧರ್ಮೋಪದೇಶಕಾಂಡ 32 : 44 (OCVKN)
ಆಗ ಮೋಶೆಯು ನೂನನ ಮಗನಾದ ಹೋಶೇಯನ† ಹೋಶೇಯ ಹೀಬ್ರೂ ಭಾಷೆಯಲ್ಲಿ ಯೆಹೋಶುವ ಎಂದು ಕರೆಯಲಾಗಿದೆ ಸಂಗಡ ಬಂದು, ಈ ಹಾಡಿನ ಮಾತುಗಳನ್ನೆಲ್ಲಾ ಜನರು ಕೇಳುವ ಹಾಗೆ ಹೇಳಿದನು.
ಧರ್ಮೋಪದೇಶಕಾಂಡ 32 : 45 (OCVKN)
ಮೋಶೆಯು ಈ ಮಾತುಗಳನ್ನೆಲ್ಲಾ ಸಮಸ್ತ ಇಸ್ರಾಯೇಲಿಗೆ ಹೇಳಿ ತೀರಿಸಿದ ತರುವಾಯ ಅವನು ಅವರಿಗೆ,
ಧರ್ಮೋಪದೇಶಕಾಂಡ 32 : 46 (OCVKN)
“ನಾನು ಈ ಹೊತ್ತು ನಿಮಗೆ ಸಾಕ್ಷಿಯಾಗಿ ಹೇಳುವ ಮಾತುಗಳನ್ನೆಲ್ಲಾ ಮನಸ್ಸಿನಲ್ಲಿಟ್ಟುಕೊಳ್ಳಿರಿ. ಈ ನಿಯಮದ ಮಾತುಗಳನ್ನು ಅನುಸರಿಸಬೇಕೆಂದು ನೀವು ನಿಮ್ಮ ಮಕ್ಕಳಿಗೆ ಆಜ್ಞಾಪಿಸಿರಿ.
ಧರ್ಮೋಪದೇಶಕಾಂಡ 32 : 47 (OCVKN)
ಏಕೆಂದರೆ ಇದು ನಿಮಗೆ ಕೇವಲ ವ್ಯರ್ಥವಾದದ್ದಲ್ಲ. ಇದು ನಿಮಗೆ ಜೀವವೇ. ನೀವು ಸ್ವಾಧೀನಮಾಡಿಕೊಳ್ಳುವುದಕ್ಕೆ ಯೊರ್ದನನ್ನು ದಾಟುವ ಭೂಮಿಯಲ್ಲಿ ಇದರಿಂದಲೇ ನಿಮ್ಮ ದಿವಸಗಳನ್ನು ಹೆಚ್ಚಿಸಿಕೊಳ್ಳುವಿರಿ,” ಎಂದು ಹೇಳಿದನು.
ಧರ್ಮೋಪದೇಶಕಾಂಡ 32 : 48 (OCVKN)
ನೆಬೋ ಬೆಟ್ಟದ ಮೇಲೆ ಮೋಶೆಯ ಮರಣ ಆ ದಿವಸವೇ ಯೆಹೋವ ದೇವರು ಮೋಶೆಗೆ,
ಧರ್ಮೋಪದೇಶಕಾಂಡ 32 : 49 (OCVKN)
“ನೀನು ಈ ಅಬಾರೀಮ್ ಬೆಟ್ಟದ ಮೇಲೆ ಅಂದರೆ, ಮೋವಾಬ್ ದೇಶದಲ್ಲಿ ಯೆರಿಕೋವಿಗೆ ಎದುರಾಗಿ ಇರುವ ನೆಬೋ ಪರ್ವತದ ಮೇಲೆ ಏರಿ ಹೋಗು. ನಾನು ಇಸ್ರಾಯೇಲರಿಗೆ ಸೊತ್ತಾಗಿ ಕೊಡುವ ಕಾನಾನ್ ದೇಶವನ್ನು ನೋಡು.
ಧರ್ಮೋಪದೇಶಕಾಂಡ 32 : 50 (OCVKN)
ನಿನ್ನ ಸಹೋದರನಾದ ಆರೋನನು ಹೋರ್ ಬೆಟ್ಟದಲ್ಲಿ ಸತ್ತು, ತನ್ನ ಜನರ ಬಳಿಗೆ ಸೇರಿದ ಹಾಗೆ, ನೀನು ಏರಿಹೋಗುವ ಬೆಟ್ಟದಲ್ಲಿ ಸತ್ತು, ನಿನ್ನ ಜನರ ಬಳಿಗೆ ಸೇರಬೇಕು.
ಧರ್ಮೋಪದೇಶಕಾಂಡ 32 : 51 (OCVKN)
ನೀವಿಬ್ಬರೂ ಚಿನ್ ಮರುಭೂಮಿಯಲ್ಲಿ ಕಾದೇಶಿನ ಮೆರೀಬಾದ ನೀರಿನ ಬಳಿಯಲ್ಲಿ ನನ್ನನ್ನು ಇಸ್ರಾಯೇಲರ ಮುಂದೆ ನಂಬದೆ, ನನ್ನ ಪವಿತ್ರತೆಯನ್ನು ಇಸ್ರಾಯೇಲರ ನಡುವೆ ಕಾಪಾಡದೆ ನಂಬದೆ ಹೋದಿರಿ.
ಧರ್ಮೋಪದೇಶಕಾಂಡ 32 : 52 (OCVKN)
ಆದುದರಿಂದ, ನೀನು ಆ ದೇಶವನ್ನು ದೂರದಿಂದ ನೋಡುವೆ, ಆದರೆ ನಾನು ಇಸ್ರಾಯೇಲರಿಗೆ ಕೊಡುವ ದೇಶದಲ್ಲಿ ನೀನು ಪ್ರವೇಶಿಸುವುದಿಲ್ಲ,” ಎಂದು ಹೇಳಿದರು.
❮
❯