ಧರ್ಮೋಪದೇಶಕಾಂಡ 26 : 1 (OCVKN)
ಪ್ರಥಮ ಫಲಗಳು ಹಾಗೂ ದಶಮಾಂಶ ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಸ್ವತ್ತಾಗಿ ಕೊಡುವ ದೇಶಕ್ಕೆ ನೀವು ಬಂದು ಅದನ್ನು ಸ್ವಾಧೀನಮಾಡಿಕೊಂಡು, ಅದರಲ್ಲಿ ವಾಸಮಾಡುವಿರಿ.
ಧರ್ಮೋಪದೇಶಕಾಂಡ 26 : 2 (OCVKN)
ಆಗ ನಿಮ್ಮ ದೇಶದಿಂದ ನೀವು ತರತಕ್ಕ ಭೂಮಿಯ ಎಲ್ಲಾ ಹುಟ್ಟುವಳಿಯ ಪ್ರಥಮ ಫಲವನ್ನು ಬುಟ್ಟಿಯಲ್ಲಿಟ್ಟು, ನಿಮ್ಮ ದೇವರಾದ ಯೆಹೋವ ದೇವರು ತಮ್ಮ ಹೆಸರನ್ನು ಸ್ಥಾಪಿಸುವದಕ್ಕೆ ಆಯ್ದುಕೊಳ್ಳುವ ಸ್ಥಳಕ್ಕೆ ತೆಗೆದುಕೊಂಡು ಹೋಗಬೇಕು.
ಧರ್ಮೋಪದೇಶಕಾಂಡ 26 : 3 (OCVKN)
ಅಲ್ಲಿ ಆ ಕಾಲದಲ್ಲಿರುವ ಯಾಜಕನ ಬಳಿಗೆ ಹೋಗಿ ಅವನಿಗೆ, “ಯೆಹೋವ ದೇವರು ನಮ್ಮ ಪಿತೃಗಳಿಗೆ ಕೊಡುತ್ತೇನೆಂದು ಪ್ರಮಾಣ ಮಾಡಿದ ದೇಶದಲ್ಲಿ ನಾನು ಸೇರಿದ್ದಾಯಿತೆಂದು ಈ ಹೊತ್ತು ನಿಮ್ಮ ದೇವರಾದ ಯೆಹೋವ ದೇವರ ಸನ್ನಿಧಿಯಲ್ಲಿ ಈಗ ನಾನು ಒಪ್ಪಿಕೊಳ್ಳುತ್ತೇನೆ,” ಎಂದು ಹೇಳಬೇಕು.
ಧರ್ಮೋಪದೇಶಕಾಂಡ 26 : 4 (OCVKN)
ಆಗ ಯಾಜಕನು ಆ ಬುಟ್ಟಿಯನ್ನು ನಿಮ್ಮ ಕೈಯಿಂದ ತೆಗೆದು, ನಿಮ್ಮ ದೇವರಾದ ಯೆಹೋವ ದೇವರ ಬಲಿಪೀಠದ ಮುಂದೆ ಇಡಬೇಕು.
ಧರ್ಮೋಪದೇಶಕಾಂಡ 26 : 5 (OCVKN)
ಆಮೇಲೆ ನೀವು ನಿಮ್ಮ ದೇವರಾದ ಯೆಹೋವ ದೇವರ ಮುಂದೆ, “ಅರಾಮ್ಯನಾದ ನಮ್ಮ ಮೂಲಪಿತೃವು ಗತಿಯಿಲ್ಲದವನಾಗಿ ಅಲೆದಾಡುತ್ತಾ ಸ್ವಲ್ಪ ಜನರೊಡನೆ ಈಜಿಪ್ಟ್ ದೇಶಕ್ಕೆ ಹೋಗಿ ಅಲ್ಲಿ ಇಳಿದುಕೊಂಡನು. ಅಲ್ಲಿ ಅವನ ಸಂತಾನದವರು ಹೆಚ್ಚಿ ಬಲಿಷ್ಠವಾದ ಮಹಾಜನಾಂಗವಾದರು.
ಧರ್ಮೋಪದೇಶಕಾಂಡ 26 : 6 (OCVKN)
ಆದರೆ ಈಜಿಪ್ಟಿನವರು ನಮ್ಮನ್ನು ಕ್ರೂರವಾಗಿ ನಡೆಸಿ, ನಮ್ಮ ಮೇಲೆ ದಬ್ಬಾಳಿಕೆ ಮಾಡಿ ನಮ್ಮಿಂದ ಕಠಿಣವಾಗಿ ದುಡಿಸಿಕೊಂಡರು.
ಧರ್ಮೋಪದೇಶಕಾಂಡ 26 : 7 (OCVKN)
ಆಗ ನಾವು ನಮ್ಮ ಪಿತೃಗಳ ದೇವರಾದ ಯೆಹೋವ ದೇವರಿಗೆ ಮೊರೆಯಿಟ್ಟೆವು. ಯೆಹೋವ ದೇವರು ನಮ್ಮ ಸ್ವರವನ್ನು ಕೇಳಿ, ನಮ್ಮ ಸಂಕಟವನ್ನೂ ಕಷ್ಟವನ್ನೂ ದಬ್ಬಾಳಿಕೆಯನ್ನೂ ನೋಡಿದರು.
ಧರ್ಮೋಪದೇಶಕಾಂಡ 26 : 8 (OCVKN)
ಯೆಹೋವ ದೇವರು ನಮ್ಮನ್ನು ತಮ್ಮ ಬಲವಾದ ಕೈಯಿಂದಲೂ, ಚಾಚಿದ ತೋಳಿನಿಂದಲೂ, ಮಹಾಭಯದಿಂದಲೂ, ಸೂಚಕಕಾರ್ಯಗಳಿಂದಲೂ, ಅದ್ಭುತಗಳಿಂದಲೂ, ಈಜಿಪ್ಟಿನಿಂದ ಹೊರಗೆ ಬರಮಾಡಿ,
ಧರ್ಮೋಪದೇಶಕಾಂಡ 26 : 9 (OCVKN)
ನಮ್ಮನ್ನು ಈ ಸ್ಥಳಕ್ಕೆ ಕರೆತಂದು, ಹಾಲೂ ಜೇನೂ ಹರಿಯುವ ದೇಶವಾಗಿರುವ ಈ ದೇಶವನ್ನು ನಮಗೆ ಕೊಟ್ಟಿದ್ದಾರೆ.
ಧರ್ಮೋಪದೇಶಕಾಂಡ 26 : 10 (OCVKN)
ಹೀಗಿರುವುದರಿಂದ ಯೆಹೋವ ದೇವರೇ, ನೀವು ನಮಗೆ ಕೊಟ್ಟ ಭೂಮಿಯ ಪ್ರಥಮ ಫಲವನ್ನು ತಂದಿದ್ದೇವೆ,” ಎಂದು ಹೇಳಬೇಕು. ಆಗ ಅದನ್ನು ನಿಮ್ಮ ದೇವರಾದ ಯೆಹೋವ ದೇವರ ಸನ್ನಿಧಿಯಲ್ಲಿಟ್ಟು, ಅವರನ್ನು ಆರಾಧಿಸಬೇಕು.
ಧರ್ಮೋಪದೇಶಕಾಂಡ 26 : 11 (OCVKN)
ನಿಮ್ಮ ದೇವರಾದ ಯೆಹೋವ ದೇವರು ನಿಮಗೂ ನಿಮ್ಮ ಮನೆಗೂ ಲೇವಿಯರಿಗೂ ನಿಮ್ಮ ಸಂಗಡ ಇರುವ ಪರವಾಸಿಗಳಿಗೂ ನೀಡಿರುವ ಸೌಲಭ್ಯಕ್ಕಾಗಿ ಸಂತೋಷ ಪಡಬೇಕು.
ಧರ್ಮೋಪದೇಶಕಾಂಡ 26 : 12 (OCVKN)
ಹತ್ತನೆಯ ಪಾಲನ್ನು ಕೊಡುವ ವರ್ಷವಾಗಿರುವ ಮೂರನೆಯ ವರ್ಷದಲ್ಲಿ ನೀವು ನಿಮ್ಮ ಎಲ್ಲಾ ಹುಟ್ಟುವಳಿಯ ಹತ್ತನೆಯ ಪಾಲನ್ನು ಪ್ರತ್ಯೇಕಿಸಿದಾಗ, ನಿಮ್ಮ ಊರುಗಳಲ್ಲಿರುವ ಲೇವಿಯರೂ ಪರದೇಶಿಗಳೂ ದಿಕ್ಕಿಲ್ಲದವರೂ ವಿಧವೆಯರೂ ಉಂಡು ತೃಪ್ತರಾಗುವಂತೆ ಅದನ್ನು ಅವರಿಗೆ ಕೊಡಬೇಕು.
ಧರ್ಮೋಪದೇಶಕಾಂಡ 26 : 13 (OCVKN)
ಆಗ ನಿಮ್ಮ ದೇವರಾದ ಯೆಹೋವ ದೇವರ ಸನ್ನಿಧಿಯಲ್ಲಿ, “ನಾವು ಮೀಸಲಿಟ್ಟ ಪರಿಶುದ್ಧ ವಸ್ತುಗಳನ್ನು ಮನೆಯಿಂದ ತೆಗೆದುಕೊಂಡು ಬಂದು, ನೀವು ಆಜ್ಞಾಪಿಸಿದ ಮೇರೆಗೆ ಅವುಗಳನ್ನು ಲೇವಿಯರಿಗೆ, ಪರದೇಶಿಗೆ, ತಂದೆತಾಯಿ ಇಲ್ಲದವರಿಗೆ, ವಿಧವೆಯರಿಗೆ ಕೊಟ್ಟಿದ್ದೇವೆ. ನಿಮ್ಮ ಆಜ್ಞೆಗಳಲ್ಲಿ ಒಂದನ್ನೂ ಮೀರಲಿಲ್ಲ, ಮರೆಯಲೂ ಇಲ್ಲ.
ಧರ್ಮೋಪದೇಶಕಾಂಡ 26 : 14 (OCVKN)
ದುಃಖದ ಸಮಯದಲ್ಲಿ ಪರಿಶುದ್ಧವಾದದ್ದರಲ್ಲಿ ಏನೂ ತಿನ್ನಲಿಲ್ಲ. ಅಶುದ್ಧರಾಗಿ ಅದರಿಂದ ತೆಗೆದುಕೊಂಡು ಉಪಯೋಗಿಸಲಿಲ್ಲ. ಸತ್ತವರಿಗಾಗಿ ಅದರಲ್ಲಿ ಏನೂ ಕೊಡಲಿಲ್ಲ. ನಮ್ಮ ದೇವರಾದ ಯೆಹೋವ ದೇವರ ಮಾತನ್ನು ಕೇಳಿದ್ದೇವೆ. ನಮಗೆ ಆಜ್ಞಾಪಿಸಿದ್ದೆಲ್ಲಾ ಮಾಡಿದ್ದೇವೆ.
ಧರ್ಮೋಪದೇಶಕಾಂಡ 26 : 15 (OCVKN)
ಪರಲೋಕದ ನಿಮ್ಮ ಪರಿಶುದ್ಧ ನಿವಾಸದೊಳಗಿಂದ ಕೆಳಗಿರುವ ನಮ್ಮನ್ನು ಕಟಾಕ್ಷಿಸಿ, ನಿಮ್ಮ ಜನರಾದ ಇಸ್ರಾಯೇಲರನ್ನೂ, ನೀವು ನಮ್ಮ ಪಿತೃಗಳಿಗೆ ಪ್ರಮಾಣ ಮಾಡಿದ ಪ್ರಕಾರ, ನಮಗೆ ಕೊಟ್ಟಂಥ ಹಾಲೂ ಜೇನೂ ಹರಿಯುವ ಈ ದೇಶವನ್ನೂ ಆಶೀರ್ವದಿಸಿರಿ,” ಎಂದು ಹೇಳಬೇಕು.
ಧರ್ಮೋಪದೇಶಕಾಂಡ 26 : 16 (OCVKN)
ದೇವರ ಆಜ್ಞೆಗಳನ್ನು ಕೈಗೊಳ್ಳಿರಿ ಈ ತೀರ್ಪುಗಳನ್ನೂ ನಿಯಮಗಳನ್ನೂ ನೀವು ಅನುಸರಿಸಬೇಕೆಂದು ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಇಂದು ಆಜ್ಞಾಪಿಸಿದ್ದಾರೆ. ಆದ್ದರಿಂದ ನಿಮ್ಮ ಪೂರ್ಣಹೃದಯದಿಂದಲೂ ನಿಮ್ಮ ಪೂರ್ಣಮನಸ್ಸಿನಿಂದಲೂ ಇವುಗಳನ್ನು ಕೈಕೊಂಡು ನಡೆಯಬೇಕು.
ಧರ್ಮೋಪದೇಶಕಾಂಡ 26 : 17 (OCVKN)
ನೀವು ಈ ಹೊತ್ತು, ಯೆಹೋವ ದೇವರೇ ನಮಗೆ ದೇವರು ಎಂದೂ, ಅವರ ಮಾರ್ಗಗಳಲ್ಲಿ ನಡೆದು, ಅವರು ಹೇಳಿದ ಆಜ್ಞಾವಿಧಿನಿಯಮಗಳನ್ನು ಪಾಲಿಸಿ, ಅವರ ಮಾತಿಗೆ ವಿಧೇಯರಾಗಿರುತ್ತೇವೆ ಎಂದೂ ದೃಢವಾಗಿ ಹೇಳಿದ್ದೀರಿ.
ಧರ್ಮೋಪದೇಶಕಾಂಡ 26 : 18 (OCVKN)
ಈ ಹೊತ್ತು ನಿಮಗೆ ಯೆಹೋವ ದೇವರು ಘೋಷಿಸಿದಂತೆ, ನೀವು ಅವರ ಜನರೂ ಅವರ ಸಂಗ್ರಹಿಸಿದ ಆಸ್ತಿಯೂ ಆಗಿದ್ದೀರೆಂದು ವಾಗ್ದಾನಮಾಡಿದ್ದಾರೆ. ನೀವು ಅವರ ಎಲ್ಲಾ ಆಜ್ಞೆಗಳನ್ನು ಪಾಲಿಸಿರಿ.
ಧರ್ಮೋಪದೇಶಕಾಂಡ 26 : 19 (OCVKN)
ದೇವರು ನಿರ್ಮಿಸಿದ ಎಲ್ಲಾ ದೇಶಗಳಿಗಿಂತ ಹೆಚ್ಚಾಗಿ ನಿಮ್ಮನ್ನು ಕೀರ್ತಿಯಲ್ಲಿಯೂ, ಪ್ರಸಿದ್ಧತೆಯಲ್ಲಿಯೂ, ಘನತೆಯಲ್ಲಿಯೂ, ಸ್ಥಾಪಿಸುವುದಾಗಿ ನಿಮ್ಮ ದೇವರಾದ ಯೆಹೋವ ದೇವರು ವಾಗ್ದಾನ ಮಾಡಿದಂತೆ ನೀವು ಅವರಿಗೆ ಪರಿಶುದ್ಧ ಜನರಾಗಬೇಕೆಂದೂ ಘೋಷಿಸಿದ್ದಾರೆ.
❮
❯
1
2
3
4
5
6
7
8
9
10
11
12
13
14
15
16
17
18
19