ಆಮೋಸ 9 : 1 (OCVKN)
ಇಸ್ರಾಯೇಲು ನಾಶವಾಗುವುದು ಕರ್ತದೇವರು ಬಲಿಪೀಠದ ಪಕ್ಕದಲ್ಲಿ ನಿಂತಿರುವುದನ್ನು ನಾನು ಕಂಡೆನು. ಅವರು ಹೇಳಿದ್ದೇನೆಂದರೆ: “ಹೊಸ್ತಿಲುಗಳು ಕದಲುವಂತೆ ಆಧಾರ ಬೋದಿಗೆಗಳನ್ನು ಬಲವಾಗಿ ಹೊಡೆದು, ಅವು ಎಲ್ಲರ ತಲೆಗಳ ಮೇಲೆ ಬೀಳುವ ಹಾಗೆ ಅವುಗಳನ್ನು ಕಡಿದುಬಿಡು. ಅವರಲ್ಲಿ ಉಳಿದವರನ್ನು ಖಡ್ಗದಿಂದ ಕೊಲ್ಲುವೆನು. ಅವರಲ್ಲಿ ಓಡಿಹೋಗುವವನು ಓಡಿಹೋಗಲಾಗುವುದಿಲ್ಲ.
ಆಮೋಸ 9 : 2 (OCVKN)
ಅವರು ಪಾತಾಳದವರೆಗೂ ಅಗೆದುಕೊಂಡು ಹೋದರೂ, ನನ್ನ ಕೈ ಅವರನ್ನು ಅಲ್ಲಿಂದ ಹಿಡಿದೆಳೆಯುವುದು. ಅವರು ಆಕಾಶಕ್ಕೆ ಏರಿಹೋದರೂ, ನಾನು ಅವರನ್ನು ಅಲ್ಲಿಂದ ಕೆಳಗೆ ಇಳಿಸುವೆನು.
ಆಮೋಸ 9 : 3 (OCVKN)
ಅವರು ಕರ್ಮೆಲಿನ ಬೆಟ್ಟದ ತುದಿಯಲ್ಲಿ ಅಡಗಿಕೊಂಡರೂ, ನಾನು ಅವರನ್ನು ಹುಡುಕಿ, ಅಲ್ಲಿಂದ ತೆಗೆಯುವೆನು. ಅವರು ನನ್ನ ದೃಷ್ಟಿಗೆ ಮರೆಯಾಗಿ ಸಮುದ್ರದ ತಳದಲ್ಲಿ ಅಡಗಿಕೊಂಡರೂ, ಸರ್ಪಕ್ಕೆ ಅಪ್ಪಣೆಕೊಟ್ಟು, ಅದು ಅವರನ್ನು ಅಲ್ಲೇ ಕಚ್ಚುವಂತೆ ಮಾಡುವೆನು.
ಆಮೋಸ 9 : 4 (OCVKN)
ಅವರು ತಮ್ಮ ಶತ್ರುಗಳ ಮುಂದೆ ಸೆರೆಗೆ ಹೋಗಿದ್ದರೂ, ಖಡ್ಗವು ನನ್ನ ಆಜ್ಞಾನುಸಾರ ಅಲ್ಲಿಯೂ ಅವರನ್ನು ಕೊಲ್ಲುವುದು. “ಅವರ ಮೇಲಿಗಾಗಿ ಅಲ್ಲ, ಕೇಡಿಗಾಗಿ ಅವರ ಮೇಲೆ ನನ್ನ ದೃಷ್ಟಿಯಿಡುವೆನು.”
ಆಮೋಸ 9 : 5 (OCVKN)
ಸೇನಾಧೀಶ್ವರ ಯೆಹೋವ ದೇವರಾದ ಕರ್ತರೇ, ನೀವು ದೇಶವನ್ನು ಮುಟ್ಟಿದ ಮಾತ್ರಕ್ಕೆ ಅದು ಕರಗಿ ಹೋಗುವುದು. ಅದರಲ್ಲಿ ವಾಸವಾಗಿರುವವರೆಲ್ಲರೂ ಗೋಳಾಡುವರು. ಅವೆಲ್ಲಾ ನೈಲ್ ನದಿಯ ಹಾಗೆ ಪ್ರವಾಹದಂತೆ ಉಕ್ಕಿ, ಈಜಿಪ್ಟಿನ ಪ್ರವಾಹದಂತೆ ಉಕ್ಕಿ ಮುಳುಗಿ ಹೋಗುವುದು.
ಆಮೋಸ 9 : 6 (OCVKN)
ಆಕಾಶದಲ್ಲಿ ಉಪ್ಪರಿಗೆಗಳನ್ನು ಕಟ್ಟಿಕೊಂಡು, ಭೂಮಿಯ ಮೇಲೆ ತಮ್ಮ ತಂಡಗಳನ್ನು ಸ್ಥಾಪಿಸಿ, ಸಮುದ್ರದ ನೀರನ್ನು ಕರೆದು, ಅದನ್ನು ಭೂಮಿಯ ಮೇಲೆ ಹೊಯ್ಯುವಂತೆ ಮಾಡುವಾತರು ಅವರೇ. ಅವರ ಹೆಸರು ಯೆಹೋವ ದೇವರು.
ಆಮೋಸ 9 : 7 (OCVKN)
“ಇಸ್ರಾಯೇಲರೇ, ನೀವು ನನಗೆ ಕೂಷ್ಯರ ಮಕ್ಕಳ ಹಾಗಲ್ಲವೇ? ನಾನು ನಿಮ್ಮನ್ನು ಈಜಿಪ್ಟಿನಿಂದಲೂ ಫಿಲಿಷ್ಟಿಯರನ್ನು ಕಫ್ತೋರಿನಿಂದಲೂ ಅರಾಮ್ಯರನ್ನು ಕೀರಿನಿಂದಲೂ ತರಲಿಲ್ಲವೇ?” ಎಂದು ಯೆಹೋವ ದೇವರು ಹೇಳುತ್ತಾರೆ.
ಆಮೋಸ 9 : 8 (OCVKN)
“ಸಾರ್ವಭೌಮ ಯೆಹೋವ ದೇವರ ಕಣ್ಣುಗಳು ಪಾಪವುಳ್ಳ ರಾಜ್ಯದ ಮೇಲೆ ಇವೆ. ನಾನು ಅದನ್ನು ಭೂಮಿಯ ಮೇಲಿನಿಂದ ನಾಶಮಾಡುವೆನು. ಆದರೆ ಯಾಕೋಬಿನ ಮನೆತನದವರನ್ನು ನಾನು ನಿಜವಾಗಿ ನಾಶಮಾಡುವುದಿಲ್ಲ,” ಎಂದು ಯೆಹೋವ ದೇವರು ಹೇಳುತ್ತಾರೆ.
ಆಮೋಸ 9 : 9 (OCVKN)
ಧಾನ್ಯವನ್ನು ಜರಡಿಯಲ್ಲಿ ಜಾಲಿಸುವಂತೆ ನಾನು ಇಸ್ರಾಯೇಲರನ್ನು ಎಲ್ಲಾ ಜನಾಂಗಗಳಲ್ಲಿ ಹಾಕಿ ಜಾಲಿಸಬೇಕೆಂದು ಆಜ್ಞಾಪಿಸುವೆನು. ಆದರೂ ಒಂದು ಕಾಳಾದರೂ ನೆಲಕ್ಕೆ ಬೀಳುವುದಿಲ್ಲ.
ಆಮೋಸ 9 : 10 (OCVKN)
ಕೇಡು ನಮ್ಮನ್ನು ಹಿಂದಟ್ಟದು ಮತ್ತು ನಮ್ಮನ್ನು ತಡೆಯುವದೂ ಇಲ್ಲ, ಎನ್ನುವ ನನ್ನ ಜನರಲ್ಲಿರುವ ಪಾಪಿಗಳೆಲ್ಲರೂ ಖಡ್ಗದಿಂದ ಸಾಯುವರು.
ಆಮೋಸ 9 : 11 (OCVKN)
ಇಸ್ರಾಯೇಲಿನ ಪುನಃಸ್ಥಾಪನೆ ಆ ದಿನದಲ್ಲಿ, ಬಿದ್ದುಹೋದ ದಾವೀದನ ಗುಡಾರವನ್ನು ನಾನು ನಿಲ್ಲಿಸಿ ಅದರ ಮುರಿದ ಗೋಡೆಗಳನ್ನು ಸರಿಪಡಿಸುತ್ತೇನೆ. ಮತ್ತು ಅದರ ಅವಶೇಷಗಳನ್ನು ಪುನಃಸ್ಥಾಪಿಸಿ ಮತ್ತು ಅದನ್ನು ಮೊದಲಿನಂತೆ ಪುನಃ ನಿರ್ಮಿಸುವೆನು.
ಆಮೋಸ 9 : 12 (OCVKN)
ಆಗ ಅವರು ಎದೋಮಿನ ಮಿಕ್ಕ ಭಾಗವನ್ನೂ, ನನ್ನ ಹೆಸರಿನಿಂದ ಕರೆಯಲಾಗುವ ಎಲ್ಲಾ ಜನಾಂಗಗಳನ್ನೂ ಸ್ವಾಧೀನ ಮಾಡಿಕೊಳ್ಳುವೆನು, ಎಂಬುದಾಗಿ ಇದನ್ನು ಮಾಡುವವರಾದ ಯೆಹೋವ ದೇವರು ಹೇಳುತ್ತಾರೆ.
ಆಮೋಸ 9 : 13 (OCVKN)
ಯೆಹೋವ ದೇವರು ಹೇಳುವುದೇನೆಂದರೆ: “ದಿನಗಳು ಬರುವುವು,” “ಆಗ ಉಳುವವನು ಕೊಯ್ಯುವವನನ್ನೂ, ದ್ರಾಕ್ಷಿ ಮಾರುವವನು ಬೀಜ ಹಾಕುವವನನ್ನೂ ಹಿಂದಟ್ಟುವರು. ಆಗ ಬೆಟ್ಟಗಳು ಹೊಸ ಸಿಹಿ ದ್ರಾಕ್ಷಾರಸವನ್ನು ಸುರಿಯುವುವು, ಗುಡ್ಡಗಳೆಲ್ಲಾ ಕರಗುವುವು.
ಆಮೋಸ 9 : 14 (OCVKN)
ನನ್ನ ಜನರಾದ ಇಸ್ರಾಯೇಲರನ್ನು ಸೆರೆಯಿಂದ ತಿರುಗಿ ಬರಮಾಡುವೆನು. “ಅವರು ಹಾಳಾದ ಪಟ್ಟಣಗಳನ್ನು ಕಟ್ಟಿ ವಾಸಮಾಡುವರು. ದ್ರಾಕ್ಷಿತೋಟಗಳನ್ನು ನೆಟ್ಟು, ಅವುಗಳ ದ್ರಾಕ್ಷಾರಸವನ್ನು ಕುಡಿಯುವರು. ತೋಟಗಳನ್ನು ಮಾಡಿ ಅವುಗಳ ಫಲವನ್ನು ತಿನ್ನುವರು.
ಆಮೋಸ 9 : 15 (OCVKN)
ನಾನು ಇಸ್ರಾಯೇಲರನ್ನು ಅವರ ದೇಶದಲ್ಲಿ ನೆಡುವೆನು. ನಾನು ಅವರಿಗೆ ಕೊಟ್ಟಿರುವ ದೇಶದಿಂದ ಇನ್ನು ಮುಂದೆ ಯಾರೂ ಅವರನ್ನು ಕಿತ್ತುಹಾಕರು,” ಎಂದು ನಿಮ್ಮ ದೇವರಾದ ಯೆಹೋವ ದೇವರು ಹೇಳುತ್ತಾರೆ.
❮
❯
1
2
3
4
5
6
7
8
9
10
11
12
13
14
15