ಆಮೋಸ 6 : 1 (OCVKN)
ನಿಶ್ಚಿಂತೆಯಿಂದ ಇರುವವರಿಗೆ ಕಷ್ಟ ಚೀಯೋನಿನಲ್ಲಿ ಹಾಯಾಗಿರುವವರಿಗೂ, ಸಮಾರ್ಯ ಬೆಟ್ಟದಲ್ಲಿ ಸುಭದ್ರವಾಗಿರುವವರಿಗೂ, ಇಸ್ರಾಯೇಲಿನ ಮನೆತನದವರು ಯಾರ ಬಳಿಗೆ ಬರುತ್ತಾರೋ, ಆ ಪ್ರಮುಖ ಜನಾಂಗದಲ್ಲಿ ಹೆಸರುಗೊಂಡವರಿಗೂ ಕಷ್ಟ!
ಆಮೋಸ 6 : 2 (OCVKN)
ಕಲ್ನೇ ಪಟ್ಟಣಕ್ಕೆ ಹೋಗಿ ನೋಡಿರಿ. ಅಲ್ಲಿಂದ ಮಹಾ ಪಟ್ಟಣವಾದ ಹಮಾತಿಗೆ ಹೋಗಿರಿ. ಅಲ್ಲಿಂದ ಫಿಲಿಷ್ಟಿಯರ ಗತ್ ಊರಿಗೆ ಇಳಿಯಿರಿ. ಅವು ನಿಮ್ಮ ಎರಡು ರಾಜ್ಯಗಳಿಗಿಂತ ಶ್ರೇಷ್ಠವೋ? ಅವುಗಳ ಪ್ರಾಂತ್ಯವು ನಿಮ್ಮ ಪ್ರಾಂತ್ಯಕ್ಕಿಂತ ದೊಡ್ಡದೋ?
ಆಮೋಸ 6 : 3 (OCVKN)
ನೀವು ಕೆಟ್ಟ ದಿವಸವನ್ನು ದೂರಮಾಡಿಕೊಂಡು, ಭಯಂಕರ ಆಳ್ವಿಕೆಯನ್ನು ಹತ್ತಿರ ಮಾಡಿಕೊಳ್ಳುತ್ತೀರಿ.
ಆಮೋಸ 6 : 4 (OCVKN)
ದಂತದ ಮಂಚಗಳ ಮೇಲೆ ಮಲಗಿಕೊಳ್ಳುತ್ತೀರಿ. ತಮ್ಮ ಹಾಸಿಗೆಗಳ ಮೇಲೆ ಹಾಯಾಗಿ ಒರಗಿಕೊಳ್ಳುತ್ತೀರಿ. ಮಂದೆಯೊಳಗಿಂದ ಕುರಿಮರಿಗಳನ್ನೂ ಹಟ್ಟಿಯ ಮಂದೆಯೊಳಗಿಂದ ಕರುಗಳನ್ನೂ ತಿನ್ನುತ್ತೀರಿ.
ಆಮೋಸ 6 : 5 (OCVKN)
ವೀಣೆಯ ಸ್ವರಕ್ಕೆ ಹಾಡುತ್ತೀರಿ, ದಾವೀದನ ಹಾಗೆ ನಿಮಗೆ ನೀವೇ ಗಾನವಾದ್ಯಗಳನ್ನು ಕಲ್ಪಿಸಿಕೊಳ್ಳುತ್ತೀರಿ.
ಆಮೋಸ 6 : 6 (OCVKN)
ನೀವು ತುಂಬಿದ ಪಾತ್ರೆಗಳಲ್ಲಿ ದ್ರಾಕ್ಷಾರಸವನ್ನು ಕುಡಿಯುತ್ತೀರಿ, ಶ್ರೇಷ್ಠವಾದ ಎಣ್ಣೆಗಳಿಂದ ನಿಮ್ಮನ್ನು ಅಭಿಷೇಕಿಸಿಕೊಳ್ಳುತ್ತೀರಿ. ಆದರೆ ಯೋಸೇಫನ ನಷ್ಟಕ್ಕೆ ವ್ಯಸನ ಪಡುವುದಿಲ್ಲ.
ಆಮೋಸ 6 : 7 (OCVKN)
ಆದ್ದರಿಂದ ಸೆರೆಗೆ ಕರೆದೊಯ್ಯುವವರಲ್ಲಿ ನೀವು ಮೊದಲಿಗರಾಗಿರುವಿರಿ, ಭೋಗ ಮಾಡುವವರ ಹರ್ಷ ಧ್ವನಿಯು ಗತಿಸಿ ಹೋಗುವುದು.
ಆಮೋಸ 6 : 8 (OCVKN)
ಯೆಹೋವ ದೇವರು ಇಸ್ರಾಯೇಲಿನ ಅಹಂಕಾರವನ್ನು ಅಸಹ್ಯಪಡುತ್ತಾರೆ ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ. ಸರ್ವಶಕ್ತ ದೇವರಾದ ಯೆಹೋವ ದೇವರು ತಮ್ಮ ಮೇಲೆ ಆಣೆಯಿಟ್ಟುಕೊಂಡಿದ್ದಾರೆ: ನಾನು ಯಾಕೋಬಿನ ಅಹಂಕಾರವನ್ನು ಅಸಹ್ಯಿಸಿಕೊಂಡು, ಅವನ ಅರಮನೆಗಳನ್ನು ಹಗೆಮಾಡುತ್ತೇನೆ. ಆದಕಾರಣ ಪಟ್ಟಣವನ್ನೂ ಅದರಲ್ಲಿರುವ ಸಮಸ್ತವನ್ನೂ ನಾನು ಒಪ್ಪಿಸಿ ಬಿಡುತ್ತೇನೆ.
ಆಮೋಸ 6 : 9 (OCVKN)
ಒಂದು ಮನೆಯಲ್ಲಿ ಹತ್ತು ಜನರು ಉಳಿದರೆ, ಅವರು ಸಾಯುವರು.
ಆಮೋಸ 6 : 10 (OCVKN)
ಮತ್ತು ಸಂಬಂಧಿಯೊಬ್ಬರು ಮೃತ ದೇಹಗಳನ್ನು ಸುಡಲು ಆ ಮನೆಯಿಂದ ಹೊರತೆಗೆಯಲು ಬಂದಾಗ ಮತ್ತು ಅಲ್ಲಿ ಅಡಗಿಕೊಂಡಿದ್ದ ವ್ಯಕ್ತಿಯನ್ನು, “ನಿಮ್ಮೊಂದಿಗೆ ಬೇರೆ ಯಾರಾದರೂ ಇದ್ದಾರೆಯೇ?” ಎಂದು ಕೇಳಲು ಅವನು ಇಲ್ಲ ಎನ್ನುವನು. ಆಗ ಆ ಸಂಬಂಧಿಕನು, “ಮೌನದಿಂದಿರು! ನಾವು ಯೆಹೋವ ದೇವರ ಹೆಸರನ್ನು ತೆಗೆದುಕೊಳ್ಳಬಾರದು.”
ಆಮೋಸ 6 : 11 (OCVKN)
ಏಕೆಂದರೆ, ಯೆಹೋವ ದೇವರು ಆಜ್ಞಾಪಿಸುತ್ತಾರೆ, ಆತನು ದೊಡ್ಡ ಮನೆಯನ್ನು ಸೀಳುಗಳಿಂದಲೂ ಚಿಕ್ಕ ಮನೆಯನ್ನು ಬಿರುಕುಗಳಿಂದಲೂ ಹೊಡೆಯುವನು.
ಆಮೋಸ 6 : 12 (OCVKN)
ಕುದುರೆಗಳು ಬಂಡೆಯ ಮೇಲೆ ಓಡುವುದುಂಟೇ? ಎತ್ತುಗಳಿಂದ ಅಲ್ಲಿ ಉಳುವನೋ? ನಿಮ್ಮ ನ್ಯಾಯವನ್ನು ವಿಷವನ್ನಾಗಿ, ನೀತಿ ಫಲವನ್ನು ಕಹಿಯನ್ನಾಗಿ ಬದಲಾಯಿಸಿದ್ದೀರಿ.
ಆಮೋಸ 6 : 13 (OCVKN)
ಏನೂ ಇಲ್ಲದಿದ್ದರಲ್ಲಿ ಸಂತೋಷ ಪಡುವವರೇ, ನೀವು ಹೆಚ್ಚಳ ಪಡುವುದು ಶೂನ್ಯವಾಗಿರುವುದರಲ್ಲಿಯೇ? “ಸ್ವಬಲದಿಂದ ಕೊಂಬುಗಳನ್ನು ತೆಗೆದುಕೊಂಡಿಲ್ಲವೇ?” ಅಂದುಕೊಳ್ಳುತ್ತೀರಿ.
ಆಮೋಸ 6 : 14 (OCVKN)
ಸರ್ವಶಕ್ತರಾದ ಯೆಹೋವ ದೇವರು ಹೀಗೆ ಹೇಳುತ್ತಾರೆ: ಇಸ್ರಾಯೇಲಿನ ಮನೆತನದವರೇ, ಜನಾಂಗವನ್ನು ನಿಮಗೆ ವಿರೋಧವಾಗಿ ಎಬ್ಬಿಸುವೆನು. ಲೆಬೊ ಹಮಾತಿನ ಪ್ರದೇಶದಿಂದ ಅರಾಬಾ ತಗ್ಗಿನ ನದಿಯವರೆಗೂ ನಿಮ್ಮನ್ನು ಹಿಂಸಿಸುವರು.

1 2 3 4 5 6 7 8 9 10 11 12 13 14