ಅಪೊಸ್ತಲರ ಕೃತ್ಯಗ 7 : 1 (OCVKN)
ನ್ಯಾಯಸಭೆಗೆ ಸ್ತೆಫನನ ಉಪನ್ಯಾಸ
ಅಪೊಸ್ತಲರ ಕೃತ್ಯಗ 7 : 2 (OCVKN)
ಆಗ ಮಹಾಯಾಜಕನು, “ಈ ಸಂಗತಿಗಳು ನಿಜವೋ?” ಎಂದು ಸ್ತೆಫನನನ್ನು ಪ್ರಶ್ನಿಸಿದನು. ಅದಕ್ಕೆ ಸ್ತೆಫನನು, “ಸಹೋದರರೇ, ತಂದೆಗಳೇ, ನನ್ನ ಮಾತಿಗೆ ಕಿವಿಗೊಡಿರಿ! ನಮ್ಮ ಪಿತೃ ಅಬ್ರಹಾಮನು ಹಾರಾನಿನಲ್ಲಿ* ಅಥವಾ ಖಾರಾನಿನಲ್ಲಿ ವಾಸಿಸುವುದಕ್ಕಿಂತ ಮೊದಲು ಮೆಸೊಪೊಟೇಮಿಯಾದಲ್ಲಿ ಇದ್ದನು. ಆಗ ಮಹಿಮೆಯ ದೇವರು ಅವನಿಗೆ ದರ್ಶನ ಕೊಟ್ಟು,
ಅಪೊಸ್ತಲರ ಕೃತ್ಯಗ 7 : 3 (OCVKN)
‘ನಿನ್ನ ಸ್ವದೇಶವನ್ನು ಬಂಧುಗಳನ್ನು ಬಿಟ್ಟು, ನಾನು ನಿನಗೆ ತೋರಿಸುವ ನಾಡಿಗೆ ಹೋಗು,’† ಆದಿ 12:1 ಎಂದು ಹೇಳಿದರು.
ಅಪೊಸ್ತಲರ ಕೃತ್ಯಗ 7 : 4 (OCVKN)
“ಅದರಂತೆ ಅಬ್ರಹಾಮನು ಕಸ್ದೀಯರ ನಾಡನ್ನು ಬಿಟ್ಟು ಹಾರಾನಿನಲ್ಲಿ‡ ಅಥವಾ ಖಾರಾನಿನಲ್ಲಿ ಬಂದು ನೆಲೆಸಿದನು. ಅವನ ತಂದೆಯ ಮರಣದ ನಂತರ ನೀವು ಈಗ ವಾಸಿಸುತ್ತಿರುವ ಈ ನಾಡಿಗೆ ದೇವರು ಅವನನ್ನು ಬರಮಾಡಿದರು.
ಅಪೊಸ್ತಲರ ಕೃತ್ಯಗ 7 : 5 (OCVKN)
ದೇವರು ಅವನಿಗೆ ಇಲ್ಲಿ ಕಾಲಿಡುವಷ್ಟು ಸ್ಥಳವನ್ನಾಗಲಿ, ಯಾವುದೇ ಬಾಧ್ಯಸ್ತಿಕೆಯನ್ನಾಗಲಿ ಕೊಡಲಿಲ್ಲ. ಆದರೆ ಅಬ್ರಹಾಮನಿಗೆ ಆ ಸಮಯದಲ್ಲಿ ಮಕ್ಕಳಿಲ್ಲದಿದ್ದರೂ ಅವನೂ ಅವನ ನಂತರ ಅವನ ಸಂತತಿಯವರೂ ದೇಶವನ್ನು ಹೊಂದುವರೆಂದು ದೇವರು ಅವನಿಗೆ ವಾಗ್ದಾನ ಮಾಡಿದರು.
ಅಪೊಸ್ತಲರ ಕೃತ್ಯಗ 7 : 6 (OCVKN)
ಇದಲ್ಲದೆ ದೇವರು ಅಬ್ರಹಾಮನೊಂದಿಗೆ ಮಾತನಾಡಿ, ‘ನಿನ್ನ ಸಂತತಿಯವರು ತಮ್ಮದಲ್ಲದ ದೇಶದಲ್ಲಿ ಪ್ರವಾಸಿಗಳಾಗಿರುವರು. ಅವರು ಗುಲಾಮರಾಗಿ ನಾಲ್ಕುನೂರು ವರ್ಷಗಳವರೆಗೆ ದಬ್ಬಾಳಿಕೆಗೆ ಗುರಿಯಾಗುವರು.
ಅಪೊಸ್ತಲರ ಕೃತ್ಯಗ 7 : 7 (OCVKN)
ಆದರೆ ಅವರು ಗುಲಾಮರಾಗಿ ಸೇವೆ ಸಲ್ಲಿಸುತ್ತಿದ್ದ ದೇಶಕ್ಕೆ ನಾನು ನ್ಯಾಯತೀರಿಸುವೆನು. ಅನಂತರ ಅವರು ಹೊರಟುಬಂದು ಈ ಸ್ಥಳದಲ್ಲಿ ನನ್ನನ್ನು ಆರಾಧಿಸುವರು,’§ ಆದಿ 15:13,14 ಎಂದು ದೇವರು ಹೇಳಿದರು.
ಅಪೊಸ್ತಲರ ಕೃತ್ಯಗ 7 : 8 (OCVKN)
ಆಮೇಲೆ ದೇವರು ಅಬ್ರಹಾಮನಿಗೆ ಸುನ್ನತಿಯ ಒಡಂಬಡಿಕೆಯನ್ನೂ ಕೊಟ್ಟರು. ಅಬ್ರಹಾಮನಿಗೆ ಇಸಾಕನು ಜನಿಸಿದನು. ಇಸಾಕನು ಜನಿಸಿದ ಎಂಟನೆಯ ದಿನ ಅಬ್ರಹಾಮನು ಇಸಾಕನಿಗೆ ಸುನ್ನತಿ ಮಾಡಿಸಿದನು. ಅನಂತರ ಇಸಾಕನಿಗೆ ಯಾಕೋಬನು ಜನಿಸಿದನು. ಯಾಕೋಬನು ನಮ್ಮ ಹನ್ನೆರಡು ಮಂದಿ ಪಿತೃಗಳಿಗೆ ತಂದೆಯಾದನು.
ಅಪೊಸ್ತಲರ ಕೃತ್ಯಗ 7 : 9 (OCVKN)
“ಈ ಪಿತೃಗಳು ಯೋಸೇಫನ ಮೇಲೆ ಮತ್ಸರ ತಾಳಿ ಅವನನ್ನು ಈಜಿಪ್ಟಿನವರಿಗೆ ಗುಲಾಮನನ್ನಾಗಿ ಮಾರಿದರು. ಆದರೆ ದೇವರು ಅವನೊಂದಿಗಿದ್ದು,
ಅಪೊಸ್ತಲರ ಕೃತ್ಯಗ 7 : 10 (OCVKN)
ಅವನನ್ನು ಎಲ್ಲಾ ಸಂಕಟಗಳಿಂದ ಬಿಡಿಸಿದರು. ದೇವರು ಯೋಸೇಫನಿಗೆ ಜ್ಞಾನವನ್ನು ಕೊಟ್ಟು ಈಜಿಪ್ಟಿನ ಅರಸನಾದ ಫರೋಹನ ಮೆಚ್ಚುಗೆಗೆ ಪಾತ್ರನಾಗುವಂತೆ ಮಾಡಿದರು. ಹೀಗೆ ಯೋಸೇಫನನ್ನು ಈಜಿಪ್ಟ್ ದೇಶದ ಮೇಲೆಯೂ ತನ್ನ ಅರಮನೆಯ ಮೇಲೆಯೂ ಅಧಿಕಾರಿಯನ್ನಾಗಿ ಫರೋಹನು ನೇಮಿಸಿದನು.
ಅಪೊಸ್ತಲರ ಕೃತ್ಯಗ 7 : 11 (OCVKN)
“ಆ ಕಾಲದಲ್ಲಿ ಈಜಿಪ್ಟ್ ಮತ್ತು ಕಾನಾನ್ ದೇಶಗಳ ಎಲ್ಲಾ ಕಡೆಗಳಲ್ಲಿಯೂ ಕ್ಷಾಮ ಬಂದು ಜನರು ಬಹಳ ಬಾಧೆಪಟ್ಟರು, ನಮ್ಮ ಪಿತೃಗಳಿಗೆ ಆಹಾರ ದೊರೆಯದೇ ಹೋಯಿತು.
ಅಪೊಸ್ತಲರ ಕೃತ್ಯಗ 7 : 12 (OCVKN)
ಈಜಿಪ್ಟಿನಲ್ಲಿ ದವಸಧಾನ್ಯ ದೊರೆಯುವುದೆಂದು ಯಾಕೋಬನಿಗೆ ತಿಳಿದುಬಂದಾಗ, ಅವನು ನಮ್ಮ ಪಿತೃಗಳನ್ನು ಮೊದಲನೆಯ ಸಾರಿ ಅಲ್ಲಿಗೆ ಕಳುಹಿಸಿದನು.
ಅಪೊಸ್ತಲರ ಕೃತ್ಯಗ 7 : 13 (OCVKN)
ಅವರು ಎರಡನೆಯ ಸಾರಿ ಅಲ್ಲಿಗೆ ಹೋದಾಗ, ಯೋಸೇಫನು ತಾನು ಯಾರೆಂಬುದನ್ನು ತನ್ನ ಸಹೋದರರಿಗೆ ತಿಳಿಸಿದನು. ಆಗ ಯೋಸೇಫನ ಕುಟುಂಬದ ಬಗ್ಗೆ ಫರೋಹನಿಗೆ ಗೊತ್ತಾಯಿತು.
ಅಪೊಸ್ತಲರ ಕೃತ್ಯಗ 7 : 14 (OCVKN)
ಇದಾದನಂತರ, ಯೋಸೇಫನು ತನ್ನ ತಂದೆ ಯಾಕೋಬನನ್ನು ಅವನ ಕುಟುಂಬದವರೆಲ್ಲರನ್ನೂ, ಒಟ್ಟು ಎಪ್ಪತ್ತೈದು ಜನರನ್ನು ಕರೆಕಳುಹಿಸಿದನು.
ಅಪೊಸ್ತಲರ ಕೃತ್ಯಗ 7 : 15 (OCVKN)
ಆಗ ಯಾಕೋಬನು ಈಜಿಪ್ಟಿಗೆ ಹೋದನು, ಅಲ್ಲಿಯೇ ಅವನೂ ನಮ್ಮ ಪಿತೃಗಳೂ ಮೃತರಾದರು.
ಅಪೊಸ್ತಲರ ಕೃತ್ಯಗ 7 : 16 (OCVKN)
ಅವರ ಮೃತಶರೀರವನ್ನು ಶೇಕೆಮಿಗೆ ತಂದರು. ಅಲ್ಲಿ ಹಮೋರನ ಮಕ್ಕಳಿಂದ ಅಬ್ರಹಾಮನು ಕ್ರಯಕೊಟ್ಟು ಕೊಂಡುಕೊಂಡಿದ್ದ ಸಮಾಧಿಯಲ್ಲಿ ಇಟ್ಟರು.
ಅಪೊಸ್ತಲರ ಕೃತ್ಯಗ 7 : 17 (OCVKN)
“ದೇವರು ಅಬ್ರಹಾಮನಿಗೆ ಮಾಡಿದ ವಾಗ್ದಾನ ನೆರವೇರುವ ಕಾಲವು ಹತ್ತಿರ ಬಂದಾಗ, ಈಜಿಪ್ಟಿನಲ್ಲಿ ನಮ್ಮ ಜನರ ಸಂಖ್ಯೆ ಬಹಳ ಹೆಚ್ಚಾಯಿತು.
ಅಪೊಸ್ತಲರ ಕೃತ್ಯಗ 7 : 18 (OCVKN)
ಆಗ, ‘ಯೋಸೇಫನನ್ನೇ ಅರಿಯದ ಬೇರೊಬ್ಬ ಅರಸನು, ಈಜಿಪ್ಟಿನಲ್ಲಿ ಅಧಿಕಾರಕ್ಕೆ ಬಂದನು.’* ವಿಮೋ 1:8
ಅಪೊಸ್ತಲರ ಕೃತ್ಯಗ 7 : 19 (OCVKN)
ಆ ಅರಸನು ನಮ್ಮ ಜನರೊಂದಿಗೆ ಕುಯುಕ್ತಿಯಿಂದ ವರ್ತಿಸುತ್ತಾ, ಅವರ ಕೂಸುಗಳು ಸಾಯುವಂತೆ ಬಿಸಾಡಿಬಿಡಬೇಕೆಂದು, ನಮ್ಮ ಪಿತೃಗಳನ್ನು ಕಠಿಣವಾಗಿ ಹಿಂಸಿಸಿದನು.
ಅಪೊಸ್ತಲರ ಕೃತ್ಯಗ 7 : 20 (OCVKN)
“ಆ ಸಮಯದಲ್ಲಿಯೇ ಮೋಶೆ ಜನಿಸಿದನು. ಅವನು ದೇವರ ದೃಷ್ಟಿಯಲ್ಲಿ ಸುಂದರನಾಗಿದ್ದನು. ಮೂರು ತಿಂಗಳುಗಳ ಕಾಲ ಅವನು ತನ್ನ ತಂದೆಯ ಮನೆಯಲ್ಲೇ ಬೆಳೆದನು.
ಅಪೊಸ್ತಲರ ಕೃತ್ಯಗ 7 : 21 (OCVKN)
ಆಮೇಲೆ ಅವನನ್ನು ಮನೆಯಿಂದ ಹೊರಗೆ ಹಾಕಿದಾಗ, ಫರೋಹನ ಮಗಳು ಅವನನ್ನು ತೆಗೆದುಕೊಂಡು ತನ್ನ ಸ್ವಂತ ಮಗನಂತೆ ಬೆಳೆಸಿದಳು.
ಅಪೊಸ್ತಲರ ಕೃತ್ಯಗ 7 : 22 (OCVKN)
ಮೋಶೆಯು ಈಜಿಪ್ಟಿನವರ ಸಕಲ ವಿದ್ಯೆಗಳಲ್ಲಿ ತರಬೇತಿ ಹೊಂದಿ, ಮಾತಿನಲ್ಲಿಯೂ ಕೃತ್ಯದಲ್ಲಿಯೂ ಸಮರ್ಥನಾದನು.
ಅಪೊಸ್ತಲರ ಕೃತ್ಯಗ 7 : 23 (OCVKN)
“ಮೋಶೆ ನಲವತ್ತು ವರ್ಷ ವಯಸ್ಸಾಗಿದ್ದಾಗ, ತನ್ನ ಬಂಧುಗಳಾದ ಇಸ್ರಾಯೇಲ್ ಪುತ್ರರನ್ನು ಸಂದರ್ಶಿಸಬೇಕೆಂದು ತೀರ್ಮಾನಿಸಿದನು.
ಅಪೊಸ್ತಲರ ಕೃತ್ಯಗ 7 : 24 (OCVKN)
ತನ್ನ ಬಂಧುಗಳಲ್ಲಿ ಒಬ್ಬನನ್ನು ಈಜಿಪ್ಟಿನವನೊಬ್ಬನು ಹೊಡೆಯುತ್ತಿರುವುದನ್ನು ಕಂಡು, ಮೋಶೆ ಆ ಈಜಿಪ್ಟಿನವನನ್ನು ಕೊಂದುಹಾಕಿ ಸೇಡು ತೀರಿಸಿದನು.
ಅಪೊಸ್ತಲರ ಕೃತ್ಯಗ 7 : 25 (OCVKN)
ದೇವರು ಸ್ವಜನರಿಗೆ ತನ್ನ ಮೂಲಕವಾಗಿ ಬಿಡುಗಡೆಯನ್ನು ಕೊಡುವನೆಂದು ಅವರು ಅರ್ಥ ಮಾಡಿಕೊಳ್ಳುವರೆಂದು ಮೋಶೆ ಭಾವಿಸಿದ್ದನು. ಸ್ವಜನರೋ, ಇದನ್ನು ಅರ್ಥಮಾಡಿಕೊಳ್ಳಲಿಲ್ಲ.
ಅಪೊಸ್ತಲರ ಕೃತ್ಯಗ 7 : 26 (OCVKN)
ಮರುದಿನ ಇಬ್ಬರು ಇಸ್ರಾಯೇಲರು ಜಗಳವಾಡುತ್ತಿರುವುದನ್ನು ಮೋಶೆ ಕಂಡು, ‘ಗೆಳೆಯರೇ, ನೀವು ಸಹೋದರರಲ್ಲವೇ; ಒಬ್ಬರಿಗೊಬ್ಬರು ಏಕೆ ಜಗಳಮಾಡುತ್ತಿದ್ದೀರಿ?’ ಎಂದು ಹೇಳಿ ಅವರನ್ನು ಸಮಾಧಾನಪಡಿಸಲು ಯತ್ನಿಸಿದನು.
ಅಪೊಸ್ತಲರ ಕೃತ್ಯಗ 7 : 27 (OCVKN)
“ಆದರೆ ಹೊಡೆಯುತ್ತಿದ್ದವನು ಮೋಶೆಯನ್ನು ಹಿಂದಕ್ಕೆ ತಳ್ಳಿ, ‘ನಮ್ಮ ಮೇಲೆ ಅಧಿಕಾರಿಯನ್ನಾಗಿಯೂ ನ್ಯಾಯಾಧೀಶನನ್ನಾಗಿಯೂ ನೇಮಿಸಿದವರು ಯಾರು?
ಅಪೊಸ್ತಲರ ಕೃತ್ಯಗ 7 : 28 (OCVKN)
ನಿನ್ನೆ ಆ ಈಜಿಪ್ಟಿನವನನ್ನು ಕೊಂದುಹಾಕಿದಂತೆ ನನ್ನನ್ನೂ ಕೊಲ್ಲಬೇಕೆಂದಿರುವೆಯಾ?’† ವಿಮೋ 2:14 ಎಂದು ಕೇಳಿದನು.
ಅಪೊಸ್ತಲರ ಕೃತ್ಯಗ 7 : 29 (OCVKN)
ಮೋಶೆ ಇದನ್ನು ಕೇಳಿ, ಮಿದ್ಯಾನಿಗೆ ಓಡಿಹೋದನು. ಅಲ್ಲಿ ಪರದೇಶದವನಂತೆ ಬದುಕಿ, ಇಬ್ಬರು ಗಂಡು ಮಕ್ಕಳನ್ನು ಪಡೆದನು.
ಅಪೊಸ್ತಲರ ಕೃತ್ಯಗ 7 : 30 (OCVKN)
“ನಲವತ್ತು ವರ್ಷಗಳು ಗತಿಸಿದ ತರುವಾಯ ಸೀನಾಯಿ ಪರ್ವತದ ಮರುಭೂಮಿಯಲ್ಲಿ ಉರಿಯುವ ಪೊದೆಯಲ್ಲಿ ದೇವದೂತನೊಬ್ಬನು ಮೋಶೆಗೆ ದರ್ಶನ ಕೊಟ್ಟನು.
ಅಪೊಸ್ತಲರ ಕೃತ್ಯಗ 7 : 31 (OCVKN)
ಇದನ್ನು ಮೋಶೆ ಕಂಡಾಗ ಆ ನೋಟಕ್ಕೆ ಅತ್ಯಾಶ್ಚರ್ಯಪಟ್ಟನು. ಅದನ್ನು ಸಮೀಪದಿಂದ ನೋಡಲು ಹೊರಟಾಗ, ಕರ್ತದೇವರ ಧ್ವನಿಯನ್ನು ಅವನು ಕೇಳಿಸಿಕೊಂಡನು.
ಅಪೊಸ್ತಲರ ಕೃತ್ಯಗ 7 : 32 (OCVKN)
‘ನಾನು ನಿನ್ನ ಪಿತೃಗಳ ದೇವರು, ಅಬ್ರಹಾಮನ, ಇಸಾಕನ, ಯಾಕೋಬನ ದೇವರು,’‡ ವಿಮೋ 3:6 ಎಂಬ ವಾಣಿಯನ್ನು ಕೇಳಿಸಿಕೊಂಡ ಮೋಶೆ ಭಯದಿಂದ ನಡುಗುತ್ತಾ ನೇರವಾಗಿ ದೃಷ್ಟಿಸಲು ಧೈರ್ಯಗೊಳ್ಳಲಿಲ್ಲ.
ಅಪೊಸ್ತಲರ ಕೃತ್ಯಗ 7 : 33 (OCVKN)
“ಆಗ ಕರ್ತದೇವರು ಅವನಿಗೆ, ‘ನಿನ್ನ ಪಾದರಕ್ಷೆಗಳನ್ನು ತೆಗೆದಿಡು. ನೀನು ನಿಂತಿರುವ ಸ್ಥಳ ಪರಿಶುದ್ಧ ಭೂಮಿ.
ಅಪೊಸ್ತಲರ ಕೃತ್ಯಗ 7 : 34 (OCVKN)
ಈಜಿಪ್ಟಿನಲ್ಲಿ ನನ್ನ ಜನರ ದುರವಸ್ಥೆಯನ್ನು ನಾನು ಕಂಡಿದ್ದೇನೆ. ಅವರ ನರಳಾಟವನ್ನು ಕೇಳಿಸಿಕೊಂಡಿದ್ದೇನೆ. ಅವರನ್ನು ಬಿಡುಗಡೆ ಮಾಡಲು ನಾನಿಳಿದು ಬಂದಿದ್ದೇನೆ. ಇಲ್ಲಿ ಬಾ, ನಾನು ನಿನ್ನನ್ನು ಹಿಂದಿರುಗಿ ಈಜಿಪ್ಟಿಗೆ ಕಳುಹಿಸುತ್ತೇನೆ,’§ ವಿಮೋ 3:5-10 ಎಂದರು.
ಅಪೊಸ್ತಲರ ಕೃತ್ಯಗ 7 : 35 (OCVKN)
“ ‘ನಿನ್ನನ್ನು ಅಧಿಕಾರಿಯನ್ನಾಗಿಯೂ ನ್ಯಾಯಾಧೀಶನನ್ನಾಗಿಯೂ ನೇಮಿಸಿದವರು ಯಾರು?’ ಎಂಬ ಮಾತುಗಳಿಂದ ಇಸ್ರಾಯೇಲರು ತಿರಸ್ಕರಿಸಿದಂಥ ಆ ಮೋಶೆಯೇ ಇವನು. ಉರಿಯುವ ಪೊದೆಯಲ್ಲಿ ದರ್ಶನ ಕೊಟ್ಟು ದೇವದೂತನ ಮುಖಾಂತರವಾಗಿ ದೇವರೇ ಇವನನ್ನು ಅವರ ಅಧಿಕಾರಿಯನ್ನಾಗಿಯೂ ವಿಮೋಚಕನ್ನಾಗಿಯೂ ಕಳುಹಿಸಿದರು.
ಅಪೊಸ್ತಲರ ಕೃತ್ಯಗ 7 : 36 (OCVKN)
ಈ ಮೋಶೆಯೇ ಇಸ್ರಾಯೇಲರನ್ನು ಈಜಿಪ್ಟಿನಿಂದ ಹೊರಗೆ ನಡೆಸಿಕೊಂಡು ಬಂದನು. ಈಜಿಪ್ಟಿನಲ್ಲಿ, ಕೆಂಪುಸಮುದ್ರದ ಬಳಿಯಲ್ಲಿ, ಅರಣ್ಯದಲ್ಲಿ ಅದ್ಭುತಗಳನ್ನು ಮತ್ತು ಸೂಚಕಕಾರ್ಯಗಳನ್ನು ಮಾಡುತ್ತಾ ನಲವತ್ತು ವರ್ಷಗಳ ಕಾಲ ನಡೆಸಿದನು.
ಅಪೊಸ್ತಲರ ಕೃತ್ಯಗ 7 : 37 (OCVKN)
“ ‘ನನ್ನಂಥ ಒಬ್ಬ ಪ್ರವಾದಿಯನ್ನು ನಿಮ್ಮ ಸ್ವಂತ ಜನರೊಳಗಿಂದಲೇ ದೇವರು ನಿಮಗೆ ಕಳುಹಿಸುವರು,’* ಧರ್ಮೋ 18:15 ಎಂದು ಇಸ್ರಾಯೇಲರಿಗೆ ಹೇಳಿದವನು ಈ ಮೋಶೆಯೇ.
ಅಪೊಸ್ತಲರ ಕೃತ್ಯಗ 7 : 38 (OCVKN)
ಇವನು ಇಸ್ರಾಯೇಲರು ಅರಣ್ಯದಲ್ಲಿ ದೊಡ್ಡಗುಂಪಾಗಿದ್ದಾಗ ಅವರ ಮಧ್ಯದಲ್ಲಿದ್ದವನು. ಸೀನಾಯಿ ಬೆಟ್ಟದ ಮೇಲೆ ಅವನೊಂದಿಗೆ ಮಾತನಾಡಿದ ದೇವದೂತನೊಂದಿಗಿದ್ದವನು. ಇವನು ನಮ್ಮ ಪಿತೃಗಳೊಂದಿಗೂ ಮಧ್ಯಸ್ಥನಾಗಿ ಇದ್ದವನು. ನಮಗೆ ಕೊಡುವುದಕ್ಕಾಗಿ ಜೀವ ವಾಕ್ಯಗಳನ್ನು ಸ್ವೀಕರಿಸಿದವನು ಈ ಮೋಶೆಯೇ.
ಅಪೊಸ್ತಲರ ಕೃತ್ಯಗ 7 : 39 (OCVKN)
“ಆದರೆ ನಮ್ಮ ಪಿತೃಗಳು ಅವನಿಗೆ ವಿಧೇಯರಾಗಲು ಒಪ್ಪಿಕೊಳ್ಳಲಿಲ್ಲ. ಅದಕ್ಕೆ ಬದಲಾಗಿ ಅವರು ಅವನನ್ನು ತಿರಸ್ಕರಿಸಿ, ತಮ್ಮ ಹೃದಯಗಳಲ್ಲಿ ಈಜಿಪ್ಟ್ ದೇಶಕ್ಕೆ ಹಿಂದಿರುಗಿ ಹೋಗಬೇಕೆಂದಿದ್ದರು.
ಅಪೊಸ್ತಲರ ಕೃತ್ಯಗ 7 : 40 (OCVKN)
ಅವರು ಆರೋನನಿಗೆ, ‘ನಮಗೆ ಮುಂದಾಗಿ ಹೋಗುವುದಕ್ಕಾಗಿ ನಮಗೆ ದೇವರುಗಳನ್ನು ಮಾಡಿಕೊಡು, ನಮ್ಮನ್ನು ಈಜಿಪ್ಟ್ ದೇಶದಿಂದ ಹೊರಗೆ ಕರೆದುಕೊಂಡು ಬಂದ ಆ ಮೋಶೆಗೆ ಏನಾಯಿತೋ ತಿಳಿಯದು,’† ವಿಮೋ 32:1 ಎಂದರು.
ಅಪೊಸ್ತಲರ ಕೃತ್ಯಗ 7 : 41 (OCVKN)
ಆ ಸಮಯದಲ್ಲಿ ಅವರು ಕರುವಿನ ರೂಪದಲ್ಲಿ ಒಂದು ವಿಗ್ರಹ ಮಾಡಿಕೊಂಡರು. ಅದರ ಮುಂದೆ ತಮ್ಮ ಬಲಿಯನ್ನು ಕೊಟ್ಟು, ತಮ್ಮ ಕೈಕೃತಿಗಳಲ್ಲಿ ಹರ್ಷಗೊಂಡರು.
ಅಪೊಸ್ತಲರ ಕೃತ್ಯಗ 7 : 42 (OCVKN)
ಆದರೆ ದೇವರು ಅವರಿಗೆ ವಿಮುಖನಾಗಿ, ಆಕಾಶದ ಗ್ರಹಗಳನ್ನೇ ಆರಾಧಿಸುವಂತೆ ಅವರನ್ನು ಬಿಟ್ಟುಬಿಟ್ಟರು. ಇದರ ವಿಷಯವಾಗಿ ಪ್ರವಾದಿಗಳ ಗ್ರಂಥದಲ್ಲಿ: “ ‘ಇಸ್ರಾಯೇಲಿನ ಮನೆತನದವರೇ, ನಲವತ್ತು ವರ್ಷ ಅರಣ್ಯದಲ್ಲಿ ಯಜ್ಞಗಳನ್ನೂ ಕಾಣಿಕೆಗಳನ್ನೂ ಸಮರ್ಪಿಸಿದ್ದು ನನಗಲ್ಲ.
ಅಪೊಸ್ತಲರ ಕೃತ್ಯಗ 7 : 43 (OCVKN)
ಮೊಲೋಖನ ಗುಡಾರವನ್ನೂ ರೊಂಫಾ ದೇವತೆಯ ನಕ್ಷತ್ರವನ್ನೂ ನೀವು ನಿರ್ಮಿಸಿಕೊಂಡ ವಿಗ್ರಹಗಳನ್ನೂ ಪೂಜಿಸಿದಿರಿ. ಆದ್ದರಿಂದ ಬಾಬಿಲೋನಿನ ಆಚೆ ನಿಮ್ಮನ್ನು ಸೆರೆಯಾಳುಗಳಾಗಿ ಕಳುಹಿಸುವೆ,’‡ ಆಮೋ 5:25-27 ಎಂದು ಬರೆದಿರುವ ಪ್ರಕಾರ ಇದು ನೆರವೇರಿತು.
ಅಪೊಸ್ತಲರ ಕೃತ್ಯಗ 7 : 44 (OCVKN)
“ಅರಣ್ಯದಲ್ಲಿ ದೇವದರ್ಶನ ಗುಡಾರ ನಮ್ಮ ಪಿತೃಗಳ ಬಳಿಯಲ್ಲಿ ಇತ್ತು. ದೇವರು ಮೋಶೆಗೆ ಆಜ್ಞಾಪಿಸಿದಂತೆ, ಅವನಿಗೆ ತೋರಿಸಿದ ಮಾದರಿಯಂತೆ ಅದನ್ನು ರೂಪಿಸಲಾಗಿತ್ತು.
ಅಪೊಸ್ತಲರ ಕೃತ್ಯಗ 7 : 45 (OCVKN)
ನಮ್ಮ ಪಿತೃಗಳು ದೇವದರ್ಶನ ಗುಡಾರವನ್ನು ಪಡೆದುಕೊಂಡು, ಯೆಹೋಶುವನ ನಾಯಕತ್ವದ ಕೆಳಗೆ ದೇವರು ಅವರೆದುರಿನಲ್ಲಿ ಹೊರದೊಬ್ಬಿದ ದೇಶಗಳ ನಾಡನ್ನು ವಶಪಡಿಸಿಕೊಂಡಾಗ ಅದನ್ನು ತಮ್ಮೊಂದಿಗೆ ತೆಗೆದುಕೊಂಡು ಬಂದರು. ದಾವೀದನ ಕಾಲದವರೆಗೂ ಆ ಗುಡಾರವು ಅಲ್ಲಿಯೇ ಇತ್ತು.
ಅಪೊಸ್ತಲರ ಕೃತ್ಯಗ 7 : 46 (OCVKN)
ದಾವೀದನು ದೇವರ ದಯೆಯನ್ನು ಹೊಂದಿದವನಾಗಿ ಯಾಕೋಬನ ದೇವರಿಗೆ ದೇವಾಲಯ ಕಟ್ಟಲು ತನಗೆ ಅಪ್ಪಣೆಯಾಗಬೇಕೆಂದು ದೇವರಿಗೆ ಕೇಳಿಕೊಂಡನು.
ಅಪೊಸ್ತಲರ ಕೃತ್ಯಗ 7 : 47 (OCVKN)
ಆದರೆ ದೇವರಿಗಾಗಿ ಆಲಯವನ್ನು ಕಟ್ಟಿಸಿದವನು ಸೊಲೊಮೋನನು.
ಅಪೊಸ್ತಲರ ಕೃತ್ಯಗ 7 : 48 (OCVKN)
ಅಪೊಸ್ತಲರ ಕೃತ್ಯಗ 7 : 49 (OCVKN)
“ಹೀಗಿದ್ದರೂ ಮಹೋನ್ನತ ದೇವರು ಮಾನವರು ನಿರ್ಮಿಸಿದ ಆಲಯಗಳಲ್ಲಿ ವಾಸಮಾಡುವುದಿಲ್ಲ. ಪ್ರವಾದಿಯು ಹೇಳಿದಂತೆ: “ ‘ಆಕಾಶವೇ ನನ್ನ ಸಿಂಹಾಸನ, ಭೂಮಿಯೇ ನನ್ನ ಪಾದ ಪೀಠ. ನೀವು ನನಗಾಗಿ ಎಂಥಾ ಆಲಯವನ್ನು ಕಟ್ಟುವಿರಿ? ಎಲ್ಲಿ ನನ್ನ ವಿಶ್ರಾಂತಿಯ ಸ್ಥಳ?
ಅಪೊಸ್ತಲರ ಕೃತ್ಯಗ 7 : 50 (OCVKN)
ಇವುಗಳನ್ನೆಲ್ಲಾ ನಿರ್ಮಿಸಿದ್ದು ನನ್ನ ಕೈಯಿಂದ ಅಲ್ಲವೇ?’§ ಯೆಶಾಯ 66:1,2 ಎಂದು ಕರ್ತದೇವರು ಪ್ರಶ್ನಿಸುತ್ತಾರೆ.
ಅಪೊಸ್ತಲರ ಕೃತ್ಯಗ 7 : 51 (OCVKN)
“ಹಟಮಾರಿಗಳೇ! ಹೃದಯದಲ್ಲಿಯೂ ಕಿವಿಯಲ್ಲಿಯೂ ಸುನ್ನತಿ ಹೊಂದದವರೇ, ನೀವು ಸಹ ನಿಮ್ಮ ಪಿತೃಗಳಂತೆಯೇ ಯಾವಾಗಲೂ ಪವಿತ್ರಾತ್ಮ ದೇವರನ್ನು ಎದುರಿಸುತ್ತೀರಿ!
ಅಪೊಸ್ತಲರ ಕೃತ್ಯಗ 7 : 52 (OCVKN)
ನಿಮ್ಮ ಪಿತೃಗಳು ಹಿಂಸೆಪಡಿಸದೆ ಇದ್ದ ಪ್ರವಾದಿ ಒಬ್ಬನಾದರೂ ಇರುವನೇ? ನೀತಿವಂತರಾಗಿರುವ ಒಬ್ಬರು ಬರಲಿದ್ದಾರೆಂದು ಮುಂತಿಳಿಸಿದವರನ್ನು ಸಹ ಅವರು ಕೊಂದುಹಾಕಿದರು. ಈಗ ನೀವೇ ಅವರನ್ನು ಹಿಡಿದುಕೊಟ್ಟು ಕೊಲೆಮಾಡಿದ್ದೀರಿ.
ಅಪೊಸ್ತಲರ ಕೃತ್ಯಗ 7 : 53 (OCVKN)
ದೇವದೂತರ ಮುಖಾಂತರವಾಗಿ ಜಾರಿಗೆ ಬಂದ ಮೋಶೆಯ ನಿಯಮವನ್ನು ನೀವು ಹೊಂದಿದವರಾದರೂ ಅದನ್ನು ಅನುಸರಿಸುವುದಿಲ್ಲ,” ಎಂದು ಹೇಳಿದನು.
ಅಪೊಸ್ತಲರ ಕೃತ್ಯಗ 7 : 54 (OCVKN)
ಸ್ತೆಫನನ ಮೇಲೆ ಕಲ್ಲು ಎಸೆದದ್ದು ಈ ಮಾತುಗಳನ್ನು ಕೇಳಿದಾಗ ಅವರು ರೋಷವುಳ್ಳವರಾಗಿ, ಅವನ ಕಡೆಗೆ ನೋಡಿ, ತಮ್ಮ ಹಲ್ಲುಗಳನ್ನು ಕಡಿದರು.
ಅಪೊಸ್ತಲರ ಕೃತ್ಯಗ 7 : 55 (OCVKN)
ಆದರೆ ಪವಿತ್ರಾತ್ಮಭರಿತನಾದ ಸ್ತೆಫನನು ಪರಲೋಕದ ಕಡೆಗೆ ನೋಡಿ, ದೇವರ ಮಹಿಮೆಯನ್ನೂ ದೇವರ ಬಲಗಡೆಯಲ್ಲಿ ಯೇಸು ನಿಂತುಕೊಂಡಿರುವುದನ್ನೂ ಕಂಡನು.
ಅಪೊಸ್ತಲರ ಕೃತ್ಯಗ 7 : 56 (OCVKN)
“ನೋಡಿರಿ, ಪರಲೋಕ ತೆರೆದಿರುವುದನ್ನೂ ಮನುಷ್ಯಪುತ್ರ ಆಗಿರುವ ಕ್ರಿಸ್ತ ಯೇಸು ದೇವರ ಬಲಗಡೆಯಲ್ಲಿ ನಿಂತಿರುವುದನ್ನೂ ನಾನು ಕಾಣುತ್ತಿದ್ದೇನೆ,” ಎಂದನು.
ಅಪೊಸ್ತಲರ ಕೃತ್ಯಗ 7 : 57 (OCVKN)
ಈ ಮಾತಿಗೆ ಅವರು ತಮ್ಮ ಕಿವಿಗಳನ್ನು ಮುಚ್ಚಿಕೊಂಡು, ಆರ್ಭಟಿಸುತ್ತಾ, ಅವನ ಕಡೆಗೆ ಓಡಿಹೋಗಿ ಅವನನ್ನು ಹೊಡೆದರು.
ಅಪೊಸ್ತಲರ ಕೃತ್ಯಗ 7 : 58 (OCVKN)
ಅವನನ್ನು ಪಟ್ಟಣದ ಹೊರಗೆ ಎಳೆದುಕೊಂಡು ಹೋಗಿ ಅವನ ಮೇಲೆ ಕಲ್ಲೆಸೆಯಲು ಪ್ರಾರಂಭಿಸಿದರು. ಆ ಸಮಯದಲ್ಲಿ ಸಾಕ್ಷಿಗಳು ತಮ್ಮ ಬಟ್ಟೆಗಳನ್ನು ಸೌಲ ಎಂಬ ಹೆಸರಿನ ಒಬ್ಬ ಯುವಕನ ಪಾದಗಳ ಬಳಿಯಲ್ಲಿಟ್ಟಿದ್ದರು.
ಅಪೊಸ್ತಲರ ಕೃತ್ಯಗ 7 : 59 (OCVKN)
ನ್ಯಾಯಸಭೆಯವರು ಕಲ್ಲೆಸೆಯುತ್ತಿದ್ದಾಗ, ಸ್ತೆಫನನು, “ಕರ್ತ ಯೇಸುವೇ, ನನ್ನ ಆತ್ಮವನ್ನು ಸ್ವೀಕರಿಸಿರಿ,” ಎಂದು ಪ್ರಾರ್ಥಿಸಿದನು.
ಅಪೊಸ್ತಲರ ಕೃತ್ಯಗ 7 : 60 (OCVKN)
ಅನಂತರ ಮೊಣಕಾಲೂರಿ, “ಕರ್ತ ಯೇಸುವೇ, ಈ ಪಾಪವನ್ನು ಅವರ ಮೇಲೆ ಹೊರಿಸಬೇಡ,” ಎಂದು ಗಟ್ಟಿಯಾಗಿ ಕೂಗಿದನು. ಇದನ್ನು ಹೇಳಿದ ಮೇಲೆ, ಪ್ರಾಣಬಿಟ್ಟನು.
❮
❯