2 ತಿಮೊಥೆಯನಿಗೆ 2 : 1 (OCVKN)
ಕ್ರಿಸ್ತ ಯೇಸುವಿನ ಒಳ್ಳೆಯ ಸೈನಿಕ ಆದ್ದರಿಂದ ನನ್ನ ಮಗನೇ, ನೀನು ಕ್ರಿಸ್ತ ಯೇಸುವಿನಲ್ಲಿರುವ ಕೃಪೆಯಲ್ಲಿ ಬಲಗೊಂಡವನಾಗಿರು.
2 ತಿಮೊಥೆಯನಿಗೆ 2 : 2 (OCVKN)
ಅನೇಕ ಸಾಕ್ಷಿಗಳ ಮುಂದೆ ನೀನು ನನ್ನಿಂದ ಕೇಳಿದವುಗಳನ್ನು ಇತರರಿಗೆ ಸಹ ಬೋಧಿಸಲು ಶಕ್ತರಾದ ನಂಬಿಗಸ್ತ ಮನುಷ್ಯರಿಗೆ ಒಪ್ಪಿಸಿಕೊಡು.
2 ತಿಮೊಥೆಯನಿಗೆ 2 : 3 (OCVKN)
ಆದ್ದರಿಂದ ನೀನು ಕ್ರಿಸ್ತ ಯೇಸುವಿನ ಒಳ್ಳೆಯ ಸೈನಿಕನಂತೆ ನನ್ನೊಂದಿಗೆ ಶ್ರಮೆಯನ್ನು ಅನುಭವಿಸು.
2 ತಿಮೊಥೆಯನಿಗೆ 2 : 4 (OCVKN)
ತನ್ನನ್ನು ಸೈನಿಕನನ್ನಾಗಿ ಆರಿಸಿಕೊಂಡ ನಾಯಕನನ್ನು ಮೆಚ್ಚಿಸಬೇಕೆಂದು ಯುದ್ಧಕ್ಕೆ ಹೋಗುವವನು ಈ ಜೀವನದ ವ್ಯವಹಾರಗಳಲ್ಲಿ ಸಿಕ್ಕಿಕೊಳ್ಳಲಾರನು.
2 ತಿಮೊಥೆಯನಿಗೆ 2 : 5 (OCVKN)
ಇದಲ್ಲದೆ ಯಾವನಾದರೂ ಆಟದ ಸ್ವರ್ಧೆಯಲ್ಲಿ ಹೋರಾಡುವಾಗ ನಿಯಮದ ಪ್ರಕಾರ ಹೋರಾಡದಿದ್ದರೆ, ಅವನು ಜಯಶಾಲಿಯ ಕಿರೀಟ ಹೊಂದುವುದಿಲ್ಲ.
2 ತಿಮೊಥೆಯನಿಗೆ 2 : 6 (OCVKN)
ಪ್ರಯಾಸ ಪಡುವ ವ್ಯವಸಾಯಗಾರನು ಫಲಗಳಲ್ಲಿ ಮೊದಲನೆಯದಾಗಿ ಪಾಲುಗಾರನಾಗಿರತಕ್ಕದ್ದು.
2 ತಿಮೊಥೆಯನಿಗೆ 2 : 7 (OCVKN)
ನಾನು ಹೇಳುತ್ತಿರುವುದನ್ನು ಆಲೋಚಿಸು. ಕರ್ತ ಯೇಸುವು ಇವೆಲ್ಲವುಗಳಲ್ಲಿ ನಿನಗೆ ವಿವೇಕವನ್ನು ದಯಪಾಲಿಸುವರು.
2 ತಿಮೊಥೆಯನಿಗೆ 2 : 8 (OCVKN)
ನನ್ನ ಸುವಾರ್ತೆಯ ಸಾರೋಣಕ್ಕೆ ಅನುಸಾರವಾಗಿ ದಾವೀದನ ವಂಶದವರಾದ ಯೇಸು ಕ್ರಿಸ್ತರು ಸತ್ತವರೊಳಗಿಂದ ಎಬ್ಬಿಸಲಾದರೆಂದು ಜ್ಞಾಪಕಮಾಡಿಕೋ.
2 ತಿಮೊಥೆಯನಿಗೆ 2 : 9 (OCVKN)
ಈ ಸುವಾರ್ತೆಗಾಗಿ ನಾನು ಕಷ್ಟವನ್ನು ಅನುಭವಿಸಿ ದುಷ್ಕರ್ಮಿಯಂತೆ ಬೇಡಿಗಳಿಂದ ಬಂಧಿತನಾಗಿದ್ದೇನೆ. ಆದರೆ ದೇವರ ವಾಕ್ಯಕ್ಕೆ ಬಂಧನವಿಲ್ಲ.
2 ತಿಮೊಥೆಯನಿಗೆ 2 : 10 (OCVKN)
ಆದಕಾರಣ ಆರಿಸಿಕೊಂಡವರು ಸಹ ಕ್ರಿಸ್ತ ಯೇಸುವಿನಲ್ಲಿರುವ ರಕ್ಷಣೆಯನ್ನು ನಿತ್ಯ ಮಹಿಮೆ ಸಹಿತವಾಗಿ ಹೊಂದಬೇಕೆಂದು ನಾನು ಅವರಿಗೋಸ್ಕರ ಎಲ್ಲವನ್ನೂ ಸಹಿಸಿಕೊಳ್ಳುತ್ತೇನೆ.
2 ತಿಮೊಥೆಯನಿಗೆ 2 : 11 (OCVKN)
ಇದು ನಂಬತಕ್ಕ ವಾಕ್ಯವಾಗಿದೆ: ನಾವು ಕ್ರಿಸ್ತ ಯೇಸುವಿನ ಜೊತೆಯಲ್ಲಿ ಸತ್ತಿದ್ದರೆ, ಕ್ರಿಸ್ತ ಯೇಸುವಿನ ಜೊತೆಯಲ್ಲಿ ನಾವು ಸಹ ಜೀವಿಸುವೆವು.
2 ತಿಮೊಥೆಯನಿಗೆ 2 : 12 (OCVKN)
ನಾವು ಸಹಿಸಿಕೊಳ್ಳುವವರಾಗಿದ್ದರೆ ಕ್ರಿಸ್ತ ಯೇಸುವಿನ ಜೊತೆಯಲ್ಲಿ ನಾವು ಸಹ ಆಳುವೆವು. ಅವರನ್ನು ನಿರಾಕರಿಸಿದರೆ ಅವರು ಸಹ ನಮ್ಮನ್ನು ನಿರಾಕರಿಸುವರು.
2 ತಿಮೊಥೆಯನಿಗೆ 2 : 13 (OCVKN)
ನಾವು ಅಪನಂಬಿಗಸ್ತರಾಗಿದ್ದರೂ ಅವರು ನಂಬಿಗಸ್ತರಾಗಿಯೇ ಉಳಿದಿರುವರು. ಅವರು ತಮ್ಮ ಸ್ವಭಾವವನ್ನು ತಾವೇ ನಿರಾಕರಿಸಲಾರರು.
2 ತಿಮೊಥೆಯನಿಗೆ 2 : 14 (OCVKN)
ದೇವರಿಂದ ಮನ್ನಣೆ ಹೊಂದಿದ ಕೆಲಸದವನು ಈ ವಿಷಯಗಳನ್ನು ದೇವಜನರ ನೆನಪಿಗೆ ತರಬೇಕು. ಕೇಳುವವರಿಗೆ ಯಾವ ಪ್ರಯೋಜನವನ್ನೂ ಉಂಟು ಮಾಡದೆ ಕೆಡವಿ ಹಾಕುವ ವಾಗ್ವಾದಗಳನ್ನು ಮಾಡಬಾರದೆಂದು ಅವರಿಗೆ ದೇವರ ಮುಂದೆ ಎಚ್ಚರಿಸು.
2 ತಿಮೊಥೆಯನಿಗೆ 2 : 15 (OCVKN)
ನೀನು ನಾಚಿಕೆಗೆ ಒಳಪಡದ ಕೆಲಸದವನೂ ಸತ್ಯವಾಕ್ಯವನ್ನು ಸರಿಯಾಗಿ ಬೋಧಿಸುವವನೂ ಆಗಿರುವಂತೆ ನಿನ್ನನ್ನು ದೇವರಿಗೆ ಮೆಚ್ಚಿಕೆಯಾದವನಾಗಿರಲು ಸಮರ್ಪಿಸಲು ಅತ್ಯಂತ ಆಸಕ್ತನಾಗಿರು.
2 ತಿಮೊಥೆಯನಿಗೆ 2 : 16 (OCVKN)
ಆದರೆ ಭಕ್ತಿಗೆ ವಿರುದ್ಧವಾದ ಹರಟೆ ಮಾತುಗಳಿಂದ ತೊಲಗಿರು. ಅವುಗಳಿಗೆ ಮನಸ್ಸು ಕೊಡುವವರು ಹೆಚ್ಚೆಚ್ಚಾಗಿ ಭಕ್ತಿಹೀನರಾಗುವರು.
2 ತಿಮೊಥೆಯನಿಗೆ 2 : 17 (OCVKN)
ಅವರ ಬೋಧನೆ ಮಾರಕ ಹುಣ್ಣಿನಂತೆ ಹರಡಿಕೊಳ್ಳುವುದು. ಅವರಲ್ಲಿ ಹುಮೆನಾಯನೂ ಪಿಲೇತನೂ ಇದ್ದಾರೆ.
2 ತಿಮೊಥೆಯನಿಗೆ 2 : 18 (OCVKN)
ಅವರು ಪುನರುತ್ಥಾನವು ಆಗಲೇ ಆಗಿ ಹೋಯಿತೆಂದು ಹೇಳುತ್ತಾ ಸತ್ಯದ ಗುರಿಯನ್ನು ತಪ್ಪಿದವರಾಗಿ ಕೆಲವರ ವಿಶ್ವಾಸವನ್ನು ಕೆಡಿಸಿಬಿಡುವವರಾಗಿದ್ದಾರೆ.
2 ತಿಮೊಥೆಯನಿಗೆ 2 : 19 (OCVKN)
ಆದರೂ ದೇವರ ಸ್ಥಿರವಾದ ಅಸ್ತಿವಾರವು ನಿಲ್ಲುತ್ತದೆ. ಅದರ ಮೇಲೆ, “ತನ್ನವರು ಯಾರಾರೆಂಬುದನ್ನು ಕರ್ತದೇವರು ತಿಳಿದಿದ್ದಾರೆ!” ಎಂತಲೂ, “ಕರ್ತದೇವರ ಹೆಸರನ್ನು ಅರಿಕೆಮಾಡುವವರೆಲ್ಲರೂ ದುಷ್ಟತನವನ್ನು ಬಿಟ್ಟುಬಿಡಬೇಕು!” ಎಂತಲೂ ಮುದ್ರೆ ಉಂಟು.
2 ತಿಮೊಥೆಯನಿಗೆ 2 : 20 (OCVKN)
ದೊಡ್ಡ ಮನೆಯಲ್ಲಿ ಬೆಳ್ಳಿಬಂಗಾರದ ಪಾತ್ರೆಗಳಲ್ಲದೆ ಮರದ ಹಾಗೂ ಮಣ್ಣಿನ ಪಾತ್ರೆಗಳೂ ಇರುತ್ತವೆ. ಕೆಲವು ವಿಶೇಷ ಉದ್ದೇಶಗಳಿಗಾಗಿಯೂ ಕೆಲವು ಸಾಮಾನ್ಯ ಉಪಯೋಗಕ್ಕಾಗಿಯೂ ಇರುತ್ತವೆ.
2 ತಿಮೊಥೆಯನಿಗೆ 2 : 21 (OCVKN)
ಒಬ್ಬನು ತನ್ನನ್ನು ಸಾಮಾನ್ಯ ಘನಹೀನತೆಯಿಂದ ಶುದ್ಧಮಾಡಿಕೊಂಡರೆ, ಅವನು ವಿಶೇಷ ಉದ್ದೇಶಕ್ಕಾಗಿ ಶುದ್ಧೀಕರಗೊಂಡವನೂ ಯಜಮಾನನಿಗೆ ಉಪಯುಕ್ತನೂ ಸಕಲ ಸತ್ಕಾರ್ಯಕ್ಕೆ ಸಿದ್ಧನೂ ಆಗಿರುವ ಗೌರವದ ಪಾತ್ರೆಯಾಗಿರುವನು.
2 ತಿಮೊಥೆಯನಿಗೆ 2 : 22 (OCVKN)
ಯೌವನದ ಆಶೆಗಳನ್ನು ಬಿಟ್ಟು ಓಡಿಹೋಗು. ಶುದ್ಧ ಹೃದಯವುಳ್ಳವರಾಗಿ ಕರ್ತ ಯೇಸುವನ್ನು ಬೇಡಿಕೊಳ್ಳುವವರ ಸಂಗಡ ನೀತಿ, ವಿಶ್ವಾಸ, ಪ್ರೀತಿ, ಸಮಾಧಾನ ಇವುಗಳನ್ನು ಬೆನ್ನಟ್ಟು.
2 ತಿಮೊಥೆಯನಿಗೆ 2 : 23 (OCVKN)
ಬುದ್ಧಿಯಿಲ್ಲದ ಅಯುಕ್ತ ವಾಗ್ವಾದಗಳು ಜಗಳಗಳನ್ನು ಹುಟ್ಟಿಸುತ್ತವೆ ಎಂದು ತಿಳಿದು ಅವುಗಳನ್ನು ನಿರಾಕರಿಸು.
2 ತಿಮೊಥೆಯನಿಗೆ 2 : 24 (OCVKN)
ಕರ್ತ ಯೇಸುವಿನ ದಾಸನು ಜಗಳವಾಡದೆ ಎಲ್ಲರ ವಿಷಯದಲ್ಲಿ ದಯೆಯುಳ್ಳವನೂ ಬೋಧಿಸುವುದರಲ್ಲಿ ಪ್ರವೀಣನೂ ಸಹನೆಯುಳ್ಳವನೂ ಆಗಿರಬೇಕು.
2 ತಿಮೊಥೆಯನಿಗೆ 2 : 25 (OCVKN)
ವಿರೋಧಿಸುವವರ ಮನಸ್ಸನ್ನು ತಾಳ್ಮೆಯಿಂದ ತಿದ್ದುವವನಾಗಿದ್ದರೆ, ದೇವರು ಒಂದು ವೇಳೆ ಅಂಥವರಿಗೆ ಸತ್ಯದ ತಿಳುವಳಿಕೆಗೆ ನಡೆಸುವ ಪಶ್ಚಾತ್ತಾಪವನ್ನು ಕೊಡುವ ನಿರೀಕ್ಷೆ ಇರುವುದು.
2 ತಿಮೊಥೆಯನಿಗೆ 2 : 26 (OCVKN)
ಈ ರೀತಿಯಾಗಿ, ಸೈತಾನನ ಚಿತ್ತವನ್ನು ನೆರವೇರಿಸಲು ಗುಲಾಮರಾಗಿರುವವರು, ಅವನ ಬಲೆಯಿಂದ ಬಿಡುಗಡೆಹೊಂದಿ ಸ್ವಸ್ಥಮನಸ್ಸುಳ್ಳವರಾಗಿ ತಪ್ಪಿಸಿಕೊಳ್ಳುವರು.
❮
❯