2 ಅರಸುಗಳು 17 : 1 (OCVKN)
ಇಸ್ರಾಯೇಲರ ಕೊನೆಯ ಅರಸನಾದ ಹೋಶೇಯನು ಯೆಹೂದದ ಅರಸನಾದ ಆಹಾಜನ ಆಳ್ವಿಕೆಯ ಹನ್ನೆರಡನೆಯ ವರ್ಷದಲ್ಲಿ ಏಲನ ಮಗ ಹೋಶೇಯನು ಇಸ್ರಾಯೇಲಿನ ಮೇಲೆ ಸಮಾರ್ಯದಲ್ಲಿ ಅರಸನಾಗಿ, ಒಂಬತ್ತು ವರ್ಷ ಆಳಿದನು.
2 ಅರಸುಗಳು 17 : 2 (OCVKN)
ಅವನು ಯೆಹೋವ ದೇವರ ಸಮ್ಮುಖದಲ್ಲಿ ಕೆಟ್ಟದ್ದನ್ನು ಮಾಡಿದನು. ಆದರೆ ತನಗೆ ಮುಂಚೆ ಇದ್ದ ಇಸ್ರಾಯೇಲಿನ ಅರಸರ ಹಾಗಿರಲಿಲ್ಲ.
2 ಅರಸುಗಳು 17 : 3 (OCVKN)
ಅಸ್ಸೀರಿಯದ ಅರಸನಾದ ಶಲ್ಮನೆಸೆರನು ಅವನ ವಿರುದ್ಧ ಬಂದದ್ದರಿಂದ, ಹೋಶೇಯನು ಅವನಿಗೆ ಸೇವಕನಾಗಿ ಅವನಿಗೆ ಕಪ್ಪವನ್ನು ಕೊಟ್ಟನು.
2 ಅರಸುಗಳು 17 : 4 (OCVKN)
ಆದರೆ ಅಸ್ಸೀರಿಯದ ಅರಸನು ಹೋಶೇಯನಲ್ಲಿ ಒಳಸಂಚನ್ನು ಕಂಡುಹಿಡಿದನು. ಏನೆಂದರೆ, ಹೋಶೇಯನು ಅಸ್ಸೀರಿಯದ ಅರಸನಿಗೆ ವರ್ಷ ವರ್ಷಕ್ಕೂ ಕೊಡುವ ಕಪ್ಪವನ್ನು ಕೊಡದೆ, ಈಜಿಪ್ಟಿನ ಅರಸನಾದ ಸೋ ಎಂಬವನ ಬಳಿಗೆ ದೂತರನ್ನು ಕಳುಹಿಸಿದನು. ಆದ್ದರಿಂದ ಅಸ್ಸೀರಿಯದ ಅರಸನು ಅವನನ್ನು ಕಟ್ಟಿ, ಸೆರೆಮನೆಯಲ್ಲಿ ಬಂಧಿಸಿದನು.
2 ಅರಸುಗಳು 17 : 5 (OCVKN)
ಆಗ ಅಸ್ಸೀರಿಯದ ಅರಸನು ದೇಶವನ್ನೆಲ್ಲಾ ಸ್ವಾಧೀನಮಾಡಿಕೊಂಡು, ಸಮಾರ್ಯಕ್ಕೆ ವಿರೋಧವಾಗಿ ಬಂದು ಅದನ್ನು ಮೂರು ವರ್ಷಗಳವರೆಗೂ ಮುತ್ತಿಗೆಹಾಕಿದನು.
2 ಅರಸುಗಳು 17 : 6 (OCVKN)
ಹೋಶೇಯನ ಒಂಬತ್ತನೆಯ ವರ್ಷದಲ್ಲಿ ಅಸ್ಸೀರಿಯದ ಅರಸನು ಸಮಾರ್ಯವನ್ನು ವಶಪಡಿಸಿಕೊಂಡನು. ಅವನು ಇಸ್ರಾಯೇಲನ್ನು ಅಸ್ಸೀರಿಯ ದೇಶಕ್ಕೆ ಸೆರೆಯಾಗಿ ಒಯ್ದು ಹಲಹ ಪ್ರಾಂತದಲ್ಲಿಯೂ, ಹಾಬೋರ್ ನದಿಯಿರುವ ಗೋಜಾನ್ ಪ್ರಾಂತದಲ್ಲಿಯೂ ಮತ್ತು ಮೇದ್ಯರ ಪಟ್ಟಣಗಳಲ್ಲಿಯೂ ಇರಿಸಿದನು.
2 ಅರಸುಗಳು 17 : 7 (OCVKN)
ಇಸ್ರಾಯೇಲರ ಪಾಪದ ನಿಮಿತ್ತ ಸೆರೆಯಾಗಿ ಹೋದದ್ದು ಇಸ್ರಾಯೇಲರನ್ನು ಈಜಿಪ್ಟಿನ ಅರಸನಾದ ಫರೋಹನ ಕೈಯಿಂದ ಬಿಡಿಸಿ ಈಜಿಪ್ಟ್ ದೇಶದೊಳಗಿಂದ ಹೊರಗೆ ತಂದ ತಮ್ಮ ದೇವರಾದ ಯೆಹೋವ ದೇವರಿಗೆ ವಿರೋಧವಾಗಿ ಪಾಪಮಾಡಿದ್ದರಿಂದ ಇದೆಲ್ಲವೂ ಆಯಿತು. ಅವರು ಬೇರೆ ದೇವರುಗಳನ್ನು ಆರಾಧಿಸಿದರು.
2 ಅರಸುಗಳು 17 : 8 (OCVKN)
ಅವರ ಮುಂದೆ ಯೆಹೋವ ದೇವರು ಓಡಿಸಿಬಿಟ್ಟಿದ್ದ ಜನರ ಮತ್ತು ಇಸ್ರಾಯೇಲ್ ರಾಜರ ದುರಾಚಾರಗಳನ್ನು ಅವರು ಅನುಸರಿಸಿದರು.
2 ಅರಸುಗಳು 17 : 9 (OCVKN)
ಇಸ್ರಾಯೇಲರು ರಹಸ್ಯವಾಗಿ ತಮ್ಮ ದೇವರಾದ ಯೆಹೋವ ದೇವರಿಗೆ ವಿರೋಧವಾಗಿ ಅಯುಕ್ತವಾದವುಗಳನ್ನು ಮಾಡಿ ಬರುವ ಸ್ಥಳಗಳು ಮೊದಲುಗೊಂಡು ಕೋಟೆಯುಳ್ಳ ಪಟ್ಟಣಗಳವರೆಗೂ, ತಮ್ಮ ಸಮಸ್ತ ಪಟ್ಟಣಗಳಲ್ಲಿ ತಮಗೆ ಪೂಜಾಸ್ಥಳಗಳನ್ನು ಕಟ್ಟಿಸಿಕೊಂಡಿದ್ದರು.
2 ಅರಸುಗಳು 17 : 10 (OCVKN)
ಇದಲ್ಲದೆ ಅವರು ಎತ್ತರವಾದ ಎಲ್ಲಾ ಗುಡ್ಡಗಳಲ್ಲಿ ತೋಪುಗಳನ್ನು ಹಾಕಿ, ಹಸಿರಾದ ಎಲ್ಲಾ ಮರಗಳ ಕೆಳಗೂ ತಮಗೆ ಅಶೇರ ವಿಗ್ರಹಸ್ತಂಭಗಳನ್ನು ನಿಲ್ಲಿಸಿದ್ದರು.
2 ಅರಸುಗಳು 17 : 11 (OCVKN)
ಯೆಹೋವ ದೇವರು ತಮ್ಮ ಮುಂದೆ ಓಡಿಸಿಬಿಟ್ಟ ಇತರ ಜನರಂತೆ ಅವರು ಎಲ್ಲಾ ಪೂಜಾಸ್ಥಳಗಳಲ್ಲಿ ಧೂಪವನ್ನು ಸುಟ್ಟು ಯೆಹೋವ ದೇವರನ್ನು ಸಿಟ್ಟುಗೊಳಿಸುವ ಹಾಗೆ ಕೆಟ್ಟ ಕಾರ್ಯಗಳನ್ನು ಮಾಡಿದರು.
2 ಅರಸುಗಳು 17 : 12 (OCVKN)
“ನೀವು ಈ ಕಾರ್ಯವನ್ನು ಮಾಡಬೇಡಿರಿ,”* ವಿಮೋ 20:4,5 ಎಂದು ಯೆಹೋವ ದೇವರು ಅವರಿಗೆ ಹೇಳಿದ್ದರೂ, ಅವರು ಮೂರ್ತಿಗಳಿಗೆ ಪೂಜೆ ಮಾಡಿದರು.
2 ಅರಸುಗಳು 17 : 13 (OCVKN)
“ನೀವು ನಿಮ್ಮ ದುರ್ಮಾರ್ಗಗಳನ್ನು ಬಿಟ್ಟು ತಿರುಗಿ, ನಾನು ನಿಮ್ಮ ಪಿತೃಗಳಿಗೆ ಆಜ್ಞಾಪಿಸಿದ ಪ್ರವಾದಿಗಳಾದ ನನ್ನ ಸೇವಕರ ಮುಖಾಂತರ ನಾನು ನಿಮಗೆ ಕಳುಹಿಸಿದ ಮೋಶೆಯ ಎಲ್ಲಾ ನಿಯಮದ ಪ್ರಕಾರ ನನ್ನ ಆಜ್ಞೆಗಳನ್ನೂ, ನನ್ನ ಕಟ್ಟಳೆಗಳನ್ನೂ ಕೈಗೊಳ್ಳಿರಿ,” ಎಂದು ಯೆಹೋವ ದೇವರು ಸಮಸ್ತ ಪ್ರವಾದಿಗಳ ಮುಖಾಂತರವಾಗಿಯೂ, ಸಮಸ್ತ ದರ್ಶಿಗಳ ಮುಖಾಂತರವಾಗಿಯೂ ಇಸ್ರಾಯೇಲಿಗೂ, ಯೆಹೂದಕ್ಕೂ ಎಚ್ಚರಿಕೆ ಕೊಟ್ಟಿದ್ದರು.
2 ಅರಸುಗಳು 17 : 14 (OCVKN)
ಆದರೆ ಅವರು ಕೇಳದೆ ತಮ್ಮ ದೇವರಾದ ಯೆಹೋವ ದೇವರಲ್ಲಿ ನಂಬಿಕೆ ಇಡದೆ ತಮ್ಮ ಪಿತೃಗಳಂತೆ ದೇವರ ಆಜ್ಞೆಗಳಿಗೆ ಮಣಿಯದೆ,
2 ಅರಸುಗಳು 17 : 15 (OCVKN)
ದೇವರ ಕಟ್ಟಳೆಗಳನ್ನೂ, ದೇವರು ತಮ್ಮ ಪಿತೃಗಳ ಸಂಗಡ ಮಾಡಿದ ಒಡಂಬಡಿಕೆಯನ್ನೂ, ಅವರಿಗೆ ಹೇಳಿದ ಎಚ್ಚರಿಕೆಯನ್ನೂ ತಿರಸ್ಕರಿಸಿದರು. ಅವರು ವ್ಯರ್ಥವಾದ ವಿಗ್ರಹಗಳನ್ನು ಹಿಂಬಾಲಿಸಿ, ನಿಷ್ಪ್ರಯೋಜಕರಾದರು. “ನೀವು ಅವರ ಹಾಗೆ ಮಾಡಬೇಡಿರಿ,” ಎಂದು ಯೆಹೋವ ದೇವರು ಅವರಿಗೆ ಆಜ್ಞಾಪಿಸಿದ್ದರೂ, ಅವರು ತಮ್ಮ ಸುತ್ತಲಿನ ಜನರನ್ನೇ ಅನುಸರಿಸಿದರು.
2 ಅರಸುಗಳು 17 : 16 (OCVKN)
ಇದಲ್ಲದೆ ಅವರು ತಮ್ಮ ದೇವರಾದ ಯೆಹೋವ ದೇವರ ಸಮಸ್ತ ಆಜ್ಞೆಗಳನ್ನು ಬಿಟ್ಟುಬಿಟ್ಟು, ತಮಗೆ ತಾವೇ ಎರಡು ಎರಕದ ಕರುಗಳ ಮೂರ್ತಿಗಳನ್ನು ಮಾಡಿಕೊಂಡರು. ಅವರು ಅಶೇರ ಸ್ತಂಭವನ್ನು ನಿಲ್ಲಿಸಿ, ಆಕಾಶದ ಸೈನ್ಯಕ್ಕೆಲ್ಲಾ ಅಡ್ಡಬಿದ್ದು, ಬಾಳನನ್ನು ಸೇವಿಸಿ ತಮ್ಮ ಪುತ್ರಪುತ್ರಿಯರನ್ನೂ ಬೆಂಕಿಯಲ್ಲಿ ಬಲಿಕೊಟ್ಟರು.
2 ಅರಸುಗಳು 17 : 17 (OCVKN)
ಕಣಿಗಳನ್ನೂ, ಶಕುನಗಳನ್ನೂ ಬಳಸಿ, ಯೆಹೋವ ದೇವರಿಗೆ ಕೋಪ ಬರುವಂತೆ ದೇವರ ಸಮ್ಮುಖದಲ್ಲಿ ಕೆಟ್ಟದ್ದನ್ನು ಮಾಡಲು ತಮ್ಮನ್ನು ಮಾರಿಬಿಟ್ಟರು.
2 ಅರಸುಗಳು 17 : 18 (OCVKN)
ಆದ್ದರಿಂದ ಯೆಹೋವ ದೇವರು ಇಸ್ರಾಯೇಲಿನ ಮೇಲೆ ಬಹುಕೋಪಗೊಂಡು, ಅವರನ್ನು ತಮ್ಮ ಸಮ್ಮುಖದಿಂದ ತೆಗೆದುಹಾಕಿದರು. ಯೆಹೂದದ ಗೋತ್ರದ ಹೊರತಾಗಿ ಇನ್ಯಾರೂ ಉಳಿಯಲಿಲ್ಲ.
2 ಅರಸುಗಳು 17 : 19 (OCVKN)
ಯೆಹೂದದವರು ಸಹ ತಮ್ಮ ಯೆಹೋವ ದೇವರ ಆಜ್ಞೆಗಳನ್ನು ಕೈಕೊಳ್ಳದೆ, ಇಸ್ರಾಯೇಲರ ಪದ್ಧತಿಗಳಲ್ಲಿಯೇ ನಡೆದರು.
2 ಅರಸುಗಳು 17 : 20 (OCVKN)
ಆದ್ದರಿಂದ ಯೆಹೋವ ದೇವರು ಇಸ್ರಾಯೇಲಿನ ಸಂತತಿಯನ್ನೆಲ್ಲಾ ಅಲಕ್ಷ್ಯಮಾಡಿ, ಅವರನ್ನು ಕುಂದಿಸಿ, ಅವರನ್ನು ತಮ್ಮ ಸಮ್ಮುಖದಿಂದ ತಳ್ಳಿಬಿಡುವವರೆಗೆ ಅವರನ್ನು ಕೊಳ್ಳೆಗಾರರ ಕೈಯಲ್ಲಿ ಒಪ್ಪಿಸಿಕೊಟ್ಟರು.
2 ಅರಸುಗಳು 17 : 21 (OCVKN)
ದೇವರು ಇಸ್ರಾಯೇಲನ್ನು ದಾವೀದನ ಸಂತಾನದಿಂದ ವಿಭಾಗಿಸಿದಾಗ, ಅವರು ನೆಬಾಟನ ಮಗ ಯಾರೊಬ್ಬಾಮನನ್ನು ಅರಸನನ್ನಾಗಿ ಮಾಡಿಕೊಂಡರು. ಆಗ ಯಾರೊಬ್ಬಾಮನು ಇಸ್ರಾಯೇಲನ್ನು ಯೆಹೋವ ದೇವರ ಮಾರ್ಗದಿಂದ ತಪ್ಪಿಸಿ, ಮಹಾ ಪಾಪಮಾಡಲು ಪ್ರೇರೇಪಿಸಿದನು.
2 ಅರಸುಗಳು 17 : 22 (OCVKN)
ಇಸ್ರಾಯೇಲರು ಯಾರೊಬ್ಬಾಮನು ಮಾಡಿದ ಸಮಸ್ತ ಪಾಪಗಳಲ್ಲಿ ನಡೆದರು. ಅವುಗಳನ್ನು ತೊರೆದುಬಿಡಲಿಲ್ಲ.
2 ಅರಸುಗಳು 17 : 23 (OCVKN)
ಯೆಹೋವ ದೇವರು ಪ್ರವಾದಿಗಳಾದ ತಮ್ಮ ಸೇವಕರ ಮುಖಾಂತರ ಎಚ್ಚರಿಸಿದ ಹಾಗೆ, ಇಸ್ರಾಯೇಲನ್ನು ದೇವರು ತಮ್ಮ ಸಮ್ಮುಖದಿಂದ ತೆಗೆದುಹಾಕಿದರು. ಹೀಗೆ ಇಸ್ರಾಯೇಲರು ಬಹು ಕಾಲದವರೆಗೂ ತಮ್ಮ ದೇಶದಿಂದ ಅಸ್ಸೀರಿಯ ದೇಶಕ್ಕೆ ಸೆರೆಯಾಗಿ ಇರಬೇಕಾಯಿತು. ಅವರು ಇಂದಿನವರೆಗೂ ಅಲ್ಲಿಯೇ ಇದ್ದಾರೆ.
2 ಅರಸುಗಳು 17 : 24 (OCVKN)
ಸಮಾರ್ಯ ಪುನಃ ಸ್ಥಾಪಿತವಾದದ್ದು ಅಸ್ಸೀರಿಯದ ಅರಸನು ಬಾಬಿಲೋನ್, ಕೂತಾ, ಅವ್ವಾ, ಹಮಾತ್, ಸೆಫರ್ವಯಿಮ್ ಊರುಗಳ ಜನರನ್ನು ಬರಮಾಡಿ, ಅವರನ್ನು ಇಸ್ರಾಯೇಲರಿಗೆ ಬದಲಾಗಿ ಸಮಾರ್ಯದ ಪಟ್ಟಣಗಳಲ್ಲಿ ಇರಿಸಿದನು. ಅವರು ಸಮಾರ್ಯವನ್ನು ಸ್ವತಂತ್ರಿಸಿಕೊಂಡು, ಅದರ ಪಟ್ಟಣಗಳಲ್ಲಿ ವಾಸಿಸಿದರು.
2 ಅರಸುಗಳು 17 : 25 (OCVKN)
ಆದರೆ ಅವರು ಅಲ್ಲಿ ವಾಸಿಸಲು ಆರಂಭಿಸಿದಾಗ, ಯೆಹೋವ ದೇವರಿಗೆ ಭಯಪಡದ ಕಾರಣ, ಯೆಹೋವ ದೇವರು ಅವರ ಮಧ್ಯದಲ್ಲಿ ಸಿಂಹಗಳನ್ನು ಕಳುಹಿಸಿದರು. ಅವು ಅವರಲ್ಲಿ ಕೆಲವರನ್ನು ಕೊಂದುಹಾಕಿದವು.
2 ಅರಸುಗಳು 17 : 26 (OCVKN)
ಆದಕಾರಣ ಸೇವಕರು ಅಸ್ಸೀರಿಯದ ಅರಸನಿಗೆ, “ನೀನು ಸಮಾರ್ಯದ ಪಟ್ಟಣಗಳಲ್ಲಿ ಇರಿಸಿದ ಜನರು ಆ ದೇಶದ ದೇವರು ಅಪೇಕ್ಷಿಸುವುದನ್ನು ತಿಳಿಯದೆ ಇದ್ದಾರೆ. ಆದುದರಿಂದ, ದೇವರು ಅವರ ಮಧ್ಯದಲ್ಲಿ ಸಿಂಹಗಳನ್ನು ಕಳುಹಿಸಿದ್ದಾರೆ. ಅವು ಅವರನ್ನು ಕೊಂದುಹಾಕುತ್ತವೆ,” ಎಂದು ತಿಳಿಸಿದರು.
2 ಅರಸುಗಳು 17 : 27 (OCVKN)
ಆಗ ಅಸ್ಸೀರಿಯದ ಅರಸನು, “ನೀವು ಅಲ್ಲಿಂದ ತೆಗೆದುಕೊಂಡು ಬಂದ ಯಾಜಕರಲ್ಲಿ ಒಬ್ಬನನ್ನು ಅಲ್ಲಿಗೆ ಕರೆದುಕೊಂಡು ಹೋಗಿರಿ. ಅವನು ಅಲ್ಲಿ ವಾಸವಾಗಿರಲಿ. ಅವನೇ ಅವರಿಗೆ ಆ ದೇಶದ ದೇವರು ಅಪೇಕ್ಷಿಸುವುದನ್ನು ಬೋಧಿಸಲಿ,” ಎಂದು ಆಜ್ಞಾಪಿಸಿದನು.
2 ಅರಸುಗಳು 17 : 28 (OCVKN)
ಆಗ ಅವರು ಸಮಾರ್ಯದಿಂದ ಕರೆತಂದ ಯಾಜಕರಲ್ಲಿ, ಒಬ್ಬನು ಬಂದು ಬೇತೇಲಿನಲ್ಲಿ ವಾಸವಾಗಿದ್ದು, ಅವರು ಯೆಹೋವ ದೇವರಿಗೆ ಭಯಪಡತಕ್ಕ ವಿಧವನ್ನು ಅವರಿಗೆ ಬೋಧಿಸಿದನು.
2 ಅರಸುಗಳು 17 : 29 (OCVKN)
ಆದರೆ ಪ್ರತಿ ಜನಾಂಗದವರೂ, ತಾವು ವಾಸಿಸಿದ ಪಟ್ಟಣಗಳಲ್ಲಿ ತಮಗೆ ದೇವರುಗಳನ್ನು ಮಾಡಿ, ಸಮಾರ್ಯದವರು ಮಾಡಿದ ಪೂಜಾಸ್ಥಳಗಳ ಮಂದಿರಗಳಲ್ಲಿ ಅವುಗಳನ್ನು ಇರಿಸಿದರು.
2 ಅರಸುಗಳು 17 : 30 (OCVKN)
ಬಾಬಿಲೋನಿನ ಜನರು ಸುಕ್ಕೋತ್ ಬೆನೋತ್ ವಿಗ್ರಹವನ್ನು ಮಾಡಿದರು; ಕೂತವಿನ ಜನರು ನೇರ್ಗಲ್ ವಿಗ್ರಹವನ್ನು ಮಾಡಿಕೊಂಡರು; ಹಮಾತಿನ ಜನರು ಅಷೀಮಾವನ್ನು ಮಾಡಿಕೊಂಡರು;
2 ಅರಸುಗಳು 17 : 31 (OCVKN)
ಅವ್ವೀಯರು ನಿಭಜ್, ತರ್ತಕ್ ಎಂಬ ದೇವತೆಗಳನ್ನು ಮಾಡಿದರು. ಸೆಫರ್ವಯಿಮಿನವರು ತಮ್ಮ ಕುಲದೇವತೆಗಳಾದ ಅದ್ರಮ್ಮೆಲೆಕ್, ಅನಮ್ಮೇಲೆಕ್ ಎಂಬುವುಗಳಿಗಾಗಿ ತಮ್ಮ ಮಕ್ಕಳನ್ನು ಅಗ್ನಿಬಲಿ ಕೊಡುತ್ತಿದ್ದರು.
2 ಅರಸುಗಳು 17 : 32 (OCVKN)
ಅವರು ಯೆಹೋವ ದೇವರಿಗೆ ಆರಾಧನೆ ಸಲ್ಲಿಸಿದರು. ಆದರೂ ತಮ್ಮಲ್ಲಿರುವ ಪೂಜಾಸ್ಥಳಗಳ ಯಾಜಕರನ್ನು ನೇಮಿಸಿಕೊಂಡರು. ಇವರು ಪೂಜಾಸ್ಥಳಗಳ ಮೇಲಿರುವ ಮಂದಿರಗಳಲ್ಲಿ ಅವರಿಗೋಸ್ಕರ ಬಲಿಗಳನ್ನು ಅರ್ಪಿಸುತ್ತಾ ಇದ್ದರು.
2 ಅರಸುಗಳು 17 : 33 (OCVKN)
ಅವರು ಯೆಹೋವ ದೇವರಿಗೆ ಆರಾಧನೆ ಮಾಡಿದರು. ಆದರೂ ಅವರು ಬಿಟ್ಟುಬಂದ ದೇಶಗಳ ಪದ್ಧತಿಯ ಪ್ರಕಾರ ತಮ್ಮ ಕುಲದೇವತೆಗಳನ್ನು ಸಹ ಸೇವಿಸಿದರು.
2 ಅರಸುಗಳು 17 : 34 (OCVKN)
ಈ ದಿವಸದವರೆಗೂ ಅವರು ತಮ್ಮ ಪೂರ್ವದ ಪದ್ಧತಿಯ ಪ್ರಕಾರ ಮಾಡುತ್ತಾರೆ. ಅವರು ಯೆಹೋವ ದೇವರಿಗೆ ಭಯಪಡದೆ, ತಮ್ಮ ಕಟ್ಟಳೆಗಳ ಪ್ರಕಾರವಾಗಿಯೂ, ತಮ್ಮ ನೀತಿಗಳ ಪ್ರಕಾರವಾಗಿಯೂ, ನಿಯಮದ ಪ್ರಕಾರವಾಗಿಯೂ ಯೆಹೋವ ದೇವರು ಇಸ್ರಾಯೇಲೆಂದು ಹೆಸರಿಟ್ಟ ಯಾಕೋಬನ ಮಕ್ಕಳಿಗೆ ಆಜ್ಞಾಪಿಸಿದ ಆಜ್ಞೆಯ ಪ್ರಕಾರವಾಗಿಯೂ ಮಾಡದೆ ಇದ್ದಾರೆ.
2 ಅರಸುಗಳು 17 : 35 (OCVKN)
ಯೆಹೋವ ದೇವರು ಅವರ ಸಂಗಡ ಒಡಂಬಡಿಕೆ ಮಾಡಿ ಅವರಿಗೆ ಆಜ್ಞಾಪಿಸಿ, “ನೀವು ಇತರ ದೇವರುಗಳಿಗೆ ಭಯಪಡದೆ ಅವುಗಳಿಗೆ ಅಡ್ಡಬೀಳದೆ, ಅವುಗಳನ್ನು ಸೇವಿಸದೆ, ಅವುಗಳಿಗೆ ಬಲಿಯನ್ನು ಅರ್ಪಿಸದೆ ಇರಬೇಕು.
2 ಅರಸುಗಳು 17 : 36 (OCVKN)
ಆದರೆ ಮಹಾಶಕ್ತಿಯಿಂದಲೂ, ಚಾಚಿದ ಭುಜಪರಾಕ್ರಮದಿಂದಲೂ ಈಜಿಪ್ಟ್ ದೇಶದಿಂದ ನಿಮ್ಮನ್ನು ಬರಮಾಡಿದ ಯೆಹೋವ ದೇವರಿಗೆ ನೀವು ಭಯಪಟ್ಟು, ಅವರೊಬ್ಬರಿಗೇ ಅಡ್ಡಬಿದ್ದು, ಬಲಿ ಅರ್ಪಿಸಿರಿ.
2 ಅರಸುಗಳು 17 : 37 (OCVKN)
ಇದಲ್ಲದೆ ದೇವರು ನಿಮಗೆ ಬರೆದುಕೊಟ್ಟ ಕಟ್ಟಳೆಗಳನ್ನೂ, ನೀತಿಗಳನ್ನೂ, ನಿಯಮವನ್ನೂ, ಆಜ್ಞೆಯನ್ನೂ ನೀವು ನಿರಂತರವಾಗಿ ಕೈಗೊಳ್ಳಲು ಎಚ್ಚರಿಕೆಯಾಗಿರಬೇಕು. ಇತರ ದೇವರುಗಳಿಗೆ ಭಯಪಡಬೇಡಿರಿ.
2 ಅರಸುಗಳು 17 : 38 (OCVKN)
ನಾನು ನಿಮ್ಮ ಸಂಗಡ ಮಾಡಿದ ಒಡಂಬಡಿಕೆಯನ್ನು ನೀವು ಮರೆಯದೆ, ಇತರ ದೇವರುಗಳಿಗೆ ಭಯಪಡದೆ,
2 ಅರಸುಗಳು 17 : 39 (OCVKN)
ನಿಮ್ಮ ದೇವರಾಗಿರುವ ಯೆಹೋವ ದೇವರಿಗೆ ಭಯಪಡಿರಿ. ಆಗ ಅವರು ನಿಮ್ಮನ್ನು ನಿಮ್ಮ ಶತ್ರುಗಳ ಕೈಯೊಳಗಿಂದ ವಿಮೋಚನೆ ಮಾಡುವರು,” ಎಂದು ಹೇಳಿದ್ದರು.
2 ಅರಸುಗಳು 17 : 40 (OCVKN)
ಆದರೆ ಜನರು ಕೇಳದೆ ತಮ್ಮ ಪೂರ್ವದ ಪದ್ಧತಿಯ ಹಾಗೆ ಮಾಡಿದರು.
2 ಅರಸುಗಳು 17 : 41 (OCVKN)
ಇವರು ಯೆಹೋವ ದೇವರಿಗೆ ಇಂದಿನವರೆಗೂ ಭಯಪಡದೆ, ತಮ್ಮ ಕೆತ್ತಿದ ವಿಗ್ರಹಗಳನ್ನು ಸೇವಿಸಿದರು. ಇವರ ಪಿತೃಗಳು ಮಾಡಿದ ಹಾಗೆ, ಇವರೂ, ಇವರ ಮಕ್ಕಳೂ, ಇವರ ಮೊಮ್ಮಕ್ಕಳೂ ಮಾಡುತ್ತಿದ್ದಾರೆ.
❮
❯