2 ಕೊರಿಂಥದವರಿಗೆ 12 : 1 (OCVKN)
ಪೌಲನ ದರ್ಶನ ಮತ್ತು ಅವನಿಗೆ ನಾಟಿದ್ದ ಮುಳ್ಳು ನನ್ನ ಹೊಗಳಿಕೆಯಲ್ಲಿ ಪ್ರಯೋಜನವಿಲ್ಲದಿದ್ದರೂ ಅದು ಅವಶ್ಯವಾಗಿದೆ. ನಾನು ಈಗ ಕರ್ತ ಯೇಸುವಿನಿಂದ ಹೊಂದಿದ ದರ್ಶನಗಳನ್ನು ಮತ್ತು ಪ್ರಕಟನೆಗಳನ್ನು ಕುರಿತು ಹೇಳುತ್ತೇನೆ.
2 ಕೊರಿಂಥದವರಿಗೆ 12 : 2 (OCVKN)
ಕ್ರಿಸ್ತ ಯೇಸುವಿನಲ್ಲಿ ಒಬ್ಬನನ್ನು ನಾನು ಬಲ್ಲೆನು. ಹದಿನಾಲ್ಕು ವರ್ಷಗಳ ಹಿಂದೆ ನಾನು ಮೂರನೆಯ ಸ್ವರ್ಗಕ್ಕೆ ಒಯ್ಯಲಾದೆನು. ನಾನು ದೇಹ ಸಹಿತವಾಗಿ ಹೋದೆನೋ, ದೇಹ ರಹಿತನಾಗಿ ಹೋದೆನೋ ನನಗೆ ಗೊತ್ತಿಲ್ಲ ದೇವರಿಗೇ ಗೊತ್ತು.
2 ಕೊರಿಂಥದವರಿಗೆ 12 : 3 (OCVKN)
ನನ್ನ ಅನುಭವ ದೇಹಸಹಿತನಾಗಿಯೋ, ದೇಹರಹಿತನಾಗಿಯೋ ಇದು ನನಗೆ ಗೊತ್ತಿಲ್ಲ. ದೇವರಿಗೇ ಗೊತ್ತು.
2 ಕೊರಿಂಥದವರಿಗೆ 12 : 4 (OCVKN)
ನಾನು ಪರದೈಸಕ್ಕೆ ಒಯ್ಯಲಾದೆನು. ಅಲ್ಲಿ ನಾನು ವಿವರಿಸಲು ಅಸಾಧ್ಯವಾದದ್ದೂ ವರ್ಣಿಸಲು ಅಪ್ಪಣೆಯಿಲ್ಲದ್ದೂ ಆಗಿರುವ ವಿಷಯಗಳನ್ನು ಕೇಳಿದೆನು.
2 ಕೊರಿಂಥದವರಿಗೆ 12 : 5 (OCVKN)
ಈ ಅನುಭವಗಳನ್ನು ಕುರಿತು ನಾನು ಹೆಚ್ಚಳ ಪಡುವೆನು. ಆದರೆ ನನ್ನ ವಿಷಯದಲ್ಲಿ ಅಲ್ಲ; ನನ್ನ ಬಲಹೀನತೆ ವಿಷಯದಲ್ಲಿ ಮಾತ್ರ ನಾನು ಹೊಗಳಿಕೊಳ್ಳುವೆನು.
2 ಕೊರಿಂಥದವರಿಗೆ 12 : 6 (OCVKN)
ಒಂದು ವೇಳೆ ಹೊಗಳಿಕೊಳ್ಳಲು ಬಯಸಿದರೂ ನಾನು ಬುದ್ಧಿಹೀನನಾಗುವುದಿಲ್ಲ. ಏಕೆಂದರೆ, ನಾನು ಸತ್ಯವನ್ನೇ ಹೇಳುತ್ತಿದ್ದೇನೆ. ಆದರೆ ಯಾರೂ ನಾನು ಮಾಡುವುದಕ್ಕಿಂತಲೂ ನನ್ನಿಂದ ಕೇಳುವುದಕ್ಕಿಂತಲೂ ಹೆಚ್ಚಾಗಿ ನನ್ನ ಬಗ್ಗೆ ಎಣಿಸಬಾರದು.
2 ಕೊರಿಂಥದವರಿಗೆ 12 : 7 (OCVKN)
ಬಹು ವಿಶೇಷವಾದ ಪ್ರಕಟನೆಗಳ ಬಗ್ಗೆ ನಾನು ಗರ್ವಪಡದಂತೆ, ನನ್ನ ಶರೀರದಲ್ಲಿ ಒಂದು ಮುಳ್ಳನ್ನು ಕೊಡಲಾಗಿತ್ತು. ಅದು ನನ್ನನ್ನು ಕಾಡಿಸಲು ಕಳುಹಿಸಲಾದ ಸೈತಾನನ ದೂತನೇ ಆಗಿತ್ತು.
2 ಕೊರಿಂಥದವರಿಗೆ 12 : 8 (OCVKN)
ಅದು ನನ್ನಿಂದ ತಗೆದುಹಾಕಬೇಕೆಂದು ನಾನು ಮೂರು ಸಾರಿ ಕರ್ತ ಯೇಸುವನ್ನು ಬೇಡಿಕೊಂಡೆನು.
2 ಕೊರಿಂಥದವರಿಗೆ 12 : 9 (OCVKN)
ಅದಕ್ಕೆ ಕರ್ತ ಯೇಸು, “ನನ್ನ ಕೃಪೆಯೇ ನಿನಗೆ ಸಾಕು. ನನ್ನ ಶಕ್ತಿಯು ಬಲಹೀನತೆಯಲ್ಲಿಯೇ ಪರಿಪೂರ್ಣವಾಗುವುದು,” ಎಂದು ನನಗೆ ಹೇಳಿದರು. ಆದ್ದರಿಂದ ಕ್ರಿಸ್ತ ಯೇಸುವಿನ ಶಕ್ತಿಯು ನನ್ನ ಮೇಲೆ ನೆಲೆಯಾಗಿರಬೇಕೆಂದು, ಬಹಳ ಆನಂದದಿಂದ ನನ್ನ ಬಲಹೀನತೆಯಲ್ಲಿಯೇ ಹೆಚ್ಚಳ ಪಡುವೆನು.
2 ಕೊರಿಂಥದವರಿಗೆ 12 : 10 (OCVKN)
ಹೀಗಿರುವುದರಿಂದ ಕ್ರಿಸ್ತ ಯೇಸುವಿನ ನಿಮಿತ್ತ ನನಗೆ ಬಲಹೀನತೆಯೂ ತಿರಸ್ಕಾರವೂ ಕೊರತೆಯೂ ಹಿಂಸೆಯೂ ಇಕ್ಕಟ್ಟೂ ಸಂಭವಿಸಿದಾಗ ಹರ್ಷಿಸುತ್ತೇನೆ. ಏಕೆಂದರೆ, ಬಲಹೀನತೆಯಲ್ಲಿಯೇ ನಾನು ಶಕ್ತನಾಗಿರುವೆನು.
2 ಕೊರಿಂಥದವರಿಗೆ 12 : 11 (OCVKN)
ಕೊರಿಂಥದವರನ್ನು ಕುರಿತು ಪೌಲನ ಚಿಂತೆ ನೀವೇ ನನ್ನನ್ನು ಹೊಗಳಿಕೊಳ್ಳುವಂತೆ ಮಾಡಿ, ನಾನು ಬುದ್ಧಿಹೀನನಾಗಿ ನಡೆಯಲು ಒತ್ತಾಯಿಸಿದ್ದೀರಿ. ನನಗೆ ನಿಮ್ಮಿಂದಲೇ ಹೊಗಳಿಕೆಯು ಬೇಕಾಗಿತ್ತು. ಏಕೆಂದರೆ ನಾನು ಕೇವಲ ಅತ್ಯಲ್ಪನಾದರೂ “ಅತಿಶ್ರೇಷ್ಠರಾದ ಅಪೊಸ್ತಲರಿಗಿಂತ” ಕಡಿಮೆ ಅಲ್ಲ.
2 ಕೊರಿಂಥದವರಿಗೆ 12 : 12 (OCVKN)
ನಾನು ಸೂಚಕಕಾರ್ಯಗಳನ್ನೂ, ಅದ್ಭುತಗಳನ್ನೂ, ಮಹತ್ಕಾರ್ಯಗಳನ್ನೂ ನಡೆಸುವುದರಲ್ಲಿ ಸರ್ವ ಸಹನೆಯಲ್ಲಿಯೂ ಸತ್ಯ ಅಪೊಸ್ತಲನಿಗೆ ಇರತಕ್ಕ ಲಕ್ಷಣಗಳನ್ನು ನಿಮ್ಮ ನಡುವೆ ತೋರಿಸಿದೆನು.
2 ಕೊರಿಂಥದವರಿಗೆ 12 : 13 (OCVKN)
ನಾನು ನಿಮಗೆ ಎಂದೂ ಭಾರವಾಗಿರಲಿಲ್ಲ ಎಂಬ ಒಂದೇ ವಿಷಯದಲ್ಲಿ ಹೊರತು, ಬೇರೆ ಯಾವ ವಿಷಯದಲ್ಲಿಯೂ ನಿಮ್ಮನ್ನು ಉಳಿದ ಸಭೆಗಳವರಿಗಿಂತ ಕಡಿಮೆ ಮಾಡಲಿಲ್ಲ. ಈ ನನ್ನ ತಪ್ಪನ್ನು ಕ್ಷಮಿಸಿರಿ.
2 ಕೊರಿಂಥದವರಿಗೆ 12 : 14 (OCVKN)
ಇಗೋ, ನಾನು ನಿಮ್ಮ ಬಳಿಗೆ ಬರುವುದಕ್ಕೆ ಸಿದ್ದನಾಗಿರುವುದು ಇದು ಮೂರನೆಯ ಸಾರಿ. ನಾನು ಬಂದಾಗ ನಿಮಗೆ ಭಾರವಾಗಲು ಬಿಡುವುದಿಲ್ಲ. ನಾನು ನಿಮ್ಮ ಸೊತ್ತನ್ನು ಆಶಿಸುವುದಿಲ್ಲ. ನಿಮ್ಮನ್ನೇ ಆಶಿಸುತ್ತೇನೆ. ಮಕ್ಕಳು ತಂದೆತಾಯಿಗಳಿಗೋಸ್ಕರ ನಿಕ್ಷೇಪವನ್ನು ಕೂಡಿಸಿಡುವುದಿಲ್ಲ. ತಂದೆತಾಯಿಗಳು ಮಕ್ಕಳಿಗೋಸ್ಕರ ಕೂಡಿಸಿಡುತ್ತಾರಷ್ಟೇ.
2 ಕೊರಿಂಥದವರಿಗೆ 12 : 15 (OCVKN)
ನಾನಂತೂ ನನಗಿರುವುದೆಲ್ಲವನ್ನೂ ನಿಮ್ಮ ಆತ್ಮಗಳಿಗೋಸ್ಕರ ಬಹು ಸಂತೋಷದಿಂದ ವೆಚ್ಚಮಾಡುತ್ತೇನೆ. ನನ್ನನ್ನು ಕೂಡ ನಿಮಗೋಸ್ಕರ ವೆಚ್ಚಮಾಡಲು ಸಿದ್ಧನಾಗಿದ್ದೇನೆ. ನಾನು ನಿಮ್ಮನ್ನು ಹೆಚ್ಚಾಗಿ ಪ್ರೀತಿಸಿದರೆ, ನೀವು ನನ್ನನ್ನು ಕಡಿಮೆಯಾಗಿ ಪ್ರೀತಿಸುವಿರೋ?
2 ಕೊರಿಂಥದವರಿಗೆ 12 : 16 (OCVKN)
ಏನೇ ಇದ್ದರೂ, ನಾನು ನಿಮಗೆ ಭಾರವಾಗಿರಲಿಲ್ಲ; ನಾನು ಯುಕ್ತಿಯುಳ್ಳವನಾಗಿ ನಿಮ್ಮನ್ನು ಉಪಾಯದಿಂದ ಸುಲಿದುಕೊಂಡೆನೋ?
2 ಕೊರಿಂಥದವರಿಗೆ 12 : 17 (OCVKN)
ನಾನು ನಿಮ್ಮ ಬಳಿಗೆ ಕಳುಹಿಸಿದವರಲ್ಲಿ ಯಾರ ಮೂಲಕವಾಗಿಯಾಗಲಿ ನಿಮ್ಮನ್ನು ವಂಚಿಸಿ ಏನಾದರೂ ತೆಗೆದುಕೊಂಡೆನೋ?
2 ಕೊರಿಂಥದವರಿಗೆ 12 : 18 (OCVKN)
ನಿಮ್ಮ ಬಳಿಗೆ ಹೋಗುವುದಕ್ಕೆ ನಾನು ತೀತನನ್ನು ಒತ್ತಾಯಪಡಿಸಿ, ಅವನ ಜೊತೆಯಲ್ಲಿ ಆ ಸಹೋದರನನ್ನು ಕಳುಹಿಸಿಕೊಟ್ಟೆನು. ತೀತನು ನಿಮ್ಮನ್ನು ವಂಚಿಸಿ ಏನಾದರೂ ತೆಗೆದುಕೊಂಡನೋ? ನಾವಿಬ್ಬರೂ ಒಂದೇ ಆತ್ಮದಲ್ಲಿ ನಡೆದು ಒಂದೇ ಹೆಜ್ಜೆ ಜಾಡಿನಲ್ಲಿ ನಡೆಯಲಿಲ್ಲವೋ?
2 ಕೊರಿಂಥದವರಿಗೆ 12 : 19 (OCVKN)
ನಾವು ಇಷ್ಟು ಹೊತ್ತು ನಿಮ್ಮ ಮುಂದೆ ಪ್ರತಿವಾದ ಮಾಡುತ್ತಿದ್ದೇವೆಂದು ನೆನಸುತ್ತೀರೋ? ಹಾಗೆ ಅಲ್ಲ; ಪ್ರಿಯರೇ, ನಾವು ಮಾಡುವುದೆಲ್ಲವೂ ನಿಮ್ಮ ಭಕ್ತಿವೃದ್ಧಿಗಾಗಿ ದೇವರ ದೃಷ್ಟಿಯಲ್ಲಿ ಕ್ರಿಸ್ತ ಯೇಸುವಿನಲ್ಲಿ ಇರುವವರಂತೆ ಮಾತನಾಡುವವರಾಗಿದ್ದೇವೆ.
2 ಕೊರಿಂಥದವರಿಗೆ 12 : 20 (OCVKN)
ನಾನು ಬಂದಾಗ ಒಂದು ವೇಳೆ ನೀವು ನನ್ನ ಮನಸ್ಸಿನ ತೋರಿಕೆಯ ಪ್ರಕಾರ ಇರುವುದಿಲ್ಲವೋ ಏನೋ? ನಾನು ನಿಮ್ಮ ಇಷ್ಟದ ಪ್ರಕಾರ ತೋರದೆ ಇರಬಹುದು. ಒಂದು ವೇಳೆ ನಿಮ್ಮಲ್ಲಿ ಜಗಳ, ಹೊಟ್ಟೆಕಿಚ್ಚು, ಕೋಪ, ಭೇದಗಳು, ಚಾಡಿ ಹೇಳುವುದು, ಹರಟೆ ಹೊಡೆಯುವುದು, ಉಬ್ಬಿಕೊಳ್ಳುವುದು, ಕಲಹ ಎಬ್ಬಿಸುವುದು, ಇವುಗಳು ಕಾಣಬರುವುದೋ ಎಂಬ ಭಯ ನನಗೆ ಉಂಟು.
2 ಕೊರಿಂಥದವರಿಗೆ 12 : 21 (OCVKN)
ನಾನು ತಿರುಗಿ ಬಂದಾಗ, ಹಿಂದೆ ನಿಮ್ಮಲ್ಲಿ ಅಶುದ್ಧತ್ವ, ಲೈಂಗಿಕ ಅನೈತಿಕತೆ, ಪೋಕರಿತನ ಮುಂತಾದ ಪಾಪಗಳನ್ನು ಮಾಡಿ ಪಶ್ಚಾತ್ತಾಪ ಪಡದಿರುವ ಅನೇಕರ ವಿಷಯವಾಗಿ ನನ್ನ ದೇವರು ನಿಮ್ಮ ವಿಷಯದಲ್ಲಿ ನನ್ನನ್ನು ತಗ್ಗಿಸಿಬಿಡುವನು ಎಂದು ದುಃಖಪಡಬೇಕಾಗಿರುವುದರಿಂದ ನಾನು ಭಯಪಡುತ್ತೇನೆ.
❮
❯
1
2
3
4
5
6
7
8
9
10
11
12
13
14
15
16
17
18
19
20
21