2 ಕೊರಿಂಥದವರಿಗೆ 11 : 1 (OCVKN)
ಪೌಲನೂ, ಸುಳ್ಳು ಅಪೊಸ್ತಲರೂ ನನ್ನ ಬುದ್ಧಿಹೀನತೆಯನ್ನು ನೀವು ಇನ್ನೂ ಸ್ವಲ್ಪ ಸಹಿಸಿಕೊಳ್ಳಬೇಕೆಂದು ನಾನು ಅಪೇಕ್ಷಿಸುತ್ತೇನೆ. ಈಗಾಗಲೇ ನೀವು ಸಹಿಸಿಕೊಂಡಿದ್ದೀರಿ.
2 ಕೊರಿಂಥದವರಿಗೆ 11 : 2 (OCVKN)
ದೇವರು ನಿಮ್ಮ ವಿಷಯದಲ್ಲಿ ಅಸೂಯೆಪಡುವಂತೆ, ನಾನು ನಿಮ್ಮ ವಿಷಯದಲ್ಲಿ ಅಸೂಯೆಪಡುತ್ತಿದ್ದೇನೆ. ಹೇಗೆಂದರೆ, ನಿಮ್ಮನ್ನು ಶುದ್ಧ ಕನ್ನಿಕೆಯಾಗಿ ಕ್ರಿಸ್ತ ಯೇಸು ಎಂಬ ಒಬ್ಬರೇ ಪುರುಷನಿಗೆ ಒಪ್ಪಿಸಬೇಕೆಂದು ಆತನೊಂದಿಗೆ ನಾನು ನಿಶ್ಚಯ ಮಾಡಿದ್ದೆನಲ್ಲಾ.
2 ಕೊರಿಂಥದವರಿಗೆ 11 : 3 (OCVKN)
ಆದರೆ ಹವ್ವಳು ಸರ್ಪದ ಕುಯುಕ್ತಿಗೆ ಸಿಕ್ಕಿಬಿದ್ದು, ಹೇಗೆ ಮೋಸ ಹೋದಳೋ, ಹಾಗೆಯೇ ನಿಮ್ಮ ಮನಸ್ಸು ಕ್ರಿಸ್ತ ಯೇಸುವಿನ ಮೇಲಿರಬೇಕಾದ ಯಥಾರ್ಥತೆಯನ್ನೂ ಶುದ್ಧ ಭಕ್ತಿಯನ್ನೂ ಬಿಟ್ಟುಹೋದೀತೆಂಬ ಭಯ ನನಗುಂಟು.
2 ಕೊರಿಂಥದವರಿಗೆ 11 : 4 (OCVKN)
ಏಕೆಂದರೆ ಯಾವನಾದರೂ ನಿಮ್ಮ ಬಳಿಗೆ ಬಂದು ನಾನು ನಿಮಗೆ ಬೋಧಿಸದೆ ಇರುವ ಬೇರೊಬ್ಬ ಯೇಸುವಿನ ವಿಷಯ ಬೋಧಿಸಿದರೆ, ನೀವು ಸ್ವೀಕರಿಸುವಿರಿ. ನೀವು ಹೊಂದಿದ ಆತ್ಮನ ಬದಲಿಗೆ ಬೇರೊಂದು ಆತ್ಮವನ್ನು ಪಡೆಯುವಂತೆ ಮಾಡಿದರೆ, ನೀವು ಸ್ವಾಗತಿಸುತ್ತೀರಿ. ನೀವು ಕೇಳಿರುವ ಸುವಾರ್ತೆಯ ಬದಲು ಬೇರೊಂದು ಸುವಾರ್ತೆಯನ್ನು ಯಾರಾದರೂ ಬೋಧಿಸಿದರೆ, ನೀವು ಬೇಗನೇ ಒಪ್ಪಿಕೊಳ್ಳುತ್ತೀರಿ.
2 ಕೊರಿಂಥದವರಿಗೆ 11 : 5 (OCVKN)
“ಅತ್ಯಂತ ಮಹಾ ಅಪೊಸ್ತಲರು” ಎಂದೆನಿಸಿದ ಇತರ ಅಪೊಸ್ತಲರಿಗಿಂತಲೂ ನಾನು ಕಡಿಮೆಯಾದವನಲ್ಲ ಎಂದು ಭಾವಿಸುತ್ತೇನೆ.
2 ಕೊರಿಂಥದವರಿಗೆ 11 : 6 (OCVKN)
ನನ್ನ ಮಾತಿನಲ್ಲಿ ಚಾತುರ್ಯ ಇಲ್ಲದಿದ್ದರೂ ನನಗೆ ತಿಳುವಳಿಕೆಯಿದೆ. ಇದನ್ನು ನಾನು ಪ್ರತಿಯೊಂದು ಸಂದರ್ಭಗಳಲ್ಲಿಯೂ ಬಹಳ ಸ್ಪಷ್ಟಪಡಿಸಿರುತ್ತೇನೆ.
2 ಕೊರಿಂಥದವರಿಗೆ 11 : 7 (OCVKN)
ಪ್ರತಿಫಲವನ್ನು ಎದುರುನೋಡದೇ, ದೇವರ ಸುವಾರ್ತೆಯನ್ನು ನೀವು ಉನ್ನತರಾಗಬೇಕೆಂದು, ನನ್ನನ್ನು ನಾನೇ ತಗ್ಗಿಸಿಕೊಂಡು ಉಚಿತವಾಗಿ ಸಾರಿದ್ದು ನನ್ನ ಪಾಪವೋ?
2 ಕೊರಿಂಥದವರಿಗೆ 11 : 8 (OCVKN)
ನಿಮ್ಮ ಸೇವೆಯನ್ನು ಮಾಡುವುದಕ್ಕಾಗಿ ನಾನು ಬೇರೆ ಸಭೆಗಳಿಂದ ಸಹಾಯವನ್ನು ಹೊಂದಿ, ಅವರಿಂದ ವಸೂಲಿ ಮಾಡುತ್ತಿದ್ದೆ.
2 ಕೊರಿಂಥದವರಿಗೆ 11 : 9 (OCVKN)
ನಾನು ನಿಮ್ಮಲ್ಲಿದ್ದಾಗ, ನನಗೆ ಕೊರತೆಯಾದಾಗ, ನಾನು ನಿಮ್ಮಲ್ಲಿ ಯಾರಿಗೂ ಭಾರವಾಗಲಿಲ್ಲ. ಏಕೆಂದರೆ, ಮಕೆದೋನ್ಯದಿಂದ ಬಂದಿದ್ದ ಸಹೋದರರು ನನ್ನ ಅವಶ್ಯಕತೆಯನ್ನು ಪೂರೈಸಿದರು. ಹೀಗೆ ನಾನು ನಿಮ್ಮಲ್ಲಿ ಯಾರಿಗೂ ಭಾರವಾಗಲಿಲ್ಲ. ಇನ್ನು ಮುಂದೆಯೂ ಭಾರವಾಗಿರುವುದಿಲ್ಲ.
2 ಕೊರಿಂಥದವರಿಗೆ 11 : 10 (OCVKN)
ಅಖಾಯ ಪ್ರಾಂತದಲ್ಲಿರುವ ಯಾರೂ ಈ ನನ್ನ ಹೊಗಳಿಕೆಯನ್ನು ನಿಲ್ಲಿಸಲಾರರು ಎಂದು ಕ್ರಿಸ್ತ ಯೇಸುವಿನ ಸತ್ಯ ನನ್ನಲ್ಲಿ ಇರುವ ನಿಶ್ಚಯದಿಂದ ಹೇಳುತ್ತೇನೆ.
2 ಕೊರಿಂಥದವರಿಗೆ 11 : 11 (OCVKN)
ಏಕೆ? ನಾನು ನಿಮ್ಮನ್ನು ಪ್ರೀತಿ ಇಲ್ಲದ್ದರಿಂದಲೋ? ನಾನು ಪ್ರೀತಿಸುತ್ತೇನೆಂದು ದೇವರಿಗೆ ಗೊತ್ತುಂಟು!
2 ಕೊರಿಂಥದವರಿಗೆ 11 : 12 (OCVKN)
ತಾವು ಮಾಡುವ ಕಾರ್ಯಗಳ ಬಗ್ಗೆ ನಮ್ಮೊಂದಿಗೆ ಸರಿಸಮಾನವೆಂದು ಹೊಗಳಿಕೊಳ್ಳಲು ಅವಕಾಶವನ್ನು ಹುಡುಕುವವರಿಗೆ, ಯಾವ ಆಸ್ಪದವೂ ಸಿಗದಂತೆ ನಾನು ಮಾಡುತ್ತಿರುವುದನ್ನು ನಿಲ್ಲಿಸದೆ, ಇನ್ನು ಮುಂದೆಯೂ ಮಾಡುತ್ತಿರುವೆನು.
2 ಕೊರಿಂಥದವರಿಗೆ 11 : 13 (OCVKN)
ಅಂಥಾ ಜನರು ಸುಳ್ಳು ಅಪೊಸ್ತಲರು, ವಂಚಿಸುವ ವರ್ತಕರು, ಕ್ರಿಸ್ತ ಯೇಸುವಿನ ಅಪೊಸ್ತಲರೆಂದು ವೇಷ ಹಾಕಿಕೊಂಡವರೂ ಆಗಿದ್ದಾರೆ.
2 ಕೊರಿಂಥದವರಿಗೆ 11 : 14 (OCVKN)
ಇದರಲ್ಲಿ ಆಶ್ಚರ್ಯವೇನೂ ಇಲ್ಲ, ಸೈತಾನನೂ ಬೆಳಕಿನ ದೇವದೂತನಂತೆ ಕಾಣಿಸಿಕೊಳ್ಳಬಲ್ಲನು.
2 ಕೊರಿಂಥದವರಿಗೆ 11 : 15 (OCVKN)
ಆದ್ದರಿಂದ ಸೈತಾನನ ಸೇವಕರೂ ನೀತಿಯ ಸೇವಕರಂತೆ ಕಾಣಿಸಿಕೊಳ್ಳುವುದಕ್ಕೆ ತಮ್ಮನ್ನು ಮಾರ್ಪಡಿಸಿಕೊಳ್ಳುವುದು ಆಶ್ಚರ್ಯವೇನೂ ಅಲ್ಲ. ಅವರ ಕೃತ್ಯಗಳಿಗೆ ತಕ್ಕಂತೆ ಅವರಿಗೆ ಅಂತ್ಯವೂ ಇರುವುದು.
2 ಕೊರಿಂಥದವರಿಗೆ 11 : 16 (OCVKN)
ತನ್ನ ಶ್ರಮೆಗಳನ್ನು ಕುರಿತು ಪೌಲನ ಹೆಚ್ಚಳ ನಾನು ಬುದ್ಧಿಹೀನನೆಂದು ಯಾರೂ ನೆನಸಬಾರದೆಂದು ನಾನು ತಿರುಗಿ ಹೇಳುತ್ತೇನೆ. ಒಂದು ವೇಳೆ ಹಾಗೆ ನೆನಸಿದರೆ, ನೀವು ಬುದ್ಧಿಹೀನರನ್ನು ಸ್ವೀಕರಿಸುವಂತೆಯೇ, ನನ್ನನ್ನೂ ಸ್ವೀಕರಿಸಿರಿ. ಆಗ ನನ್ನನ್ನು ನಾನೇ ಪ್ರಶಂಶಿಸಿಕೊಳ್ಳಲು ನನಗೆ ಆಸ್ಪದವಾಗುವುದು.
2 ಕೊರಿಂಥದವರಿಗೆ 11 : 17 (OCVKN)
ಈ ಹೆಚ್ಚಳ ಪಡುವ ವಿಷಯದಲ್ಲಿ ನಾನು ಕರ್ತ ಯೇಸು ಬಯಸಿದಂತೆ ಮಾತನಾಡದೆ, ಬುದ್ಧಿಹೀನನಂತೆ ಮಾತನಾಡುತ್ತಿದ್ದೇನೆ.
2 ಕೊರಿಂಥದವರಿಗೆ 11 : 18 (OCVKN)
ಅನೇಕರು ಪ್ರಾಪಂಚಿಕ ವಿಷಯಗಳಲ್ಲಿ ತಮ್ಮನ್ನು ಹೊಗಳಿಕೊಳ್ಳುವಂತೆ ನಾನೂ ಹೊಗಳಿಕೊಳ್ಳುವೆನು.
2 ಕೊರಿಂಥದವರಿಗೆ 11 : 19 (OCVKN)
ಬುದ್ಧಿಹೀನರನ್ನು ಹರ್ಷದಿಂದ ಸಹಿಸಿಕೊಳ್ಳುತ್ತಿರುವ ಬುದ್ಧಿವಂತರು ನೀವು!
2 ಕೊರಿಂಥದವರಿಗೆ 11 : 20 (OCVKN)
ನಿಜವಾಗಿ ಹೇಳಬೇಕಾದರೆ, ಯಾರಾದರೂ ನಿಮ್ಮನ್ನು ಗುಲಾಮರನ್ನಾಗಿ ಮಾಡಿಕೊಂಡರೂ, ನಿಮ್ಮನ್ನು ಮರುಳುಗೊಳಿಸಿದರೂ, ತಮ್ಮ ಸ್ವಂತ ಪ್ರಯೋಜನಕ್ಕಾಗಿ ಬಳಸಿಕೊಂಡರೂ, ನಿಮ್ಮ ಕೆನ್ನೆಗೆ ಬಾರಿಸಿದರೂ, ನೀವು ಸಹಿಸಿಕೊಳ್ಳುತ್ತೀರಲ್ಲಾ.
2 ಕೊರಿಂಥದವರಿಗೆ 11 : 21 (OCVKN)
ಹೀಗೆಲ್ಲಾ ಮಾಡಲು ಬಹಳ ಬಲಹೀನರಾದ ನಮಗೆ ಸಾಧ್ಯವಿಲ್ಲ ಎಂದು ಒಪ್ಪಿಕೊಳ್ಳಲು ನನಗೆ ನಾಚಿಕೆಯಾಗುತ್ತದೆ! ಯಾವುದನ್ನು ಇತರರು ಹೊಗಳಿಕೊಳ್ಳುವುದಕ್ಕೆ ಧೈರ್ಯ ಮಾಡುತ್ತಾರೋ, ಅದನ್ನು ನಾನು ಬುದ್ಧಿಹೀನನಂತೆ ಹೊಗಳುವ ಧೈರ್ಯ ಮಾಡುತ್ತೇನೆ.
2 ಕೊರಿಂಥದವರಿಗೆ 11 : 22 (OCVKN)
ಅವರು ಹೀಬ್ರಿಯರೋ? ನಾನೂ ಹೀಬ್ರಿಯನೇ. ಅವರು ಇಸ್ರಾಯೇಲರೋ? ನಾನೂ ಇಸ್ರಾಯೇಲನೇ. ಅವರು ಅಬ್ರಹಾಮನ ಸಂತತಿಯವರೋ? ನಾನೂ ಕೂಡಾ ಅಬ್ರಹಾಮನ ಸಂತತಿಯೇ.
2 ಕೊರಿಂಥದವರಿಗೆ 11 : 23 (OCVKN)
ಅವರು ಕ್ರಿಸ್ತ ಯೇಸುವಿನ ಸೇವಕರೋ? ಅವರಿಗಿಂತ ಹೆಚ್ಚಾಗಿ ನಾನು ಸೇವೆ ಮಾಡಿದ್ದೇನೆ. ನಾನು ಬುದ್ಧಿಹೀನನಂತೆ ಮಾತನಾಡುತ್ತಿದ್ದೇನೆ. ನಾನು ಅತಿಯಾಗಿ ಪ್ರಯಾಸ ಪಟ್ಟಿರುತ್ತೇನೆ. ಅನೇಕಬಾರಿ ಸೆರೆಮನೆಗೆ ಹಾಕಲಾದೆನು. ಬಹು ಕ್ರೂರವಾದ ರೀತಿಯಲ್ಲಿ ಪೆಟ್ಟುಗಳನ್ನು ತಿಂದೆನು. ಅನೇಕಬಾರಿ ಮರಣವನ್ನು ಎದುರಿಸಿದೆನು.
2 ಕೊರಿಂಥದವರಿಗೆ 11 : 24 (OCVKN)
ಯೆಹೂದ್ಯರ ಕೈಯಿಂದ ಐದು ಬಾರಿ ನಲ್ವತ್ತಕ್ಕೆ ಒಂದು ಕಡಿಮೆ ಛಡಿ ಏಟುಗಳನ್ನು ತಿಂದಿದ್ದೇನೆ.
2 ಕೊರಿಂಥದವರಿಗೆ 11 : 25 (OCVKN)
ಮೂರು ಸಾರಿ ದೊಣ್ಣೆಯಿಂದ ಬಡಿಸಿಕೊಂಡಿದ್ದೇನೆ. ಒಂದು ಸಾರಿ ಕಲ್ಲೆಸೆದು ನನ್ನನ್ನು ಕೊಲ್ಲಲು ನೋಡಿದರು. ಮೂರು ಬಾರಿ ನಾನು ಪ್ರಯಾಣಿಸುತ್ತಿದ್ದ ಹಡಗು ಒಡೆದು ನೀರು ಪಾಲಾಯಿತು. ಒಂದು ಇಡೀ ಹಗಲುರಾತ್ರಿ ನಾನು ಸಮುದ್ರದ ಮೇಲೆ ತೇಲಿದೆನು.
2 ಕೊರಿಂಥದವರಿಗೆ 11 : 26 (OCVKN)
ಊರಿಂದೂರಿಗೆ ಪ್ರಯಾಣ ಮಾಡುತ್ತಲೇ ಇದ್ದೆನು, ನದಿಗಳಿಂದ ಅಪಾಯ, ದಾರಿಗಳ್ಳರಿಂದ ಅಪಾಯ, ನನ್ನ ಸ್ವಂತ ಜನರಿಂದ ಅಪಾಯ, ಯೆಹೂದ್ಯರಲ್ಲದವರಿಂದ ಅಪಾಯ, ಪಟ್ಟಣಗಳಲ್ಲಿ ಅಪಾಯ, ಹೊರ ಪ್ರದೇಶಗಳಲ್ಲಿ ಅಪಾಯ, ಸಮುದ್ರದಲ್ಲಿ ಅಪಾಯ ಮತ್ತು ಸುಳ್ಳು ಸಹೋದರರಿಂದ ಅಪಾಯಗಳನ್ನೆಲ್ಲಾ ನಾನು ಎದುರಿಸಿದೆನು.
2 ಕೊರಿಂಥದವರಿಗೆ 11 : 27 (OCVKN)
ನಾನು ಪ್ರಯಾಸಪಟ್ಟು ಮೈಮುರಿದು ಕೆಲಸ ಮಾಡಿದೆನು. ಎಷ್ಟೋ ಬಾರಿ ನಿದ್ರೆಗೆಟ್ಟೆನು. ಹಸಿವೆ ಬಾಯಾರಿಕೆಗಳೇನೆಂಬುದನ್ನು ಅರಿತೆನು. ಊಟವಿಲ್ಲದೆ ಎಷ್ಟೋ ಬಾರಿ ಉಪವಾಸ ಬಿದ್ದೆನು. ಸರಿಯಾದ ಬಟ್ಟೆ ಇಲ್ಲದೆ ಚಳಿಯಲ್ಲಿ ಬಹಳವಾಗಿ ಸಂಕಟಪಟ್ಟೆನು.
2 ಕೊರಿಂಥದವರಿಗೆ 11 : 28 (OCVKN)
ಇಷ್ಟೇ ಅಲ್ಲ, ಎಲ್ಲಾ ಸಭೆಗಳ ಮೇಲಿರುವ ಚಿಂತೆಯು ನನ್ನನ್ನು ದಿನನಿತ್ಯವೂ ಬಾಧಿಸುತ್ತಿದೆ.
2 ಕೊರಿಂಥದವರಿಗೆ 11 : 29 (OCVKN)
ನಿಮ್ಮಲ್ಲಿ ಯಾರಾದರೂ ಬಲಹೀನರಾಗಿದ್ದರೆ, ನಾನೂ ಬಲಹೀನನಾಗಿರುವುದಿಲ್ಲವೋ? ನಿಮ್ಮಲ್ಲಿ ಯಾವನಾದರೂ ಪಾಪದಲ್ಲಿ ಬಿದ್ದುಹೋದರೆ, ನಾನು ನೊಂದುಕೊಳ್ಳುವುದಿಲ್ಲವೋ?
2 ಕೊರಿಂಥದವರಿಗೆ 11 : 30 (OCVKN)
ನನ್ನನ್ನು ಹೊಗಳಿಕೊಳ್ಳಬೇಕಾಗಿದ್ದರೆ, ನಾನು ನನ್ನ ಬಲಹೀನತೆಯಲ್ಲಿ ಹೊಗಳಿಕೊಳ್ಳುವೆನು.
2 ಕೊರಿಂಥದವರಿಗೆ 11 : 31 (OCVKN)
ನಮ್ಮ ಕರ್ತ ಯೇಸುವಿನ ದೇವರೂ ತಂದೆಯೂ ನಾನು ಸುಳ್ಳು ಹೇಳುವುದಿಲ್ಲ ಎಂಬುದನ್ನು ಬಲ್ಲವರಾಗಿದ್ದಾರೆ. ಅವರಿಗೇ ನಿತ್ಯವೂ ಸ್ತುತಿ ಸಲ್ಲಲಿ.
2 ಕೊರಿಂಥದವರಿಗೆ 11 : 32 (OCVKN)
ದಮಸ್ಕದ ಅರಸನಾದ ಅರೇತನ ಆಜ್ಞೆಯ ಪ್ರಕಾರ, ಅಲ್ಲಿಯ ರಾಜ್ಯಪಾಲನು ನನ್ನನ್ನು ಹಿಡಿದು ಬಂಧಿಸಬೇಕೆಂದು ದಮಸ್ಕದ ಪಟ್ಟಣವನ್ನು ಕಾವಲಿರಿಸಿದನು.
2 ಕೊರಿಂಥದವರಿಗೆ 11 : 33 (OCVKN)
ಆದರೆ ಪಟ್ಟಣದ ಕೋಟೆ ಗೋಡೆಯ ಕಿಟಿಕಿಯೊಳಗಿಂದ ಒಂದು ಬುಟ್ಟಿಯ ಮೂಲಕ ಕೆಳಗಿಳಿಸಲಾಗಿ, ಅವನ ಕೈಯೊಳಗಿಂದ ನಾನು ತಪ್ಪಿಸಿಕೊಂಡೆನು.
❮
❯