1 ಥೆಸಲೊನೀಕದವರಿಗೆ 2 : 1 (OCVKN)
ಥೆಸಲೋನಿಕದಲ್ಲಿ ಪೌಲನು ಮಾಡಿದ ಸೇವೆ ಪ್ರಿಯರೇ, ನಾವು ನಿಮ್ಮ ಬಳಿಗೆ ಬಂದದ್ದು ವ್ಯರ್ಥವಾಗಲಿಲ್ಲವೆಂಬುದನ್ನು ನೀವು ತಿಳಿದಿದ್ದೀರಿ.
1 ಥೆಸಲೊನೀಕದವರಿಗೆ 2 : 2 (OCVKN)
ಫಿಲಿಪ್ಪಿ ಪಟ್ಟಣದಲ್ಲಿ ಮುಂಚೆ ನಮಗೆ ಹಿಂಸೆ ಮತ್ತು ಅವಮಾನವು ಸಂಭವಿಸಿದ್ದನ್ನು ನೀವು ಬಲ್ಲಿರಿ. ಹಾಗಿದ್ದರೂ ನಾವು ನಮ್ಮ ದೇವರ ಸಹಾಯದಿಂದ ಧೈರ್ಯಗೊಂಡು ಬಹು ವಿರೋಧದ ನಡುವೆ ನಿಮಗೆ ಸುವಾರ್ತೆಯನ್ನು ತಿಳಿಸಿದೆವು.
1 ಥೆಸಲೊನೀಕದವರಿಗೆ 2 : 3 (OCVKN)
ಏಕೆಂದರೆ ನಮ್ಮ ಬೋಧನೆಯು ದುರುದ್ದೇಶದಿಂದಲೂ ಇಲ್ಲವೆ ವಂಚನೆಗಳಿಂದಲೂ ತಪ್ಪುಗಳಿಂದಲೂ ಕೂಡಿದ್ದಲ್ಲ.
1 ಥೆಸಲೊನೀಕದವರಿಗೆ 2 : 4 (OCVKN)
ದೇವರು ನಮ್ಮನ್ನು ಅನುಮೋದಿಸಿ ನಮ್ಮ ವಶಕ್ಕೆ ಸುವಾರ್ತೆಯನ್ನು ಒಪ್ಪಿಸಿಕೊಟ್ಟಿದ್ದಾರೆ. ಹಾಗಿರುವುದರಿಂದ, ನಾವು ಮನುಷ್ಯರನ್ನು ಮೆಚ್ಚಿಸದೆ ನಮ್ಮ ಹೃದಯಗಳನ್ನು ಪರಿಶೋಧಿಸುವ ದೇವರನ್ನೇ ಮೆಚ್ಚಿಸಬೇಕೆಂದು ಮಾತನಾಡುತ್ತೇವೆ.
1 ಥೆಸಲೊನೀಕದವರಿಗೆ 2 : 5 (OCVKN)
ನಾವು ಎಂದಿಗೂ ನಿಮ್ಮನ್ನು ಹೊಗಳಿ ಮಾತನಾಡಲಿಲ್ಲ, ಕೌಶಲ್ಯವನ್ನು ಪ್ರಯೋಗಿಸಿ ಹಣದಾಸೆಯನ್ನು ಮರೆಮಾಡುವವರು ಆಗಿರಲಿಲ್ಲ ಎಂಬುದನ್ನು ನೀವು ತಿಳಿದಿರುವಿರಿ. ಇದಕ್ಕೆ ದೇವರೇ ಸಾಕ್ಷಿ.
1 ಥೆಸಲೊನೀಕದವರಿಗೆ 2 : 6 (OCVKN)
ಕ್ರಿಸ್ತ ಯೇಸುವಿನ ಅಪೊಸ್ತಲರಾದ ನಾವು ನಿಮ್ಮ ಮೇಲೆ ಭಾರವನ್ನು ಹಾಕಬಹುದಾಗಿದ್ದರೂ ಮನುಷ್ಯರಿಂದ ಬರುವ ಗೌರವವನ್ನು ನಿಮ್ಮಿಂದಾಗಲೀ, ಇತರರಿಂದಾಗಲೀ, ಹುಡುಕುವವರಾಗಿರಲಿಲ್ಲ.
1 ಥೆಸಲೊನೀಕದವರಿಗೆ 2 : 7 (OCVKN)
ಅದರ ಬದಲಾಗಿ, ನಾವು ನಿಮ್ಮ ನಡುವೆ ಶಿಶುಗಳಂತೆ ಇದ್ದೆವು. ತಾಯಿಯು ತನ್ನ ಮಕ್ಕಳನ್ನು ಪೋಷಿಸುವಂತೆ,
1 ಥೆಸಲೊನೀಕದವರಿಗೆ 2 : 8 (OCVKN)
ನಿಮ್ಮನ್ನು ಪೋಷಿಸಿದೆವು. ಏಕೆಂದರೆ ನಾವು ನಿಮ್ಮನ್ನು ಬಹಳವಾಗಿ ಪ್ರೀತಿಸಿದ್ದರಿಂದ, ದೇವರ ಸುವಾರ್ತೆಯನ್ನು ಸಾರುವುದಕ್ಕೆ ಮಾತ್ರವಲ್ಲದೆ ನಿಮಗೋಸ್ಕರ ನಾವು ನಮ್ಮ ಪ್ರಾಣವನ್ನೇ ಕೊಡುವುದಕ್ಕೂ ಇಷ್ಟವುಳ್ಳವರಾಗಿದ್ದೆವು.
1 ಥೆಸಲೊನೀಕದವರಿಗೆ 2 : 9 (OCVKN)
ಪ್ರಿಯರೇ, ನಾವು ನಿಮ್ಮಲ್ಲಿ ಯಾರ ಮೇಲೆಯೂ ಭಾರಹಾಕಬಾರದೆಂದು ಹಗಲಿರುಳು ದುಡಿದು ಕಷ್ಟ ಪ್ರಯಾಸದಿಂದ ದೇವರ ಸುವಾರ್ತೆಯನ್ನು ನಿಮಗೆ ಸಾರಿದೆವೆಂಬುದು ನಿಮ್ಮ ನೆನಪಿನಲ್ಲಿರುವುದಷ್ಟೆ.
1 ಥೆಸಲೊನೀಕದವರಿಗೆ 2 : 10 (OCVKN)
ನಂಬುವವರಾದ ನಿಮ್ಮೊಂದಿಗೆ ನಾವು ಎಷ್ಟೋ ಪವಿತ್ರರಾಗಿಯೂ ನೀತಿವಂತರಾಗಿಯೂ ನಿರ್ದೋಷಿಗಳಾಗಿಯೂ ನಡೆದುಕೊಂಡೆವೆಂಬುದಕ್ಕೆ ನೀವೇ ಸಾಕ್ಷಿಗಳು, ಮಾತ್ರವಲ್ಲದೆ ದೇವರೂ ಸಾಕ್ಷಿ.
1 ಥೆಸಲೊನೀಕದವರಿಗೆ 2 : 11 (OCVKN)
ತಂದೆಯು ತನ್ನ ಮಕ್ಕಳಿಗೆ ಹೇಗೋ ಹಾಗೆಯೇ ನಾವು ನಿಮ್ಮಲ್ಲಿ ಪ್ರತಿಯೊಬ್ಬನನ್ನು ನಡೆಸಿದೆವು.
1 ಥೆಸಲೊನೀಕದವರಿಗೆ 2 : 12 (OCVKN)
ನಿಮಗೆ ಬುದ್ಧಿ ಹೇಳುತ್ತಾ ಸಂತೈಸುತ್ತಾ ಬಂದೆವು. ಹೀಗೆ ದೇವರ ಹಾಗೂ ಅವರ ರಾಜ್ಯದ ಮಹಿಮೆಗಾಗಿ ಕರೆದಾತನಿಗೆ ನೀವು ಯೋಗ್ಯರಾಗಿ ನಡೆಯಬೇಕೆಂದು ಸಾಕ್ಷಿ ಹೇಳಿದೆವೆಂಬುದು ನಿಮಗೆ ತಿಳಿದಿದೆ.
1 ಥೆಸಲೊನೀಕದವರಿಗೆ 2 : 13 (OCVKN)
ಈ ಕಾರಣಕ್ಕಾಗಿಯೇ ನಂಬುವವರಾದ ನಿಮ್ಮಲ್ಲಿ ಕಾರ್ಯಸಾಧಿಸುವ ದೇವರ ವಾಕ್ಯವನ್ನು ನಮ್ಮಿಂದ ನೀವು ಕೇಳಿದಾಗ ಅದನ್ನು ಮನುಷ್ಯರ ವಾಕ್ಯವೆಂದೆಣಿಸದೆ, ನಿಜವಾಗಿಯೂ ದೇವರ ವಾಕ್ಯವೆಂದೇ ತಿಳಿದು ಅಂಗೀಕರಿಸಿದ್ದಕ್ಕಾಗಿ ನಾವಂತೂ ಎಡೆಬಿಡದೆ ದೇವರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇವೆ.
1 ಥೆಸಲೊನೀಕದವರಿಗೆ 2 : 14 (OCVKN)
ಪ್ರಿಯರೇ, ನೀವು ಯೂದಾಯದಲ್ಲಿ ಕ್ರಿಸ್ತ ಯೇಸುವಿನಲ್ಲಿರುವ ದೇವರ ಸಭೆಗಳನ್ನು ಅನುಸರಿಸುವವರಾದಿರಿ. ಅವರು ಯೆಹೂದ್ಯರಿಂದ ಅನುಭವಿಸಿದಂಥ ಕಷ್ಟಗಳನ್ನೇ ನೀವೂ ಸಹ ನಿಮ್ಮ ಸ್ವದೇಶಿಯರಿಂದ ಅನುಭವಿಸಿದಿರಿ.
1 ಥೆಸಲೊನೀಕದವರಿಗೆ 2 : 15 (OCVKN)
ಆ ಯೆಹೂದ್ಯರು ನಮಗೆ ಕರ್ತ ಆಗಿರುವ ಯೇಸುವನ್ನು ಮತ್ತು ಪ್ರವಾದಿಗಳನ್ನು ಕೊಂದರು. ನಮ್ಮನ್ನೂ ಓಡಿಸಿಬಿಟ್ಟರು. ಅವರು ದೇವರನ್ನು ಮೆಚ್ಚಿಸದೆ ಜನರೆಲ್ಲರಿಗೂ ವಿರೋಧಿಗಳಾಗಿದ್ದಾರೆ.
1 ಥೆಸಲೊನೀಕದವರಿಗೆ 2 : 16 (OCVKN)
ಯೆಹೂದ್ಯರಲ್ಲದವರಿಗೆ ರಕ್ಷಣೆಯಾಗುವಂತೆ ಮಾತನಾಡುವ ನಮಗೆ ಅವರು ಅಡ್ಡಿ ಮಾಡುತ್ತಾರೆ. ಹೀಗೆ ತಮ್ಮ ಪಾಪಗಳನ್ನು ಯಾವಾಗಲೂ ಹೆಚ್ಚೆಚ್ಚಾಗಿ ಕೂಡಿಸಿಕೊಳ್ಳುತ್ತಾ ಹೋಗುತ್ತಾರೆ. ಕೊನೆಗೆ ಕೋಪಾಗ್ನಿಯೂ ಅವರ ಮೇಲೆ ಬರಲಿದೆ.
1 ಥೆಸಲೊನೀಕದವರಿಗೆ 2 : 17 (OCVKN)
ಪೌಲನು ಥೆಸಲೋನಿಕದವರನ್ನು ನೋಡುವುದಕ್ಕೆ ಹಾರೈಸಿದ್ದು ಪ್ರಿಯರೇ, ನಾವು ದೈಹಿಕವಾಗಿ ನಿಮ್ಮನ್ನು ಬಿಟ್ಟು ಸ್ವಲ್ಪಕಾಲ ಅಗಲಿದರೂ ಹೃದಯದಲ್ಲಿ ಅಗಲದೆ, ನಿಮ್ಮ ಮುಖವನ್ನು ಕಾಣಲು ಅತ್ಯಾಶೆಯಿಂದ ಬಹಳ ಪ್ರಯತ್ನ ಮಾಡಿದೆವು.
1 ಥೆಸಲೊನೀಕದವರಿಗೆ 2 : 18 (OCVKN)
ಆದ್ದರಿಂದ ನಿಮ್ಮ ಬಳಿಗೆ ಬರುವುದಕ್ಕೆ ನಮಗೆ ಮನಸ್ಸಿತ್ತು. ಪೌಲನಾದ ನಾನಂತೂ ಮತ್ತೆ ಮತ್ತೆ ಬರಲು ಬಯಸಿದೆನು. ಆದರೆ ಸೈತಾನನು ನಮಗೆ ಅಭ್ಯಂತರ ಮಾಡಿದನು.
1 ಥೆಸಲೊನೀಕದವರಿಗೆ 2 : 19 (OCVKN)
ನಮಗೆ ಕರ್ತ ಆಗಿರುವ ಯೇಸು ಬರುವಾಗ ಅವರ ಮುಂದೆ ನಮ್ಮ ನಿರೀಕ್ಷೆಯೂ ಆನಂದವೂ ಅಭಿಮಾನದ ಕಿರೀಟವೂ ಯಾರು? ನೀವೇ ಅಲ್ಲವೇ?
1 ಥೆಸಲೊನೀಕದವರಿಗೆ 2 : 20 (OCVKN)
ನೀವೇ ನಮ್ಮ ಮಹಿಮೆಯೂ ಆನಂದವೂ ಆಗಿದ್ದೀರಿ.

1 2 3 4 5 6 7 8 9 10 11 12 13 14 15 16 17 18 19 20