1 ಯೋಹಾನನು 3 : 1 (OCVKN)
ಇಗೋ, ನಾವು ದೇವರ ಮಕ್ಕಳೆಂದು ಕರೆಯುವುದರಲ್ಲಿ ತಂದೆಯು ಎಂಥಾ ಮಹಾ ಪ್ರೀತಿಯನ್ನು ನಮ್ಮ ಮೇಲೆ ಇಟ್ಟಿದ್ದಾರಲ್ಲಾ! ನಿಜಕ್ಕೂ ನಾವು ದೇವರ ಮಕ್ಕಳಾಗಿದ್ದೇವೆ. ಈ ಕಾರಣದಿಂದ ಲೋಕವು ನಮ್ಮನ್ನು ತಿಳಿದುಕೊಳ್ಳುವುದಿಲ್ಲ, ಏಕೆಂದರೆ ಅದು ತಂದೆಯನ್ನು ತಿಳಿದುಕೊಳ್ಳಲಿಲ್ಲ.
1 ಯೋಹಾನನು 3 : 2 (OCVKN)
ಪ್ರಿಯರೇ, ನಾವು ಈಗ ದೇವರ ಮಕ್ಕಳಾಗಿದ್ದೇವೆ. ಮುಂದೆ ನಾವು ಏನಾಗುವೆವೋ ಅದು ಇನ್ನೂ ಪ್ರತಕ್ಷವಾಗಲಿಲ್ಲ. ಕ್ರಿಸ್ತ ಯೇಸು ಪ್ರತ್ಯಕ್ಷರಾದಾಗ ನಾವು ಅವರ ಹಾಗಿರುವೆವೆಂದು ಬಲ್ಲೆವು. ಏಕೆಂದರೆ ನಾವು ಅವರನ್ನು ಅವರಿರುವ ಪ್ರಕಾರವೇ ನೋಡುವೆವು.
1 ಯೋಹಾನನು 3 : 3 (OCVKN)
ಕ್ರಿಸ್ತ ಯೇಸುವಿನಲ್ಲಿ ಈ ನಿರೀಕ್ಷೆಯನ್ನು ಇಟ್ಟಿರುವ ಪ್ರತಿಯೊಬ್ಬನೂ ಅವರು ಶುದ್ಧರಾಗಿರುವಂತೆಯೇ ತನ್ನನ್ನು ಶುದ್ಧಮಾಡಿಕೊಳ್ಳುತ್ತಾನೆ.
1 ಯೋಹಾನನು 3 : 4 (OCVKN)
ಪಾಪಮಾಡುವ ಪ್ರತಿಯೊಬ್ಬನೂ ನಿಯಮವನ್ನು ಮೀರುವವನಾಗಿದ್ದಾನೆ. ನಿಯಮವನ್ನು ಮೀರುವುದೇ ಪಾಪ.
1 ಯೋಹಾನನು 3 : 5 (OCVKN)
ಪಾಪಗಳನ್ನು ನಿವಾರಣೆ ಮಾಡುವುದಕ್ಕಾಗಿ ಕ್ರಿಸ್ತ ಯೇಸು ಪ್ರತ್ಯಕ್ಷರಾದರೆಂಬುದು ನಿಮಗೆ ಗೊತ್ತಾಗಿದೆ. ಕ್ರಿಸ್ತ ಯೇಸುವಿನಲ್ಲಿ ಪಾಪವಿಲ್ಲ.
1 ಯೋಹಾನನು 3 : 6 (OCVKN)
ಕ್ರಿಸ್ತ ಯೇಸುವಿನಲ್ಲಿ ನೆಲೆಗೊಂಡಿರುವವರು ಪಾಪದಲ್ಲಿ ಮುಂದುವರಿಯುವುದಿಲ್ಲ. ಪಾಪದಲ್ಲಿ ಮುಂದುವರೆಯುವವರು ಕ್ರಿಸ್ತ ಯೇಸುವನ್ನು ಕಂಡವರೂ ಅಲ್ಲ, ತಿಳಿದವರೂ ಅಲ್ಲ.
1 ಯೋಹಾನನು 3 : 7 (OCVKN)
ಪ್ರಿಯ ಮಕ್ಕಳೇ, ಯಾರೂ ನಿಮ್ಮನ್ನು ಮೋಸಗೊಳಿಸದಿರಲಿ. ಕ್ರಿಸ್ತ ಯೇಸು ಹೇಗೆ ನೀತಿವಂತರಾಗಿದ್ದಾರೋ ಹಾಗೆಯೇ ನೀತಿಯನ್ನು ಅನುಸರಿಸುವವರು ನೀತಿವಂತರಾಗಿದ್ದಾರೆ.
1 ಯೋಹಾನನು 3 : 8 (OCVKN)
ಪಾಪದಲ್ಲಿ ಮುಂದುವರೆಯುವವರು ಸೈತಾನನಿಗೆ ಸೇರಿದವರು. ಏಕೆಂದರೆ ಆದಿಯಿಂದಲೂ ಸೈತಾನನು ಪಾಪಮಾಡುವವನಾಗಿದ್ದಾನೆ. ಆದ್ದರಿಂದ ದೇವಪುತ್ರ ಯೇಸು ಸೈತಾನನ ಕೆಲಸಗಳನ್ನು ಲಯ ಮಾಡುವುದಕ್ಕೋಸ್ಕರವೇ ಪ್ರತ್ಯಕ್ಷರಾದರು.
1 ಯೋಹಾನನು 3 : 9 (OCVKN)
ದೇವರಿಂದ ಹುಟ್ಟಿದವನು ಪಾಪವನ್ನು ಅಭ್ಯಾಸ ಮಾಡಲಾರನು, ಏಕೆಂದರೆ ದೇವರ ಬೀಜವು ಅವನಲ್ಲಿ ನೆಲೆಗೊಂಡಿದೆ. ಅವನು ದೇವರಿಂದ ಹುಟ್ಟಿದ ಕಾರಣ ಪಾಪ ಅಭ್ಯಾಸ ಮಾಡುವುದು ಅವನಿಗೆ ಅಸಾಧ್ಯ.
1 ಯೋಹಾನನು 3 : 10 (OCVKN)
ಇವರು ದೇವರ ಮಕ್ಕಳೆಂಬುದೂ ಅವರು ಸೈತಾನನ ಮಕ್ಕಳೆಂಬುದೂ ಇದರಿಂದ ವ್ಯಕ್ತವಾಗುತ್ತದೆ. ನೀತಿಯನ್ನು ಅನುಸರಿಸದವನೂ ತನ್ನ ಸಹೋದರನನ್ನು ಪ್ರೀತಿಸದವನೂ ದೇವರ ಮಗುವಲ್ಲ.
1 ಯೋಹಾನನು 3 : 11 (OCVKN)
ಸಹೋದರರ ಪ್ರೀತಿ ನಾವು ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬುದೇ ನೀವು ಮೊದಲಿನಿಂದಲೂ ಕೇಳಿದ ಸಂದೇಶವಾಗಿದೆ.
1 ಯೋಹಾನನು 3 : 12 (OCVKN)
ಕೆಡುಕನಾಗಿದ್ದ ತನ್ನ ತಮ್ಮನನ್ನು ಕೊಂದುಹಾಕಿದ ಕಾಯಿನನಂತೆ ಅಲ್ಲ.* ನೋಡಿರಿ, ಆದಿ 4:8 ಅವನು ಯಾವ ಕಾರಣದಿಂದ ತಮ್ಮನನ್ನು ಕೊಂದುಹಾಕಿದನು? ತನ್ನ ಕೃತ್ಯಗಳು ಕೆಟ್ಟವುಗಳೂ ತನ್ನ ತಮ್ಮನ ಕೃತ್ಯಗಳು ನೀತಿಯುಳ್ಳವುಗಳೂ ಆಗಿದ್ದುದರಿಂದಲೇ ಅಲ್ಲವೇ?
1 ಯೋಹಾನನು 3 : 13 (OCVKN)
ನನ್ನ ಪ್ರಿಯರೇ, ಲೋಕವು ನಿಮ್ಮನ್ನು ದ್ವೇಷಿಸಿದರೆ ಆಶ್ಚರ್ಯಪಡಬೇಡಿರಿ.
1 ಯೋಹಾನನು 3 : 14 (OCVKN)
ನಾವಂತೂ ಸಹೋದರರನ್ನು ಪ್ರೀತಿಸುವವರಾಗಿರುವುದರಿಂದ ಮರಣದಿಂದ ಪಾರಾಗಿ ಜೀವದಲ್ಲಿ ಸೇರಿದ್ದೇವೆಂಬುದು ನಮಗೆ ಗೊತ್ತಾಗಿದೆ. ಪ್ರೀತಿಸದೆ ಇರುವವನು ಮರಣದಲ್ಲೇ ಇದ್ದಾನೆ.
1 ಯೋಹಾನನು 3 : 15 (OCVKN)
ತನ್ನ ಸಹೋದರನನ್ನು ದ್ವೇಷಿಸುವ ಯಾರೇ ಆದರೂ ಕೊಲೆಗಾರನಾಗಿದ್ದಾನೆ ಮತ್ತು ಯಾವ ಕೊಲೆಗಾರನಲ್ಲಿಯೂ ನಿತ್ಯಜೀವವು ಇರುವುದಿಲ್ಲವೆಂಬುದು ನಿಮಗೆ ಗೊತ್ತಾಗಿದೆ.
1 ಯೋಹಾನನು 3 : 16 (OCVKN)
ಕ್ರಿಸ್ತ ಯೇಸುವು ನಮಗೋಸ್ಕರ ತಮ್ಮ ಪ್ರಾಣವನ್ನು ಕೊಟ್ಟದ್ದರಲ್ಲಿಯೇ ದೇವರ ಪ್ರೀತಿ ಇಂಥದ್ದೆಂದು ನಮಗೆ ತಿಳಿದು ಬಂದಿದೆ. ನಾವು ಸಹ ಸಹೋದರ ಸಹೋದರಿಯರಿಗೋಸ್ಕರ ನಮ್ಮ ಪ್ರಾಣಗಳನ್ನು ಕೊಡುವವರಾಗಿದ್ದೇವೆ.
1 ಯೋಹಾನನು 3 : 17 (OCVKN)
ಆದರೆ ಈ ಲೋಕದ ಸಂಪತ್ತುಳ್ಳ ಯಾವನಾದರೂ ಕೊರತೆಯಲ್ಲಿರುವ ತನ್ನ ಸಹೋದರ ಸಹೋದರಿಯರನ್ನು ನೋಡಿ, ಕರುಣೆ ತೋರಿಸದೆ ಬಿಟ್ಟರೆ ದೇವರ ಪ್ರೀತಿಯು ಅವನಲ್ಲಿ ನೆಲೆಗೊಂಡಿರುವುದು ಹೇಗೆ?
1 ಯೋಹಾನನು 3 : 18 (OCVKN)
ನನ್ನ ಪ್ರಿಯ ಮಕ್ಕಳೇ, ನೀವು ಬರೀಮಾತಿನಿಂದಾಗಲಿ, ಹೊಗಳಿಕೆಯ ಮಾತಿನಿಂದಾಗಲಿ ಪ್ರೀತಿಸುವವರಾಗಿರದೆ ಕ್ರಿಯೆಯಲ್ಲಿಯೂ ಸತ್ಯದಲ್ಲಿಯೂ ಪ್ರೀತಿಸುವವರಾಗಿರಬೇಕು.
1 ಯೋಹಾನನು 3 : 19 (OCVKN)
ದೇವರ ಸಮಕ್ಷಮದಲ್ಲಿ ನಾವು ನಮ್ಮ ಹೃದಯವನ್ನು ವಿಶ್ರಾಂತಿಗೊಳಿಸಿರುವುದರಿಂದ ನಾವು ಸತ್ಯಕ್ಕೆ ಸೇರಿದವರು ಎಂಬುದು ಇದರಿಂದಲೇ ನಮಗೆ ತಿಳಿಯುತ್ತದೆ:
1 ಯೋಹಾನನು 3 : 20 (OCVKN)
ಏಕೆಂದರೆ ನಮ್ಮ ಹೃದಯವು ನಮ್ಮನ್ನು ಅಪರಾಧಿ ಎಂದು ಖಂಡಿಸುವಾಗಲೆಲ್ಲಾ, ನಮ್ಮ ಹೃದಯಕ್ಕಿಂತ ದೇವರು ದೊಡ್ಡವರಾಗಿದ್ದಾರೆಂತಲೂ ದೇವರು ಎಲ್ಲವನ್ನೂ ಬಲ್ಲವರಾಗಿದ್ದಾರೆಂತಲೂ ತಿಳಿದುಕೊಳ್ಳಿರಿ.
1 ಯೋಹಾನನು 3 : 21 (OCVKN)
ಪ್ರಿಯರೇ, ನಮ್ಮ ಹೃದಯವು ನಮ್ಮನ್ನು ಅಪರಾಧಿ ಎಂದು ಖಂಡಿಸದಿದ್ದರೆ ದೇವರ ಮುಂದೆ ಆತ್ಮವಿಶ್ವಾಸ ನಮಗಿರುವುದು.
1 ಯೋಹಾನನು 3 : 22 (OCVKN)
ಮತ್ತು ನಾವು ಏನೇನು ಬೇಡಿಕೊಳ್ಳುತ್ತೇವೋ ಅದನ್ನು ದೇವರಿಂದ ನಾವು ಹೊಂದಿಕೊಳ್ಳುತ್ತೇವೆ. ಏಕೆಂದರೆ ನಾವು ಅವರ ಆಜ್ಞೆಗಳನ್ನು ಕೈಗೊಂಡು ಅವರ ದೃಷ್ಟಿಯಲ್ಲಿ ಮೆಚ್ಚಿಗೆಯಾದವುಗಳನ್ನು ಮಾಡುವವರಾಗಿದ್ದೇವೆ.
1 ಯೋಹಾನನು 3 : 23 (OCVKN)
ನಾವು ದೇವರ ಪುತ್ರ ಆಗಿರುವ ಯೇಸುಕ್ರಿಸ್ತರ ಹೆಸರನ್ನು ನಂಬಿ, ಅವರು ನಮಗೆ ಆಜ್ಞಾಪಿಸಿದ ಪ್ರಕಾರ ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬುದೇ ದೇವರ ಆಜ್ಞೆಯಾಗಿರುತ್ತದೆ.
1 ಯೋಹಾನನು 3 : 24 (OCVKN)
ದೇವರ ಆಜ್ಞೆಗಳನ್ನು ಕೈಗೊಂಡು ನಡೆಯುವವನು ದೇವರಲ್ಲಿ ವಾಸಮಾಡುತ್ತಾನೆ ಮತ್ತು ದೇವರು ಅವನಲ್ಲಿ ವಾಸಮಾಡುತ್ತಾರೆ. ದೇವರು ನಮ್ಮಲ್ಲಿ ವಾಸಮಾಡುತ್ತಾರೆಂದು ದೇವರು ನಮಗೆ ದಯಪಾಲಿಸಿದ ಆತ್ಮನಿಂದಲೇ ನಾವು ಬಲ್ಲೆವು.

1 2 3 4 5 6 7 8 9 10 11 12 13 14 15 16 17 18 19 20 21 22 23 24