ಯೆಹೋಶುವ 1 : 1 (KNV)
ಕರ್ತನ ಸೇವಕನಾದ ಮೋಶೆ ಸತ್ತ ತರುವಾಯ ಕರ್ತನು ಮೋಶೆಯ ಸೇವಕನಾದ ನೂನನ ಮಗನಾಗಿರುವ ಯೆಹೋಶುವನಿಗೆ--
ಯೆಹೋಶುವ 1 : 2 (KNV)
ನನ್ನ ಸೇವಕನಾದ ಮೋಶೆಯು ಸತ್ತನು; ಈಗ ನೀನು ಈ ಜನರೆಲ್ಲರ ಸಹಿತವಾಗಿ ನಾನು ಇಸ್ರಾಯೇಲ್ ಮಕ್ಕಳಿಗೆ ಕೊಡುವ ದೇಶಕ್ಕೆ ಹೋಗು.
ಯೆಹೋಶುವ 1 : 3 (KNV)
ನಾನು ಮೋಶೆಗೆ ಹೇಳಿದ ಹಾಗೆ ನಿಮ್ಮ ಪಾದವು ತುಳಿಯುವ ಎಲ್ಲಾ ಸ್ಥಳವನ್ನು ನಿಮಗೆ ಕೊಟ್ಟೆನು.
ಯೆಹೋಶುವ 1 : 4 (KNV)
ಅರಣ್ಯವೂ ಈ ಲೆಬನೋನೂ ಮೊದಲುಗೊಂಡು ಯೂಫ್ರೇಟೀಸ್ ಮಹಾನದಿಯ ವರೆಗೆ ಇರುವ ಹಿತ್ತಿಯರ ದೇಶವೆಲ್ಲಾ ಸೂರ್ಯನು ಅಸ್ತಮಿಸುವ ಕಡೆಗೆ ಮಹಾಸಮುದ್ರದ ವರೆಗೂ ನಿಮ್ಮ ಮೇರೆಯಾಗಿರುವದು.
ಯೆಹೋಶುವ 1 : 5 (KNV)
ಆದರೆ ನೀನು ಜೀವಿಸುವ ದಿವಸಗಳಲ್ಲೆಲ್ಲಾ ಯಾವನೂ ನಿನ್ನ ಮುಂದೆ ನಿಲ್ಲಲಾರನು. ನಾನು ಮೋಶೆಯ ಸಂಗಡ ಇದ್ದ ಹಾಗೆಯೇ ನಿನ್ನ ಸಂಗಡ ಇರುವೆನು. ನಾನು ನಿನ್ನನ್ನು ಕೈಬಿಡುವುದಿಲ್ಲ, ಇಲ್ಲವೆ ನಿನ್ನನ್ನು ತೊರೆಯುವದಿಲ್ಲ.
ಯೆಹೋಶುವ 1 : 6 (KNV)
ಬಲವಾಗಿರು, ದೃಢವಾಗಿರು; ಈ ಜನರಿಗೆ ನಾನು ಅವರ ತಂದೆಗಳಿಗೆ ಕೊಡುವೆನೆಂದು ಆಣೆ ಇಟ್ಟ ದೇಶವನ್ನು ನೀನು ಬಾದ್ಯವಾಗಿ ಹಂಚಿಕೊಡುವಿ.
ಯೆಹೋಶುವ 1 : 7 (KNV)
ನನ್ನ ಸೇವಕನಾದ ಮೋಶೆಯು ನಿನಗೆ ಆಜ್ಞಾಪಿಸಿದ ನ್ಯಾಯ ಪ್ರಮಾಣವೆಲ್ಲಾದರ ಪ್ರಕಾರ ನೀನು ಕೈಕೊಂಡು ನಡೆ ಯುವ ಹಾಗೆ ಬಲವಾಗಿರು, ಬಹು ಧೈರ್ಯದಿಂದಿರು, ನೀನು ಹೋಗುವ ಸ್ಥಳದಲ್ಲೆಲ್ಲಾ ಸಫಲವಾಗುವ ಹಾಗೆ ಅದನ್ನು (ನ್ಯಾಯಪ್ರಮಾಣವನ್ನು) ಬಿಟ್ಟು ಬಲ ಕ್ಕಾದರೂ ಎಡಕ್ಕಾದರೂ ತಿರುಗಬೇಡ.
ಯೆಹೋಶುವ 1 : 8 (KNV)
ಈ ಪುಸ್ತಕದಲ್ಲಿ ಬರೆದಿರುವ ನ್ಯಾಯಪ್ರಮಾಣವು ನಿನ್ನ ಬಾಯಿಂದ ಹೋಗಬಾರದು; ಅದರಲ್ಲಿ ಬರೆದಿರುವ ಪ್ರಕಾರವೇ ಕೈಕೊಂಡು ನಡೆಯುವ ಹಾಗೆ ರಾತ್ರಿಹಗಲು ಅದನ್ನು ಧ್ಯಾನಿಸಬೇಕು. ಆಗ ನಿನ್ನ ಮಾರ್ಗವನ್ನು ಸಫಲಮಾಡಿ ಕೊಂಡು ಮಹಾ ಜಯಶಾಲಿಯಾಗುವಿ.
ಯೆಹೋಶುವ 1 : 9 (KNV)
ನಿನಗೆ ಆಜ್ಞಾ ಪಿಸಿದ್ದೇನಲ್ಲಾ; ಬಲವಾಗಿರು, ಒಳ್ಳೆ ಧೈರ್ಯದಿಂದಿರು; ಭಯಪಡಬೇಡ, ನಿರಾಶೆಗೊಳ್ಳಬೇಡ. ನೀನು ಹೋಗು ವಲ್ಲೆಲ್ಲಾ ನಿನ್ನ ದೇವರಾದ ಕರ್ತನು ನಿನ್ನ ಸಂಗಡ ಇದ್ದಾನೆ ಎಂದು ಹೇಳಿದನು.
ಯೆಹೋಶುವ 1 : 10 (KNV)
ಆಗ ಯೆಹೋಶುವನು ಜನರ ಅಧಿಕಾರಿಗಳಿಗೆ ಆಜ್ಞಾಪಿಸಿ--
ಯೆಹೋಶುವ 1 : 11 (KNV)
ನೀವು ದಂಡಿನ ಮಧ್ಯದಲ್ಲಿ ಹೋಗಿ ಜನರಿಗೆ ಆಜ್ಞಾಪಿಸಿ ಹೇಳಬೇಕಾದದ್ದೇನಂದರೆ--ನಿಮ ಗೋಸ್ಕರ ಆಹಾರವನ್ನು ಸಿದ್ಧಮಾಡಿಕೊಳ್ಳಿರಿ; ನಿಮ್ಮ ದೇವರಾದ ಕರ್ತನು ನಿಮಗೆ ಸ್ವಾಸ್ತ್ಯಕ್ಕಾಗಿ ಕೊಟ್ಟಿರುವ ದೇಶವನ್ನು ನೀವು ಸ್ವಾಧೀನಮಾಡಿಕೊಳ್ಳಲು ಇನ್ನು ಮೂರು ದಿವಸಗಳಲ್ಲಿ ಯೊರ್ದನನ್ನು ದಾಟಿ ಹೋಗ ಬೇಕು ಅಂದನು.
ಯೆಹೋಶುವ 1 : 12 (KNV)
ಇದಲ್ಲದೆ ಯೆಹೋಶುವನು ರೂಬೇನ್ಯರಿಗೂ ಗಾದ್ಯರಿಗೂ ಮನಸ್ಸೆಯ ಅರ್ಧಗೋತ್ರದವರಿಗೂ ಹೇಳಿದ್ದೇನಂದರೆ --
ಯೆಹೋಶುವ 1 : 13 (KNV)
ಕರ್ತನ ಸೇವಕನಾದ ಮೋಶೆಯು ನಿಮಗೆ ಆಜ್ಞಾಪಿಸಿದ ವಾಕ್ಯವನ್ನು ಜ್ಞಾಪಕ ಮಾಡಿಕೊಳ್ಳಿರಿ. ನಿಮ್ಮ ದೇವರಾದ ಕರ್ತನು ನಿಮ್ಮನ್ನು ವಿಶ್ರಾಂತಿಪಡಿಸಿ ನಿಮಗೆ ಈ ದೇಶವನ್ನು ಕೊಟ್ಟನು.
ಯೆಹೋಶುವ 1 : 14 (KNV)
ಹೇಗಂದರೆ ನಿಮ್ಮ ಹೆಂಡತಿಯರೂ ಚಿಕ್ಕವರೂ ಪಶುಗಳೂ ಮೋಶೆ ನಿಮಗೆ ಕೊಟ್ಟ ಯೊರ್ದನಿಗೆ ಈಚೆ ಇರುವ ದೇಶದಲ್ಲೇ ಇರಲಿ; ಆದರೆ ನಿಮ್ಮಲ್ಲಿ ಇರುವ ಪರಾಕ್ರಮಶಾಲಿಗಳೆಲ್ಲಾ ನಿಮ್ಮ ಸಹೋದರರ ಮುಂದೆ ಯುದ್ಧಸನ್ನದ್ಧರಾಗಿ ನಡೆದುಹೋಗಿ
ಯೆಹೋಶುವ 1 : 15 (KNV)
ಕರ್ತನು ನಿಮ್ಮ ಹಾಗೆಯೇ ನಿಮ್ಮ ಸಹೋದರರನ್ನು ವಿಶ್ರಾಂತಿ ಪಡಿಸಿ ಅವರು ನಿಮ್ಮ ದೇವರಾದ ಕರ್ತನು ತಮಗೆ ಕೊಡುವ ದೇಶವನ್ನು ಸ್ವಾಧೀನಮಾಡಿಕೊಳ್ಳುವ ವರೆಗೆ ಅವರಿಗೆ ಸಹಾಯ ಮಾಡಿರಿ; ತರುವಾಯ ಕರ್ತನ ಸೇವಕನಾದ ಮೋಶೆಯು ಯೊರ್ದನಿಗೆ ಈಚೆಯಲ್ಲಿ ಸೂರ್ಯನು ಉದಯಿಸುವ ದಿಕ್ಕಿನಲ್ಲಿ ನಿಮಗೆ ಕೊಟ್ಟ ನಿಮ್ಮ ಸ್ವಾಸ್ತ್ಯವಾದ ದೇಶಕ್ಕೆ ತಿರಿಗಿ ಬಂದು ಅದನ್ನು ಅನುಭವಿಸಿರಿ ಅಂದನು.
ಯೆಹೋಶುವ 1 : 16 (KNV)
ಆಗ ಅವರು ಯೆಹೋಶು ವನಿಗೆ ಪ್ರತ್ಯುತ್ತರವಾಗಿ--ನೀನು ನಮಗೆ ಆಜ್ಞಾಪಿಸು ವದನ್ನೆಲ್ಲಾ ಮಾಡುವೆವು; ಎಲ್ಲಿಗೆ ಕಳುಹಿಸುತ್ತೀಯೋ ಅಲ್ಲಿಗೆ ಹೋಗುವೆವು.
ಯೆಹೋಶುವ 1 : 17 (KNV)
ನಾವು ಎಲ್ಲಾದರಲ್ಲಿ ಮೋಶೆಯ ಮಾತು ಕೇಳಿದ ಹಾಗೆ ನಿನ್ನ ಮಾತನ್ನೂ ಕೇಳುವೆವು. ಆದರೆ ನಿನ್ನ ದೇವರಾದ ಕರ್ತನು ಮೋಶೆಯ ಸಂಗಡ ಇದ್ದ ಹಾಗೆ ನಿನ್ನ ಸಂಗಡವೂ ಇರಲಿ.
ಯೆಹೋಶುವ 1 : 18 (KNV)
ನೀನು ಆಜ್ಞಾಪಿಸುವ ಎಲ್ಲಾದರಲ್ಲಿ ನಿನ್ನ ಮಾತುಗಳನ್ನು ಕೇಳದೆ ನಿನ್ನ ಬಾಯಿಮಾತಿಗೆ ಎದುರು ಬೀಳುವವನು ಸಾಯಲೇಬೇಕು; ಆದರೆ ನೀನು ಮಾತ್ರ ಬಲವಾಗಿರು, ಒಳ್ಳೆ ಧೈರ್ಯದಿಂದಿರು ಅಂದರು.
❮
❯