ಜೆಕರ್ಯ 8 : 1 (IRVKN)
ಯೆರೂಸಲೇಮಿಗೆ ಆಶೀರ್ವಾದದ ವಾಗ್ದಾನ ಸೇನಾಧೀಶ್ವರ ಯೆಹೋವನು ಈ ವಾಕ್ಯವನ್ನು ನನಗೆ ದಯಪಾಲಿಸಿದನು.
ಜೆಕರ್ಯ 8 : 2 (IRVKN)
ಸೇನಾಧೀಶ್ವರ ಯೆಹೋವನು ಇಂತೆನ್ನುತ್ತಾನೆ, “ಚೀಯೋನಿಗೆ ಅವಮಾನವಾಯಿತಲ್ಲಾ ಎಂದು ಬಹಳವಾಗಿ ಕುದಿಯುತ್ತೇನೆ. ಅತಿರೋಷಗೊಂಡು ಕುದಿಯುತ್ತೇನೆ.”
ಜೆಕರ್ಯ 8 : 3 (IRVKN)
ಯೆಹೋವನು ಇಂತೆನ್ನುತ್ತಾನೆ, “ನಾನು ಚೀಯೋನಿಗೆ ಹಿಂದಿರುಗಿದ್ದೇನೆ, ಯೆರೂಸಲೇಮಿನ ಮಧ್ಯದಲ್ಲಿ ವಾಸಿಸುವೆನು; ಆಗ ಯೆರೂಸಲೇಮ್ ಸತ್ಯದ ಪಟ್ಟಣವೆಂದು ಅನ್ನಿಸಿಕೊಳ್ಳುವುದು, ಸೇನಾಧೀಶ್ವರ ಯೆಹೋವನ ಪರ್ವತಕ್ಕೆ ಪರಿಶುದ್ಧ ಪರ್ವತವೆಂಬ ಹೆಸರು ಬರುವುದು.”
ಜೆಕರ್ಯ 8 : 4 (IRVKN)
ಸೇನಾಧೀಶ್ವರನಾದ ಯೆಹೋವನು ಇಂತೆನ್ನುತ್ತಾನೆ, “ಇನ್ನು ಮುಂದೆ ಯೆರೂಸಲೇಮಿನ ಚೌಕಗಳಲ್ಲಿ ಮುದುಕ ಮತ್ತು ಮುದುಕಿಯರು ಸೇರುವರು. ಅತಿ ವೃದ್ಧಾಪ್ಯದ ನಿಮಿತ್ತ ಪ್ರತಿಯೊಬ್ಬ ಮುದುಕನ ಕೈಯಲ್ಲಿ ಊರುಗೋಲಿರುವುದು.
ಜೆಕರ್ಯ 8 : 5 (IRVKN)
ಆ ಪಟ್ಟಣದ ಚೌಕಗಳಲ್ಲಿ ಆಟವಾಡುವ ಬಾಲಕ ಮತ್ತು ಬಾಲಕಿಯರು ತುಂಬಿಕೊಂಡಿರುವರು.”
ಜೆಕರ್ಯ 8 : 6 (IRVKN)
ಸೇನಾಧೀಶ್ವರನಾದ ಯೆಹೋವನು ಇಂತೆನ್ನುತ್ತಾನೆ, “ಆ ಕಾಲದ ಸ್ಥಿತಿಯು ಈ ಜನಶೇಷದವರ ದೃಷ್ಟಿಗೆ ಅತ್ಯಾಶ್ಚರ್ಯವಾದರೂ ನನ್ನ ದೃಷ್ಟಿಗೆ ಅತ್ಯಾಶ್ಚರ್ಯವೋ?” ಇದು ಸೇನಾಧೀಶ್ವರ ಯೆಹೋವನ ನುಡಿ.
ಜೆಕರ್ಯ 8 : 7 (IRVKN)
ಸೇನಾಧೀಶ್ವರನಾದ ಯೆಹೋವನು ಇಂತೆನ್ನುತ್ತಾನೆ, “ಇಗೋ, ನಾನು ನನ್ನ ಜನರನ್ನು ಪೂರ್ವದಿಕ್ಕಿನ ದೇಶದಿಂದಲೂ, ಪಶ್ಚಿಮದಿಕ್ಕಿನ ದೇಶದಿಂದಲೂ ಪಾರುಮಾಡಿ ಬರಗೊಳಿಸುವೆನು,
ಜೆಕರ್ಯ 8 : 8 (IRVKN)
ಅವರು ಯೆರೂಸಲೇಮಿನೊಳಗೆ ವಾಸಿಸುವರು; ಸತ್ಯಸಂಧತೆಯಿಂದಲೂ ಮತ್ತು ಸದ್ಧರ್ಮದಿಂದಲೂ ಅವರು ನನಗೆ ಪ್ರಜೆಯಾಗಿರುವರು. ಹಾಗೆಯೇ ನಾನು ಅವರಿಗೆ ದೇವರಾಗಿರುವೆನು.”
ಜೆಕರ್ಯ 8 : 9 (IRVKN)
ಸೇನಾಧೀಶ್ವರನಾದ ಯೆಹೋವನು ಇಂತೆನ್ನುತ್ತಾನೆ, “ದೇವಾಲಯವನ್ನು ಕಟ್ಟುವ ಉದ್ದೇಶದಿಂದ ಸೇನಾಧೀಶ್ವರ ಯೆಹೋವನ ಆ ಮಂದಿರದ ಅಸ್ತಿವಾರವನ್ನು ಹಾಕಿದ ಕಾಲದಲ್ಲಿಯೂ ಇದ್ದ ಪ್ರವಾದಿಗಳ ಬಾಯಿಂದ ಈ ಮಾತುಗಳನ್ನು ಈಗ ಕೇಳುವವರೇ, ನಿಮ್ಮ ಕೈಗಳು ಬಲಗೊಳ್ಳಲಿ!
ಜೆಕರ್ಯ 8 : 10 (IRVKN)
ಆ ಕಾಲಕ್ಕೆ ಮುಂಚೆ ಮನುಷ್ಯನಿಗಾಗಲಿ, ಪಶುವಿಗಾಗಲಿ ದುಡಿತದಿಂದ ಏನೂ ಜೀವನವಾಗುತ್ತಿರಲಿಲ್ಲ; ಹೋಗಿ ಬರುವವರಿಗೆ ಶತ್ರುಗಳ ದೆಸೆಯಿಂದ ಭಯವಿಲ್ಲದೆ ಇರಲಿಲ್ಲ; ಒಬ್ಬರನೊಬ್ಬರು ಎದುರಿಸುವಂತೆ ಎಲ್ಲರನ್ನೂ ಪ್ರೇರೇಪಿಸುತ್ತಿದ್ದರು.
ಜೆಕರ್ಯ 8 : 11 (IRVKN)
ಇಂದಿನಿಂದಲೋ ಈ ಜನಶೇಷದವರ ವಿಷಯದಲ್ಲಿ ನಾನು ಪೂರ್ವಕಾಲದಲ್ಲಿ ಇದ್ದಂತೆ ಇರುವುದಿಲ್ಲ” ಇದು ಸೇನಾಧೀಶ್ವರನಾದ ಯೆಹೋವನ ನುಡಿ.
ಜೆಕರ್ಯ 8 : 12 (IRVKN)
“ನೆಮ್ಮದಿಯ ಬೆಳೆಯಾಗುವುದು; ದ್ರಾಕ್ಷಾಲತೆಯು ಹಣ್ಣುಬಿಡುವುದು, ಭೂಮಿಯು ಧಾನ್ಯವನ್ನೀಯುವುದು, ಆಕಾಶವು ಇಬ್ಬನಿಯನ್ನು ಸುರಿಸುವುದು; ಈ ಜನಶೇಷದವರು ಇವುಗಳನ್ನೆಲ್ಲಾ ಅನುಭವಿಸುವಂತೆ ಅನುಗ್ರಹಿಸುವೆನು.
ಜೆಕರ್ಯ 8 : 13 (IRVKN)
ಯೆಹೂದ ಕುಲವೇ, ಇಸ್ರಾಯೇಲ್ ವಂಶವೇ, ನಿಮ್ಮ ಹೆಸರು ಹೇಗೆ ಜನಾಂಗಗಳಲ್ಲಿ ಶಾಪದ ಮಾತಾಗಿ ಸಲ್ಲುತ್ತಿತ್ತೋ, ಹಾಗೆಯೇ ನಾನು ನಿಮ್ಮನ್ನು ರಕ್ಷಿಸಿ ಆಶೀರ್ವದಿಸುವೆನು; ಹೆದರಬೇಡಿರಿ, ನಿಮ್ಮ ಕೈಗಳು ಬಲಗೊಳ್ಳಲಿ!”
ಜೆಕರ್ಯ 8 : 14 (IRVKN)
ಸೇನಾಧೀಶ್ವರನಾದ ಯೆಹೋವನು ಇಂತೆನ್ನುತ್ತಾನೆ, “ನಿಮ್ಮ ಪೂರ್ವಿಕರು ನನಗೆ ಸಿಟ್ಟೆಬ್ಬಿಸಿದಾಗ ನಿಮಗೆ ಕೇಡುಮಾಡಬೇಕೆಂದು ನಾನು ಕರುಣೆಯಿಲ್ಲದೆ ಸಂಕಲ್ಪಸಿದಂತೆ
ಜೆಕರ್ಯ 8 : 15 (IRVKN)
ಈ ಕಾಲದಲ್ಲಿಯೂ ಯೆರೂಸಲೇಮಿಗೂ, ಯೆಹೂದ ಕುಲಕ್ಕೂ ಮೇಲುಮಾಡಬೇಕೆಂದು ಹೊಸ ಸಂಕಲ್ಪ ಮಾಡಿಕೊಂಡಿದ್ದೇನೆ; ಹೆದರಬೇಡಿರಿ. ಇದು ಸೇನಾಧೀಶ್ವರನಾದ ಯೆಹೋವನು ನುಡಿ.
ಜೆಕರ್ಯ 8 : 16 (IRVKN)
“ನೀವು ಮಾಡಬೇಕಾದ ಕಾರ್ಯಗಳು ಇವೇ. ಪ್ರತಿಯೊಬ್ಬನೂ ತನ್ನ ನೆರೆಯವನ ಸಂಗಡ ನಿಜವನ್ನೇ ಆಡಲಿ; ನಿಮ್ಮ ಚಾವಡಿಗಳಲ್ಲಿ ಸತ್ಯವನ್ನೂ, ಸಮಾಧಾನವಾದ ನ್ಯಾಯವನ್ನೂ ಸ್ಥಾಪಿಸಿರಿ;
ಜೆಕರ್ಯ 8 : 17 (IRVKN)
ನಿಮ್ಮಲ್ಲಿ ಯಾವನೂ ತನ್ನ ಹೃದಯದಲ್ಲಿ ನೆರೆಯವನಿಗೆ ಕೇಡನ್ನು ಬಗೆಯದಿರಲಿ; ಸುಳ್ಳು ಸಾಕ್ಷಿಗೆ ಎಂದೂ ಸಂತೋಷಪಡಬೇಡಿರಿ; ನಾನು ಇವುಗಳನ್ನೆಲ್ಲಾ ದ್ವೇಷಿಸುವವನಾಗಿದ್ದೇನೆ; ಇದು ಯೆಹೋವನ ನುಡಿ.”
ಜೆಕರ್ಯ 8 : 18 (IRVKN)
“ಸೇನಾಧೀಶ್ವರ ಯೆಹೋವನು ಈ ವಾಕ್ಯವನ್ನು ನನಗೆ ದಯಪಾಲಿಸಿದನು.
ಜೆಕರ್ಯ 8 : 19 (IRVKN)
ಸೇನಾಧೀಶ್ವರನಾದ ಯೆಹೋವನು ಇಂತೆನ್ನುತ್ತಾನೆ, ‘ನಾಲ್ಕನೆಯ ತಿಂಗಳಿನ ಉಪವಾಸ, ಐದನೆಯ ತಿಂಗಳಿನ ಉಪವಾಸ, ಏಳನೆಯ ತಿಂಗಳಿನ ಉಪವಾಸ, ಹತ್ತನೆಯ ತಿಂಗಳಿನ ಉಪವಾಸ ಇವು ಯೆಹೂದ ವಂಶಕ್ಕೆ ವಿಶೇಷವಾದ ಹಬ್ಬಗಳಾಗಿ ಹರ್ಷೋಲ್ಲಾಸಗಳನ್ನು ಉಂಟುಮಾಡುವವು; ಹೀಗಿರಲು ಸತ್ಯವನ್ನೂ, ಸಮಾಧಾನವನ್ನೂ ಪ್ರೀತಿಸಿರಿ.’ ”
ಜೆಕರ್ಯ 8 : 20 (IRVKN)
ಸೇನಾಧೀಶ್ವರನಾದ ಯೆಹೋವನು ಇಂತೆನ್ನುತ್ತಾನೆ, “ಇನ್ನು ಮುಂದೆ ಜನಾಂಗಗಳೂ, ದೊಡ್ಡ ಪಟ್ಟಣಗಳ ನಿವಾಸಿಗಳೂ ಬರುವರು;
ಜೆಕರ್ಯ 8 : 21 (IRVKN)
ಒಂದು ಊರಿನವರು ಇನ್ನೊಂದು ಊರಿಗೆ ಹೋಗಿ, ‘ಯೆಹೋವನ ಪ್ರಸನ್ನತೆಯನ್ನು ಬೇಡುವುದಕ್ಕೂ, ಸೇನಾಧೀಶ್ವರ ಯೆಹೋವನನ್ನು ಆಶ್ರಯಿಸುವುದಕ್ಕೂ ಹೋಗೋಣ ಬನ್ನಿರಿ, ನಾವೂ ಹೋಗುತ್ತೇವೆ’ ಎಂದು ಹೇಳುವರು.
ಜೆಕರ್ಯ 8 : 22 (IRVKN)
ಹೀಗೆ ಬಹು ದೇಶಗಳವರೂ, ಬಲವಾದ ಜನಾಂಗಗಳವರೂ ಯೆರೂಸಲೇಮಿನಲ್ಲಿ ಸೇನಾಧೀಶ್ವರ ಯೆಹೋವನನ್ನು ಆಶ್ರಯಿಸುವುದಕ್ಕೂ ಯೆಹೋವನ ಪ್ರಸನ್ನತೆಯನ್ನು ಬೇಡುವುದಕ್ಕೂ ಬರುವರು.”
ಜೆಕರ್ಯ 8 : 23 (IRVKN)
ಸೇನಾಧೀಶ್ವರನಾದ ಯೆಹೋವನು ಇಂತೆನ್ನುತ್ತಾನೆ, “ಆ ಕಾಲದಲ್ಲಿ ಜನಾಂಗಗಳ ವಿವಿಧ ಭಾಷೆಗಳವರಾದ ಹತ್ತು ಜನರು ಯೆಹೂದ್ಯನೊಬ್ಬನ ಸೆರಗನ್ನು ಹಿಡಿದುಕೊಂಡು, ‘ನಾವು ನಿಮ್ಮೊಂದಿಗೆ ಬರುವೆವು, ಏಕೆಂದರೆ ದೇವರು ನಿಮ್ಮ ಸಂಗಡ ಇದ್ದಾನೆಂಬ ಸುದ್ದಿಯು ನಮ್ಮ ಕಿವಿಗೆ ಬಿದ್ದಿದೆ’ ” ಎಂದು ಹೇಳುವರು.

1 2 3 4 5 6 7 8 9 10 11 12 13 14 15 16 17 18 19 20 21 22 23