ಪರಮ ಗೀತ 4 : 1 (IRVKN)
ಸರ್ವಾಂಗಸುಂದರಿಯಾದ ವಧು - ನಲ್ಲ ಆಹಾ, ನನ್ನ ಪ್ರಿಯಳೇ, ನೀನು ಎಷ್ಟು ಚೆಲುವೆ! ಆಹಾ, ನೀನು ಎಷ್ಟು ಸುಂದರಿ! ಮುಸುಕಿನೊಳಗಿನ ನಿನ್ನ ನೇತ್ರಗಳು ಪಾರಿವಾಳಗಳು, ನಿನ್ನ ಕೂದಲು ಗಿಲ್ಯಾದ್ ಬೆಟ್ಟದಿಂದ ಇಳಿದು ಹೋಗುವ ಆಡಿನ ಮಂದೆ.
ಪರಮ ಗೀತ 4 : 2 (IRVKN)
ಉಣ್ಣೆ ಕತ್ತರಿಸಿ ಸ್ನಾನಮಾಡಿಸಿದ ಕುರಿಮಂದೆಯ ಬಿಳುಪಿನಂತಿವೆ ನಿನ್ನ ಹಲ್ಲುಗಳು, ಯಾವುದೂ ಒಂಟಿಯಾಗಿರದೆ ಎಲ್ಲವೂ ಒಟ್ಟಾಗಿ ಜೋಡಿಯಾಗಿವೆ.
ಪರಮ ಗೀತ 4 : 3 (IRVKN)
ನಿನ್ನ ತುಟಿಗಳು ಕೆಂಪು ದಾರದಂತಿವೆ. ನಿನ್ನ ಬಾಯಿ ರಮ್ಯ. ಮುಸುಕಿನೊಳಗಿನ ನಿನ್ನ ಕೆನ್ನೆಯು ಹೋಳು ಮಾಡಿದ ದಾಳಿಂಬೆಯ ತಿರುಳಿನಂತಿದೆ.
ಪರಮ ಗೀತ 4 : 4 (IRVKN)
ನಿನ್ನ ಕೊರಳು ದಾವೀದನು ಕಟ್ಟಿಸಿದ ನುಣುಪಾದ ಗೋಪುರದಂತಿದೆ, ನಿನ್ನ ಕತ್ತಿನ ಹಾರ ಸಾವಿರ ಶೂರರ ಗುರಾಣಿಗಳನ್ನು ನೇತುಹಾಕಿರುವ ದಾವೀದನ ಬುರುಜಿನ ಹಾಗಿದೆ.
ಪರಮ ಗೀತ 4 : 5 (IRVKN)
ನಿನ್ನ ಎರಡು ಸ್ತನಗಳು ನೆಲದಾವರೆಗಳ ಮಧ್ಯದಲ್ಲಿ ಮೇಯುತ್ತಿರುವ ಅವಳಿ ಜಿಂಕೆಮರಿಗಳಂತಿವೆ.
ಪರಮ ಗೀತ 4 : 6 (IRVKN)
ಕತ್ತಲು ಕಳೆಯುವ ತನಕ, ಹೊತ್ತು ಮೂಡುವವರೆಗೆ ರಕ್ತಬೋಳದ ಬೆಟ್ಟಕ್ಕೂ, ಧೂಪದ ಗುಡ್ಡಕ್ಕೂ ತೆರಳಿ ಸಂಚರಿಸುವೆ ನಾನು.
ಪರಮ ಗೀತ 4 : 7 (IRVKN)
ನನ್ನ ಪ್ರಿಯಳೇ, ನೀನು ಸರ್ವಾಂಗಸುಂದರಿ, ನಿನ್ನಲ್ಲಿ ಯಾವ ಕೊರತೆಯೂ ಇಲ್ಲ.
ಪರಮ ಗೀತ 4 : 8 (IRVKN)
ಬಾ ವಧುವೇ, ಎನ್ನೊಂದಿಗೆ ಲೆಬನೋನಿನಿಂದ. ಬಾ ನನ್ನೊಂದಿಗೆ, ಲೆಬನೋನಿನಿಂದ, ಇಳಿದು ಬಾ ಅಮಾನದ ತುದಿಯಿಂದ, ಶೆನೀರ್ ಮತ್ತು ಹೆರ್ಮೋನ್ ಶಿಖರಗಳಿಂದ. ಹೊರಟು ಬಾ, ಸಿಂಹಗಳ ಗುಹೆಗಳಿಂದ ಚಿರತೆಗಳ ಗುಡ್ಡಗಳಿಂದ.
ಪರಮ ಗೀತ 4 : 9 (IRVKN)
ಪ್ರಿಯಳೇ, ವಧುವೇ, ನನ್ನ ಹೃದಯವನ್ನು ಅಪಹರಿಸಿರುವೆ ನಿನ್ನ ಒಂದು ಕುಡಿನೋಟದಿಂದ; ನನ್ನ ಹೃದಯವನ್ನು ವಶಮಾಡಿಕೊಂಡಿರುವೆ ನಿನ್ನ ಕಂಠಹಾರದ ಒಂದು ರತ್ನದಿಂದ.
ಪರಮ ಗೀತ 4 : 10 (IRVKN)
ಪ್ರಿಯಳೇ, ವಧುವೇ, ನಿನ್ನ ಪ್ರೀತಿ ಅದೆಷ್ಟೋ ರಮ್ಯ! ನಿನ್ನ ಪ್ರೇಮ ದ್ರಾಕ್ಷಾರಸಕ್ಕಿಂತ ಎಷ್ಟೋ ಉತ್ತಮ! ನಿನ್ನ ತೈಲದ ಪರಿಮಳ ಸಕಲಸುಗಂಧ ದ್ರವ್ಯಗಳಿಗಿಂತ ಎಷ್ಟೋ ಮನೋಹರ!
ಪರಮ ಗೀತ 4 : 11 (IRVKN)
ವಧುವೇ, ನಿನ್ನ ತುಟಿಗಳು ಜೇನುಗರೆಯುತ್ತವೆ; ಜೇನೂ ಮತ್ತು ಹಾಲೂ ನಿನ್ನ ನಾಲಿಗೆಯ ಅಡಿಯಲ್ಲಿವೆ, ನಿನ್ನ ಉಡುಪುಗಳು ಲೆಬನೋನಿನ ಸುಗಂಧ ಸೂಸುತ್ತಿದೆ.
ಪರಮ ಗೀತ 4 : 12 (IRVKN)
ನನ್ನ ಪ್ರಿಯಳು, ನನ್ನ ಮದಲಗಿತ್ತಿಯು, ಸುಭದ್ರವಾದ ಉದ್ಯಾನ, ಬೇಲಿಯೊಳಗೆ ಮುಚ್ಚಿ ಮುದ್ರಿಸಿದ ಚಿಲುಮೆ.
ಪರಮ ಗೀತ 4 : 13 (IRVKN)
ನಿನ್ನ ಉದ್ಯಾನದಲ್ಲಿವೆ ದಾಳಿಂಬೆಯಂತಹ ಉತ್ತಮ ವೃಕ್ಷಗಳು, ಜಟಮಾಂಸಿ ಮತ್ತು ಗೋರಂಟೆಗಳು,
ಪರಮ ಗೀತ 4 : 14 (IRVKN)
ಜಟಮಾಂಸಿ, ಕುಂಕುಮ, ಬಜೆ, ಲವಂಗಚಕ್ಕೆ, ಸಮಸ್ತ ವಿಧವಾದ ಸಾಂಬ್ರಾಣಿ ಗಿಡಗಳು, ರಕ್ತಬೋಳ, ಅಗುರು, ಸಕಲ ಮುಖ್ಯ ಸುಗಂಧದ್ರವ್ಯ ಇವುಗಳೇ ಚಿಗುರುತ್ತವೆ.
ಪರಮ ಗೀತ 4 : 15 (IRVKN)
ಉದ್ಯಾನಗಳಿಗೆ ಹಾದು ಹೋಗುವ ಬುಗ್ಗೆ, ಉಕ್ಕುತ್ತಿರುವ ಬಾವಿ, ಲೆಬನೋನಿನಿಂದ ಹರಿಯುವ ಕಾಲುವೆ ನಿನ್ನಲ್ಲಿವೆ.
ಪರಮ ಗೀತ 4 : 16 (IRVKN)
ನಲ್ಲೆ ಉತ್ತರದ ಗಾಳಿಯೇ ಏಳು, ದಕ್ಷಿಣದ ಗಾಳಿಯೇ ಬೀಸು! ನನ್ನ ತೋಟದ ಸುಗಂಧಗಳು ಹರಡುವ ಹಾಗೆ ಅದರ ಮೇಲೆ ಸುಳಿದಾಡು. ಎನ್ನಿನಿಯನು ತನ್ನ ತೋಟದೊಳಗೆ ಸೇರಿ ತನ್ನ ಉತ್ತಮ ಫಲಗಳನ್ನು ತಾನೇ ಭುಜಿಸಲಿ.

1 2 3 4 5 6 7 8 9 10 11 12 13 14 15 16