ರೂತಳು 1 : 1 (IRVKN)
ರೂತಳು ಅತ್ತೆಯೊಡನೆ ಯೆಹೂದ ದೇಶಕ್ಕೆ ಬಂದದ್ದು ನ್ಯಾಯಸ್ಥಾಪಕರು ಆಳುತ್ತಿದ್ದ ಕಾಲದಲ್ಲಿ ಒಮ್ಮೆ ದೇಶದಲ್ಲಿ ಬರ ಬಂದಿದ್ದರಿಂದ ಯೆಹೂದ ಪ್ರಾಂತ್ಯದ ಬೇತ್ಲೆಹೇಮಿನವನೊಬ್ಬನು ತನ್ನ ಹೆಂಡತಿ, ಇಬ್ಬರು ಪುತ್ರರ ಸಹಿತವಾಗಿ ಮೋವಾಬ್ ದೇಶದಲ್ಲಿ ವಾಸಮಾಡುವುದಕ್ಕಾಗಿ ಹೊರಟುಹೋದನು.
ರೂತಳು 1 : 2 (IRVKN)
ಆ ಮನುಷ್ಯನ ಹೆಸರು ಎಲೀಮೆಲೆಕ, ಅವನ ಹೆಂಡತಿ ನವೊಮಿ. ಅವನ ಇಬ್ಬರು ಮಕ್ಕಳ ಹೆಸರು ಮಹ್ಲೋನ್ ಮತ್ತು ಕಿಲ್ಯೋನ್. ಯೆಹೂದ ದೇಶಕ್ಕೆ ಸೇರಿದ ಎಫ್ರಾತದಲ್ಲಿರುವ ಬೇತ್ಲೆಹೇಮಿನವರಾದ ಇವರು ಮೋವಾಬ್ ದೇಶದಲ್ಲಿ ಬಂದು ವಾಸವಾಗಿದ್ದಾಗ
ರೂತಳು 1 : 3 (IRVKN)
ನವೊಮಿಯ ಗಂಡನಾದ ಎಲೀಮೆಲೆಕನು ಮರಣ ಹೊಂದಿದನು. ಆಕೆಯು ಇಬ್ಬರು ಮಕ್ಕಳೊಡನೆ ಅಲ್ಲಿಯೇ ಉಳಿದಳು.
ರೂತಳು 1 : 4 (IRVKN)
ಈ ಮಕ್ಕಳು ಒರ್ಫಾ, ರೂತ್ ಎಂಬ ಹೆಸರಿನ ಮೋವಾಬ್ ಸ್ತ್ರೀಯರನ್ನು ಮದುವೆಮಾಡಿಕೊಂಡು ಸುಮಾರು ಹತ್ತು ವರ್ಷಗಳ ಕಾಲ ಅಲ್ಲಿ ವಾಸವಾಗಿದ್ದರು.
ರೂತಳು 1 : 5 (IRVKN)
ಅವರು ಅಲ್ಲಿದ್ದಾಗ ನವೊಮಿಯ ಮಕ್ಕಳಾದ ಮಹ್ಲೋನ್ ಮತ್ತು ಕಿಲ್ಯೋನ್ ಇಬ್ಬರೂ ತೀರಿಹೋದರು. ಹೀಗೆ ನವೊಮಿ ಗಂಡನನ್ನೂ, ಇಬ್ಬರು ಮಕ್ಕಳನ್ನೂ ಕಳೆದುಕೊಂಡು ಸೊಸೆಯರೊಂದಿಗೆ ಅಲ್ಲೇ ಉಳಿದಳು.
ರೂತಳು 1 : 6 (IRVKN)
ಯೆಹೋವನು ತನ್ನ ಜನರನ್ನು ಸಂದರ್ಶಿಸಿ ಅವರಿಗೆ ಆಹಾರವನ್ನು ಅನುಗ್ರಹಿಸಿದ್ದಾನೆಂಬ ವರ್ತಮಾನವನ್ನು ಕೇಳಿದ ನವೊಮಿಯು ತನ್ನ ಸೊಸೆಯರೊಡನೆ ಮೋವಾಬ್ ದೇಶದಿಂದ ಯೆಹೂದ ದೇಶಕ್ಕೆ ಹೋಗಬೇಕೆಂದು ನಿರ್ಧರಿಸಿದಳು.
ರೂತಳು 1 : 7 (IRVKN)
ಆಕೆಯು ಇಬ್ಬರು ಸೊಸೆಯರೊಡನೆ ತಾನಿದ್ದ ಸ್ಥಳದಿಂದ ಯೆಹೂದ ದೇಶಕ್ಕೆ ಹೋಗುವ ದಾರಿಯಲ್ಲಿ ಹೋಗುತ್ತಿರುವಾಗ
ರೂತಳು 1 : 8 (IRVKN)
ಅವರಿಗೆ, “ನೀವು ತಿರುಗಿ ನಿಮ್ಮ ನಿಮ್ಮ ತವರುಮನೆಗಳಿಗೆ ಹೋಗಿರಿ, ನೀವು ನನ್ನನ್ನೂ, ಮರಣಹೊಂದಿದ ನನ್ನ ಮಕ್ಕಳನ್ನು ಪ್ರೀತಿಸಿದಂತೆ ಯೆಹೋವನು ನಿಮ್ಮನ್ನು ಪ್ರೀತಿಸಿ ನಿಮಗೆ ಕೃಪೆತೋರಿಸಲಿ.
ರೂತಳು 1 : 9 (IRVKN)
ನೀವಿಬ್ಬರೂ ಮದುವೆಯಾಗಿ ಗಂಡನ ಮನೆಯಲ್ಲಿ ಸುಖವಾಗಿರುವಂತೆ ಯೆಹೋವನು ಅನುಗ್ರಹಿಸಲಿ” ಎಂದು ಹೇಳಿ ಅವರಿಗೆ ಮುದ್ದಿಟ್ಟಳು.
ರೂತಳು 1 : 10 (IRVKN)
ಆಗ ಅವರು ಬಹಳ ದುಃಖದಿಂದ ಗಟ್ಟಿಯಾಗಿ ಅತ್ತು ನಾವೂ ನಿನ್ನ ಜೊತೆಯಲ್ಲೇ ನಿನ್ನ ಸ್ವಜನರ ಬಳಿಗೆ ಬರುತ್ತೇವೆ ಅನ್ನಲು,
ರೂತಳು 1 : 11 (IRVKN)
ಆಕೆಯು, “ನನ್ನ ಮಕ್ಕಳೇ, ನೀವು ನನ್ನೊಡನೆ ಬರುವುದೇಕೆ? ಹಿಂದಿರುಗಿ ಹೋಗಿರಿ. ನಿಮಗೆ ಗಂಡಂದಿರನ್ನು ಕೊಡುವುದಕ್ಕೆ ನನ್ನ ಗರ್ಭದಲ್ಲಿ ಬೇರೆ ಮಕ್ಕಳಿಲ್ಲವಲ್ಲಾ.
ರೂತಳು 1 : 12 (IRVKN)
ನಾನು ಮತ್ತೊಬ್ಬನನ್ನು ಪುನಃ ಮದುವೆಮಾಡಿಕೊಳ್ಳುವ ಪ್ರಾಯವೂ ನನಗೆ ದಾಟಿಹೋಗಿದೆ. ಆದುದರಿಂದ ನನ್ನ ಮಕ್ಕಳೇ, ನೀವು ಹಿಂದಿರುಗಿ ಹೋಗಿರಿ. ಒಂದು ವೇಳೆ ಆ ನಿರೀಕ್ಷೆಯಿಂದ ಈ ಹೊತ್ತೇ ನಾನು ಪುನಃ ಮದುವೆಯಾಗಿ ಮಕ್ಕಳನ್ನು ಹೆತ್ತರೂ,
ರೂತಳು 1 : 13 (IRVKN)
ಅವರು ದೊಡ್ಡವರಾಗುವ ತನಕ ನೀವು ಕಾದಿರುವಿರೋ? ಅಲ್ಲಿಯ ವರೆಗೂ ಗಂಡಂದಿರಿಲ್ಲದೆ ಇರುವಿರೋ? ನನ್ನ ಮಕ್ಕಳೇ, ಹಾಗೆ ಮಾಡಬೇಡಿರಿ; ಯೆಹೋವನ ಹಸ್ತವು ನನ್ನಿಂದ ದೂರವಾಗಿರುವುದರಿಂದ ನಾನು ನಿಮಗಿಂತ ಹೆಚ್ಚಾಗಿ ದುಃಖಪಡುತ್ತೇನೆ” ಅಂದಳು.
ರೂತಳು 1 : 14 (IRVKN)
ಆಗ ಅವರು ಬಹಳವಾಗಿ ದುಃಖಿಸಿ ಗಟ್ಟಿಯಾಗಿ ಅತ್ತರು. ಒರ್ಫಳು ಅತ್ತೆಯನ್ನು ಮುದ್ದಿಟ್ಟು ಹೊರಟು ತನ್ನ ತವರಿಗೆ ಹೋದಳು; ರೂತಳಾದರೋ ಅತ್ತೆಯನ್ನು ತೊರೆದುಹೋಗದೆ ಅವಳೊಂದಿಗೆ ಇದ್ದಳು.
ರೂತಳು 1 : 15 (IRVKN)
ನವೊಮಿಯು ರೂತಳಿಗೆ, ಇಗೋ, ನಿನ್ನ ಓರಗಿತ್ತಿಯು ತಿರುಗಿ ತನ್ನ ಜನರ ಬಳಿಗೂ, ತನ್ನ ಕುಲ ದೇವರುಗಳ ಬಳಿಗೂ ಹೋಗಿದ್ದಾಳೆ. ನೀನೂ ಆಕೆಯಂತೆ ನಿನ್ನ ಜನರ ಬಳಿಗೆ ಹೋಗು ಅಂದಾಗ,
ರೂತಳು 1 : 16 (IRVKN)
ಆಕೆಯು, “ನಿನ್ನನ್ನು ಬಿಟ್ಟು ಹಿಂದಿರುಗಿ ಹೋಗಬೇಕೆಂದು ನನ್ನನ್ನು ಒತ್ತಾಯಪಡಿಸಬೇಡ. ನೀನು ಎಲ್ಲಿಗೆ ಹೋದರೂ ನಾನೂ ಅಲ್ಲಿಗೆ ಬರುವೆನು; ನೀನು ವಾಸಿಸುವಲ್ಲೇ ನಾನೂ ವಾಸಿಸುವೆನು; ನಿನ್ನ ಜನರೇ ನನ್ನ ಜನರು; ನಿನ್ನ ದೇವರೇ ನನ್ನ ದೇವರು.
ರೂತಳು 1 : 17 (IRVKN)
ನೀನು ಸಾಯುವಲ್ಲೇ ನಾನೂ ಸಾಯುವೆನು; ಅಲ್ಲೇ ನನಗೆ ಸಮಾಧಿಯಾಗಬೇಕು. ಮರಣದಿಂದಲ್ಲದೆ ನಾನು ನಿನ್ನನ್ನು ಅಗಲಿದರೆ ಯೆಹೋವನು ನನ್ನನ್ನು ಹೆಚ್ಚಾಗಿ ಶಿಕ್ಷಿಸಲಿ” ಎಂದಳು.
ರೂತಳು 1 : 18 (IRVKN)
ಆಕೆಯು ತನ್ನ ಜೊತೆಯಲ್ಲಿ ಬರುವುದಕ್ಕೆ ನಿರ್ಧರಿಸಿದ್ದಾಳೆಂದು ನವೊಮಿಯು ತಿಳಿದು ಸುಮ್ಮನಾದಳು.
ರೂತಳು 1 : 19 (IRVKN)
ಹಾಗೆಯೇ ಪ್ರಯಾಣಮಾಡಿಕೊಂಡು ಅವರಿಬ್ಬರೂ ಬೇತ್ಲೆಹೇಮಿಗೆ ಬಂದು ಊರೊಳಕ್ಕೆ ಹೋದಾಗ ಅಲ್ಲಿಯ ಜನರಲ್ಲಿ ಕುತೂಹಲ ಮೂಡಿತು. ಸ್ತ್ರೀಯರು, “ಈಕೆಯು ನವೊಮಿಯಲ್ಲವೇ?” ಎಂದು ವಿಚಾರಿಸಲು
ರೂತಳು 1 : 20 (IRVKN)
ಆಕೆಯು ಅವರಿಗೆ, “ನನ್ನನ್ನು ನವೊಮಿಯೆಂದು ಕರೆಯಬೇಡಿರಿ; ನನ್ನನ್ನು ‘ಮಾರಾ’ (ಕಹಿ) ಎಂದು ಕರೆಯಿರಿ. ಏಕೆಂದರೆ, ಸರ್ವಶಕ್ತನಾದ ದೇವರು ಬಹಳ ತೀಕ್ಷ್ಣವಾಗಿ ನನ್ನ ಜೀವಿತವನ್ನು ಮಾರ್ಪಡಿಸಿದ್ದಾನೆ.
ರೂತಳು 1 : 21 (IRVKN)
ಸಿರಿವಂತಳಾಗಿ ಹೋದೆನು; ಯೆಹೋವನು ನನ್ನನ್ನು ಗತಿಹೀನಳನ್ನಾಗಿ ಹಿಂತಿರುಗುವಂತೆ ಮಾಡಿದನು. ಯೆಹೋವನು ನನಗೆ ವಿರೋಧವಾಗಿದ್ದಾನೆ, ಸರ್ವಶಕ್ತನು ನನ್ನನ್ನು ಬಾಧಿಸಿದ್ದಾನೆ. ಹೀಗಿರುವಾಗ ನೀವು ನನ್ನನ್ನು ನವೊಮಿಯೆಂದು ಕರೆಯುವುದು ಸರಿಯೇ” ಅಂದಳು.
ರೂತಳು 1 : 22 (IRVKN)
ಹೀಗೆ, ನವೊಮಿಯು ಮೋವಾಬ್ಯಳಾದ ತನ್ನ ಸೊಸೆ ರೂತಳೊಡನೆ ಬೇತ್ಲೆಹೇಮಿಗೆ ಬಂದಳು. ಆಗ ಜವೆಗೋದಿಯ ಸುಗ್ಗಿಯು ಪ್ರಾರಂಭವಾಗಿತ್ತು.
❮
❯
1
2
3
4
5
6
7
8
9
10
11
12
13
14
15
16
17
18
19
20
21
22