ಕೀರ್ತನೆಗಳು 91 : 1 (IRVKN)
ದೇವಾಶ್ರಿತನು ಸುರಕ್ಷಿತನು
ವಿಮೋ 23:20-26
ಅತ್ಯುನ್ನತನಾದ ದೇವರ ಮೊರೆಹೊಕ್ಕವನು, ಸರ್ವಶಕ್ತನ ಆಶ್ರಯದಲ್ಲಿ ಸುರಕ್ಷಿತನಾಗಿರುವನು.
ಕೀರ್ತನೆಗಳು 91 : 2 (IRVKN)
ನಾನು ಯೆಹೋವನಿಗೆ, “ನೀನೇ ನನ್ನ ಶರಣನು, ನನ್ನ ದುರ್ಗವು, ನಾನು ಭರವಸವಿಟ್ಟಿರುವ ನನ್ನ ದೇವರು” ಎಂದು ಹೇಳುವೆನು.
ಕೀರ್ತನೆಗಳು 91 : 3 (IRVKN)
ನನ್ನನ್ನು ಬೇಟೆಗಾರನ ಬಲೆಯಿಂದಲೂ, ಮರಣಕರ ವ್ಯಾಧಿಯಿಂದಲೂ ತಪ್ಪಿಸುವವನು ಆತನೇ.
ಕೀರ್ತನೆಗಳು 91 : 4 (IRVKN)
ಆತನು ನನ್ನನ್ನು ತನ್ನ ರೆಕ್ಕೆಗಳಿಂದ ಹೊದಗಿಸುವನು; ಆತನ ಪಕ್ಕೆಗಳ ಮರೆಯನ್ನು ಆಶ್ರಯಿಸಿಕೊಳ್ಳುವೆ. ಆತನ ಸತ್ಯತೆಯೇ ನನಗೆ ಖೇಡ್ಯವೂ, ಗುರಾಣಿಯೂ ಆಗಿದೆ.
ಕೀರ್ತನೆಗಳು 91 : 5 (IRVKN)
ರಾತ್ರಿಯಲ್ಲಿ ಭಯಹುಟ್ಟಿಸುವ ಯಾವುದಕ್ಕೂ, ಹಗಲಲ್ಲಿ ಹಾರಿಬರುವ ಬಾಣಕ್ಕೂ,
ಕೀರ್ತನೆಗಳು 91 : 6 (IRVKN)
ಕತ್ತಲೆಯಲ್ಲಿ ಸಂಚರಿಸುವ ವಿಪತ್ತಿಗೂ, ಹಾನಿಕರವಾದ ಮಧ್ಯಾಹ್ನದ ಕೇಡಿಗೂ ಭಯಪಡಬೇಕಾಗಿಲ್ಲ.
ಕೀರ್ತನೆಗಳು 91 : 7 (IRVKN)
ನಿನ್ನ ಮಗ್ಗುಲಲ್ಲಿ ಸಾವಿರ ಜನರು, ನಿನ್ನ ಬಲಗಡೆಯಲ್ಲಿ ಹತ್ತು ಸಾವಿರ ಜನರು ಸತ್ತು ಬಿದ್ದರೂ ನಿನಗೇನೂ ತಟ್ಟದು.
ಕೀರ್ತನೆಗಳು 91 : 8 (IRVKN)
ನೀನು ಅದನ್ನು ಕಣ್ಣಾರೆ ಕಂಡು, ದುಷ್ಟರಿಗೆ ಪ್ರತಿದಂಡನೆಯುಂಟು ಎಂಬುದಕ್ಕೆ ಸಾಕ್ಷಿಯಾಗಿರುವಿಯಷ್ಟೆ.
ಕೀರ್ತನೆಗಳು 91 : 9 (IRVKN)
ಯೆಹೋವನೇ ನನ್ನ ಶರಣನು! ಅತ್ಯುನ್ನತನಾದ ದೇವರನ್ನು ನಿವಾಸಸ್ಥಾನ ಮಾಡಿಕೊಂಡಿದ್ದಿಯಲ್ಲಾ.
ಕೀರ್ತನೆಗಳು 91 : 10 (IRVKN)
ಯಾವ ಕೇಡೂ ನಿನಗೆ ಸಂಭವಿಸದು; ಉಪದ್ರವವು ನಿನ್ನ ಗುಡಾರದ ಸಮೀಪಕ್ಕೂ ಬಾರದು.
ಕೀರ್ತನೆಗಳು 91 : 11 (IRVKN)
ನೀನು ಹೋಗುವಲ್ಲೆಲ್ಲಾ ನಿನ್ನನ್ನು ಕಾಯುವುದಕ್ಕೆ ಆತನು ನಿನ್ನ ವಿಷಯವಾಗಿ ತನ್ನ ದೂತರಿಗೆ ಅಪ್ಪಣೆಕೊಡುವನು.
ಕೀರ್ತನೆಗಳು 91 : 12 (IRVKN)
ನಿನ್ನ ಕಾಲು ಕಲ್ಲಿಗೆ ತಗಲದಂತೆ, ಅವರು ನಿನ್ನನ್ನು ಕೈಗಳಲ್ಲಿ ಎತ್ತಿಕೊಳ್ಳುವರು.
ಕೀರ್ತನೆಗಳು 91 : 13 (IRVKN)
ಸಿಂಹ ಮತ್ತು ಸರ್ಪಗಳ ಮೇಲೆ ನಡೆಯುವಿ; ಪ್ರಾಯದ ಸಿಂಹವನ್ನೂ, ಘಟಸರ್ಪವನ್ನೂ ತುಳಿದುಬಿಡುವಿ.
ಕೀರ್ತನೆಗಳು 91 : 14 (IRVKN)
ಅವನು ನನ್ನಲ್ಲಿ ಆಸಕ್ತನಾಗಿರುವುದರಿಂದ ಅವನನ್ನು ರಕ್ಷಿಸುವೆನು; ನನ್ನ ನಾಮವನ್ನು ಅರಿತವನಾಗಿರುವುದರಿಂದ ಅವನನ್ನು ಉದ್ಧರಿಸುವೆನು.
ಕೀರ್ತನೆಗಳು 91 : 15 (IRVKN)
ಅವನು ನನಗೆ ಮೊರೆಯಿಡುವಾಗ ಸದುತ್ತರವನ್ನು ದಯಪಾಲಿಸುವೆನು; ಇಕ್ಕಟ್ಟಿನಲ್ಲಿ ಹತ್ತಿರವಿದ್ದು ಅವನನ್ನು ತಪ್ಪಿಸಿ ಘನಪಡಿಸುವೆನು;
ಕೀರ್ತನೆಗಳು 91 : 16 (IRVKN)
ದೀರ್ಘಾಯುಷ್ಯವನ್ನು ಅನುಗ್ರಹಿಸಿ, ಅವನನ್ನು ತೃಪ್ತಿಪಡಿಸುವೆನು; ನನ್ನ ವಿಶೇಷವಾದ ರಕ್ಷಣೆಯನ್ನು ತೋರಿಸುವೆನು.

1 2 3 4 5 6 7 8 9 10 11 12 13 14 15 16