ಕೀರ್ತನೆಗಳು 51 : 1 (IRVKN)
ಪಾಪಕ್ಷಮಾಪಣೆಗಾಗಿ ವಿಜ್ಞಾಪನೆ *ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ದಾವೀದನು ಬತ್ಷೆಬಳ ಬಳಿಗೆ ಹೋದ ಮೇಲೆ ಪ್ರವಾದಿಯಾದ ನಾತಾನನು ಎಚ್ಚರಿಸಿದಾಗ ರಚಿಸಿದ ಕೀರ್ತನೆ. *ಪ್ರೀತಿಸ್ವರೂಪನಾದ ದೇವರೇ, ನನ್ನನ್ನು ಕರುಣಿಸು; ಕರುಣಾನಿಧಿಯೇ, ನನ್ನ ದ್ರೋಹವನ್ನೆಲ್ಲಾ ಅಳಿಸಿಬಿಡು.
ಕೀರ್ತನೆಗಳು 51 : 2 (IRVKN)
ನನ್ನ ಪಾಪವನ್ನು ಸಂಪೂರ್ಣವಾಗಿ ತೊಳೆದುಬಿಡು; ನನ್ನ ದೋಷವನ್ನು ಪರಿಹರಿಸಿ, ನನ್ನನ್ನು ಶುದ್ಧಿಗೊಳಿಸು.
ಕೀರ್ತನೆಗಳು 51 : 3 (IRVKN)
ನಾನು ದ್ರೋಹಿ ಎಂದು ನಾನೇ ಒಪ್ಪಿಕೊಂಡಿದ್ದೇನೆ; ನನ್ನ ಪಾಪವು ಯಾವಾಗಲೂ ನನ್ನ ಮುಂದೆ ಇದೆ.
ಕೀರ್ತನೆಗಳು 51 : 4 (IRVKN)
ನಿನಗೇ, ಕೇವಲ ನಿನಗೇ ತಪ್ಪುಮಾಡಿದ್ದೇನೆ; ನಿನ್ನ ದೃಷ್ಟಿಗೆ ಕೆಟ್ಟದ್ದಾಗಿರುವುದನ್ನೇ ಮಾಡಿದ್ದೇನೆ. ನಿನ್ನ ನಿರ್ಣಯ ನ್ಯಾಯವಾಗಿಯೂ, ನಿನ್ನ ತೀರ್ಪು ನಿಷ್ಕಳಂಕವಾಗಿಯೂ ಇರುತ್ತದೆ.
ಕೀರ್ತನೆಗಳು 51 : 5 (IRVKN)
ಹುಟ್ಟಿದಂದಿನಿಂದ ನಾನು ಪಾಪಿಯೇ; ಮಾತೃಗರ್ಭವನ್ನು ಹೊಂದಿದ ದಿನದಿಂದ ದ್ರೋಹಿಯೇ.
ಕೀರ್ತನೆಗಳು 51 : 6 (IRVKN)
ಯಥಾರ್ಥಚಿತ್ತವೇ ನಿನಗೆ ಸಂತೋಷ; ಸುಜ್ಞಾನದ ರಹಸ್ಯಗಳನ್ನು ನನಗೆ ತಿಳಿಯಪಡಿಸು.
ಕೀರ್ತನೆಗಳು 51 : 7 (IRVKN)
ಹಿಸ್ಸೋಪ್ ಗಿಡದ ಬರಲಿನಿಂದ ನೀರನ್ನು ಚಿಮಕಿಸಿಯೋ ಎಂಬಂತೆ ನನ್ನ ಅಶುದ್ಧತ್ವವನ್ನು ತೆಗೆದುಬಿಡು, ಆಗ ಶುದ್ಧನಾಗುವೆನು; ನನ್ನನ್ನು ತೊಳೆ, ಆಗ ಹಿಮಕ್ಕಿಂತಲೂ ಬೆಳ್ಳಗಾಗುವೆನು.
ಕೀರ್ತನೆಗಳು 51 : 8 (IRVKN)
ನನ್ನಲ್ಲಿ ಸಂಭ್ರಮೋತ್ಸವದ ಧ್ವನಿ ಉಂಟಾಗುವಂತೆ ಮಾಡು; ಆಗ ನೀನು ಜಜ್ಜಿದ ಎಲುಬುಗಳು ಆನಂದಪಡುವವು.
ಕೀರ್ತನೆಗಳು 51 : 9 (IRVKN)
ನನ್ನ ದೋಷಕ್ಕೆ ವಿಮುಖನಾಗು; ನನ್ನ ಪಾಪಗಳನ್ನೆಲ್ಲಾ ಅಳಿಸಿಬಿಡು.
ಕೀರ್ತನೆಗಳು 51 : 10 (IRVKN)
ದೇವರೇ, ನನ್ನಲ್ಲಿ ಶುದ್ಧಹೃದಯವನ್ನು ನಿರ್ಮಿಸು; ನನಗೆ ಸ್ಥಿರಚಿತ್ತವನ್ನು ಅನುಗ್ರಹಿಸಿ ನನ್ನನ್ನು ನೂತನಪಡಿಸು.
ಕೀರ್ತನೆಗಳು 51 : 11 (IRVKN)
ನಿನ್ನ ಸನ್ನಿಧಿಯಿಂದ ನನ್ನನ್ನು ತಳ್ಳಬೇಡ; ನಿನ್ನ ಪರಿಶುದ್ಧಾತ್ಮವನ್ನು ನನ್ನಿಂದ ತೆಗೆಯಬೇಡ.
ಕೀರ್ತನೆಗಳು 51 : 12 (IRVKN)
ನಿನ್ನ ರಕ್ಷಣಾನಂದವನ್ನು ನಾನು ಪುನಃ ಅನುಭವಿಸುವಂತೆ ಮಾಡು; ನನ್ನಲ್ಲಿ ಸಿದ್ಧಮನಸ್ಸನ್ನು ಹುಟ್ಟಿಸಿ ನನಗೆ ಆಧಾರನಾಗು.
ಕೀರ್ತನೆಗಳು 51 : 13 (IRVKN)
ಆಗ ನಿನ್ನ ಮಾರ್ಗವನ್ನು ದ್ರೋಹಿಗಳಿಗೆ ಬೋಧಿಸುವೆನು; ಪಾಪಿಗಳು ನಿನ್ನ ಕಡೆಗೆ ತಿರುಗಿಕೊಳ್ಳುವರು.
ಕೀರ್ತನೆಗಳು 51 : 14 (IRVKN)
ದೇವರೇ, ನನ್ನ ರಕ್ಷಣಾ ಕರ್ತನೇ, ಪ್ರಾಣಹತ್ಯದ ಅಪರಾಧದಿಂದ ನನ್ನನ್ನು ಬಿಡಿಸು; ಆಗ ನನ್ನ ನಾಲಿಗೆಯು ಉತ್ಸಾಹದಿಂದ ನಿನ್ನ ನೀತಿಯನ್ನು ಕೊಂಡಾಡುವುದು.
ಕೀರ್ತನೆಗಳು 51 : 15 (IRVKN)
ಕರ್ತನೇ, ನನ್ನ ಬಾಯಿ ನಿನ್ನನ್ನು ಸ್ತೋತ್ರಮಾಡುವಂತೆ ನನ್ನ ತುಟಿಗಳನ್ನು ತೆರೆಯಮಾಡು.
ಕೀರ್ತನೆಗಳು 51 : 16 (IRVKN)
ನಿನಗೆ ಯಜ್ಞಗಳಲ್ಲಿ ಅಪೇಕ್ಷೆಯಿಲ್ಲ, ಇದ್ದರೆ ಸಮರ್ಪಿಸುತ್ತಿದ್ದೆನು; ಸರ್ವಾಂಗಹೋಮಗಳಲ್ಲಿ ನಿನಗೆ ಸಂತೋಷವಿಲ್ಲ.
ಕೀರ್ತನೆಗಳು 51 : 17 (IRVKN)
* ಅಥವಾ ಓ ದೇವರೇ, ನನ್ನ ಯಜ್ಞವು ಕುಗ್ಗಿದ ಮನಸ್ಸೇ. ಕುಗ್ಗಿದ ಮನಸ್ಸೇ ದೇವರಿಗೆ ಇಷ್ಟವಾದ ಯಜ್ಞ; ದೇವರೇ, ಪಶ್ಚಾತ್ತಾಪದಿಂದ ಜಜ್ಜಿಹೋದ ಮನಸ್ಸನ್ನು ನೀನು ತಿರಸ್ಕರಿಸುವುದಿಲ್ಲ.
ಕೀರ್ತನೆಗಳು 51 : 18 (IRVKN)
ಚೀಯೋನ್ ಪಟ್ಟಣವನ್ನು ಕಟಾಕ್ಷಿಸಿ ಅದಕ್ಕೆ ಶುಭವನ್ನುಂಟುಮಾಡು; ಯೆರೂಸಲೇಮಿನ ಪೌಳಿಗೋಡೆಯನ್ನು ಕಟ್ಟಿಸು.
ಕೀರ್ತನೆಗಳು 51 : 19 (IRVKN)
ಆಗ ಜನರು ನ್ಯಾಯವಾದ ಯಜ್ಞಗಳನ್ನೂ, ಸರ್ವಾಂಗಹೋಮಗಳನ್ನೂ ಸಮರ್ಪಿಸಿ, ದೇವರೇ ನಿನಗೆ ಸಂತೋಷವನ್ನು ಉಂಟುಮಾಡುವರು. ನಿನ್ನ ಯಜ್ಞವೇದಿಯ ಮೇಲೆ ಹೋರಿಗಳನ್ನು ಸಮರ್ಪಿಸುವರು.

1 2 3 4 5 6 7 8 9 10 11 12 13 14 15 16 17 18 19